ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದು ಪೋಷಕರು, ಶಾಲೆಗಳು, ಸಮಾಜವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಕೊಲೆಗಳು ಅಥವಾ ಹತ್ಯೆಗಳು ಭಾರತದಲ್ಲಿ ಅಗ್ಗವಾದಂತೆ ಕಾಣುತ್ತಿವೆ. ಕ್ಷುಲ್ಲಕ ಸಂಗತಿಗಳು, ಸಣ್ಣ ಮನಸ್ತಾಪಗಳು, ನಿರಾಕರಣೆಯಂತಹ ಕಾರಣಗಳಿಗಾಗಿ ಕೊಲೆಗಳು ನಡೆಯುತ್ತಿವೆ. ತಮ್ಮ ಸ್ನೇಹಿತರು, ಕುಟುಂಬಸ್ಥರು, ನೆರೆಹೊರೆಯವರನ್ನೇ ಬರ್ಬರವಾಗಿ ಕೊಲ್ಲುವ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿವೆ. ಅದರಲ್ಲೂ ಇಂತಹ ಕೃತ್ಯಗಳಲ್ಲಿ ಮಕ್ಕಳು ಕೂಡ ಭಾಗಿಯಾಗುತ್ತಿರುವುದು ಆಘಾತಕಾರಿಯಾಗಿದೆ.
ಭಾರತೀಯ ಸಮಾಜದಲ್ಲಿ ಮಕ್ಕಳನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಎಷ್ಟೇ ಬೆಳೆದರು ಮಗುವಿನಂತಹ ಮನಸ್ಸು ಇರಬೇಕು. ಯಾವುದೇ ದ್ವೇಷ, ಅಸೂಯೆ, ಕೋಪ-ತಾಪಕ್ಕೆ ತುತ್ತಾಗದ ಮಕ್ಕಳಂತೆ ಶಾಂತಚಿತ್ತರಾಗಿ, ನಿರ್ಮಲ ಮನಸ್ಸನ್ನು ಹೊಂದಿರಬೇಕು ಎಂಬ ಮಾತುಗಳು ಸಮಾಜದಲ್ಲಿ ಹಾಸುಹೊಕ್ಕಾಗಿವೆ. 80/90ರ ದಶಕದ ಸಿನಿಮಾಗಳೂ ಇದನ್ನೇ ಸಾರಿವೆ. ಆದರೆ, ಪ್ರಸ್ತುತ ದಿನಗಳಲ್ಲಿ ಮಕ್ಕಳು ಶಾಂತತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೋಪ, ದ್ವೇಷ ಮಕ್ಕಳ ಮನಸ್ಸು ಆವರಿಸುತ್ತಿದೆ. ಮಕ್ಕಳು ತಮ್ಮ ಸ್ನೇಹಿತರ ಜೊತೆಗಿನ ಸಣ್ಣ-ಪುಟ್ಟ ಜಗಳ, ಮುನಿಸನ್ನು ಮೀರಿದ್ದಾರೆ. ಕೊಲೆ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಮ್ಮ ಭವಿಷ್ಯವನ್ನೂ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದು ಭಾರತದ ಕಾನೂನು ವ್ಯವಸ್ಥೆ, ಸಮಾಜ ಮತ್ತು ಕುಟುಂಬ ವ್ಯವಸ್ಥೆಗೆ ಒಂದು ಗಂಭೀರ ಸವಾಲಾಗಿ ಪರಿಣಮಿಸಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳೇ ಕೊಲೆಗಳನ್ನು ಮಾಡುತ್ತಿರುವುದು, ಅತ್ಯಾಚಾರಗಳನ್ನು ಎಸಗುತ್ತಿರುವುದು ಆಗಾಗ್ಗೆ ವರದಿಯಾಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2021ರ ವರದಿಯ ಪ್ರಕಾರ, 18 ವರ್ಷದೊಳಗಿನ ಬಾಲಕರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಗಣನೀಯವಾಗಿ ಹೆಚ್ಚಾಗುತ್ತಿದೆ. ಅಪ್ರಾಪ್ತರು ಕೊಲೆ, ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಸಮಾಜದ ಗಮನ ಸೆಳೆದದ್ದು, 2012ರಲ್ಲಿ ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ. ನಿರ್ಭಯಾ ಪ್ರಕರಣದಲ್ಲಿ ಓರ್ವ ಅಪ್ರಾಪ್ತನೂ ಭಾಗಿಯಾಗಿದ್ದ ಎಂಬುದು ಸಮಾಜವನ್ನು ಆಘಾತಕ್ಕೀಡುಮಾಡಿತ್ತು.
ಅಂದಿನಿಂದ ಇಂದಿನ ವರೆಗೆ ಹಲವಾರು ಆಘಾತಕಾರಿ ಕೃತ್ಯಗಳಲ್ಲಿ ಮಕ್ಕಳು ಭಾಗಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. 2023ರಲ್ಲಿ ಗುಜರಾತ್‌ನ 16 ವರ್ಷದ ಬಾಲಕನೊಬ್ಬ ಆಸ್ತಿಗಾಗಿ ತನ್ನ ಕುಟುಂಬದ ಸದಸ್ಯರನ್ನೇ ಹತ್ಯೆಗೈದಿದ್ದಾನೆಂದು ವರದಿಯಾಗಿದೆ.
ಮಕ್ಕಳೇ ಹತ್ಯೆಗಳನ್ನು ಎಸಗಿರುವ ಎರಡು ಪ್ರಕರಣಗಳು ಕಳೆದೊಂದು ವಾರದಲ್ಲಿ ನಡೆದಿವೆ. ಹುಬ್ಬಳ್ಳಿಯಲ್ಲಿ ಬಾಲಕನೊಬ್ಬ ಆಟವಾಡುವಾಗ ಸಣ್ಣ ಜಗಳದ ಕಾರಣಕ್ಕೆ ತನ್ನ ನೆಚ್ಚಿನ ಸ್ನೇಹಿತನನ್ನೇ ಇರಿದು ಕೊಂದಿದ್ದಾನೆ. ದೆಹಲಿಯಲ್ಲಿ ಇಬ್ಬರು ಬಾಲಕರು ತಮ್ಮ ಗುಂಪಿಗೆ ಸೇರಲಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬನನ್ನು ಹತ್ಯೆಗೈದಿದ್ದಾರೆ.
2022ರ ಎನ್‌ಸಿಆರ್‌ಬಿ ವರದಿಯ ಪ್ರಕಾರ, ಭಾರತದಲ್ಲಿ 2021ರಲ್ಲಿ 29,272 ಹಾಗೂ 2022ರಲ್ಲಿ 28,522 ಕೊಲೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸರಿಸುಮಾರು 30%ರಷ್ಟು ಪ್ರಕರಣಗಳು ವಿವಾದದಿಂದ ಸಂಭವಿಸಿದ್ದರೆ, 12% ಪ್ರಕರಣಗಳು ವೈಯಕ್ತಿಕ ದ್ವೇಷದ ಕಾರಣಕ್ಕಾಗಿ ನಡೆದಿವೆ. ಆದಾಗ್ಯೂ, ಶಿಕ್ಷೆಯ ಪ್ರಮಾಣ ಮಾತ್ರ ತೀರಾ ಕಡಿಮೆ ಇದೆ. ಈ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚುತ್ತಿದೆ.
ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ. ಕುಟುಂಬದೊಳಗಿನ ಹಿಂಸೆ ಅಥವಾ ಪೋಷಕರ ಕಡೆಗಣನೆಯು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಆಕ್ರಮಣಕಾರಿ ವರ್ತನೆಗಳನ್ನು ಅಳವಡಿಸಿಕೊಳ್ಳಬಹುದು. ಜೊತೆಗೆ, ಮಾಧ್ಯಮಗಳಲ್ಲಿ ಹಿಂಸೆಯ ವೈಭವೀಕರಣ, ಸಾಮಾಜಿಕ ಜಾಲತಾಣಗಳಲ್ಲಿ ಹಿಂಸೆಯ ಸಮರ್ಥನೆ, ಹಿಂಸೆಯನ್ನೇ ಮೂಲವಾಗಿಸಿಕೊಂಡಿರುವ ಕೆಲವು ವಿಡಿಯೋ ಗೇಮ್‌ಗಳು ಸಹ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿವೆ. ಇದಲ್ಲದೆ, ಮಕ್ಕಳಲ್ಲಿ ಖಿನ್ನತೆ, ಆತಂಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಮಕ್ಕಳು ತೀವ್ರ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರಚೋದಿಸಬಹುದು. ಜೊತೆಗೆ, ಅಪ್ರಾಪ್ತರಿಗೆ ಕಾನೂನಿನಡಿ ಶಿಕ್ಷೆಯ ಪ್ರಮಾಣ ಕಡಿಮೆ ಎಂಬ ಭಾವನೆಯಿಂದಲೂ ಕೆಲವು ಮಕ್ಕಳು ಇಂತಹ ಕೃತ್ಯಗಳನ್ನು ಎಸಗಲು ಧೈರ್ಯ ಮಾಡಿಬಿಡುವ ಸಾಧ್ಯತೆಗಳೂ ಇವೆ.
ಕೊಲೆಯಂತಹ ಗಂಭೀರ ಅಪರಾಧದಲ್ಲಿ ಭಾಗಿಯಾದ ಮಕ್ಕಳನ್ನು ಸಮಾಜದಿಂದ ಹೊರಗಿಡುವ ಆತಂಕಕಾರಿ ಬೆಳವಣಿಗೆಗಳೂ ನಡೆಯುತ್ತಿವೆ. ಇದು ಮಕ್ಕಳು ತಮ್ಮ ತಪ್ಪನ್ನು ಅರಿತು, ತಿದ್ದಿ ನಡೆಯಬಹುದಾದ ಅವಕಾಶವನ್ನು ಮತ್ತಷ್ಟು ಗೌಣಗೊಳಿಸುತ್ತದೆ. ಪರಿಣಾಮವಾಗಿ, ಮಕ್ಕಳು ಕೊಲೆ, ದರೋಡೆ, ಸುಲಿಗೆಗಳನ್ನೇ ಮೈಗೂಡಿಸಿಕೊಂಡು ಬಿಡುವ ಅಪಾಯವೂ ಇದೆ.
ಆದ್ದರಿಂದ, ಕೊಲೆಯಂತಹ ಕೃತ್ಯಗಳಲ್ಲಿ ಮಕ್ಕಳು ಭಾಗಿಯಾಗುತ್ತಿರುವ ವಿದ್ಯಮಾನವನ್ನು ಸಮಾಜವು ಸೂಕ್ಷ್ಮವಾಗಿ ಪರಿಗಣಿಸಬೇಕಿದೆ. ಮಕ್ಕಳಿಗೆ ಕಾನೂನಿನ ಪರಿಣಾಮಗಳ ಬಗ್ಗೆ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. ಕಾನೂನಿನ ಕುರಿತಾಗಿ ಶಾಲೆಗಳಲ್ಲಿಯೇ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ, ಅರಿವು ಮೂಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಇದನ್ನು ಓದಿದ್ದೀರಾ?: ಬೆಂಗಳೂರು-ತುಮಕೂರು ಮೆಟ್ರೊ ಯೋಜನೆ ಯಾರಿಗಾಗಿ?
ಮಾನಸಿಕ ಅಭದ್ರತೆಯನ್ನು ಅನುಭವಿಸುತ್ತಿರುವ ಮಕ್ಕಳಿಗೆ ಕೌನ್ಸೆಲಿಂಗ್ ಮತ್ತು ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಬೇಕಿದೆ. ಕುಟುಂಬದೊಳಗೆ ಮಕ್ಕಳು ಒತ್ತಡಕ್ಕೆ ಸಿಲುಕದಂತೆ, ಕಡೆಗಣನೆಗೆ ಗುರಿಯಾದಂತೆ ಪೋಷಕರು ಎಚ್ಚರಿಕೆ ವಹಿಸಬೇಕಿದೆ. ಮಾತ್ರವಲ್ಲ, ಮಕ್ಕಳ ಎದುರು ಜಗಳ, ಗಲಾಟೆ ಅಥವಾ ಹಿಂಸಾತ್ಮಕವಾಗಿ ವರ್ತಿಸುವುದನ್ನು ತಡೆಯಬೇಕಿದೆ.
ಇದರ ಜೊತೆಗೆ, ಮಾಧ್ಯಮಗಳು ಹೆಚ್ಚು ಹಿಂಸಾತ್ಮಕ ವಿಷಯಗಳನ್ನು ಪ್ರಸಾರ ಮಾಡದಂತೆ ಅಥವಾ ಹಿಂಸೆಯನ್ನು ವೈಭವೀಕರಿಸದಂತೆ ಕೆಲವು ನಿರ್ಬಂಧ, ನಿಯಂತ್ರಣದ ನಿಯಮಗಳನ್ನು ಜಾರಿಗೆ ತರಬೇಕಿದೆ. ಕೊಲೆಯಂತಹ ಅಪರಾಧದಲ್ಲಿ ಭಾಗಿಯಾದ ಮಕ್ಕಳಿಗೆ ಶಿಕ್ಷೆಗಿಂತ ಪುನರ್ವಸತಿಗೆ ಒತ್ತುಕೊಟ್ಟು, ಅವರ ಶಿಕ್ಷಣ, ಕೌಶಲ್ಯ ತರಬೇತಿ ಹಾಗೂ ಕೌನ್ಸೆಲಿಂಗ್ ಮೂಲಕ ಅವರನ್ನು ಸಮಾಜಕ್ಕೆ ಮರಳಿ ತರುವ ಕೆಲಸಗಳು ಆಗಬೇಕಿದೆ.
ಇಲ್ಲವಾದಲ್ಲಿ, ಭಾರತದ ಭವಿಷ್ಯವಾಗಿರುವ ಪೀಳಿಗೆಯು ಹಿಂಸೆಯನ್ನು ಮೈಗೂಡಿಸಿಕೊಂಡು, ಸಮಾಜವನ್ನು ಅಧಃಪತನಕ್ಕೆ ಕೊಂಡೊಯ್ಯುವ ಅಪಾಯವಿದೆ. ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದು ಪೋಷಕರು, ಶಾಲೆಗಳು, ಸಮಾಜವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಎಲ್ಲರೂ ಎಚ್ಚರಿಕೆಯಿಂದ ನಿರ್ವಹಿಸಲೇಬೇಕಿದೆ.