ಈ ದಿನ ಸಂಪಾದಕೀಯ | ಶಾಸಕರಿಗೆ ಸರ್ಕಾರಿ ಶಾಲೆಗಳ ಉಸ್ತುವಾರಿ ಕೂಡದು; ಶಾಲೆಗಳನ್ನು ಏನು ಮಾಡಲು ಹೊರಟಿದೆ ಸರ್ಕಾರ?

Date:

Advertisements

ಎಸ್‌ಡಿಎಂಸಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅವುಗಳನ್ನು ಸರಿಪಡಿಸಬೇಕು. ಆದರೆ ನೆಗಡಿಯಿಂದ ಬಿಡಿಸಿಕೊಳ್ಳಲು ಮೂಗು ಕೊಯ್ದುಕೊಳ್ಳಬಾರದು. ಎಸ್‌ಡಿಎಂಸಿಗಳನ್ನು ಬಂದ್ ಮಾಡಿ ಶಾಲೆಗಳನ್ನು ಪುಢಾರಿಗಳ ಸುಪರ್ದಿಗೆ ಒಪ್ಪಿಸಿದರೆ ಅವು ರಾಜಕೀಯ ಅಂಗಳಗಳಾಗುವ ಸಾಧ್ಯತೆಯಿದೆ ಎಂಬ ಆತಂಕ ಸಹಜವಾಗಿಯೇ ಎದ್ದಿದೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಮತ್ತು ಮೇಲ್ವಿಚಾರಣೆಗಾಗಿ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಿರುವುದಾಗಿ ಇಲಾಖೆ ಪ್ರಕಟಿಸಿದೆ. ಈ ತೀರ್ಮಾನಕ್ಕೆ ಈಗಾಗಲೇ ಶಿಕ್ಷಣ ತಜ್ಞರು, ಸಂಘಟನೆಗಳಿಂದ ವಿರೋಧ ದಾಖಲಾಗಿದೆ.

ಒಂದು ಕಡೆ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಸಮಿತಿ ರಚಿಸಿದೆ. ಹಲವು ಶಿಕ್ಷಣ ತಜ್ಞರ ಜೊತೆ ಈ ಸಮಿತಿಯು ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಹೊಸ ಶಿಕ್ಷಣ ನೀತಿ ಜಾರಿಗೆ ಹೊರಟ ಸರ್ಕಾರ ಅದರ ಮಧ್ಯದಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ತರಗತಿ ತೆರೆಯುವ ವಿವಾದ ಎಬ್ಬಿಸಿತ್ತು. ಈಗ ಸರ್ಕಾರಿ ಶಾಲೆಗಳ ಉಸ್ತುವಾರಿ ಎಸ್‌ಡಿಎಂಸಿ ಬದಲಿಗೆ ಸ್ಥಳೀಯ ಶಾಸಕರ ಸಮಿತಿಯ ಕೈಗೆ ಕೊಡಲು ಹೊರಟಿದೆ. ಇದು ಅಸಡ್ಡಾಳ ಅವೈಜ್ಞಾನಿಕ ಹೆಜ್ಜೆ.  

Advertisements

ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಶಾಲೆಗಳ ಸುಧಾರಣೆ ಮತ್ತು ಮೇಲುಸ್ತುವಾರಿಗೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗಳನ್ನು ರಚಿಸಲಾಗಿದೆ. ಆ ಸಮಿತಿಗಳಲ್ಲಿ ಸ್ಥಳೀಯರೇ, ಅದರಲ್ಲೂ ಮಕ್ಕಳ ಪೋಷಕರು ಇರುತ್ತಾರೆ. ಅವು ಚೆನ್ನಾಗಿ ಕೆಲಸ ಮಾಡುತ್ತಿವೆ. ಶಾಲೆಗಳ ಕಾರ್ಯವೈಖರಿಯ ಮೇಲೆ ಸಮೀಪದ ನಿಗಾ ಇಡುತ್ತಿವೆ. ಎಸ್‌ಡಿಎಂಸಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅವುಗಳನ್ನು ಸರಿಪಡಿಸಬೇಕು. ಆದರೆ ನೆಗಡಿಯಿಂದ ಬಿಡಿಸಿಕೊಳ್ಳಲು ಮೂಗು ಕೊಯ್ದುಕೊಳ್ಳಬಾರದು. ಎಸ್‌ಡಿಎಂಸಿಗಳನ್ನು ಬಂದ್ ಮಾಡಿ ಶಾಲೆಗಳನ್ನು ಪುಢಾರಿಗಳ ಸುಪರ್ದಿಗೆ ಒಪ್ಪಿಸಿದರೆ ಅವು ರಾಜಕೀಯ ಅಂಗಳಗಳಾಗುವ ಸಾಧ್ಯತೆಯಿದೆ ಎಂಬ ಆತಂಕ ಸಹಜವಾಗಿಯೇ ಎದ್ದಿದೆ. ಉತ್ತಮ ಶಾಸಕರೂ ಇದ್ದಾರೆ. ಆದರೆ ಶಾಲೆಗಳನ್ನು ರಾಜಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಬಾರದು ಎಂಬ ಪ್ರಜ್ಞೆ ಎಲ್ಲ ಶಾಸಕರಲ್ಲೂ ಇರುತ್ತದೆಂದು ನಿರೀಕ್ಷಿಸಲು ಬರುವುದಿಲ್ಲ.

ಕೆಲವು ಶಾಸಕರು ಕನಿಷ್ಠ ಶಿಕ್ಷಣ ಹೊಂದಿದವರಿದ್ದಾರೆ, ಕ್ರಿಮಿನಲ್‌ ಹಿನ್ನೆಲೆಯವರಿದ್ದಾರೆ, ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸವನ್ನೇ ನಿಯತ್ತಿನಿಂದ ಮಾಡದ ಸ್ವಾರ್ಥಿ ಶಾಸಕರ ಕೈಗೆ ಸರ್ಕಾರಿ ಶಾಲೆಗಳನ್ನು ಕೊಟ್ಟರೆ ಅವು ಉದ್ದಾರ ಆದಂತೆಯೇ ಸರಿ. ಶಾಸಕರ ನೇತೃತ್ವದ ಸಮಿತಿ ಅಂದ್ರೆ ಅದರಲ್ಲಿ ಯಾರೆಲ್ಲ ಇರಬಹುದು ಎಂಬುದನ್ನು ಈಗಲೇ ಊಹಿಸಬಹುದು. ತಮ್ಮ ಮನೆಯವರು, ಸಂಬಂಧಿಗಳು, ತಮ್ಮ ಹಿಂದೆ ಮುಂದೆ ಸುಳಿದಾಡುವ ಭಟ್ಟಂಗಿಗಳು, ಪಕ್ಷದ ಕಾರ್ಯಕರ್ತರು ಹೀಗೆ ತಮ್ಮವರಿಗೆ ಏನೋ ಒಂದು ಸ್ಥಳೀಯ ಮಟ್ಟದಲ್ಲಿ ಅವಕಾಶ ಕಲ್ಪಿಸುವ ಅಡ್ಡೆಗಳಾದರೆ ಅಚ್ಚರಿಯಿಲ್ಲ. ಮನಸಿಟ್ಟು ಪಾಠ ಹೇಳುವ ಮಾಸ್ತರುಗಳ ಮೇಲೆ ವಿನಾಕಾರಣ ದರ್ಬಾರು ನಡೆಸಿ ಗೋಳುಹೊಯ್ದುಕೊಳ್ಳಲು ಅವಕಾಶ ನೀಡಕೂಡದು.

ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಉದ್ಧಾರ ಮಾಡಬೇಕು ಎಂಬ ಮನಸ್ಥಿತಿ ರಾಜಕಾರಣಿಗಳಿಗೆ ಇದ್ದರೆ ಮೂರ್ನಾಲ್ಕು ದಶಕಗಳಿಂದ ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾದವರ ಕ್ಷೇತ್ರದ ಶಾಲೆಗಳು ಮಾದರಿ ಶಾಲೆಗಳು ಎನಿಸಿಕೊಳ್ಳಬೇಕಿತ್ತು. ಶಾಸಕರಾದವರಿಗೆ ಮಂತ್ರಿಯಾಗಬೇಕು, ಚೆನ್ನಾಗಿ ಹಣ ಮಾಡುವ ಖಾತೆಯೇ ಬೇಕು ಎಂಬ ಆಸೆ. ಮಂತ್ರಿಯಾದವರಿಗೆ ಮುಖ್ಯಮಂತ್ರಿ ಕುರ್ಚಿ ಮೇಲೆ ಆಸೆ. ಅದು ಬಿಟ್ಟರೆ ಮತದಾರರಿಗೆ ಅನುಕೂಲ ಮಾಡಬೇಕು, ಊರಿನ ಬಡ ಮಕ್ಕಳು ಹೋಗುವ ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ, ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂಬ ಕಾಳಜಿ ಇರುವ ರಾಜಕಾರಣಿಗಳನ್ನು ಹಗಲೇ ದೀಪ ಹಿಡಿದು ಹುಡುಕಬೇಕಿರುವ ದುರ್ದಿನಗಳಿವು.

ಸರ್ಕಾರ ಮೊದಲು ಅರಿತುಕೊಳ್ಳಬೇಕಿರೋದು ಶಾಲೆ ಅಂದ್ರೆ ಕಟ್ಟಡ ಮಾತ್ರ ಅಲ್ಲ. ಅಲ್ಲಿ ಶೌಚಾಲಯ, ಕೊಠಡಿ ಮಾತ್ರ ಇದ್ದರೆ ಸಾಲದು. ಸಮರ್ಥ ಶಿಕ್ಷಕರು, ಪಠ್ಯಕ್ರಮ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಚಟುವಟಿಕೆಗಳು, ಮತಧರ್ಮಗಳ ಭೇದವಿಲ್ಲದೇ ಮನಸ್ಸು ಅರಳುವ ವಾತಾವರಣ ನಿರ್ಮಾಣವಾಗಬೇಕು. ಅದು ಹಣ, ಜಾತಿ, ತೋಳ್ಬಲದಿಂದ ಅಕ್ರಮ ದಾರಿಗಳಿಂದ ಆರಿಸಿ ಬಂದ ರಾಜಕಾರಣಿಗಳು ಈ ಕುರಿತು ಯಾಕೆ ತಲೆಕೆಡಿಸಿಕೊಳ್ಳುತ್ತಾರೆ?

ಇತ್ತೀಚೆಗೆ ಶಿಕ್ಷಣ ಸಚಿವರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ “ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ” ಎಂದು ಕುಹಕವಾಡಿದ್ದ. ಆ ಕ್ಷಣವೇ ಸಿಟ್ಟಾದ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಆ ಹುಡುಗ ಯಾರೆಂದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಹಿಂದೊಮ್ಮೆ ಮಾಧ್ಯಮಗಳ ಮುಂದೆ ಮಾತನಾಡುವಾಗ “ನನಗೆ ಕನ್ನಡ ಸರಿಯಾಗಿ ಬರಲ್ಲ” ಎಂದು ಸಚಿವರೇ ಹೇಳಿಕೊಂಡಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳು ಸಹಜವಾಗಿಯೇ ಇದ್ದವು. ಕನ್ನಡ ಸರಿಯಾಗಿ ಬರಲ್ಲ ಎಂದು ಹೇಳುವ ಶಾಸಕರನ್ನು ಬಹಳ ಜವಾಬ್ದಾರಿಯಿರುವ, ಲಕ್ಷಾಂತರ ಮಕ್ಕಳ ಭವಿಷ್ಯ ನಿಂತಿರುವ ಶಿಕ್ಷಣ ಇಲಾಖೆಯ ಸಚಿವರನ್ನಾಗಿ ಮಾಡಿದ್ದು ಸರ್ಕಾರದ ಬೇಜವಾಬ್ದಾರಿತನ ತೋರಿಸುತ್ತದೆ. ಎಡವಟ್ಟಿನ ಮೇಲೆ ಎಡವಟ್ಟುಗಳಿಗೆ ದಾರಿ ಮಾಡಿದಂತಾಗಿದೆ.

ಸರ್ಕಾರಿ ಶಾಲೆಗಳ ಉಸ್ತುವಾರಿ ಸ್ಥಳೀಯ ಜನರ ಕೈಯಲ್ಲಿದ್ದರೆ ಅದು ನಮ್ಮ ಶಾಲೆ ಎಂಬ ಭಾವನೆ ಊರವರಿಗೂ ಇರುತ್ತದೆ. ಅಷ್ಟೇ ಅಲ್ಲ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದಿ ಈಗ ಉನ್ನತ ಸ್ಥಾನ, ಒಳ್ಳೆಯ ಕೆಲಸ ಪಡೆದು ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಹಳೆ ವಿದ್ಯಾರ್ಥಿಗಳು, ಶಿಕ್ಷಕರಾಗಿ ನಿವೃತ್ತರಾದವರು, ಮಕ್ಕಳ ಪೋಷಕರನ್ನು ಒಳಗೊಂಡ ಸಮಿತಿಗಳು ಶಾಲೆಗಳ ಉಸ್ತುವಾರಿ ವಹಿಸಿದರೆ ಸಕಾರಾತ್ಮಕ ಬೆಳವಣಿಗೆಗಳು ಆಗಬಹುದು. ಎಲ್ಲರನ್ನೂ ಒಳಗೊಳ್ಳುವ ಸೂತ್ರದಿಂದ ಮಾತ್ರ ಏನಾದರೂ ಬದಲಾವಣೆ ಸಾಧ್ಯ. ಹಿಂದೆ ಊರಿಗೊಂದು ಶಾಲೆ ಇದ್ದರೆ ಅದು ಎಲ್ಲರ ಶಾಲೆಯಾಗಿತ್ತು. ಎಲ್ಲ ಧರ್ಮ- ಜಾತಿಯ ಮಕ್ಕಳು ಬೆರೆತು ಕಲಿಯುತ್ತಿದ್ದರು. ಈಗ ಊರೂರಲ್ಲಿ ಖಾಸಗಿ ಶಾಲೆಗಳಿವೆ. ಪೋಷಕರಿಗೆ ಹೆಚ್ಚು ಆಯ್ಕೆಗಳಿವೆ. ಅವರು ಶಕ್ತ್ಯಾನುಸಾರ ಆಯ್ಕೆ ಮಾಡಿಕೊಳ್ಳುತ್ತಾರೆ. ಆಯ್ಕೆಯೇ ಇಲ್ಲದ ಬಡ ಕೂಲಿಕಾರರ ಮಕ್ಕಳು, ದಲಿತರು, ಅಲ್ಪಸಂಖ್ಯಾತರ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಗತಿ.

ಸರ್ಕಾರಿ ಶಾಲೆಗಳ ಉಸ್ತುವಾರಿ ಶಾಸಕರ ಕೈಗೆ ಹೋದರೆ ಸರ್ಕಾರದ ಅನುದಾನದಲ್ಲಿ ಸೌಕರ್ಯ ಒದಗಿಸಬಹುದು. ಅದರಾಚೆಗೆ ಶಾಲೆಗಳಲ್ಲಿ ಆಗಿಬೇಕಿರುವ ಗುಣಮಟ್ಟದ ಶಿಕ್ಷಣದ ಗುರಿ ತಲುಪುವುದು ಸಾಧ್ಯವೇ? ಮಕ್ಕಳ ಸಂಖ್ಯೆ ಹೆಚ್ಚಲು, ಫಲಿತಾಂಶ ಉತ್ತಮಗೊಳ್ಳಲು ಆಗಬೇಕಿರುವುದು ಏನು ಎಂಬುದನ್ನು ಕುರಿತು ಹಲವು ಶಿಕ್ಷಣ ತಜ್ಞರು ಸಲಹೆ ಕೊಟ್ಟಿದ್ದಾರೆ. ಸಮಿತಿಗಳು ಶಿಫಾರಸು ಸಲ್ಲಿಸಿವೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅವೆಲ್ಲವನ್ನೂ ಕಡೆಗಣಿಸಿ ಯೋಜನೆ ರೂಪಿಸುವುದು, ಆದೇಶ ಹೊರಡಿಸುವುದು ಸೂಕ್ತವಲ್ಲ.

ಪ್ರತಿವರ್ಷವೂ ಶಾಲೆ ಶುರುವಾಗಿ ಮೂರ್ನಾಲ್ಕು ತಿಂಗಳು ಕಳೆದರೂ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ ಪೂರೈಕೆಯಾಗಿರುವುದಿಲ್ಲ ಎಂಬ ದೂರುಗಳು ಸರ್ವೇಸಾಮಾನ್ಯವಾಗಿದೆ. ಇಷ್ಟೊಂದು ಸಂಪನ್ಮೂಲ ಇರುವ, ಶಿಕ್ಷಣ- ತಂತ್ರಜ್ಞಾನದಲ್ಲಿ ಮುಂದುವರಿದ ರಾಜ್ಯದಲ್ಲಿ ಶಾಲೆಗಳಿಗೆ ಸರಿಯಾದ ಸಮಯದಲ್ಲಿ ಪಾಠೋಪಕರಣಗಳು ಪೂರೈಸಲಾಗದಿರುವುದು ನಿರ್ಲಕ್ಷ್ಯದ ಪರಮಾವಧಿ.

ಹೊಸ ಶಿಕ್ಷಣ ನೀತಿ ರಚನೆಗೆ ತಜ್ಞರ ಸಮಿತಿ ಕೆಲಸ ಮಾಡುತ್ತಿವೆ. ಅದರ ಮಧ್ಯೆ ಶಾಸಕರ ನೇತೃತ್ವದ ಸಮಿತಿ ರಚನೆಯ ತರಾತುರಿ ನಿರ್ಧಾರ ಯಾಕಾಗಿ? ಇನ್ನಾದರೂ ಶಿಕ್ಷಣ ಇಲಾಖೆ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಪರಿಣಾಮಕಾರಿ ಮಾರ್ಗೋಪಾಯಗಳ ಕಡೆಗೆ ಗಮನ ಹರಿಸಬೇಕು. ಇಂತಹ ಅಪ್ರಯೋಜಕ ನಿರ್ಧಾರಗಳನ್ನು ಕೈಬಿಡಬೇಕು.   

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X