ಮಧು ಬಂಗಾರಪ್ಪ ಅವರು ಶಾಲಾ ಶಿಕ್ಷಣ ಸಚಿವರಾಗಿ ಒಂದೂವರೆ ವರ್ಷ ಕಳೆದಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ, ಗುಣಮಟ್ಟದ ಶಿಕ್ಷಣಕ್ಕೆ ಏನು ಮಾಡಬೇಕೋ ಅದನ್ನು ಮಾಡದೇ ಬೇಕಾಬಿಟ್ಟಿ ಉಡಾಫೆಯ ಹೇಳಿಕೆ ಕೊಡುವುದರಲ್ಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷ ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಲು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರುವ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.
ಖಾಸಗಿ ಶಾಲೆಗಳ ಶುಲ್ಕ ಕಟ್ಟುವುದು ಸಮಸ್ಯೆಯಾಗಿದ್ದರೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂಬ ಧಾಟಿಯಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದಾರೆ. ‘ವಿಬ್ ಗಯಾರ್’ ತರಹದ ಕೆಲ ಪ್ರತಿಷ್ಠಿತ ಶಾಲೆಗಳು ನಿಗದಿತ ಅವಧಿಯಲ್ಲಿ ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸದ ಪೋಷಕರಿಂದ ಆ ಹಣಕ್ಕೆ ಬಡ್ಡಿ ವಸೂಲಿ ಮಾಡುತ್ತಿವೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನಸೆಳೆದಾಗ ಸಚಿವರು “ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ನಮಗಿಲ್ಲ. ಹಾಗಾಗಿ ಈ ಸಮಸ್ಯೆ ತಡೆಯಲು ಮಕ್ಕಳನ್ನು ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂದು ಪೋಷಕರಿಗೆ ಮನವಿ ಮಾಡಬಹುದು ಅಷ್ಟೇ” ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇವರ ಮನವಿಗೆ ಮಣಿದು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತಹ ಪರಿಸ್ಥಿತಿ ಇದೆಯೇ? ಮಧು ಬಂಗಾರಪ್ಪನವರು ಶಾಲಾ ಶಿಕ್ಷಣ ಸಚಿವರಾದ ನಂತರ ಶಾಲಾ ಶಿಕ್ಷಣದ ಗುಣಮಟ್ಟದಲ್ಲಿ ಭಾರೀ ಸುಧಾರಣೆ ಮಾಡಿ ಈ ಮಾತು ಹೇಳಿದ್ದರೆ ಮೆಚ್ಚಬಹುದಿತ್ತು.
ಸಚಿವರ ಹೇಳಿದ್ದು ಒಂದರ್ಥದಲ್ಲಿ ಸರಿಯಾಗಿದೆ. ಉಚಿತವಾಗಿ ಶಿಕ್ಷಣ ನೀಡುವ, ಡೊನೇಷನ್ ಇಲ್ಲದೇ, ಕನಿಷ್ಠ ಶುಲ್ಕ ಪಡೆಯುವ ಸರ್ಕಾರಿ ಶಾಲೆಗಳು ಇರುವಾಗ ಖಾಸಗಿ ಶಾಲೆಗಳಿಗೆ ಯಾಕೆ ನಮ್ಮ ಮಕ್ಕಳನ್ನು ಕಳಿಸಬೇಕು! ಮೂರ್ನಾಲ್ಕು ದಶಕಗಳ ಹಿಂದಿನವರೆಗೂ ಅತಿ ಶ್ರೀಮಂತರನ್ನು ಹೊರತುಪಡಿಸಿದರೆ ಯಾವ ವರ್ಗಬೇಧವೂ ಇಲ್ಲದೇ ಎಲ್ಲರೂ ಊರಿಗೊಂದೇ ಇದ್ದ ಸರ್ಕಾರಿ ಶಾಲೆಗಳಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆಯುತ್ತಿದ್ದರು. ಸರ್ಕಾರಿ ಶಾಲೆಯಲ್ಲಿ ಓದಿದವರೇ ವಿಜ್ಞಾನಿಗಳು, ವೈದ್ಯರು, ಅಧಿಕಾರಿಗಳಾಗಿದ್ದಾರೆ. ಆದರೆ ಈಗ ಸರ್ಕಾರಿ ಶಾಲೆಗಳು ಹೇಗಿವೆ? ಸರಿಯಾದ ಕಟ್ಟಡ, ಮೂಲಸೌಕರ್ಯವಾದ ಕುಡಿಯುವ ನೀರು, ಶೌಚಾಲಯ, ಶೈಕ್ಷಣಿಕ ಪರಿಕರಗಳು ಇಲ್ಲದೇ ಬಹುತೇಕ ಸರ್ಕಾರಿ ಶಾಲೆಗಳು ನಿತ್ರಾಣಗೊಂಡಿವೆ. ಮುಖ್ಯವಾಗಿ ಶಿಕ್ಷಕರ ಕೊರತೆಯಿದೆ. ಇಂಗ್ಲಿಷ್, ವಿಜ್ಞಾನ, ಗಣಿತ ಪಾಠ ಮಾಡುವ ಶಿಕ್ಷಕರೇ ಇಲ್ಲ. ಇರುವ ಶಿಕ್ಷಕರು ನಿವೃತ್ತಿಯಂಚಿನಲ್ಲಿದ್ದಾರೆ. ಇಂದಿನ ಕಾಲಮಾನಕ್ಕೆ ಅವರು ‘ಅಪ್ಡೇಟ್’ ಆಗಿಲ್ಲ. ಗ್ರಾಮೀಣ ಭಾಗದ ಕೆಲವು ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ, ಅವರಿಗೆ ನೂರೆಂಟು ವ್ಯವಹಾರ. ನಿಗಾ ಇಡುವ ಅಧಿಕಾರಿಗಳಿಲ್ಲ. ಮುಖ್ಯವಾಗಿ ಊರಿಡೀ ಖಾಸಗಿ ಶಾಲೆಗಳನ್ನು ತೆರೆಯಲು ಬಿಟ್ಟು, ಅದರಲ್ಲೂ ಇಂಗ್ಲಿಷ್ ಶಾಲೆಗಳು ತಲೆಯೆತ್ತಿದ ನಂತರ ಸರ್ಕಾರಿ ಶಾಲೆಗಳು ಬಡ, ದಲಿತ, ಅಲ್ಪಸಂಖ್ಯಾತರ ಮಕ್ಕಳ ಶಾಲೆಗಳಾಗಿವೆ. ಆರ್ಥಿಕ ಶಕ್ತಿಯಿಲ್ಲ ಕುಟುಂಬಗಳ ಮಕ್ಕಳಷ್ಟೇ ಸರ್ಕಾರಿ ಶಾಲೆಗಳಿಗೆ ಹೋಗುವಂತಾಗಿದೆ. ಗುಣಮಟ್ಟದ ಶಿಕ್ಷಣ, ಸಮಾನ ಶಿಕ್ಷಣ ಎಲ್ಲ ಮಕ್ಕಳ ಮೂಲಭೂತ ಹಕ್ಕು ಎಂಬುದು ಶಾಸನಕ್ಕೆ ಮಾತ್ರ ಸೀಮಿತವಾಗಿದೆ. ಸರ್ಕಾರದ ಈ ದಿವ್ಯ ನಿರ್ಲಕ್ಷ್ಯದ ಲಾಭವನ್ನು ಖಾಸಗಿ ಶಾಲೆಗಳು ಪಡೆಯುತ್ತಿವೆ. ಕೂಲಿ ಮಾಡುವ ಕುಟುಂಬಗಳೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು ಶ್ರಮಿಸುತ್ತಿವೆ.
ಶ್ರೀಮಂತರ ಮಕ್ಕಳನ್ನು ಬಿಡಿ ಮಧ್ಯಮ – ಕೆಳಮಧ್ಯಮ ವರ್ಗದ ಮಕ್ಕಳನ್ನಾದರೂ ಉಳಿಸಿಕೊಳ್ಳುವ ಮನಸ್ಥಿತಿ, ಬದ್ಧತೆ ಸರ್ಕಾರಕ್ಕೂ ಇಲ್ಲ, ಅಧಿಕಾರಿಗಳಿಗೂ ಇಲ್ಲ. ಹೀಗಿರುವಾಗ ಸಚಿವರು ಖಾಸಗಿ ಶಾಲಾ ಮಕ್ಕಳನ್ನು ಸರ್ಕಾರಿ ಶಾಲೆಗೆ ಬನ್ನಿ ಎಂದು ಕರೆಯುವುದರಲ್ಲಿ ಅರ್ಥವೇ ಇಲ್ಲ.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಪ್ರತಿ ಸರ್ಕಾರ ಬಂದಾಗಲೂ, ಬಜೆಟ್‌ನಲ್ಲಿ ನೂರಾರು ಕೋಟಿ ಅನುದಾನ ಮೀಸಲಿಡುತ್ತದೆ. ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಆದರೆ, ಶಾಲೆಗಳ ಸ್ಥಿತಿಗತಿಯಲ್ಲಿ ಯಾವ ಬದಲಾವಣೆಯೂ ಆಗುತ್ತಿಲ್ಲ. ಅದರಲ್ಲೂ ಹಿಂದುಳಿದ ಜಿಲ್ಲೆಗಳಾದ ಉತ್ತರ ಕರ್ನಾಟಕದ ಹೈದರಾಬಾದ್ -ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಬಡತನ, ಬರಗಾಲ, ಅಪೌಷ್ಟಿಕತೆ ಬಾಧಿಸುತ್ತಿರುವ ಈ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಇಚ್ಛಾಶಕ್ತಿ ಪ್ರಭುತ್ವಕ್ಕೆ ಇಲ್ಲ. ಮುಖ್ಯವಾಗಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳು ಮತ್ತು ಬೇಕಿರುವಷ್ಟು ಶಿಕ್ಷಕರಿದ್ದರೆ ಸಾಕು. ಇವೆರಡು ಬಹುಮುಖ್ಯ. ಆದರೆ ಇವೆರಡನ್ನು ಪೂರೈಸಲು ಸರ್ಕಾರಗಳು ಸಂಪೂರ್ಣವಾಗಿ ಸೋತಿವೆ. ರಾಜ್ಯದಲ್ಲಿ ಮಕ್ಕಳ ಅನುಪಾತಕ್ಕೆ ಸರಿಯಾಗಿ ಶಿಕ್ಷಕರಿಲ್ಲ. ಶಿಕ್ಷಣ ತರಬೇತಿ ಪಡೆದ ಯುವಸಮುದಾಯ ಖಾಸಗಿ ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಸರ್ಕಾರ ಅತಿಥಿ ಶಿಕ್ಷಕರನ್ನು ದುಡಿಸಿಕೊಂಡು ಅವರನ್ನು ಶೋಷಣೆ ಮಾಡುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಸಂಬಳ ಕೊಡದ ಪರಿಣಾಮ ಅತಿಥಿ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾನಸಿಕ ಒದ್ದಾಟದ ನಡುವೆ ಅವರು ಪೂರ್ಣ ಮನಸ್ಸಿನಿಂದ ಪಾಠ ಮಾಡಲಾಗದ ಪರಿಣಾಮ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ.
2023ರ ಕೇಂದ್ರ ಸರ್ಕಾರದ ವರದಿಯ ಪ್ರಕಾರ 2019ರಿಂದ 2023ರ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಸುಮಾರು 23.97ಲಕ್ಷ ಮಕ್ಕಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಕೊರೋನಾ ಕಾಲದ ನಂತರ ಈ ಬೆಳವಣಿಗೆ ಆಗಿದೆ. ಸಾಂಕ್ರಾಮಿಕ ಕಾಯಿಲೆ, ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಉದ್ಯೋಗ ನಷ್ಟ ಆಗಿ, ಸಣ್ಣಪುಟ್ಟ ವ್ಯಾಪಾರ- ಉದ್ಯಮಗಳು ಬಾಗಿಲು ಹಾಕಿದ ಪರಿಣಾಮ ಕೆಳಮಧ್ಯಮ ವರ್ಗದ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
ಶಾಲೆಗಳ ಸುಧಾರಣೆಗಾಗಿ ಸರ್ಕಾರವೇ ನೇಮಿಸಿದ ಶಿಕ್ಷಣ ತಜ್ಞರ ಸಮಿತಿ ಕೊಟ್ಟ ಶಿಫಾರಸುಗಳನ್ನು ಕಸದ ಬುಟ್ಟೆಗೆ ಎಸೆದ ಸರ್ಕಾರ ಮಕ್ಕಳ ಕೊರತೆಯ ನೆಪದಲ್ಲಿ ಶಾಲೆಗಳನ್ನು ಮುಚ್ಚುವ, ವಿಲೀನ ಹೆಸರಿನ ನಾಟಕ ಆಡುತ್ತಿದೆ. ಇದು ಅಕ್ಷಮ್ಯ. ಜೊತೆಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಇಂಗ್ಲಿಷ್ ಮಾಧ್ಯಮ ತೆರೆಯುವುದು ಮುಂತಾದ ಯಾವುದೇ ಪೂರ್ವ ಸಿದ್ಧತೆ ಇಲ್ಲದ ಕೆಲಸಕ್ಕೆ ರಾಜ್ಯ ಶಿಕ್ಷಣ ಇಲಾಖೆ ಕೈ ಹಾಕಿದೆ. ಶಿಕ್ಷಣ ಇಲಾಖೆಯ ಇಂತಹ ಬೇಜವಾಬ್ದಾರಿತನದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಮಧು ಬಂಗಾರಪ್ಪ ಅವರು ಶಾಲಾ ಶಿಕ್ಷಣ ಸಚಿವರಾಗಿ ಒಂದೂವರೆ ವರ್ಷ ಕಳೆದಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ, ಗುಣಮಟ್ಟದ ಶಿಕ್ಷಣಕ್ಕೆ ಏನು ಮಾಡಬೇಕೋ ಅದನ್ನು ಮಾಡದೇ ಬೇಕಾಬಿಟ್ಟಿ ಉಡಾಫೆಯ ಹೇಳಿಕೆ ಕೊಡುವುದರಲ್ಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮತ್ತೊಂದು ಶಿಕ್ಷಣ ವರ್ಷದ ಕೊನೆಯಲ್ಲಿ ಬಂದು ನಿಂತಿದ್ದೇವೆ. ಮುಂದಿನ ವರ್ಷ ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಲು ಯಾವ ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬಹುದು ಎಂಬುದರ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ. ಮುಂದಿನ ಶೈಕ್ಷಣಿಕ ವರ್ಷ ಶಾಲೆ ಶುರುವಾಗುವ ದಿನ ಅಥವಾ ಒಂದು ವಾರದ ಒಳಗಾಗಿ ಎಲ್ಲ ಮಕ್ಕಳಿಗೂ ಪಠ್ಯ ಪುಸ್ತಕ, ಸಮವಸ್ತ್ರ ತಲುಪಿಸುವಂತೆ ಮಾಡಲಿ. ಶಿಕ್ಷಕರ ನೇಮಕಾತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಶುರುಮಾಡಿ ಶಿಕ್ಷಕರ ಕೊರತೆ ನೀಗಿಸಲಿ. ಮೂಲಸೌಕರ್ಯ ಕಲ್ಪಿಸಿ ಶಿಕ್ಷಣದ ಗುಣಮಟ್ಟ ಏರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿ.
