ಮುಂಬೈನ ಧಾರಾವಿ ಕೊಳೆಗೇರಿಯನ್ನು ಪುನರಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಅಲ್ಲಿನ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಮಧ್‌ನಲ್ಲಿ 140 ಎಕರೆ ಭೂಮಿಯನ್ನು ಅದಾನಿ ಗ್ರೂಪ್‌ಗೆ ಮಂಜೂರು ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಅ. 10ರಂದು ಒಪ್ಪಿಗೆ ನೀಡಿದೆ
ಮುಂಬೈನ ಧಾರಾವಿ ಕೊಳೆಗೇರಿ ನಾಲ್ಕು ವರ್ಷಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಮೊದಲಿಗೆ ಅದು ಆತಂಕದ ಸುದ್ದಿಯಾಗಿತ್ತು. ನಂತರ ಅದೊಂದು ಯಶೋಗಾಥೆಯ ಸುದ್ದಿಯಾಗಿ ತಿರುವು ಪಡೆದಿತ್ತು. ಏಷ್ಯಾದ ಅತ್ಯಂತ ವಿಸ್ತಾರವಾದ ಕೊಳೆಗೇರಿ, ಮುಂಬೈ ನಗರಕ್ಕೆ ಆತುಕೊಂಡಿರುವ ಈ ಧಾರಾವಿ. ಕೊರೋನಾ ಮೊದಲ ಅಲೆ ಬಂದಾಗ ನಾಲ್ಕುನೂರು ಎಕರೆ ವಿಸ್ತೀರ್ಣದ ಈ ಕೊಳೆಗೇರಿಯಲ್ಲಿ ವೈರಸ್ ಹರಡುವುದನ್ನು ತಡೆಯುವುದು ಇಡೀ ದೇಶಕ್ಕೆ ತಲೆನೋವಾಗಿತ್ತು. ಆದರೆ ಅಷ್ಟೇ ವೇಗವಾಗಿ ವೈರಸ್ ಹರಡುವಿಕೆಯನ್ನು ತಡೆಯುವುದು ಧಾರಾವಿಗೆ ಸಾಧ್ಯವಾಗಿತ್ತು. ಲಕ್ಷಾಂತರ ಜನ ವಾಸವಾಗುವ ಕೊಳೆಗೇರಿಗೇನಾದರೂ ಕೊರೋನಾ ವ್ಯಾಪಕವಾಗಿ ಹರಡಿದ್ರೆ ಇಂದು ಅದೊಂದು ಸ್ಮಶಾನ ಭೂಮಿಯಾಗುತ್ತಿತ್ತು. ಆದರೆ, ಆಗ ಮಹಾರಾಷ್ಟ್ರ ಸರ್ಕಾರ ಕೈಗೊಂಡ ಕ್ರಮ ಶ್ಲಾಘನೆಗೆ ಕಾರಣವಾಗಿತ್ತು. ಇಷ್ಟು ದೊಡ್ಡ ಕೊಳೆಗೇರಿಯ ಜನರ ವೈಯಕ್ತಿಕ ಶುಚಿತ್ವದ ಮಾತು ಒತ್ತಟ್ಟಿಗಿರಲಿ, ಸ್ಯಾನಿಟೈಸ್ ಮಾಡೋದು, ಜನರಲ್ಲಿ ಜಾಗೃತಿ ಮೂಡಿಸೋದು, ವೈದ್ಯಕೀಯ ವ್ಯವಸ್ಥೆ ಕಲ್ಪಿಸೋದು ದೊಡ್ಡ ಸವಾಲಾಗಿತ್ತು. ಆದರೆ, ಅಂತಹ ಸವಾಲನ್ನು ಸಮರ್ಥವಾಗಿ ನಿಭಾಯಿಸಿತ್ತು ಉದ್ದವ್ ಠಾಕ್ರೆ ಸರ್ಕಾರ.
ಈಗ ಧಾರಾವಿ ಮತ್ತೆ ಸುದ್ದಿಯಲ್ಲಿದೆ. ಧಾರಾವಿಯನ್ನು ಪುನರಭಿವೃದ್ಧಿ ಮಾಡಲು ಬಿಜೆಪಿ- ಶಿವಸೇನೆ ಮೈತ್ರಿ ಸರ್ಕಾರ ಮುಂದಾಗಿದೆ. ಯೋಜನೆಯ ಭಾಗವಾಗಿ ಅಲ್ಲಿನ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಮಧ್‌ನಲ್ಲಿ 140 ಎಕರೆ ಭೂಮಿ ಮಂಜೂರು ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಗುರುವಾರ (ಅ. 10) ಒಪ್ಪಿಗೆ ನೀಡಿದೆ. ಪುನರಭಿವೃದ್ಧಿ ಯೋಜನೆಯಡಿ ಉಚಿತ ವಸತಿಗೆ ಅನರ್ಹರಾಗಿರುವ ಧಾರಾವಿ ನಿವಾಸಿಗಳಿಗೆ ಕೈಗೆಟುಕುವ ಬಾಡಿಗೆ ಮನೆಗಳನ್ನು ನಿರ್ಮಿಸಲು ಭೂಮಿಯನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ.
ಈಗಾಗಲೇ ದೇಶದ ರೈಲ್ವೆ, ವಿಮಾನ ನಿಲ್ದಾಣ, ಬಂದರು, ಸಾರ್ವಜನಿಕ ಸ್ವಾಮ್ಯದ ಉದ್ಯಮಗಳನ್ನು ಅದಾನಿ ಗ್ರೂಪ್‌ನ ತೆಕ್ಕೆಗೆ ನೀಡಲಾಗಿದೆ. ಅಷ್ಟು ಸಾಲದೆಂಬಂತೆ ವಿದೇಶದಲ್ಲೂ ವ್ಯಾಪಕ ಉದ್ಯಮ ವಿಸ್ತರಿಸಿರುವ ಪ್ರಧಾನಿ ಮೋದಿ ಅವರ ಗೆಳೆಯ ಗೌತಮ್ ಅದಾನಿ ಕಂಪನಿಗೆ “ಧಾರಾವಿ ಪುನರಭಿವೃದ್ಧಿ ಯೋಜನೆ”ಯ ಟೆಂಡರ್ ನೀಡಲಾಗಿದೆ. ಇನ್ನೇನು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಈಗಾಗಲೇ ಈ ವಿಷಯ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಇಂಡಿಯಾ ಒಕ್ಕೂಟಕ್ಕೆ ಈ ಬಾರಿ ಧಾರಾವಿ ಭರಪೂರ ವಿಷಯವಾಗಲಿದೆ.
ವರದಿಗಳ ಪ್ರಕಾರ ಧಾರಾವಿ ಯೋಜನೆಯು 20,000 ಕೋಟಿ ರೂಪಾಯಿಗಳ ಆದಾಯದ ಸಾಮರ್ಥ್ಯವನ್ನು ಹೊಂದಿದೆ. ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ (BKC) ವ್ಯಾಪಾರ ಕೇಂದ್ರದ ಸಮೀಪವಿರುವ ಮಧ್ಯ ಮುಂಬೈನಲ್ಲಿ ವಿಶಾಲವಾದ ಕೊಳೆಗೇರಿಯನ್ನು, ಮರುನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ರಿಯಾಲ್ಟಿ ದೈತ್ಯರಾದ DLF ಮತ್ತು ನಮನ್ ಡೆವಲಪರ್‌ಗಳನ್ನು ಒಳಗೊಂಡ ಸ್ಪರ್ಧಾತ್ಮಕ ಬಿಡ್‌ನಲ್ಲಿ ನವೆಂಬರ್ 2022ರಲ್ಲೇ ಅದಾನಿ ಪ್ರಾಪರ್ಟೀಸ್‌ಗೆ ಟೆಂಡರ್ ನೀಡಲಾಯಿತು.
2000ಕ್ಕಿಂತ ಮೊದಲು ಧಾರಾವಿಯಲ್ಲಿ ವಾಸವಾಗಿದ್ದವರು ಮಾತ್ರ ಈ ಯೋಜನೆಯಡಿ ಉಚಿತ ಮನೆಗಳನ್ನು ಪಡೆಯುತ್ತಾರೆ. ಸುಮಾರು 7ಲಕ್ಷ ಫಲಾನುಭವಿಗಳು ಎಂದು ಹೇಳಲಾಗಿದೆ. ಮಿಕ್ಕವರದ್ದು ಅತಂತ್ರ ಪರಿಸ್ಥಿತಿ.
ಹಾಗಾಗಿಯೇ ಧಾರಾವಿ ಪುನರಭಿವೃದ್ಧಿಯನ್ನೂ ಅನುಮಾನದಿಂದ ನೋಡಬೇಕಾದ ಸಂದರ್ಭ ಬಂದಿದೆ. ಇದು ದೇಶದ ಮತ್ತೊಂದು ಬೃಹತ್ ಹಗರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸಲು ಶುರುವಾಗಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಯ ಟೆಂಡರ್ ರದ್ದು ಮಾಡುತ್ತೇವೆ ಎಂದು ಉದ್ಧವ್ ಠಾಕ್ರೆ ಹೇಳುತ್ತಲೇ ಬಂದಿದ್ದಾರೆ. ಮುನ್ನೂರು ಚದರಡಿಯ ಮನೆಗಳನ್ನು ಕೊಡುವುದಾಗಿ ಅದಾನಿ ಗ್ರೂಪ್ ಹೇಳಿದೆ. ಠಾಕ್ರೆ ಐನೂರು ಚದರಡಿಯ ಮನೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. “ಧಾರಾವಿ ಜನರಿಗೆ ಯಾವುದು ಅನುಕೂಲ ಎಂದು ನೋಡುತ್ತೇವೆ. ಅಗತ್ಯ ಬಿದ್ದರೆ ಟೆಂಡರ್ ರದ್ದು ಮಾಡುತ್ತೇವೆ” ಎಂದೂ ಹೇಳಿದ್ದಾರೆ. ಸರ್ಕಾರ ಬದಲಾದರೆ ಅದು ಸಾಧ್ಯವೇ ಗೊತ್ತಿಲ್ಲ. ಚುನಾವಣೆ ಘೋಷಣೆಯಾಗುವ ಮುನ್ನ ಇದೀಗ 140 ಎಕರೆ ಮಂಜೂರು ಮಾಡಿದೆ ಶಿಂದೆ ಸರ್ಕಾರ. ಇನ್ನೂ ಮಾಡಬೇಕಿರುವ ಅಕ್ರಮವನ್ನು ಸರ್ಕಾರ ಮಾಡಲ್ಲ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಯಾಕೆಂದರೆ, ಮೋದಿ- ಬಿಜೆಪಿ ಪಾಲಿಗೆ ಅದಾನಿ ಚಿನ್ನದ ಮೊಟ್ಟೆ ಇಡುವ ಕೋಳಿ.
ಕೊಳೆಗೇರಿ ನಿರ್ಮೂಲನೆ ಆಗಬೇಕಿರೋದು ಸರ್ವಸಮ್ಮತ. ಪುನರಭಿವೃದ್ಧಿಗೆ ವಿರೋಧವಿಲ್ಲ. ಆದರೆ ಎಲ್ಲರಿಗೂ ವಸತಿ ಸಿಗಬೇಕು ಮತ್ತು ಇಡೀ ಅಭಿವೃದ್ಧಿ ಪಾರದರ್ಶಕವಾಗಿ ನಡೆಯಬೇಕು. ಇದರ ಹೆಸರಲ್ಲಿ ಅದಾನಿ ಕಂಪನಿಗೆ ಲಕ್ಷಾಂತರ ಕೋಟಿ ರೂಪಾಯಿ ಲಾಭ ಧಾರೆ ಎರೆಯಬಾರದು. 2000ನೇ ಇಸವಿಗಿಂತ ಮೊದಲು ವಸತಿ ಹೊಂದಿದವರು ಮಾತ್ರ ಹೊಸ ಮನೆಗಳನ್ನು ಪಡೆಯಲು ಅರ್ಹರು ಎಂದಾದರೆ ಈ 24 ವರ್ಷಗಳಲ್ಲಿ ಅಲ್ಲಿ ಆಶ್ರಯ ಪಡೆದ ಕುಟುಂಬಗಳು ಎಲ್ಲಿಗೆ ಹೋಗಬೇಕು? ಒಂದು ವರದಿಯ ಪ್ರಕಾರ ಸುಮಾರು 60% ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಜನವರಿ 1, 2000 ಮತ್ತು ಜನವರಿ 1, 2011ರ ನಡುವೆ ಬಂದವರಿಗೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಧಾರಾವಿಯ ಹೊರಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2.5 ಲಕ್ಷ ರೂ.ಗೆ ಮನೆ ಅಥವಾ ಬಾಡಿಗೆ ಮನೆಗಳನ್ನು ಹಂಚಲಾಗುತ್ತದೆಯಂತೆ. ಇಡೀ ಯೋಜನೆಯೇ ಗೊಂದಲದ ಗೂಡಾಗಿದೆ.
ಧಾರಾವಿಯ ಹೊಸ ನಿವಾಸಿಗಳಾದ ಅನರ್ಹರಿಗೆ ಮನೆಗಳನ್ನು ನಿರ್ಮಿಸಲು, ಅದಾನಿ ಜಂಟಿ ಉದ್ಯಮವು ಹೆಚ್ಚಿನ ಭೂಮಿಗಾಗಿ ವಿವಿಧ ಸ್ಥಳೀಯ ಮತ್ತು ಫೆಡರಲ್ ಏಜೆನ್ಸಿಗಳಿಗೆ ಅರ್ಜಿ ಸಲ್ಲಿಸಿದೆ. ಆದರೆ ಇನ್ನೂ ಯಾವುದನ್ನೂ ಪಡೆದುಕೊಂಡಿಲ್ಲ ಎಂದು ಧಾರಾವಿ ಪುನರಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಎಸ್‌ವಿಆರ್ ಶ್ರೀನಿವಾಸ್ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಏಕೆಂದರೆ ಅಂತಹ ಸರ್ಕಾರಿ ಏಜೆನ್ಸಿಗಳು ತಮ್ಮ ಸ್ವಂತ ಭೂಮಿಗಾಗಿ ತಮ್ಮದೇ ಆದ ಯೋಜನೆಗಳನ್ನು ಹೊಂದಿರುತ್ತವೆ ಮತ್ತು ಅದನ್ನು ಹಂಚಿಕೊಳ್ಳಲು ಸಿದ್ಧರಿರುವುದಿಲ್ಲ ಎಂದೂ ಹೇಳಿದ್ದರು. ವಾಸ್ತವ ಹೀಗಿರುವಾಗ ಶೇ 60 ಕುಟುಂಬಗಳಿಗೆ ಎಲ್ಲಿ ಪುನರ್ವಸತಿ ಕಲ್ಪಿಸುತ್ತಾರೆ ಎಂಬುದು ಪ್ರಶ್ನಾರ್ಹ.
