ಬೆಂಗಳೂರಿನ ದೇವಸ್ಥಾನವೊಂದಕ್ಕೆ ಹೋಗಿದ್ದ ಎಂಟು ವರ್ಷ ಬಾಲಕಿಯನ್ನು ಅಲ್ಲಿನ ಅರ್ಚಕ ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಆರು ವರ್ಷಗಳ ಹಿಂದೆ ಶ್ರೀನಗರದ ಕಥುವಾದಲ್ಲಿ ಬಲಿಯಾದ ಅಸೀಫಾಳನ್ನು ಮತ್ತೆ ನೆನಪಿಸಿದೆ.
ಒಂದೆಡೆ ಒಕ್ಕೂಟ ಸರ್ಕಾರದ ಬಜೆಟ್ ಅಧಿವೇಶನ ನಡೆಯುತ್ತಿದೆ. ಇತ್ತ ರಾಜ್ಯ ಸರ್ಕಾರದ ಎರಡು ವಾರಗಳ ಮುಂಗಾರು ಅಧಿವೇಶನ ಸಮಾಪ್ತಿಗೊಂಡಿದೆ. ಸರ್ಕಾರದ ವಿರುದ್ಧ ಹಗರಣಗಳ ಆರೋಗ್ಯಕರ ಚರ್ಚೆ ನಡೆಸಿ ಇಕ್ಕಟ್ಟಿಗೆ ಸಿಲುಕಿಸಬೇಕಿದ್ದ ವಿರೋಧ ಪಕ್ಷಗಳು ಧರಣಿ, ಘೋಷಣೆ, ಗದ್ದಲದಲ್ಲಿ ನಿರತವಾಗಿದ್ದವು. ರಾಜ್ಯದೆಲ್ಲೆಡೆ ಭೀಕರ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಲ್ಲಿ ಜೀವ, ಬದುಕು ಕಳೆದುಕೊಂಡವರ ಬಗ್ಗೆ ಯಾವ ಪಕ್ಷಗಳ ನಾಯಕರಿಗೂ ಕಾಳಜಿ ಇಲ್ಲ ಎಂಬುದನ್ನು ತೋರಿಸಿದ್ದಾರೆ.
ಈ ಮಧ್ಯೆ ಒಂದು ವಾರದಲ್ಲಿ ಹೆಣ್ಣುಮಕ್ಕಳ ಮೇಲಿನ ಮೂರು ಪ್ರಕರಣಗಳು ಒಂದು ಕಲಮಿನ ಸುದ್ದಿಯಷ್ಟೇ ಆಗಿ ಹೋದವು. ಕೋರಮಂಗಲದ ಪಿ ಜಿಯೊಂದಕ್ಕೆ ನುಗ್ಗಿದ್ದ ಪಾತಕಿ ಉತ್ತರಪ್ರದೇಶ ಮೂಲದ ಯುವತಿಯನ್ನು ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ಒಳ ಪ್ರವೇಶಿಸಲು ಬಯೋಮೆಟ್ರಿಕ್ ಎಂಟ್ರಿ ವ್ಯವಸ್ಥೆ ಇರುವ ಪ್ರತಿಷ್ಠಿತ ಪಿ ಜಿ ಯೊಳಗೆ ಆಗಂತುಕನೊಬ್ಬ ಸಲೀಸಾಗಿ ಮುಖ್ಯ ಪ್ರವೇಶದ್ವಾರದಿಂದಲೇ ಹೋಗಿ ಕೊಲೆ ಮಾಡಿ ಹೊರ ಬರುತ್ತಾನೆ ಎಂದರೆ ಬೆಂಗಳೂರಿನ ಪಿ ಜಿ ಗಳ ಸುರಕ್ಷತೆಯ ಬಗ್ಗೆ ಬೇರೆ ರಾಜ್ಯದ ಜನರು ಅನುಮಾನದಿಂದ ನೋಡುವಂತಾಗಿದೆ. ಪಿ ಜಿ ಎಂಬುದು ಕಾನೂನಿಡಿಯೇ ನಡೆಯುತ್ತಿರುವ ಸುಲಿಗೆ ಎಂಬುದು ವಿವರಿಸಿ ಹೇಳಬೇಕಿಲ್ಲ. ಆದರೆ, ಆಶ್ರಯಿಸಿ ಬಂದ ಮಹಿಳೆಯರ ಜೀವಕ್ಕೇ ಇಲ್ಲಿ ರಕ್ಷಣೆ ಇಲ್ಲ.
ಕಲಬುರ್ಗಿಯ ಆಳಂದದಲ್ಲಿ 18 ತಿಂಗಳ ಮಗು ಜ್ವರದಿಂದ ಬಳಲುತ್ತಿದ್ದ ಕಾರಣ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಾಲ್ಕು ದಿನ ಚಿಕಿತ್ಸೆ ಕೊಡಿಸಿದ್ದರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ನಂತರ ಅನುಮಾನ ಬಂದ ವೈದ್ಯರು ತಪಾಸಣೆ ನಡೆಸಿದಾಗ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಆದರೆ, ಅಷ್ಟರಲ್ಲಿ ಮಗು ಅಸುನೀಗಿದೆ. ಆ ಹಸಿ ಮೈಯ ಹಸುಗೂಸಿಂದ ಸುಖ ಪಡೆದ ರಾಕ್ಷಸ ಯಾರಿರಬಹುದು?
ಬೆಂಗಳೂರಿನ ದೇವಸ್ಥಾನವೊಂದಕ್ಕೆ ಹೋಗಿದ್ದ ಎಂಟು ವರ್ಷ ಬಾಲಕಿಯನ್ನು ಅಲ್ಲಿನ ಅರ್ಚಕ ರಾಜೇಶ್ ಎಂಬಾತ ಪಕ್ಕದಲ್ಲೇ ಇದ್ದ ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪದಲ್ಲಿ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಘಟನೆ ಆರು ವರ್ಷಗಳ ಹಿಂದೆ ಶ್ರೀನಗರದ ಕಥುವಾದಲ್ಲಿ ನಡೆದ ಘಟನೆಯನ್ನು ಮತ್ತೆ ನೆನಪಿಸಿದೆ. ದೇವಸ್ಥಾನದ ಅರ್ಚಕ ಸೇರಿ ನಾಲ್ವರು ಎಂಟು ವರ್ಷದ ಅಸೀಫಾಳನ್ನು ಸಾಮೂಹಿಕ ಅತ್ಯಾಚಾರಗೈದು ಪೊದೆಗೆ ಎಸೆದಿದ್ದರು. ಈ ಪ್ರಕರಣದ ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಭರಪೂರ ಸಾಕ್ಷಿಗಳಿದ್ದರೂ ನ್ಯಾಯಾಲಯದ ವಿಳಂಬ ಧೋರಣೆ ಪ್ರಕರಣವನ್ನು ಮರೆಸುವಂತೆ ಮಾಡುತ್ತಿದೆ.
ದೆಹಲಿಯಲ್ಲಿ ಹದಿನೆಂಟು ವರ್ಷದ ಯುವತಿಯನ್ನು ಮನೆಯಿಂದ ಎಳೆದೊಯ್ದು ಗನ್ ತೋರಿಸಿ ಅತ್ಯಾಚಾರ ಎಸಗಿ ಐದನೇ ಮಹಡಿಯಿಂದ ಎಸೆದಿರುವ ಹೃದಯವಿದ್ರಾವಕ ಘಟನೆ ನಿನ್ನೆಯಷ್ಟೇ ವರದಿಯಾಗಿದೆ. ತನ್ನ ಕಾಮವಾಂಛೆ ಎಚ್ಚೆತ್ತುಕೊಂಡಾಗ ಯಾರನ್ನಾದರೂ ಸರಿ ಮುಕ್ಕಿ ಬಿಡಬೇಕು ಎಂಬ ರಾಕ್ಷಸೀಯ ಪ್ರವೃತ್ತಿ ಯುವಕರಲ್ಲಿ ಹೆಚ್ಚುತ್ತಿದೆ ಎಂಬುದು ಹೆಚ್ಚು ಯುವ ಸಮೂಹದಿಂದ ತುಂಬಲಿರುವ ಭವಿಷ್ಯದ “ಯುವ ಭಾರತ”ದ ಕರಾಳ ದರ್ಶನ ಮಾಡಿಸುತ್ತಿದೆ.
ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ, ಅದರಲ್ಲೂ ಹಸುಗೂಸುಗಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲಾಗದ ನಮ್ಮ ಸಮಾಜ, ಸರ್ಕಾರ, ಕಾನೂನು, ನ್ಯಾಯಾಂಗ ವ್ಯವಸ್ಥೆ ಒಟ್ಟಾಗಿ ತಲೆ ತಗ್ಗಿಸಬೇಕಾದ ವಿಚಾರ. ಪೋಕ್ಸೊ ಕಾಯ್ದೆ ಬಂದಾಗ ಇದ್ದ ನಿರೀಕ್ಷೆ ಈ ಒಂದು ದಶಕದಲ್ಲಿ ಹುಸಿಯಾಗಿದೆ. ನ್ಯಾಯ ನೀಡಿಕೆಯಲ್ಲಿ ವಿಳಂಬ ಧೋರಣೆ, ಉಳ್ಳವರಿಗೆ ತಪ್ಪಿಸಿಕೊಳ್ಳಲು ನೆರವಾಗುವ ವ್ಯವಸ್ಥೆ, ಸಾಕ್ಷ್ಯ ಸಂಗ್ರಹದಲ್ಲಿ ಪೊಲೀಸರು ತೋರುತ್ತಿರುವ ನಿರ್ಲಕ್ಷ್ಯ ಇವೆಲ್ಲವೂ ಸೇರಿ ಈ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಎಂತಹ ದೌರ್ಜನ್ಯ ನಡೆಸಿದರೂ ತಪ್ಪಿಸಿಕೊಳ್ಳಬಹುದು ಎಂಬ ಮನೋಭಾವ ಮೇಳೈಸಿದೆ. ಅಪ್ರಾಪ್ತ ಬಾಲಕರೂ ಅತ್ಯಾಚಾರ, ಕೊಲೆಯಂತಹ ಕ್ರೂರ ಕೃತ್ಯಗಳಲ್ಲಿ ಸಲೀಸಾಗಿ ಭಾಗಿಯಾಗುತ್ತಿರುವುದು ಆಘಾತಕಾರಿ.
ಅದೆಷ್ಟು ಪೋಕ್ಸೊ ಪ್ರಕರಣಗಳು ದಾಖಲಾಗುತ್ತಲೇ ಇವೆ, ಮುಂದೇನಾಯ್ತು? ವರ್ಷಾನುಗಟ್ಟಲೆ ಪ್ರಕರಣಗಳು ಕೊಳೆತು ನ್ಯಾಯ ಮರೀಚಿಕೆಯಾಗುತ್ತಿದೆ. ಈ ಬಗ್ಗೆ ಕಾನೂನು ರೂಪಿಸುವ ಸ್ಥಾನದಲ್ಲಿರುವವರಿಗೆ ಕಾಳಜಿಯೇ ಇಲ್ಲ. ಸಂಸತ್ತಿನಲ್ಲಿ ನಡೆಯುತ್ತಿರುವ ಕಲಾಪವೇ ಇರಲಿ, ರಾಜ್ಯಗಳಲ್ಲಿ ನಡೆದ ವಿಧಾನಮಂಡಲಗಳ ಅಧಿವೇಶದಲ್ಲಿಯೇ ಆಗಲಿ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಚರ್ಚೆಯೇ ನಡೆಯುತ್ತಿಲ್ಲ.
ಮಣಿಪುರದ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದರೆ, ಆಗಿನ ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದ್ದರು. ದೇಶದ ಮಹಿಳಾ ಕಲ್ಯಾಣ ಖಾತೆಯ ಸಚಿವೆಯಾಗಿ ಇಡೀ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ತಾವೇನು ಮಾಡಿದ್ದೇವೆ ಎಂಬುದನ್ನು ಹೇಳಲು ಅವರ ಬಳಿ ಯಾವುದೇ ಕಾರ್ಯ ಯೋಜನೆ ಇರಲಿಲ್ಲ. ವಿಪಕ್ಷಗಳ ಸರ್ಕಾರ ಇರುವ ರಾಜ್ಯಗಳಲ್ಲೂ ಕೇಂದ್ರ ಸರ್ಕಾರ ತನ್ನ ಅಧಿಕಾರ ಬಳಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸಬಹುದು ಎಂಬ ಅರಿವು ಅವರಿಗೆ ಇರಲಿಲ್ಲ. ಮಹಿಳಾ ದೌರ್ಜನ್ಯದ ವಿಚಾರದಲ್ಲಿಯೂ ಅಪ್ಪಟ ಪುರುಷ ರಾಜಕಾರಣಿಗಳಂತೆ ನಮ್ಮ ನಾಯಕಿಯರೂ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ. ಕುಸ್ತಿಪಟುಗಳ ಪ್ರತಿಭಟನೆ, ಮಣಿಪುರ, ಹಾಥರಸ್, ಉನ್ನಾವೋ, ಕಥುವಾ… ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಈ ಪ್ರಕರಣಗಳು ವಿಶ್ವವ್ಯಾಪಿ ಸುದ್ದಿಯಾದರೂ ನಮ್ಮವರು ಅದನ್ನು ʼವಿರೋಧ ಪಕ್ಷಗಳ ಆರೋಪʼವಾಗಿಯಷ್ಟೇ ನೋಡುತ್ತಿದ್ದಾರೆ ಎಂಬುದು ಪ್ರಜಾಪ್ರಭುತ್ವದ ದೊಡ್ಡ ಅಣಕ.
ರಾಜ್ಯದಲ್ಲಿ ಎರಡು ವಾರ ನಡೆದ ಅಧಿವೇಶನದಲ್ಲಿ ಮೂರೂ ಪಕ್ಷಗಳ ಶಾಸಕಿಯರು ಮಹಿಳೆಯರು, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಒಂದು ಪ್ರಶ್ನೆಯನ್ನಾದರೂ ಎತ್ತಿದರೇ ಎಂದು ನೋಡಿದರೆ ತೀವ್ರ ನಿರಾಸೆಯಾಗುತ್ತದೆ. ಕಳೆದ ಐದಾರು ತಿಂಗಳಲ್ಲಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಕೊಲೆ, ಅತ್ಯಾಚಾರ ಪ್ರಕರಣಗಳು ಸರಣಿಯಂತೆ ನಡೆದಿದ್ದವು. ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಪ್ರಬುದ್ಧಳನ್ನು ಆಕೆಯ ಪರಿಚಿತ ಅಪ್ರಾಪ್ತ ಬಾಲಕ ಹಗಲೇ ಮನೆಗೆ ನುಗ್ಗಿ ಕೊಲೆ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ ಒಂದೇ ವಾರದಲ್ಲಿ ʼಬಾಲಾಪರಾಧಿʼ ಎಂಬ ಕಾರಣಕ್ಕೆ ಜಾಮೀನು ನೀಡಲಾಗಿದೆ. ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದು ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದು ಪ್ರಬುದ್ಧಳ ತಾಯಿ ಅಂಗಲಾಚುತ್ತಿದ್ದಾರೆ. ಪ್ರಬುದ್ಧಳ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ನಿಯೋಗವೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ತಿಂಗಳೆರಡಾಯಿತು. ಆದರೆ, ಮಹಿಳಾಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಕಣ್ಣು-ಕಿವಿ ಕಳೆದುಕೊಂಡಿದ್ದಷ್ಟೇ ಅಲ್ಲ, ಭ್ರಷ್ಟಾಚಾರದ ಕಾಲುವೆಯಲ್ಲಿ ಕಾಲ್ಮುರಿದುಕೊಂಡು ಬಿದ್ದಂತಿದೆ.
ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಪೋಕ್ಸೊ ಕಾಯ್ದೆ ಶೇಕಡ ನೂರರಷ್ಟು ಅನುಷ್ಠಾನವಾಗಬೇಕು. ನ್ಯಾಯದಾನ ತ್ವರಿತವಾಗಿ ಆಗಲು ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ನ್ಯಾಯಾಂಗ ವ್ಯವಸ್ಥೆಗೆ ಬಲ ತುಂಬುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಬದ್ಧತೆ ತೋರಬೇಕಿದೆ.
