ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು

Date:

Advertisements
ಮೋದಿ ಅವರು ಟ್ರಂಪ್ ಅವರನ್ನು ಭೇಟಿ ಮಾಡಿ, ಅವರ ಶರತ್ತುಗಳನ್ನು ಒಪ್ಪಿಕೊಂಡು ಬಂದಿದ್ದಾರೆ. ಆದರೆ ಭಾರತದಲ್ಲಿರುವ ಮೋದಿ ಭಕ್ತರು ಮೋದಿ ಮಹತ್ತರವಾದುದ್ದನ್ನು ಸಾಧಿಸಿದ್ದಾರೆ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ.

ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಒಂದು ತಿಂಗಳೊಳಗೆ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ. ಪ್ರಸ್ತುತ ಸಂದರ್ಭಗಳಲ್ಲಿ ಎದುರಾಗಿರುವ ‘ಆತಂಕ’ಗಳನ್ನು ಪರಿಹರಿಸುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಬಗ್ಗೆ ಚರ್ಚಿಸಿದ್ದಾರೆ. ಅಮೆರಿಕದ ಶಸ್ತ್ರಾಸ್ತ್ರಗಳ ಖರೀದಿಯನ್ನು ಹೆಚ್ಚಿಸುವುದಾಗಿ ಮೋದಿ ಒಪ್ಪಿಕೊಂಡಿದ್ದಾರೆ. ಆದರೆ, ಭಾರತದ ಮೇಲೆ ಅಮೆರಿಕ ಹೇರಲು ಹೊರಟಿರುವ ಸುಂಕಗಳ ಕಡಿತದ ಬಗ್ಗೆ ಬಾಯಿ ಬಿಡದೆ ಮೌನಕ್ಕೆ ಶರಣಾಗಿದ್ದಾರೆ.

ಮೋದಿ ಭೇಟಿಗೂ ಕೆಲವೇ ಗಂಟೆಗಳ ಮೊದಲು, ಟ್ರಂಪ್ ಅವರು ಅಮೆರಿಕವು ತನ್ನ ಎಲ್ಲ ವ್ಯಾಪಾರ ಪಾಲುದಾರರ ಮೇಲೆ ಹೊಸ ಸುಂಕಗಳನ್ನು ವಿಧಿಸಲಿದೆ ಎಂದು ಘೋಷಿಸಿದರು. ಅದಾದ ಬಳಿಕ, ಮೋದಿ-ಟ್ರಂಪ್ ಶ್ವೇತಭವನದಲ್ಲಿ ಸಭೆ ನಡೆಸಿದರು. ಇಬ್ಬರೂ ಜಂಟಿ ಪತ್ರಿಕಾಗೋಷ್ಠಿಯನ್ನೂ ನಡೆಸಿದರು.

ಪ್ರಧಾನಿಯಾಗಿ ಮೋದಿ ಅವರು ಕಳೆದ 11 ವರ್ಷಗಳಲ್ಲಿ ಮುಕ್ತವಾಗಿ ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸಿದ್ದು ಇದು ನಾಲ್ಕನೇ ಬಾರಿ. ಆ ಎಲ್ಲವೂ ವಿದೇಶಿ ನೆಲದಲ್ಲಿಯೇ ಎಂಬುದು ಗಮನಾರ್ಹ. ಮೋದಿ ಅವರು ಪ್ರಶ್ನೆಗಳನ್ನು ಎದುರಿಸಿದ್ದು, 2015ರ ನವೆಂಬರ್‌ನಲ್ಲಿ ಯುಕೆ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಲಂಡನ್‌ನಲ್ಲಿ, ಎರಡನೆಯದು, 2023ರ ಜೂನ್‌ನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಜೊತೆಗೆ ವಾಷಿಂಗ್ಟನ್‌ನಲ್ಲಿ, ಮೂರನೆಯದು, 2024ರ ಸೆಪ್ಟೆಂಬರ್‌ನಲ್ಲಿ ಬೈಡನ್ ಅಧ್ಯಕ್ಷತೆಯಲ್ಲಿ ನಡೆದ ಕ್ವಾಡ್ ಶೃಂಗಸಭೆಗಾಗಿ ಮೋದಿ ಅಮೆರಿಕಗೆ ಭೇಟಿ ನೀಡಿದ್ದ ಸಮಯದಲ್ಲಿ.

Advertisements

ಈಗ, ನಾಲ್ಕನೇ ಬಾರಿಗೆ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಪತ್ರಿಕಾಗೋಷ್ಠಿಗಾಗಿ ಮೋದಿ ವೇದಿಕೆ ಏರಿದಾಗ, ಅವರ ಎರಡೂ ಕಡೆಗಳಲ್ಲಿ ಟೆಲಿಪ್ರಾಂಪ್ಟರ್‌ಗಳು ಇದ್ದವು. ಆದರೆ, ಟ್ರಂಪ್ ಯಾವುದೇ ಟೆಲಿಪ್ರಾಂಪ್ಟರ್ ಬಳಸಲಿಲ್ಲ. ಟೆಲಿಪ್ರಾಂಪ್ಟರ್ ಇದ್ದಾಗ್ಯೂ, ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಯತ್ನಿಸಿದ ಮೋದಿ, ತಡವರಿಸಿದರು. ವ್ಯಂಗ್ಯ-ಟ್ರೋಲ್‌ಗಳಿಗೆ ಗುರಿಯಾದರು. ಹಾಗೆಯೇ, ವಿದೇಶಿ ನೆಲದಲ್ಲಿ ಮೋದಿ ಅವರನ್ನು ಹೊಗಳಲು ಯತ್ನಿಸಿದ ಭಾರತೀಯ ಪತ್ರಕರ್ತರೂ ಅಮೆರಿಕದ ಪತ್ರಕರ್ತರ ಅಪಹಾಸ್ಯಕ್ಕೆ ತುತ್ತಾದರು.

ಅದಿರಲಿ, ಈ ಹಿಂದೆ ‘ಅಬ್ಕಿ ಬಾರ್ ಟ್ರಂಪ್‌ ಸರ್ಕಾರ್’ (ಈ ಬಾರಿ ಟ್ರಂಪ್ ಸರ್ಕಾರ) ಎಂಬ ಘೋಷಣೆ ರೂಪಿಸಿದ್ದ ಮೋದಿ, ಒಪ್ಪಂದಗಳ ಕುರಿತಾಗಿ ಟ್ರಂಪ್ ಗಮನ ಸೆಳೆಯಲು ಯತ್ನಿಸಿದರು. “ನಾನು ಅಮೆರಿಕದ ಭಾಷೆಯಲ್ಲಿ ಹೇಳುವುದಾದರೆ, ಭಾರತದಲ್ಲಿ ನಾವು ‘ವಿಕಸಿತ’ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ. ಅಂದರೆ, ‘ಮೇಕ್ ಇಂಡಿಯಾ ಗ್ರೇಟ್ ಅಗೈನ್ (ಭಾರತವನ್ನು ಮತ್ತೊಮ್ಮೆ ಅಭಿವೃದ್ಧಿಗೊಳಿಸಿ – ಎಂಐಜಿಎ). ಅಮೆರಿಕ ಮತ್ತು ಭಾರತ ಒಟ್ಟಿಗೆ ಕೆಲಸ ಮಾಡಿದಾಗ, ‘ಎಂಎಜಿಎ’ (ಮಗ) ಜೊತೆ ‘ಎಂಐಜಿಎ’ (ಮಿಗ) ಸೇರಿ ‘ಎಂಇಜಿಎ’ (ಮೆಗ) ಆಗುತ್ತದೆ. ಈ ಮೆಗಾ ಸ್ಪಿರಿಟ್ ನಮ್ಮ ಗುರಿಗಳಿಗೆ ಹೊಸ ವ್ಯಾಪ್ತಿಯನ್ನು ಒದಗಿಸುತ್ತದೆ” ಎಂದು ಮೋದಿ ಹೇಳಿದರು.

ಮಗ-ಮಿಗ-ಮೆಗ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು ಟ್ರಂಪ್‌ ಜೊತೆಗಿನ ಸಭೆಯಲ್ಲಿ ಭಾರತಕ್ಕಾಗಿ ಏನನ್ನು ಪಡೆದು, ಯಾವುದನ್ನು ಸಾಧಿಸಿದರು?

”ಭಾರತವು ಈ ವರ್ಷ ಅಮೆರಿಕ ಶಸ್ತ್ರಾಸ್ತ್ರಗಳ ಖರೀದಿಯನ್ನು ‘ಶತಕೋಟಿ ಡಾಲರ್‌’ಗಳಿಗೆ ಹೆಚ್ಚಿಸಲಿದೆ. ನಾವು ಭಾರತಕ್ಕೆ ಎಫ್‌-35 ಸ್ಟೆಲ್ತ್‌ ಫೈಟರ್‌ಗಳನ್ನು ಒದಗಿಸುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಇದು ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ. ಖರೀದಿ ಒಪ್ಪಂದದ ಔಪಚಾರಿಕ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಆದಾಗ್ಯೂ, ಪತ್ರಿಕಾಗೋಷ್ಠಿಯಲ್ಲಿ ಶಸ್ತ್ರಾಸ್ತ್ರ ರಫ್ತಿನ ಬಗ್ಗೆ ಟ್ರಂಪ್ ದೊಡ್ಡದಾಗಿ ಘೋಷಿಸಿದ್ದಾರೆ. ಭಾರತಕ್ಕೆ ಖರೀದಿಸದೆ ಬೇರೆ ದಾರಿಯಿಲ್ಲ ಎಂಬಂತೆ ಮೋದಿ ಮೇಲೆ ಒತ್ತಡ ಹೇರುವ ರೀತಿಯಲ್ಲಿ ಮಾತನಾಡಿದ್ದಾರೆ.

ಮೋದಿ ಎದುರೇ ಭಾರತವನ್ನು ದೂರಿದ ಟ್ರಂಪ್, ”ಭಾರತವು ಅನ್ಯಾಯಯುತ ಮತ್ತು ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿದೆ. ಇದು ಭಾರತೀಯ ಮಾರುಕಟ್ಟೆಗೆ ಅಮೆರಿಕ ಪ್ರವೇಶಿಸುವುದನ್ನು ತಡೆಯುತ್ತಿದೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ” ಎಂದರು.

ಈ ಹಿಂದೆ, ತಮ್ಮ ಮೊದಲ ಅವಧಿಯಲ್ಲಿ ಭಾರತವನ್ನು ‘ಸುಂಕದ ರಾಜ’ ಎಂದಿದ್ದ ಟ್ರಂಪ್, ಅದೇ ದಾಟಿಯ ಮಾತುಗಳನ್ನು ಮುಂದುವರೆಸಿದ್ದಾರೆ. ಭಾರತದ ಮೇಲೆ 100% ಆಮದು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ 100% ತೆರಿಗೆ ವಿಧಿಸುತ್ತೇವೆ ಎಂದು ಹೇಳಿದ್ದರ ಹೊರತಾಗಿಯೂ, ಸುಂಕ ವಿನಾಯತಿಯ ಭರವಸೆಗಳು ಇಲ್ಲದಿದ್ದರೂ, ಮೋದಿ ಅವರು ಅಮೆರಿಕ ಸರಕುಗಳ ಮೇಲಿನ ಸುಂಕವನ್ನು ಇಳಿಸುವುದಾಗಿ ಒಪ್ಪಿಕೊಂಡು ಬಂದಿದ್ದಾರೆ.

ಕಳೆದ ವಾರ, 104 ಭಾರತೀಯ ಪ್ರಜೆಗಳಿಗೆ ಕೈಗೆ ಕೋಳ, ಕಾಲಿಗೆ ಸರಪಣಿ ತೊಡಿಸಿ ಮಿಲಿಟರಿ ವಿಮಾನದಲ್ಲಿ ಅಮೆರಿಕದಿಂದ ಭಾರತಕ್ಕೆ ಟ್ರಂಪ್ ಗಡಿಪಾರು ಮಾಡಿದರು. ಶನಿವಾರ ಮತ್ತೊಂದು ಮಿಲಿಟರಿ ವಿಮಾನ ಭಾರತೀಯರನ್ನು ಹೊತ್ತು ಭಾರತಕ್ಕೆ ಬರಲಿದೆ. ಭಾರತೀಯನ್ನು ಅಪರಾಧಿಗಳಂತೆ ನಡೆಸಿಕೊಂಡ ಟ್ರಂಪ್ ಧೋರಣೆಯನ್ನು ಮೋದಿ ಖಂಡಿಸಲಿಲ್ಲ. ಬದಲಾಗಿ, ”ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಎಲ್ಲ ಭಾರತೀಯರನ್ನು ನಾವು ಭಾರತಕ್ಕೆ ಮರಳಿ ಪಡೆಯಲು ಸಂಪೂರ್ಣವಾಗಿ ಸಿದ್ಧರಿದ್ದೇವೆ. ಅಕ್ರಮ ವಲಸೆಯು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದೆ” ಎಂದಷ್ಟೇ ಹೇಳಿದರು.

ಭಾರತವು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ಖಲಿಸ್ತಾನಿ ಗುಂಪಿನ ಪರವಾಗಿ ಅಮೆರಿಕನ್ ನಾಗರಿಕನನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿದ ಮಾಜಿ ಭಾರತೀಯ ಸರ್ಕಾರಿ ಅಧಿಕಾರಿಯ ವಿರುದ್ಧದ ಆರೋಪಗಳ ಬಗ್ಗೆ ‘ಮರುಪರಿಶೀಲನೆ’ ಮಾಡುವ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಲಿಲ್ಲ.

ಅಲ್ಲದೆ, 2024ರಲ್ಲಿ ಬೈಡನ್-ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ರಷ್ಯಾ ಮತ್ತು ಉಕ್ರೇನ್‌ಗೆ ತೆರಳಿದ್ದ ಮೋದಿ ಭೇಟಿ ‘ಶಾಂತಿಯ ಸಂದೇಶ ಮತ್ತು ಉಕ್ರೇನ್‌ಗೆ ಮಾನವೀಯ ಬೆಂಬಲ’ ಎಂದು ಬೈಡನ್ ಶ್ಲಾಘಿಸಿದ್ದರು. ಈ ಬಗ್ಗೆ ಇದೀಗ, ಭಾರತೀಯ ಪತ್ರಕರ್ತರು, ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿಗಾಗಿನ ಮಧ್ಯಸ್ಥಿಕೆಯಲ್ಲಿ ಭಾರತದ ಸಂಭಾವ್ಯ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಟ್ರಂಪ್‌ ಉತ್ತರಿಸಲೇ ಇಲ್ಲ.

ಬದಲಾಗಿ, ಟ್ರಂಪ್ ಚೀನಾದತ್ತ ಗಮನ ಸೆಳೆದರು. ‘ಚೀನಾ ವಿಶ್ವದ ಪ್ರಮುಖ ಪ್ಲೇಯರ್ ಎಂದು ನಾನು ಭಾವಿಸುತ್ತೇನೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ತಡೆಯಲು ಅವರು ನಮಗೆ ಸಹಾಯ ಮಾಡಬಹುದು’ ಎಂದರು. ಇದು, ವಿಶ್ವಗುರು ಮೋದಿ ಪಾತ್ರವನ್ನು ನಿಖರವಾಗಿ ಅಲ್ಲಗಳೆದಿತ್ತು.

ಮೋದಿ ಅವರ ಅತ್ಯಾಪ್ತ ಎಂಬ ಭಾವಿಸಲಾಗಿರುವ ಗೌತಮ್ ಅದಾನಿ ವಿರುದ್ಧ ಅಮೆರಿಕದ ಪ್ರಾಸಿಕ್ಯೂಷನ್ ದಾಖಲಿಸಿರುವ ಚಾರ್ಜ್‌ಶೀಟ್‌ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ ಮೋದಿ, ‘ಅದು ವೈಯಕ್ತಿಕ ವಿಷಯ. ಆ ಬಗ್ಗೆ ಮಾತನಾಡಲು ಎರಡು ದೇಶಗಳ ಇಬ್ಬರು ನಾಯಕರು ಸೇರುವುದಿಲ್ಲ. ಆ ಬಗ್ಗೆ ಚರ್ಚಿಸುವುದಿಲ್ಲ’ ಎಂದು ಜಾರಿಕೊಂಡರು.

ಇದನ್ನು ಓದಿದ್ದೀರಾ?: ಕರ್ನಾಟಕ ಮಾನವೀಯ ಮಾದರಿಯ ತಿರಸ್ಕರಿಸಿ ನೆತ್ತರು ಹರಿಸಿದ ಅಮಿತ್ ಶಾ

ಅಮೆರಿಕಗೆ ಮೋದಿ ಭೇಟಿ ನೀಡಿದ್ದರಿಂದ ಭಾರತಕ್ಕೆ ಆಗಿದ್ದು ಎರಡೇ ಉಪಯೋಗವೆಂದು ಹೇಳಲಾಗಿದೆ. ಒಂದು, 26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ. ಎರಡು, ಭಾರತ ಮತ್ತು ಚೀನಾ ನಡುವಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುತ್ತೇವೆಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಟ್ರಂಪ್ ಮಧ್ಯಸ್ಥಿಕೆ ಅನಗತ್ಯ ಎಂಬುದು ಸ್ಪಷ್ಟ ಭಾವನೆ. ಭಾರತ-ಚೀನಾ ನಡುವಿನ ಸಂಘ‍ರ್ಷ ಕುರಿತಾದ ಮಾತುಕತೆಗಳು ಈವರೆಗೆ ದ್ವಿಪಕ್ಷೀಯವಾಗಿಯೇ ನಡೆದಿವೆ. ಮುಂದೆಯೂ ಹಾಗೆಯೇ ನಡೆಯುತ್ತದೆ ಎಂದು ಭಾರತೀಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ, ಭಾರತ-ಚೀನಾ ನಡುವೆ ಮೂಗು ತೂರಿಸಲು ಟ್ರಂಪ್ ಯತ್ನಿಸುತ್ತಿದ್ದಾರೆ.

ಟ್ರಂಪ್ ಅವರು ಮೋದಿ ಎದುರೇ ತೆರಿಗೆ ವಿಚಾರದಲ್ಲಿ ದೂಷಿಸಿದ್ದಾರೆ. ಹೆಚ್ಚು ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಮೆರಿಕ ಸರಕುಗಳ ಮೇಲಿನ ತೆರಿಗೆಯನ್ನು ಇಳಿಸಲು ಮೋದಿ ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಶಸ್ತ್ರಾಸ್ತ್ರ ಖರೀದಿ ಹೆಚ್ಚಿಸುವಂತೆ ತಾಕೀತು ಮಾಡಿದ್ದಾರೆ. ರಷ್ಯಾ-ಉಕ್ರೇನ್ ನಡುವಿನ ಶಾಂತಿ ಒಪ್ಪಂದದಲ್ಲಿ ಭಾರತದ ಪಾತ್ರವನ್ನು ಮೌನವಾಗಿಯೇ ನಗಣ್ಯವೆಂದು ಸೂಚಿಸಿದ್ದಾರೆ. ತನ್ನತ್ತ ತಿರುಗಿಯೂ ನೋಡದ ಚೀನಾವನ್ನು ಹೊಗಳಿದ್ದಾರೆ. ಆದರೆ, ಮೋದಿ ಅವರು ಅಮೆರಿಕದ ಉದ್ಯಮಿ, ಟ್ರಂಪ್‌ ಆಪ್ತ ಎಲಾನ್ ಮಸ್ಕ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿ, ಹರಟೆ ಹೊಡೆದು ಭಾರತಕ್ಕೆ ಮರಳಿದ್ದಾರೆ.

ಅಮೆರಿಕವು ಅಕ್ರಮ ವಲಸಿಗರನ್ನು ಕೈಕೋಳ ತೊಡಿಸಿ, ಮಿಲಿಟರಿ ವಿಮಾನದಲ್ಲಿ ಕಳಿಸುವುದನ್ನು ಕೊಲಂಬಿಯಾ ವಿರೋಧಿಸಿತು. ತನ್ನ ಪ್ರಜೆಗಳನ್ನು ಗೌರವಯುತವಾಗಿ ವಾಪಸ್ ಕರೆಸಿಕೊಳ್ಳಲು ಕೊಲಂಬಿಯಾ ರಾಷ್ಟ್ರಪತಿ ಗಸ್ತಾವೊ ಪೆಟ್ರೋ ತಮ್ಮದೇ ವಿಮಾನವನ್ನು ಕಳಿಸಿದರು. ಅಮೆರಿಕವನ್ನು ಟೀಕಿಸಿದರು. ಟ್ರಂಪ್ ತೆರಿಗೆ ನೀತಿಯನ್ನು ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕ ರಾಷ್ಟ್ರಗಳ ಮುಖ್ಯಸ್ಥರು ಬಲವಾಗಿ ಖಂಡಿಸಿದ್ದಾರೆ. ಟ್ರಂಪ್ ತೆರಿಗೆಗೆ ಪ್ರತಿ ತೆರಿಗೆ ವಿಧಿಸಲು ಮುಂದಾಗಿದ್ದಾರೆ. ಆದರೆ, ಮೋದಿ ಅವರು ಟ್ರಂಪ್ ಅವರನ್ನು ಭೇಟಿ ಮಾಡಿ, ಅವರ ಶರತ್ತುಗಳನ್ನು ಒಪ್ಪಿಕೊಂಡು ಬಂದಿದ್ದಾರೆ.

ಆದಾಗ್ಯೂ, ಭಾರತದಲ್ಲಿರುವ ಮೋದಿ ಭಕ್ತರು ಮೋದಿ ಮಹತ್ತರವಾದುದ್ದನ್ನು ಸಾಧಿಸಿದ್ದಾರೆ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ. ಇಂತಹ, ನಯವಂಚನೆಗಳಿಗೆ ಬಲಿಯಾಗದೆ, ಭಾರತೀಯರು ಎಚ್ಚೆತ್ತುಕೊಳ್ಳಬೇಕು. ವಿಶ್ವಗುರು ಎನ್ನುತ್ತಲೇ, ಮೋದಿ ಅವರು ಟ್ರಂಪ್ ವಿರುದ್ಧ ಭಾರತ ಮಂಡಿಯೂರುವಂತೆ ಮಾಡುತ್ತಿರುವುದನ್ನು ಅರಿತುಕೊಳ್ಳಬೇಕು. ಭಾರತವು ಸ್ವಂತ ಶಕ್ತಿಯಾಗಿ ಬೆಳೆದು ಬಂದಂತೆ ಮುಂದೆಯೂ ನಡೆಯಲು ಸರ್ಕಾರವನ್ನು ಎಚ್ಚರಿಸಬೇಕು. ಇಲ್ಲದಿದ್ದಲ್ಲಿ, ಮೋದಿ ಆಡಳಿತದಲ್ಲಿ ಮುನ್ನೆಲೆಗೆ ಬಂದ ‘ವಿಶ್ವಗುರು’ ಮೋದಿ ಅವಧಿಯಲ್ಲಿಯೇ ಮೂಲೆಗುಂಪಾಗುತ್ತದೆ!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X