ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?

Date:

Advertisements
ಮತಗಳನ್ನು ಎಣಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಮತ ಎಣಿಕೆ ಸಮಯದಲ್ಲಿ 'ಮೇಲಿನಿಂದ ಒತ್ತಡ'ವಿತ್ತು ಎಂದು ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹೆಚ್ಚಿನ ಸಿಬ್ಬಂದಿಗಳು ಹೇಳಿಕೊಂಡಿದ್ದಾರೆ.

ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆದು, ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಬಹುಮತ ಪಡೆದು, ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಫಲಿತಾಂಶವನ್ನು ಮೊದಲೇ ಊಹಿಸಲಾಗಿತ್ತು. ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಕೇಜ್ರಿವಾಲ್ ಸೇರಿದಂತೆ ಹಲವರು ಪ್ರಶ್ನೆಗಳನ್ನು ಎತ್ತಿದ್ದರು. ದೆಹಲಿ ಫಲಿತಾಂಶಕ್ಕೂ ಒಂದು ದಿನ ಮುಂಚಿತವಾಗಿ, ಶುಕ್ರವಾರ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಚುನಾವಣಾ ಪ್ರಕ್ರಿಯೆ ಮತ್ತು ಪಾರದರ್ಶಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ರಾಹುಲ್‌ ಗಾಂಧಿ ಹೇಳುವಂತೆ, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಮತ್ತು ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡುವಿನ 5 ತಿಂಗಳ ಅವಧಿಯಲ್ಲಿ ಬರೋಬ್ಬರಿ 39 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ, ಮಹಾರಾಷ್ಟ್ರದಲ್ಲಿ ಒಟ್ಟು ವಯಸ್ಕ ಜನಸಂಖ್ಯೆ 9.54 ಕೋಟಿ. ಆದರೆ, ಮತದಾರರ ಸಂಖ್ಯೆ 9.7 ಕೋಟಿ ಇದೆ ಎಂದು ಸರ್ಕಾರದ ಅಂಕಿಅಂಶಗಳೇ ಹೇಳುತ್ತಿವೆ. ಅಂದರೆ, ವಯಸ್ಕರಿಗಿಂತ, ಮತದಾರರ ಸಂಖ್ಯೆ ಹೆಚ್ಚಿರಲು ಹೇಗೆ ಸಾಧ್ಯ ಎಂಬುದು ಕಾಂಗ್ರೆಸ್‌ನ ಪ್ರಶ್ನೆ. ಇದು ತರ್ಕಬದ್ಧವಾಗಿ ಸರಿಯಾದ ಪ್ರಶ್ನೆಯೂ ಹೌದು.

ಇನ್ನು ವಿಶ್ಲೇಷಣೆಯತ್ತ ಗಮನ ಹರಿಸುವುದಾದರೆ, 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯ 4.5 ವರ್ಷಗಳ ಅಂತರದಲ್ಲಿ ಆ ರಾಜ್ಯದಲ್ಲಿ ಸೇರ್ಪಡೆಯಾದ ಒಟ್ಟು ಮತದಾರರ ಸಂಖ್ಯೆ 32 ಲಕ್ಷ. ಆದರೆ, ಕಳೆದ 5 ತಿಂಗಳ ಅವಧಿಯಲ್ಲಿ ಬರೋಬ್ಬರಿ 39 ಲಕ್ಷ ಮತದಾರರ ಸೇರ್ಪಡೆಯಾಗುವುದು ಎಂದರೆ ಸುಲಭದ ಮಾತಲ್ಲ. ಅದೂ, ಇರುವ ಜನಸಂಖ್ಯೆಗಿಂತ ಮತದಾರರ ಸಂಖ್ಯೆ ಹೆಚ್ಚಿರುವುದು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

Advertisements

ಈ ಪ್ರಶ್ನೆಗಳಿಗೆ ಪೂರಕವಾಗಿ, ಚುನಾವಣಾ ಆಯೋಗದಲ್ಲಿ ಬೆಳವಣಿಗೆಗಳು ಮತ್ತು ಬದಲಾವಣೆಗಳು ನಡೆದಿವೆ. 2024ರ ಮಾರ್ಚ್‌ನಲ್ಲಿ ಚುನಾವಣಾ ಆಯೋಗದ ಆಯುಕ್ತ ಅರುಣ್ ಗೋಯೆಲ್ ಅವರು ಹಠಾತ್ತನೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಗೂ ಒಂದು ತಿಂಗಳು ಮುನ್ನ, ಫೆಬ್ರವರಿಯಲ್ಲಿ ಮತ್ತೋರ್ವ ಆಯುಕ್ತರಾಗಿದ್ದ ಅನುಪ್ ಚಂದ್ರ ಪಾಂಡೆ ನಿವೃತ್ತಿಯಾಗಿದ್ದಾರೆ. ಅವರ ನಿವೃತ್ತಿಯ ಬೆನ್ನಲ್ಲೇ ಗೋಯೆಲ್ ರಾಜೀನಾಮೆ ನೀಡಿದ್ದು, ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ ಎಂಬ ಆರೋಪಗಳನ್ನು ಹುಟ್ಟುಹಾಕಿತ್ತು.

ಪಾಂಡೆ ನಿವೃತ್ತಿ ಮತ್ತು ಗೋಯೆಲ್ ರಾಜೀನಾಮೆಯಿಂದಾಗಿ ಮೂವರು ಚುನಾವಣಾ ಆಯುಕ್ತರ ಪೈಕಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರವೇ ಉಳಿದಿದ್ದರು. ಅದೇ ಸಮಯದಲ್ಲಿ, ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿತು. ಮೂವರ ನೇಮಕ ಸಮಿತಿಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟು, ಸರ್ಕಾರದ ಸಚಿವರನ್ನು ಸೇರಿಸಿತು. ಆ ಸಮಿತಿಯಲ್ಲಿ ಪ್ರಧಾನಿ, ಓರ್ವ ಕೇಂದ್ರ ಸಚಿವ ಹಾಗೂ ವಿಪಕ್ಷ ನಾಯಕ ಇರುವಂತೆ ಮಾಡಿತು. ಈ ಬದಲಾವಣೆಯು ಆಡಳಿತಾರೂಢ ಸರ್ಕಾರ ತೀರ್ಮಾನಿಸಿದವರೇ ಚುನಾವಣಾ ಆಯುಕ್ತರಾಗುವಂತೆ ಮಾಡಿತು.

ಲೋಕಸಭಾ ಚುನಾವಣೆಯ ಸಮಯದಲ್ಲಿ ನಡೆದ ಈ ಬದಲಾವಣೆ, ಲೋಕಸಭಾ ಚುನಾವಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತು. ಈ ಪ್ರಶ್ನೆಗಳು, 2024ರ ಮಾರ್ಚ್‌ ಬಳಿಕ ನಡೆದ ಬಹುತೇಕ ಎಲ್ಲ ಚುನಾವಣೆಗಳಲ್ಲಿಯೂ ಮತ್ತಷ್ಟು-ಮೊಗದಷ್ಟು ಗಟ್ಟಿಯಾಗಿಯೂ, ಗಂಭೀರವಾಗಿಯೂ ವ್ಯಕ್ತವಾಗುತ್ತಿವೆ.

ಯಾವುದೇ ಚುನಾವಣೆ ನಡೆದಾಗಲೂ, ಮತದಾನ ನಡೆದ 48 ಗಂಟೆಗಳ ಒಳಗೆ, ಮತದಾನ ಪ್ರಮಾಣ ನಿಖರ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಬೇಕು ಎಂಬುದು ನಿಯಮ. ಆದಾಗ್ಯೂ, ಲೋಕಸಭಾ ಚುನಾವಣೆಯ ಮೊದಲ ಎರಡು ಹಂತದ ಮತದಾನ ನಡೆದಾಗ ಆಯೋಗವು 48 ಗಂಟೆಗಳ ಒಳಗೆ ಮಾಹಿತಿ ಪ್ರಕಟಿಸಲಿಲ್ಲ. ಮಾಹಿತಿ ನೀಡಲು ಬರೋಬ್ಬರಿ 11 ದಿನಗಳನ್ನು ತೆಗೆದುಕೊಂಡಿತು. ಈ ವಿಳಂಬವು ಚುನಾವಣಾ ಅಕ್ರಮಕ್ಕೆ ಎಡೆ ಮಾಡಿಕೊಡುತ್ತಿದೆ ಎಂಬ ಗಂಭೀರ ಆರೋಪಗಳಿಗೆ ಕಾರಣವಾಯಿತು.

ಅಂತೆಯೇ, ಹಲವಾರು ಕ್ಷೇತ್ರಗಳಲ್ಲಿ ಮತದಾನದ ಅಂಕಿಅಂಶ ಮತ್ತು ಮತ ಎಣಿಕೆಯ ಅಂಕಿಅಂಶದಲ್ಲಿಯೂ ಭಾರೀ ವ್ಯತ್ಯಾಸಗಳಿದ್ದವು. ಈ ವ್ಯತ್ಯಾಸವು ಸಾವಿರಾರು ಮತಗಳ ಸಂಖ್ಯೆಯನ್ನು ಒಳಗೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಐವತ್ತು-ನೂರು ಮತಗಳ ಅಂತರದಲ್ಲಿ ಗೆಲುವು-ಸೋಲುಗಳು ನಿರ್ಧಾರವಾಗಿವೆ. ಹೀಗಿರುವಾಗ, ಸಾವಿರಾರು ಮತಗಳ ವ್ಯತ್ಯಾಸವು ಗೆಲುವು-ಸೋಲುಗಳನ್ನೇ ಬದಲಿಸಿದೆ ಎಂಬ ಅಭಿಪ್ರಾಯಕ್ಕೆ ಸಾಕ್ಷಿಯಾಗಿದ್ದವು.

ಲೋಕಸಭಾ ಚುನಾವಣೆಯ ಸಮಯದಲ್ಲೇ ಒಡಿಶಾ ವಿಧಾನಸಭಾ ಚುನಾವಣೆಯೂ ನಡೆಯಿತು. ಅಲ್ಲಿನ ಮತದಾರರು ಲೋಕಸಭೆ ಮತ್ತು ವಿಧಾನಸಭೆಗಾಗಿ ಎರಡು ಇವಿಎಂಗಳ ಮೂಲಕ ತಮ್ಮ ಮತ ಚಲಾಯಿಸಿದ್ದರು. ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣವೂ ಸಮವಾಗಿರಬೇಕಿತ್ತು. ಆದರೂ, ಅಲ್ಲಿ ಲೋಕಸಭೆಗೆ ಚಲಾವಣೆಯಾದ ಮತ್ತು ವಿಧಾನಸಭೆಗೆ ಚಲಾವಣೆಯಾದ ಮತಗಳಲ್ಲಿ ಭಾರೀ ವ್ಯತ್ಯಾಸಗಳಿದ್ದವು.

ಈ ವರದಿ ಓದಿದ್ದೀರಾ?: ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ  

ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಭಾರೀ ಆಡಳಿತ ವಿರೋಧಿ ಅಲೆ ಎದ್ದಿತ್ತು. ರೈತ ಹೋರಾಟ, ಜಾಟ್‌ ಮೀಸಲಾತಿ ಹೋರಾಟಗಳು ಬಿಜೆಪಿ ವಿರುದ್ದ ಆಕ್ರೋಶವನ್ನು ಗಟ್ಟಿಗೊಳಿಸಿದ್ದವು. ಅದು ಲೋಕಸಭಾ ಚುನಾವಣೆಯಲ್ಲಿ ವ್ಯಕ್ತವೂ ಆಗಿತ್ತು. ಆದಾಗ್ಯೂ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿತು. ಮಹಾರಾಷ್ಟ್ರದ್ದೂ ಅದೇ ಕತೆ. ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಸರ್ಕಾರ ರಚಿಸಿದ್ದ ಬಿಜೆಪಿ ವಿರೋಧಿ ಅಲೆ ಎದ್ದಿತ್ತು. ಆ ಕಾರಣದಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಿತು.

ಈ ಗೆಲುವಿಗೆ, ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆ ನಡುವೆ ನೋಂದಾಯಿತವಾದ 39 ಲಕ್ಷ ಮತದಾರರ ಪ್ರಮಾಣವೇ ಕಾರಣವೆಂದು ಹೇಳಲಾಗಿದೆ. ಐದೇ ತಿಂಗಳಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯ ಮತದಾರರ ಸೇರ್ಪಡೆ, ಅದರಲ್ಲೂ ವಯಸ್ಕ ಜನಸಂಖ್ಯೆಗಿಂತ ಹೆಚ್ಚು ಮತದಾರರು ಇರುವುದು ನಕಲಿ ಮತಗಳನ್ನು ಸೇರಿಸಲಾಗಿದೆ ಎಂಬ ಆರೋಪಗಳಿಗೆ ಪುಷ್ಟಿ ನೀಡುತ್ತದೆ.

ಮತಗಳನ್ನು ಎಣಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳೂ ಇವೆ. ನ್ಯೂಸ್ ಲಾಂಡ್ರಿ ನಡೆಸಿದ ತನಿಖೆಯು ಇದನ್ನು ಖಾತ್ರಿ ಪಡಿಸಿದೆ. ಮತಗಳನ್ನು ಎಣಿಸುವಾಗ ‘ಮೇಲಿನಿಂದ ಒತ್ತಡ’ವಿತ್ತು ಎಂದು ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹೆಚ್ಚಿನ ಸಿಬ್ಬಂದಿಗಳು ಹೇಳಿದ್ದಾರೆಂದೂ ನ್ಯೂಸ್‌ ಲಾಂಡ್ರಿ ವರದಿ ಹೇಳುತ್ತದೆ.

ಈ ಎಲ್ಲ ನಿದರ್ಶನ, ಬೆಳವಣಿಗೆಗಳು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳು ಮತ್ತು ಚುನಾವಣಾ ಆಯೋಗದ ಧೋರಣೆ, ನಡೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ರಾಹುಲ್‌ ಗಾಂಧಿ ಅವರ ಆರೋಪ ಮತ್ತು ಪ್ರಶ್ನೆಗಳಿಗೆ ಪುಷ್ಟಿ ನೀಡುತ್ತವೆ. ರಾಹುಲ್‌ ಗಾಂಧಿ ಪ್ರಶ್ನೆಗಳಿಗೆ ಎಲ್ಲ ರೀತಿಯ ಮಾಹಿತಿ ಜೊತೆಗೆ ಉತ್ತರಿಸುವುದಾಗಿ ಚುನಾವಣಾ ಆಯೋಗ ಹೇಳಿಕೊಂಡಿದೆ. ಚುನಾವಣಾ ಆಯೋಗ ಕೇವಲ ಉತ್ತರ ಕೊಟ್ಟರೆ ಸಾಲದು, ಆರೋಪಗಳು, ಕಳವಳಗಳು, ಆತಂಕಗಳನ್ನು ನಿವಾರಿಸುವ ರೀತಿಯಲ್ಲಿ ಪಾರದರ್ಶಕವಾಗಿ ಚುನಾವಣೆಗಳನ್ನು ನಡೆಸಬೇಕು. ಚುನಾವಣಾ ಆಯೋಗದ ಅಂಕಿಅಂಶಗಳನ್ನು ಪಾರದರ್ಶಕವಾಗಿ ಇಡಬೇಕು. ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು. ಚುನಾವಣೆಗಳು ಪಾರದರ್ಶಕತೆಯಿಂದ ನಡೆಯುತ್ತಿವೆ ಎಂಬ ವಿಶ್ವಾಸವನ್ನು ಮತದಾರರಲ್ಲಿ ಮೂಡಿಸಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X