ಈ ದಿನ ಸಂಪಾದಕೀಯ | ಮೋದಿಗೆ ಸಂಸದೀಯ ವ್ಯವಸ್ಥೆಯ ಇತಿಹಾಸ ತಿಳಿಸುವ ತುರ್ತು ಅಗತ್ಯವಿದೆ

Date:

Advertisements
1951-52ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಸ್ಪರ್ಧೆಯಿಲ್ಲದೆ ಪ್ರಬಲ ಪಕ್ಷವಾಗಿ ಹೊರಹೊಮ್ಮಿತ್ತು. ವಿರೋಧ ಪಕ್ಷವನ್ನು ಸ್ಥಾಪಿಸಿ, ಗಟ್ಟಿಗೊಳಿಸಿ ಪ್ರಜಾಪ್ರಭುತ್ವವನ್ನು ಪೋಷಿಸುವ ಜವಾಬ್ದಾರಿಯನ್ನು ಪ್ರಧಾನಿ ನೆಹರು ಮತ್ತು ಕಾಂಗ್ರೆಸ್‌ಗೆ ಬಿಡಲಾಗಿತ್ತು. ಆ ಜವಾಬ್ದಾರಿಯನ್ನು ನೆಹರು ಎಷ್ಟು ಅತ್ಯುತ್ತಮವಾಗಿ ನಿಭಾಯಿಸಿದರೆಂದರೆ, ವಿರೋಧ ಪಕ್ಷಗಳ ದುರ್ಬಲತೆಯನ್ನು ಗಮನಿಸಿ, ಕಾಂಗ್ರೆಸ್‌ನೊಳಗಿನ ಬಣಗಳೇ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಂತೆ ಮಾಡಿದ್ದರು.

ಡಿಸೆಂಬರ್ 19 ರಂದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಿಜೆಪಿಯ ಸಂಸದರನ್ನು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದರಿಂದ ತಮಗೆ ತೀವ್ರ ಗಾಯವಾಗಿದೆ ಎಂದು ಆರೋಪಿಸಿದ್ದ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆಸ್ಪತ್ರೆಯ ಐಸಿಯುನಲ್ಲಿ ಅಡ್ಮಿಟ್ ಆಗಿದ್ದರು. ಅಲ್ಲದೆ, ತನ್ನೊಂದಿಗೆ ರಾಹುಲ್‌ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಸಂಸದೆ ಫಾಂಗ್ನಾನ್ ಕೊನ್ಯಾಕ್ ದೂರಿದ್ದಾರೆ. ಇಂತಹ ಆರೋಪಗಳು ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳನ್ನು ತನ್ನ ಕೆಟ್ಟ ವೈರಿಯೆಂದು ಪರಿಗಣಿಸಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಡಿಸೆಂಬರ್ 18 ರಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳುವುದು ವ್ಯಸನವಾಗಿಬಿಟ್ಟಿದೆ’ ಎಂದು ಹೇಳಿದ್ದರು. ಅವರ ಹೇಳಿಕೆಯ ವಿರುದ್ದ ವಿಪಕ್ಷಗಳ ನಾಯಕರು ಹರಿಹಾಯ್ದರು. ಸಂಸತ್ತಿನ ಹೊರಗೆ ಪ್ರತಿಪಕ್ಷಗಳು ಪ್ರತಿಭಟನೆಗಳನ್ನು ನಡೆಸಿದವು. ಪ್ರತಿಭಟನೆ ಮುಗಿಸಿ ಸಂಸತ್ತಿಗೆ ಬಂದ ರಾಹುಲ್ ಗಾಂಧಿ ಅವರನ್ನು ಸದನದೊಳಗೆ ಪ್ರವೇಶಿಸದಂತೆ ಬಿಜೆಪಿ ಸಂಸದರು ಅಡ್ಡಿಪಡಿಸಿದರು. ಗದ್ದಲ ಸೃಷ್ಟಿಸಿದರು. ತಳ್ಳಾಟವೂ ನಡೆಯಿತು. ತಮ್ಮನ್ನು ರಾಹುಲ್ ಗಾಂಧಿ ಅವರೇ ತಳ್ಳಿದ್ದಾರೆಂದು ಪ್ರತಾಪ್ ಸಾರಂಗಿ ಆರೋಪಿಸಿದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನೂ ತಳ್ಳಲಾಗಿದೆ, ಅವರಿಗೂ ಪೆಟ್ಟಾಗಿದೆ ಎಂದು ಕಾಂಗ್ರೆಸ್‌ ಕೂಡ ಹೇಳಿಕೊಂಡಿದೆ.

ಈ ಘಟನೆಗಳು ಭಾರತದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ (ವಿಶೇಷವಾಗಿ ಕಾಂಗ್ರೆಸ್) ನಡುವಿನ ಸಂಬಂಧದಲ್ಲಿ ಭಾರೀ ಕಂದಕ ಸೃಷ್ಟಿಯಾಗಿದೆ ಎಂಬುದನ್ನು ಸೂಚಿಸುತ್ತವೆ. ಈ ಹಿಂದೆ, ಕಳೆದ ಸರ್ಕಾರದ ಅವಧಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಸದನದಿಂದ ಅಮಾನತು ಮಾಡಲಾಗಿತ್ತು. ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿ, ಅಮಾನತನ್ನು ರದ್ದು ಮಾಡಿ ತೀರ್ಪು ನೀಡಿದ ಬಳಿಕ, ರಾಹುಲ್‌ ಗಾಂಧಿ ಮತ್ತೆ ಸಂಸತ್ತಿಗೆ ಮರಳಿದ್ದರು.

Advertisements

ತಮ್ಮನ್ನು ಪ್ರಶ್ನಿಸುವವರನ್ನು ಮೋದಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುತ್ತಿದೆ. 2014ರಿಂದ ಮೋದಿ ಸರ್ಕಾರದಲ್ಲಿ ಪ್ರತಿಪಕ್ಷಗಳ ಮೇಲೆ ಆಕ್ರಮಣಕಾರಿ ದಾಳಿಗಳು ಮತ್ತು ಅಪಹಾಸ್ಯಗಳು ಹೆಚ್ಚಾಗಿವೆ. ಸಂಸತ್ತಿನಲ್ಲಿ ಮೋದಿಯವರ ಪ್ರತಿಯೊಂದು ಭಾಷಣವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮೇಲಿನ ದಾಳಿಯಿಂದಲೇ ಪ್ರಾರಂಭವಾಗುತ್ತವೆ. ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿಯೇ ಮೋದಿ ಅವರು ನೆಹರು ಮೇಲೆ ದಾಳಿ ನಡೆಸಿದ್ದಾರೆ. ಅವರು ತಮ್ಮ ಭಾಷಣಗಳಲ್ಲಿ ಮಾಡುವ ಹಲವಾರು ಆರೋಪಗಳು ಸತ್ಯಗಳಿಂದ ದೂರವಿರುತ್ತವೆ ಎಂಬುದು ಗಮನಾರ್ಹ. ಅಲ್ಲದೆ, 2014ರಿಂದ, ಬಿಜೆಪಿಯ ಐಟಿ ಸೆಲ್‌ ಮತ್ತು ಮೋದಿ ಅವರು ರಾಹುಲ್‌ ಗಾಂಧಿ ಅವರನ್ನು ‘ಪಪ್ಪು’ ಅಂದರೆ, ದಡ್ಡ ಎಂದು ಅಪಹಾಸ್ಯ ಮಾಡಿದ್ದರು. ಈಗ, ಅದೇ ರಾಹುಲ್‌ ಗಾಂಧಿ ಪ್ರಬಲ ಶಕ್ತಿಯಾಗಿ, ವಿಪಕ್ಷ ನಾಯಕನಾಗಿ ಮೋದಿ ಅವರ ಎದುರು ಗಟ್ಟಿಯಾಗಿ ನಿಂತಿದ್ದಾರೆ. ಇದು, ಮೋದಿ ಸರ್ಕಾರದ ನಿದ್ರೆಗೆಡಿಸಿದೆ.

10 ವರ್ಷಗಳ ಕಾಲ ಆಡಳಿತ ನಡೆಸಿ, ಮೂರನೇ ಬಾರಿಗೆ ಪ್ರಧಾನಿಯಾಗಿರುವ ಮೋದಿ ಅವರು ಅರಿತುಕೊಳ್ಳಲೇಬೇಕಾದ ಇತಿಹಾಸವೊಂದಿದೆ. 1951-52ರ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸಗಳು ನಡೆದವು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಸ್ಪರ್ಧೆಯಿಲ್ಲದೆ ಪ್ರಬಲ ಪಕ್ಷವಾಗಿ ಹೊರಹೊಮ್ಮಿತ್ತು. ವಿರೋಧ ಪಕ್ಷವನ್ನು ಸ್ಥಾಪಿಸುವ, ಗಟ್ಟಿಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಪೋಷಿಸುವ ಜವಾಬ್ದಾರಿಯನ್ನು ಪ್ರಧಾನಿ ನೆಹರು ಮತ್ತು ಕಾಂಗ್ರೆಸ್‌ಗೆ ಬಿಡಲಾಗಿತ್ತು. ಆ ಜವಾಬ್ದಾರಿಯನ್ನು ನೆಹರು ಮತ್ತು ಕಾಂಗ್ರೆಸ್‌ ಯಾವ ಪಟ್ಟಿಗೆ ಅತ್ಯುತ್ತಮವಾಗಿ ನಿಭಾಯಿಸಿದರೆಂದರೆ, ವಿರೋಧ ಪಕ್ಷಗಳ ದುರ್ಬಲತೆಯನ್ನು ಗಮನಿಸಿ, ಕಾಂಗ್ರೆಸ್‌ನೊಳಗಿನ ಬಣಗಳೇ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದವು. ಆ ಮೂಲಕ ನೆಹರು ಅವರು ಸ್ವತಃ ತಾವೇ 1937ರಲ್ಲಿ ‘ಚಾಣಕ್ಯ’ ಎಂಬ ಕಾವ್ಯನಾಮದಲ್ಲಿ ಬರೆದಿದ್ದ ಲೇಖನದಲ್ಲಿ, ‘ಅಪಾರ ಜನಪ್ರಿಯತೆಯು ರಾಜಕೀಯ ಸಿದ್ಧಾಂತದ (ಸೀಸರಿಸಂ) ಎಲ್ಲ ಅಪಾಯಗಳನ್ನು ಹೊಂದಿದೆ. ಒಬ್ಬ ವರ್ಚಸ್ವಿ ನಾಯಕ ಸರ್ವಾಧಿಕಾರಿಯಾಗಿ ಬದಲಾಗುತ್ತಾನೆ’ ಎಂದು ಹೇಳಿದ್ದರು. ಆದರೆ, ಆ ಬದಲಾವಣೆ ತಮ್ಮಲ್ಲಿ ಕಾಣಿಸಿಕೊಳ್ಳದಂತೆ ಪ್ರಧಾನಿ ಹುದ್ದೆಯನ್ನು ನೆಹರು ನಿಭಾಯಿಸಿದರು. ವಿಪಕ್ಷಗಳಿಗೆ ಜೀವ, ಶಕ್ತಿ ತುಂಬಿದರು.

ತಾವು ಅಧಿಕಾರದಲ್ಲಿರುವವರೆಗೂ ತಮ್ಮ ಕಟ್ಟಾ ವಿಮರ್ಶಕರಾಗಿದ್ದ ರಾಮ್ ಮನೋಹರ್ ಲೋಹಿಯಾ ಹಾಗೂ ವಿಪಕ್ಷ ನಾಯಕರಾಗಿದ್ದ ಆಚಾರ್ಯ ಕೃಪಲಾನಿ, ಪಿಲೂ ಮೋದಿಯಂತಹ ನಾಯಕರನ್ನು ಘನತೆಯಿಂದ ನಡೆಸಿಕೊಂಡರು. ನೆಹರೂ ಅವರು ಪ್ರತಿಪಕ್ಷಗಳನ್ನು ಮತ್ತು ಅದರ ನಾಯಕರನ್ನು ಯಾವ ರೀತಿಯಲ್ಲಿ, ಉತ್ತಮವಾಗಿ ನಡೆಸಿಕೊಂಡಿದ್ದರು ಎಂಬುದನ್ನು ಬಿಜೆಪಿಯಿಂದ ಮೊದಲ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರೇ ವಿವರಿಸಿದ್ದಾರೆ. ಒಮ್ಮೆ ನೆಹರು ವಿರುದ್ಧ ಕೆಟ್ಟದಾಗಿ ಬಿಜೆಪಿ ಸಂಸದರು ದಾಳಿ ನಡೆಸಿದಾಗ, ವಾಜಪೇಯಿ ಅವರು ‘ಪ್ರಧಾನಿಯ ಮೇಲೆ ದಾಳಿ ಮಾಡುವುದು ಕಡ್ಡಾಯವೇ’ ಎಂದು ತಮ್ಮದೇ ಸಂಸದರನ್ನು ಪ್ರಶ್ನಿಸಿದ್ದರು. ನೆಹರು ಅವರು ಸಾವನ್ನಪ್ಪಿದಾಗ ವಾಜಪೇಯಿಯವರು “ಕನಸು ಛಿದ್ರವಾಯಿತು, ಹಾಡು ಮೌನವಾಯಿತು, ಜ್ವಾಲೆಯೊಂದು ಅನಂತದಲ್ಲಿ ಮಾಯವಾಯಿತು” ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.

ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ಸಂಬಂಧಗಳು ಉತ್ತಮ ರೀತಿಯಲ್ಲಿ ಉಳಿಯದಿದ್ದರೂ, ಇಂದಿರಾಗಾಂಧಿ ವಿರೋಧ ಪಕ್ಷದ ಹಿರಿಯ ನಾಯಕರನ್ನು ವಿಶೇಷವಾಗಿ ವಾಜಪೇಯಿ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು.

ಇನ್ನು, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ಅವರು ವಾಜಪೇಯಿ ಅವರನ್ನು ವಿಶ್ವಸಂಸ್ಥೆಗೆ ಅಧಿಕೃತ ನಿಯೋಗದಲ್ಲಿ ಸೇರಿಸಿಕೊಂಡಿದ್ದರು. ಪಿ.ವಿ. ನರಸಿಂಹ ರಾವ್ ಅವರು ತಾವು ಪ್ರಧಾನಿಯಾಗಿದ್ದ ಅವಧಿಯಲ್ಲಿ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ (UNHRC) ವಿಶೇಷ ಅಧಿವೇಶನಕ್ಕೆ ಭಾರತೀಯ ನಿಯೋಗದ ನಾಯಕರಾಗಿ ವಾಜಪೇಯಿ ಅವರನ್ನು ನಿಯೋಜಿಸಿದ್ದರು.

ಆದರೆ, 2014ರ ಬಳಿಕ, ಮೋದಿ ಅವರ ಆಡಳಿತದಲ್ಲಿ ಎಲ್ಲವೂ ಬುಡಮೇಲಾಗಿದೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸ್ಪರ್ಧಾತ್ಮಕ ಸಂಬಂಧವೇ ಹಾಳಾಗಿದೆ. ಇದು ಎರಡು ರೀತಿಯಲ್ಲಿ ಪ್ರತಿಫಲಿಸುತ್ತಿದೆ.

ಮೊದಲನೆಯದಾಗಿ, ಪ್ರಧಾನಿ ಮೋದಿ ಅವರು ಸಂಸತ್ತಿನ ಎರಡೂ ಸದನಗಳಿಗೆ ಬರಲು ನಿರ್ಧರಿಸಿದರು. ಸದನಗಳಲ್ಲಿ ಚರ್ಚೆಯಾಗಬೇಕಾದ ಇತರ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ, ನೆಹರೂ ಅವರನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿ, ನಂತರ ಕಾಂಗ್ರೆಸ್‌ಅನ್ನು ದೂರುವುದನ್ನು ಮೋದಿ ರೂಢಿಸಿಕೊಂಡಿದ್ದಾರೆ. ನೆಹರೂ ಅವರು ಮಾಡಿದ ತಪ್ಪುಗಳನ್ನು ಮಾತ್ರವಲ್ಲದೆ, ಅವರು ರಾಷ್ಟ್ರೀಯ ಚಳವಳಿಯ ನಾಯಕರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಅಂಬೇಡ್ಕರ್ ಅವರನ್ನು ಗೌರವವಾಗಿ ನಡೆಸಿಕೊಳ್ಳಲಿಲ್ಲ ಎಂಬುದನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಆಧುನಿಕ ಭಾರತೀಯ ರಾಜಕೀಯದ ಇತಿಹಾಸದಲ್ಲಿ ನೆಹರೂ ಅವರನ್ನು ಅತಿ ದೊಡ್ಡ ಖಳನಾಯಕನನ್ನಾಗಿ ಬಿಂಬಿಸಲು ನೆಹರು ಕಾಲದ ನೀತಿಗಳ ಕುರಿತ ಸುಳ್ಳು, ಅರ್ಧಸತ್ಯ ಮತ್ತು ತಪ್ಪು ವ್ಯಾಖ್ಯಾನಗಳೊಂದಿಗೆ ಪ್ರಚಾರ ಮಾಡುತ್ತಿದ್ದಾರೆ.

ಎರಡನೆಯದಾಗಿ, ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರು ಕಲಾಪಗಳಲ್ಲಿ ಪ್ರತಿಪಕ್ಷಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಮಾತ್ರವಲ್ಲದೆ, ಪ್ರತಿಪಕ್ಷಗಳ ನಾಯಕರು ಸರ್ಕಾರ ಅಥವಾ ಪ್ರಧಾನಿಯನ್ನು ಟೀಕಿಸುವ ಸಂದರ್ಭದಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳದಂತೆ ಮುತುವರ್ಜಿ ವಹಿಸುತ್ತಿದ್ದಾರೆ. ಭಾರತದ ಉಪರಾಷ್ಟ್ರಪತಿಯಾಗಿರುವ, ಪದನಿಮಿತ್ತ ಸ್ಥಾನವನ್ನು ಹೊಂದಿರುವ ರಾಜ್ಯಸಭೆಯ ಅಧ್ಯಕ್ಷರು ಮತ್ತು ಲೋಕಸಭಾ ಸ್ಪೀಕರ್ ತಮ್ಮ ಕಚೇರಿಯ ಪಕ್ಷಾತೀತ ಸ್ವರೂಪವನ್ನೇ ಮರೆತುಬಿಟ್ಟಿದ್ದಾರೆ. ಇಬ್ಬರೂ ಬಿಜೆಪಿಯ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ.

ಈ ವರದಿ ಓದಿದ್ದೀರಾ?: ಹವಾಮಾನ ವೈಪರೀತ್ಯ, ಸಾಮೂಹಿಕ ವಲಸೆ ಮತ್ತು ಅಭಿವೃದ್ಧಿ ಮಂತ್ರ

ಭಾರತೀಯ ಸಂಸತ್ತಿನ ಇತಿಹಾಸದಲ್ಲಿ 2023ರ ಡಿಸೆಂಬರ್ ಒಂದು ಕಪ್ಪುಚುಕ್ಕೆಯಾಗಿ ಕಾಣಿಸಿಕೊಂಡಿದೆ. 2023ರ ಡಿಸೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬರೋಬ್ಬರಿ 141 ಮಂದಿ ಸಂಸದರನ್ನು ಅವರಲ್ಲಿ 95 ಮಂದಿ ಲೋಕಸಭಾ ಸಂಸದರು ಮತ್ತು 46 ಮಂದಿ ರಾಜ್ಯಸಭಾ ಸಂಸದರನ್ನು ಸದನದಿಂದ ಅಮಾನತು ಮಾಡಲಾಗಿತ್ತು.

ಅದಾನಿ ಮತ್ತು ಮೋದಿ ನಡುವಿನ ಸಂಬಂಧಗಳ ಬಗ್ಗೆ ಪ್ರಬಲವಾಗಿ ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ರಾಹುಲ್ ಗಾಂಧಿ ಮತ್ತು ಮೊಹುವಾ ಮೊಯಿತ್ರಾ ಅವರನ್ನು ಸಂಸತ್‌ನಿಂದಲೇ ಉಚ್ಚಾಟನೆ ಮಾಡಲಾಗಿತ್ತು. ಮೋದಿ ಪದನಾಮದ ಕುರಿತಾದ ಟೀಕೆಯನ್ನು ಅಸ್ತ್ರವಾಗಿಟ್ಟುಕೊಂಡು ರಾಹುಲ್ ಅವರನ್ನು ಉಚ್ಚಾಟಿಸಿದರೆ, ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಮೊಹುವಾ ಮೊಯಿತ್ರಾ ಅವರನ್ನು ಸಂಸತ್‌ನಿಂದ ಹೊರಹಾಕಲಾಗಿತ್ತು. ಅಲ್ಲದೆ, ಸದನದಲ್ಲಿ ವಿಪಕ್ಷ ನಾಯಕರ ಮೈಕ್‌ಗಳನ್ನು ‘ಮ್ಯೂಟ್’ ಮಾಡುವಂತಹ ದಾರ್ಷ್ಟ್ಯತನವನ್ನು ಸ್ಪೀಕರ್‌ ತೋರಿಸಿದ್ದರು.

ಈ ರೀತಿಯಲ್ಲಿ, ವಿಪಕ್ಷಗಳು ಮತ್ತು ವಿಪಕ್ಷಗಳ ನಾಯಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿರುವ ಮೋದಿ ಸರ್ಕಾರ, ವಿಪಕ್ಷಗಳ ಘನತೆಯನ್ನು ಅರ್ಥ ಮಾಡಿಕೊಳ್ಳುವುದೇ? ಪ್ರತಿಪಕ್ಷಗಳ ಟೀಕೆಯನ್ನು ಪ್ರಧಾನಿಯಾಗಿ ಮೋದಿ ಅರ್ಥಮಾಡಿಕೊಳ್ಳುತ್ತಾರೆಯೇ? ಅಥವಾ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ಸಂಬಂಧಗಳು ಹೇಗಿರಬೇಕು ಎಂಬುದನ್ನು ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೋಡಿಯಾದರೂ ಕಲಿಯುತ್ತಾರೆಯೇ? ಈಗಾಗಲೇ ಮೋದಿ 10 ವರ್ಷಗಳ ಆಡಳಿತ ನಡೆಸಿದ್ದಾರೆ. 3ನೇ ಅವಧಿಯ ಪ್ರಧಾನಿಯಾಗಿದ್ದಾರೆ. ಆದರೆ, ಅವರು ಪ್ರಶ್ನೆಗಳನ್ನು ಸಹಿಸುವುದಿಲ್ಲ. ಟೀಕೆಗಳನ್ನು ಸ್ವೀಕರಿಸುವುದಿಲ್ಲ. ಹೀಗಿರುವಾಗ, ವಿಪಕ್ಷಗಳ ಘನತೆಯನ್ನು ರಕ್ಷಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಇಡೀ ದೇಶದ ಕರ್ತವ್ಯವಾಗಿದೆ. ಮೋದಿ ಅವರಿಗೆ ಭಾರತದ ಸಂಸದೀಯ ವ್ಯವಸ್ಥೆ ಬೆಳೆದುಬಂದ ಇತಿಹಾಸದ ಪಾಠವನ್ನು ಅರ್ಥ ಮಾಡಿಸುವ ಅಗತ್ಯವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X