“ಈ ಸುಗ್ರೀವಾಜ್ಞೆಯು ಮೈಕ್ರೋ ಫೈನಾನ್ಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಇದು ಬಡವರ ಮೇಲೆಯೂ ಪರಿಣಾಮ ಬೀರುತ್ತದೆ” ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಅನಧಿಕೃತ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಿದರೆ ಅದರಿಂದ ಬಡವರಿಗೆ ಹೇಗೆ ತೊಂದರೆಯಾಗುತ್ತದೆ? ಅಂದ್ರೆ ರಾಜ್ಯಪಾಲರಿಗೆ ಫೈನಾನ್ಸ್ ಗಳಿಂದ ಸಾಲಗಾರರ ಮೇಲಾಗುತ್ತಿರುವ ಕಿರುಕುಳ, ಅವಮಾನ, ಹೆಚ್ಚು ಬಡ್ಡಿ ವಸೂಲಾತಿಯ ದಂಧೆಯ ವಿರಾಟ್ ಸ್ವರೂಪದ ಅರಿವಿಲ್ಲ ಅನ್ನಿಸುತ್ತದೆ.
ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಗ್ರಾಮೀಣ ಭಾಗದ ರೈತರು, ಬಡವರು, ಕೂಲಿ ಕಾರ್ಮಿಕರು ಮಾನ- ಪ್ರಾಣ ಕಳೆದುಕೊಳ್ಳುತ್ತಿರುವುದು ಹೊಸ ಸುದ್ದಿಯೇನಲ್ಲ. ಯಾವುದೇ ಸರ್ಕಾರ ಬಂದರೂ, ಎಷ್ಟೇ ಕಠಿಣ ಕಾನೂನು ತಂದರೂ ಸಾಲಗಾರರಿಂದ ಅಧಿಕ ಬಡ್ಡಿ ಮತ್ತು ಸಾಲ ವಸೂಲಿಗಾಗಿ ನೀಡುವ ಕಿರುಕುಳಕ್ಕೆ ಕಡಿವಾಣ ಬಿದ್ದಿಲ್ಲ. ತಿಂಗಳ ಹಿಂದೆ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ದೂರುಗಳು, ಆತ್ಮಹತ್ಯೆಯ ಸುದ್ದಿಗಳು ಬರುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ತುರ್ತು ಸಂಪುಟ ಸಭೆ ಕರೆದು ಸುಗ್ರೀವಾಜ್ಞೆ ತರುವ ನಿರ್ಧಾರ ಮಾಡಿತ್ತು. ತಕ್ಷಣ ಕರಡು ಸಿದ್ಧಪಡಿಸಿ ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿತ್ತು. ರಾಜ್ಯಪಾಲರು ಅಂಕಿತ ಹಾಕುವ ಬಗ್ಗೆ ಯಾರಿಗೂ ಅನುಮಾನ ಇರಲಿಲ್ಲ. ಯಾಕೆಂದರೆ ವಿರೋಧ ಪಕ್ಷಗಳ ಸಹಿತ ಯಾರಿಂದಲೂ ಸುಗ್ರೀವಾಜ್ಞೆಗೆ ಆಕ್ಷೇಪ ಇರಲಿಲ್ಲ. ಯಾಕೆಂದರೆ ಇದು ಅಕ್ರಮಕ್ಕೆ ಕಡಿವಾಣ ಹಾಕುವ ಮತ್ತು ಬಡವರ ಪರವಾದ ಸರ್ಕಾರದ ನಡೆಯಾಗಿತ್ತು. ಅತ್ಯಂತ ಸ್ವಾಗತಾರ್ಹ ಆಗಿತ್ತು. ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಸರ್ಕಾರದ ನಿರ್ಧಾರ ಸ್ವಲ್ಪ ಭರವಸೆ ಮೂಡಿಸಿತ್ತು. ಆದರೆ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ಸಾಲ ಕೊಟ್ಟವರ ರಕ್ಷಣೆಯೂ ಮುಖ್ಯ, ದಂಡ ಹೆಚ್ಚಾಯ್ತು, ಶಿಕ್ಷೆಯ ಅವಧಿ ಹೆಚ್ಚಾಯ್ತು ಎಂಬ ಕಾರಣ ನೀಡಿ, ಈಗ ಇರುವ ಕಾನೂನಿನಡಿ ಪೊಲೀಸರನ್ನು ಬಳಸಿ ಕಡಿವಾಣ ಹಾಕಬಹುದು ಎಂಬ ಸಲಹೆ ನೀಡಿ ವಾಪಸ್ ಕಳುಹಿಸಿರುವುದು ಅಚ್ಚರಿ ಮತ್ತು ನಿರಾಸೆಗೆ ಕಾರಣವಾಗಿದೆ. ರಾಜ್ಯಪಾಲರ ಇರಾದೆ ಕುರಿತು ಸಂದೇಹ ಮಾಡುವಂತಾಗಿದೆ. ರಾಜ್ಯಪಾಲರು ಯಾರನ್ನು ರಕ್ಷಿಸುತ್ತಿದ್ದಾರೆ? ಕಿರುಕುಳ ನೀಡುವವರನ್ನೋ ಅಥವಾ ಕಿರುಕುಳ ಅನುಭವಿಸುತ್ತಿರುವವರನ್ನೋ ಎಂಬ ಕುರಿತು ಅನುಮಾನ ಉಂಟಾಗಿದೆ.
ಗ್ರಾಮೀಣ ಭಾಗದ ಜನರಿಗೆ ಬಡತನ ಹೇಗೆ ಶಾಪವೋ, ಸಾಲ ಕೂಡಾ ಶಾಪವೇ ಆಗಿದೆ. ಶಿಕ್ಷಣದ ಕೊರತೆ, ಬಡತನ, ಅನಿಯಮಿತ ಸಂಪಾದನೆ, ಕುಟುಂಬ ನಿರ್ವಹಣೆಯ ಸವಾಲು, ಕಾಯಿಲೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇಂತಹ ಹತ್ತಾರು ಖರ್ಚುಗಳನ್ನು ನಿಭಾಯಿಸಲು ಹಣಕಾಸಿನ ಕೊರತೆಯಾದಾಗ ಅವರು ಹೋಗುವುದೇ ಮೈಕ್ರೋ ಫೈನಾನ್ಸ್ ಕಂಪನಿಗಳ ಬಾಗಿಲಿಗೆ. ಸಾಲ ಕೊಡುವವರು ಬಡವರ ಉದ್ದಾರಕ್ಕೆ, ಸಮಾಜ ಸೇವೆಗೆಂದು ಕೂತಿಲ್ಲ. ಒಂದು ರೂಪಾಯಿ ಕೊಟ್ಟು ಹತ್ತು ರೂಪಾಯಿ ಲಾಭಗಳಿಸಲೆಂದು ಕೂತವರು. ಸಾಲಗಾರ ಬಡವ “ಅಯ್ಯೋ ಪಾಪ” ಎಂದುಕೊಳ್ಳುವ, ಕರುಣೆ ತೋರುವ ಜಾಯಮಾನದವರಲ್ಲ. ಆರ್‌ಬಿಐ ನಿಯಮ ಮೀರಿ ತಮಗಿಷ್ಟ ಬಂದಂತೆ ಬಡ್ಡಿ ವಸೂಲಿ ಮಾಡಿ ಸಾಲಗಾರರ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಚೂರುಪಾರು ಆಸ್ತಿ ಇದ್ದರೆ ಅದನ್ನೂ ಬಡ್ಡಿಯ ಬಾಬ್ತಿಗೆ ಬರೆಸಿಕೊಂಡ ಉದಾಹರಣೆಗಳು ಹೇರಳ. ಸಾಲಗಾರರ ಮನೆಗೆ ಹೊತ್ತಲ್ಲದ ಹೊತ್ತಿನಲ್ಲಿ ಸಾಕಿದ ಗೂಂಡಾಗಳನ್ನು ಸಾಲ ವಸೂಲಿಗೆ ಕಳುಹಿಸಿ ಮಾನಸಿಕ ದೈಹಿಕ ಹಿಂಸೆ ನೀಡುತ್ತಾರೆ ಎಂಬ ಆರೋಪಕ್ಕೆ ನಿಚ್ಚಳ ಆಧಾರಗಳಿವೆ ಮತ್ತು ಈ ಆರೋಪ ಇಂದು ನೆನ್ನೆಯದಲ್ಲ.
ಒಂದೆಡೆ ನಿರಂತರವಾಗಿ ಆಗುತ್ತಿರುವ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಬೆಳೆಗೆ ಸಿಗದ ತಕ್ಕ ಬೆಲೆ, ನಿರುದ್ಯೋಗ, ದುಬಾರಿಯಾಗುತ್ತಿರುವ ಬದುಕು, ಮಕ್ಕಳ ಮದುವೆ ಮುಂತಾದ ಕಾರಣಗಳಿಂದಾಗಿ ಬಡವರ ಬದುಕು ಹೈರಾಣಾಗುತ್ತಿದೆ. ಬ್ಯಾಂಕುಗಳು ಗ್ಯಾರಂಟಿ ಕೇಳುತ್ತವೆ. ಬ್ಯಾಂಕುಗಳಿಂದ ಸಾಲ ಪಡೆಯಲು ಅಡಮಾನ ಇಡಲು ಇವರ ಬಳಿ ಏನೂ ಇಲ್ಲ. ಸುಲಭವಾಗಿ ಸಾಲ ಕೊಡುವವರು ಫೈನಾನ್ಸ್‌ನವರು. ಸದ್ಯದ ಕಷ್ಟ ನೀಗಿದರೆ ಸಾಕು ಎಂಬ ದೈನೇಸಿ ಸ್ಥಿತಿಗೆ ಬಂದು ತಲುಪಿದ ಜನ ಬಡ್ಡಿದರ ಕುತ್ತಿಗೆ ಕೊಯ್ಯುವಷ್ಟಾದರೂ ಲೆಕ್ಕಿಸದೆ ಸಾಲ ಮಾಡುತ್ತಿದ್ದಾರೆ.
“ಈ ಸುಗ್ರೀವಾಜ್ಞೆಯು ಮೈಕ್ರೋ ಫೈನಾನ್ಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಇದು ಬಡವರ ಮೇಲೆಯೂ ಪರಿಣಾಮ ಬೀರುತ್ತದೆ” ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಅನಧಿಕೃತ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಿದರೆ ಅದರಿಂದ ಬಡವರಿಗೆ ಹೇಗೆ ತೊಂದರೆಯಾಗುತ್ತದೆ? ಅಂದ್ರೆ ರಾಜ್ಯಪಾಲರಿಗೆ ಫೈನಾನ್ಸ್ ಗಳಿಂದ ಸಾಲಗಾರರ ಮೇಲಾಗುತ್ತಿರುವ ಕಿರುಕುಳ, ಅವಮಾನ, ಹೆಚ್ಚು ಬಡ್ಡಿ ವಸೂಲಾತಿಯ ದಂಧೆಯ ವಿರಾಟ್ ಸ್ವರೂಪದ ಅರಿವಿಲ್ಲ ಅನ್ನಿಸುತ್ತದೆ. ಇದ್ದಿದ್ದರೆ ಅವರು ಸುಗ್ರೀವಾಜ್ಞೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೇನೋ. ಆದರೆ ಅವರಿಗೆ ಸಾಲ ಕೊಟ್ಟವರ ಮೇಲೆಯೇ ಹೆಚ್ಚು ಕಾಳಜಿಯೇ ಇದ್ದಂತೆ ಕಾಣುತ್ತಿದೆ. ಈ ಸುಗ್ರೀವಾಜ್ಞೆ ಕುರಿತು ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಅವರಿಗೆ ಮನವರಿಕೆ ಮಾಡಲು ಸೋತಿರಬಹುದು.
ಥಾವರ್ ಚಂದ್ ಅವರು ಖುದ್ದು ಮಧ್ಯಪ್ರದೇಶದ ಬಡ ದಲಿತ ಕುಟುಂಬದಲ್ಲಿ ಜನಿಸಿದವರು. ಬಡತನ ಮತ್ತು ಜಾತಿಭೇದಭಾವದ ಉರಿಯನ್ನು ಅನುಭವಿಸಿರುವವರು. ಮೈಕ್ರೋಫೈನಾನ್ಸ್ ಕಂಪನಿಗಳು ಜನಸಾಮಾನ್ಯರ ರಕ್ತ ಹೀರುತ್ತಿರುವುದು ವಾಸ್ತವ. ಈ ಕ್ರೌರ್ಯವನ್ನು ಅವರು ಕಣ್ಣುಗಳು ಕಾಣುತ್ತಿಲ್ಲವೆಂದು ತೋರುತ್ತಿದೆ. ಕಂಡಿದ್ದರೆ ಈ ಸುಗ್ರೀವಾಜ್ಞೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿರಲಿಲ್ಲ. ಬದಲಾಗಿ ನಿರ್ದಿಷ್ಟ ತಿದ್ದುಪಡಿಗಳನ್ನು ಸೂಚಿಸಿ ಅವುಗಳನ್ನು ಸೇರಿಸುವಂತೆ ವಾಪಸು ಕಳಿಸಬಹುದಿತ್ತು.
ರಾಜ್ಯಪಾಲರ ಈ ತಿರಸ್ಕಾರದ ನಡೆಯನ್ನು ರಾಜ್ಯಸರ್ಕಾರ ತೀವ್ರವಾಗಿ ಪ್ರತಿಭಟಿಸಬೇಕಿತ್ತು. ಆದರೆ ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎಂಬ ಮಾತನ್ನಷ್ಟೇ ಆಡಿದೆ. ಸಿದ್ದರಾಮಯ್ಯನವರ ಈ ನಡೆ ನಿರಾಸೆ ಮೂಡಿಸುವಂತಿದೆ. ಈ ಜನಪರ ಸುಗ್ರೀವಾಜ್ಞೆಯನ್ನು ಪುನಃ ರಾಜ್ಯಪಾಲರಿಗೆ ಕಳಿಸಬೇಕು. ರಾಜ್ಯಪಾಲರ ಮೇಲೆ ಸಾರ್ವಜನಿಕ ಒತ್ತಡ ತರುವಂತೆ ಅಭಿಪ್ರಾಯ ರೂಪಿಸಬೇಕು. ಕೈಕಟ್ಟಿ ಕುಳಿತುಕೊಳ್ಳುವುದು ಖಂಡನೀಯ.
ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ ಎಂದ ಮಾತ್ರಕ್ಕೆ ಫೈನಾನ್ಸ್ ಕಿರುಕುಳದಿಂದ ಬಡವರನ್ನು, ಸಾಲಗಾರರನ್ನು ರಕ್ಷಿಸುವ ಬಾಗಿಲು ಸಂಪೂರ್ಣ ಬಂದ್ ಆಗಿಲ್ಲ. ಸದ್ಯಕ್ಕೆ ಅನಧಿಕೃತ ಫೈನಾನ್ಸ್‌ಗಳ ಬಾಗಿಲು ಬಂದ್ ಮಾಡಿಸುವ ಮೂಲಕ, ಪೊಲೀಸ್ ಶಕ್ತಿಯನ್ನು ಬಳಸಿ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಸಾಧ್ಯ. ಈ ನಡೆ ಸುಲಿಗೆಕೋರರಿಗೆ ಒಂದು ಮಟ್ಟಿನ ಭಯವನ್ನೂ ಹುಟ್ಟಿಸಬಹುದು. ಆದರೆ ಹೀಗೆ ಮಾಡಲು ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. ಸಿದ್ದರಾಮಯ್ಯ ಸರ್ಕಾರ ಅದನ್ನು ತೋರಬೇಕು.
ಮೈಕ್ರೋ ಫೈನಾನ್ಸ್ ಕಂಪನಿಗಳು ಈಗಾಗಲೆ ಇರುವ ಕಾನೂನು ಕಾಯ್ದೆಗಳಿಗೆ ಬದ್ಧವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲನೆ ಮಾಡುವುದು, ಈಗಾಗಲೇ ಬಂದಿರುವ ಕಿರುಕುಳದ ದೂರುಗಳಲ್ಲಿ ಸರಿಯಾದ ಸೆಕ್ಷನ್ ನಡಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡುವ ಅಗತ್ಯವಿದೆ. ಆದರೆ, ನಮ್ಮ ದುರದೃಷ್ಟವೆಂದರೆ ಬಹುತೇಕ ಅಕ್ರಮ ಚಟುವಟಿಕೆ, ಅವ್ಯವಹಾರಗಳು ಪೊಲೀಸರ ಕೃಪಾಕಟಾಕ್ಷದಲ್ಲಿರುತ್ತವೆ. ಪೊಲೀಸರಿಗೆ ಲಕ್ಷ್ಮೀ ಕಟಾಕ್ಷ ಇರುತ್ತದೆ ಎಂಬುದು ಪೊಳ್ಳು ಆರೋಪವೇನಲ್ಲ. ಮಟ್ಕಾ, ಡ್ರಗ್ಸ್, ಫೈನಾನ್ಸ್, ನಕಲಿ ಮದ್ಯ, ಅಕ್ರಮ ಮರಳು ಸಾಗಾಟ ಹೀಗೆ ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳು ಪೊಲೀಸರ ಪರೋಕ್ಷ ಬೆಂಬಲವಿಲ್ಲದೆ ನಡೆಯಲು ಸಾಧ್ಯವಿಲ್ಲ. ಈಗ ಸರ್ಕಾರಕ್ಕೆ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ಇರುವ ದೊಡ್ಡ ಸವಾಲು ಪೊಲೀಸರದು. ಈ ಕಾರಣಕ್ಕಾಗಿ ಸುಗ್ರೀವಾಜ್ಞೆ ಅಗತ್ಯವಿತ್ತು. ರಾಜ್ಯಪಾಲರು ತಿರಸ್ಕರಿಸಿದ ನಂತರ ಸರ್ಕಾರದ ನಡೆ ಏನು ಎಂಬುದರ ಮೇಲೆ ಸಾಲಗಾರರ ರಕ್ಷಣೆ ಅಥವಾ ಭಕ್ಷಣೆ ಆಧರಿಸಿದೆ.
