ಈ ದಿನ ಸಂಪಾದಕೀಯ | ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ

Date:

Advertisements
ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ದೀರ್ಘಕಾಲ ವಿರೋಧಿಸಿದ್ದ, ದ್ವಿಪಕ್ಷೀಯ ಮಾತುಕತೆಯೇ ಇರಬೇಕೆಂದು ದೃಢವಾಗಿ ನಿಂತಿದ್ದ ಭಾರತವು ತನ್ನ ದೃಢತೆಯನ್ನು ಸಡಿಲಿಸಿದೆಯೇ? ಪಾಕಿಸ್ತಾನದೊಂದಿಗೆ ಅಂತಾರಾಷ್ಟ್ರೀಯ ಶಕ್ತಿಗಳು ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಟ್ಟಿದೆಯೇ?

ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿದ್ದ ಸಂಘರ್ಷವನ್ನು ವ್ಯಾಪಾರದ ಅಸ್ತ್ರ ಬಳಸಿ ತಡೆದಿದ್ದೇನೆ. ಉಭಯ ರಾಷ್ಟ್ರಗಳ ನಡುವಿನ ಕದನ ವಿರಾಮ ಘೋಷಣೆಯಲ್ಲಿ ತಮ್ಮದೇ ಪ್ರಮುಖ ಪಾತ್ರವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬರೋಬ್ಬರಿ 11 ಬಾರಿ ಪುನರಾವರ್ತಿತವಾಗಿ ಹೇಳಿಕೊಂಡಿದ್ದಾರೆ. ಟ್ರಂಪ್‌ ಹೇಳಿಕೆಯನ್ನು ಪ್ರಧಾನಿ ಮೋದಿಯಾಗಲೀ, ಕೇಂದ್ರ ಸರ್ಕಾರವಾಗಲೀ ಅಲ್ಲಗಳೆದಿಲ್ಲ. ಗಟ್ಟಿ ದನಿಯಲ್ಲಿ ವಿರೋಧಿಸಿಲ್ಲ. ಈ ಕಾರಣಕ್ಕಾಗಿಯೇ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ‘ಟ್ರಂಪ್‌ ಅವರ ಒಂದು ಕರೆಗೆ ಪ್ರಧಾನಿ ಮೋದಿ ಶರಣಾಗಿದ್ದಾರೆ’ ಎಂದು ಹೇಳಿದ್ದಾರೆ. ಅವರೂ ಕೂಡ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

”ಟ್ರಂಪ್ ಅವರು ‘ತಮ್ಮ ಒತ್ತಡದಿಂದಾಗಿ ಮೋದಿ ಸಂಘರ್ಷ ನಿಲ್ಲಿಸಿದ್ದಾರೆ’ ಎಂದು 11 ಬಾರಿ ಸಾರ್ವಜನಿಕವಾಗಿ ಹೇಳಿದ್ದಾರೆ. ನಾನು ಟ್ರಂಪ್ ಹೇಳಿತ್ತಿರುವುದನ್ನು ಮಾತ್ರ ಹೇಳುತ್ತಿದ್ದೇನೆ. ಟ್ರಂಪ್ ಹೇಳಿಕೆಗಳ ಬಗ್ಗೆ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ರಂಪ್ ಸುಳ್ಳು ಹೇಳುತ್ತಿದ್ದಾರೆಂದು ಮೋದಿ ಹೇಳಬೇಕಲ್ಲವೇ? ಆದರೆ, ಅವರು ಹೇಳುವುದಿಲ್ಲ. ಯಾಕೆಂದರೆ, ಅದು ಸತ್ಯ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರ ಹೇಳಿಕೆ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಆರಂಭ ಮತ್ತು ತ್ವರಿತ ಸ್ಥಗಿತಗೊಳ್ಳುವಿಕೆಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮಾತ್ರವಲ್ಲ, ಕಾರ್ಯಾಚರಣೆಯ ಬಳಿಕ ಭಾರತ ಸರ್ಕಾರವು ಹಲವಾರು ಪ್ರಮುಖ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಿಲ್ಲ. ಆ ಪ್ರಶ್ನೆಗಳಿಗೆ ಸರ್ಕಾರದಿಂದ ಭಾರತವು ಉತ್ತರ ಕೇಳುತ್ತಿದೆ.

Advertisements

ಮುಖ್ಯವಾಗಿ, ”ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರ ಸಂಬಂಧದ ಅಸ್ತ್ರ ಬಳಸಿ ನಿಲ್ಲಿಸಿದೆ. ಕದನ ವಿರಾಮ ಘೋಷಿಸುವಂತೆ ಮಾಡಿದೆ. ಈವರೆಗೆ ಯಾರೂ ಕೂಡ ವ್ಯಾಪಾರ ಸಂಬಂಧವನ್ನು ಈ ರೀತಿ ಬಳಸಿರುವುದಿಲ್ಲ. ಆದರೆ, ನಾನು ಬಳಸಿದೆ. ನನ್ನ ಮಾತಿಗೆ ಮೋದಿ (ಭಾರತ), ಪಾಕಿಸ್ತಾನ ಶರಣಾಗುವಂತೆ ಮಾಡಿದೆ” ಎಂದು ಟ್ರಂಪ್ ಪದೆ ಪದೇ ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಪ್ರಧಾನಿ ಮೋದಿ ಮತ್ತು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ, ಟೀಕೆ, ನಿರಾಕರಣೆ ವ್ಯಕ್ತವಾಗಿಲ್ಲ. ಯಾಕಾಗಿ? ಟ್ರಂಪ್‌ ಹೇಳುತ್ತಿರುವುದು ಸತ್ಯವೇ? ಮೋದಿ ಶರಣಾಗಿದ್ದಾರೆ ಎಂಬ ರಾಹುಲ್‌ ಆರೋಪ ನಿಜವೇ?

ಗಂಭೀರ ಪ್ರಶ್ನೆಯೆಂದರೆ, ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ದೀರ್ಘಕಾಲ ವಿರೋಧಿಸಿದ್ದ, ದ್ವಿಪಕ್ಷೀಯ ಮಾತುಕತೆಯೇ ಇರಬೇಕೆಂದು ದೃಢವಾಗಿ ನಿಂತಿದ್ದ ಭಾರತವು ತನ್ನ ದೃಢತೆಯನ್ನು ಸಡಿಲಿಸಿದೆಯೇ? ಪಾಕಿಸ್ತಾನದೊಂದಿಗೆ ಅಂತಾರಾಷ್ಟ್ರೀಯ ಶಕ್ತಿಗಳು ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಟ್ಟಿದೆಯೇ?

ಟ್ರಂಪ್ ಮಾತಿಗೆ ಮಣೆ ಹಾಕಿದ್ದರೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಫಲಿತಾಂಶವೇನು? ಕಾರ್ಯಾಚರಣೆಯು ತನ್ನ ಘೋಷಿತ ಉದ್ದೇಶವನ್ನು ಸಾಧಿಸಿದೆಯೇ? ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿದ್ದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಸೇನೆ ದಾಳಿ ಮಾಡಿತು. ಆದರೆ, ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನಾಶ ಮಾಡಿರುವುದಕ್ಕೆ ಅಥವಾ ಹಲವು ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂಬುದನ್ನು ಅಧಿಕೃತ ದಾಖಲೆ, ಪುರಾವೆಗಳಿಲ್ಲ. ಇರುವ ಪುರಾವೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿಲ್ಲ ಎಂದು 38 ವರ್ಷಗಳ ಕಾಲ ಭಾರತೀಯ ಗಡಿಗಳಲ್ಲಿ ಸೇವೆ ಸಲ್ಲಿಸಿರುವ ಗಡಿ ಭದ್ರತಾ ಪಡೆಯ ಮಾಜಿ ಹೆಚ್ಚುವರಿ ಮಹಾನಿರ್ದೇಶಕ ಸಂಜೀವ್ ಕೃಷ್ಣನ್ ಸೂದ್ ಅವರು ‘ದಿ ವೈರ್‌’ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.

ಸಂಜೀವ್ ಅವರ ಕಳವಳವು 2016ರ ಉರಿ ಸರ್ಜಿಕಲ್ ದಾಳಿ ಮತ್ತು 2019ರ ಬಾಲಕೋಟ್ ದಾಳಿಯ ನಂತರವೂ ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾರತದಲ್ಲಿ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಇದನ್ನು ಓದಿದ್ದೀರಾ?: ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ

ಭಾರತ-ಪಾಕ್ ಸಂಘರ್ಷದಲ್ಲಿ ಪಾಕಿಸ್ತಾನಕ್ಕಿಂತ ಭಾರತವೇ ಹೆಚ್ಚು ಮಾನವ ನಷ್ಟ ಮತ್ತು ಅಪಾಯವನ್ನು ಎದುರಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಗಡಿ ಭಾಗದ ಭಾರತೀಯರು ಸಾವು-ನೋವು, ಆಸ್ತಿ ನಷ್ಟ ಹಾಗೂ ಅಪಾಯಗಳನ್ನು ಎದುರಿಸಿದರು. ಗಡಿ ಭಾಗದ ಜನರಿಗೆ ಪರಿಹಾರ ಮತ್ತು ಭವಿಷ್ಯದ ರಕ್ಷಣೆಗೆ ಖಾತ್ರಿಗಳೇನು?

ಸಂಘರ್ಷದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮೌನವು ಭಾರತವನ್ನು ಏಕಾಂಗಿಯಾಗಿಸಿದೆ. ಈ ಪರಿಸ್ಥಿತಿಯು 1971 ಮತ್ತು 1999ರ ಯುದ್ಧದ ಸಮಯದಲ್ಲಿ ಭಾರತವು ಜಾಗತಿಕ ಅಭಿಪ್ರಾಯವನ್ನು ಸಮರ್ಥವಾಗಿ ರೂಪಿಸಿದ್ದಕ್ಕೆ ತದ್ವಿರುದ್ಧವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ರಷ್ಯಾದಿಂದ ಮೌಖಿಕ ಬೆಂಬಲವನ್ನು ಹೊರತುಪಡಿಸಿ, ಪ್ರಮುಖ ಜಾಗತಿಕ ಶಕ್ತಿಗಳಿಂದ ಬೆಂಬಲ ಪಡೆಯಲು ಭಾರತಕ್ಕೆ ಸಾಧ್ಯವಾಗಿಲ್ಲ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಪಾಕಿಸ್ತಾನವು ಚೀನಾ ಮತ್ತು ಟರ್ಕಿಯಿಂದ ಬಹಿರಂಗ ಬೆಂಬಲ ಪಡೆಯಿತು. ಪಹಲ್ಗಾಮ್ ದಾಳಿ ನಡೆದ ಬಳಿಕ ಪ್ರತಿದಾಳಿಗೆ 2 ವಾರ ಸಮಯ ತೆಗೆದುಕೊಂಡ ಭಾರತ, ತನ್ನ ಪರವಾಗಿ ಜಾಗತಿಕ ಅಭಿಪ್ರಾಯ ರೂಪಿಸುವಿಲ್ಲ ವಿಫಲವಾಯಿತು. ಈಗ, ಕೇಂದ್ರ ಸರ್ಕಾರವು ವಿವಿಧ ದೇಶಗಳಿಗೆ ಕಳುಹಿಸಿರುವ ಸರ್ವಪಕ್ಷ ನಿಯೋಗಗಳು ಕೂಡ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಈ ವೈಫಲ್ಯ ಮತ್ತು ಹಿಂದುಳಿಯುವಿಕೆಗೆ ಕಾರಣವೇನು?

ಮತ್ತೊಂದು ತುರ್ತು ಮತ್ತು ಪುನರಾವರ್ತಿತ ಪ್ರಶ್ನೆ – ಪಹಲ್ಗಾಮ್ ಹತ್ಯಾಕಾಂಡ ನಡೆಯಲು, ಭಯೋತ್ಪಾದಕರು ಸಾರಿಗೆ ಸಂಪರ್ಕವೇ ಇಲ್ಲದ ಪ್ರದೇಶಕ್ಕೆ ಬರಲು ಸಾಧ್ಯವಾದದ್ದು ಹೇಗೆ? ಭಾರತದ ಗುಪ್ತಚರ ಸಂಸ್ಥೆಗಳು ಭಯೋತ್ಪಾದಕ ದಾಳಿಯ ಕುರಿತು ಮಾಹಿತಿ ಕಲೆ ಹಾಕುವಲ್ಲಿ ಏಕೆ ವಿಫಲವಾದವು? ಭಯೋತ್ಪಾದಕರು ಹೇಗೆ ತಪ್ಪಿಸಿಕೊಂಡರು? ಪಹಲ್ಗಾಮ್‌ನಲ್ಲಿ ಭದ್ರತೆ ಯಾಕೆ ಇರಲಿಲ್ಲ? ಗುಪ್ತಚರ ಮತ್ತು ಭದ್ರತಾ ಲೋಪಗಳು ಅಕ್ಷಮ್ಯ. ಲೋಪಗಳಿಗೆ ಹೊಣೆ ಯಾರು?

ದುರಂತಗಳು ಮರುಕಳಿಸುತ್ತಿರುವಾಗ, ಹಿಂದಿನ ವೈಫಲ್ಯ, ಲೋಪಗಳಿಂದ ಪಾಠ ಕಲಿಯಲಾಗುತ್ತಿದೆಯೇ? ಭಾರತವು ಅಪಾರ ಜೀವಹಾನಿ, ನಷ್ಟವನ್ನು ಅನುಭವಿಸುವಾಗ ಹೊರಿಗಿನ ಪ್ರಭಾವಕ್ಕೆ ಭಾರತವು ಒಳಗಾಗುತ್ತಿದೆಯೇ? ಹೊರಗಿನ ಶಕ್ತಿಗಳ ಬೆದರಿಕೆಗೆ ಭಾರತವು ಶರಣಾಗುತ್ತಿದೆಯೇ? ಅಮೆರಿಕ ಎದುರು ಮೋದಿ ಶರಣಾಗಿದ್ದಾರೆಂಬ ಆರೋಪ ಸತ್ಯವೇ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯುವುದು ಪ್ರತಿಯೊಬ್ಬ ಭಾರತೀಯರ ಹಕ್ಕು. ಇದಕ್ಕೆ ಸರ್ಕಾರ ಉತ್ತರಿಸಲೇಬೇಕಿದೆ. ದೇಶಭಕ್ತಿಯ ಉತ್ಸಾಹವು ಇಂತಹ ಪ್ರಶ್ನೆಗಳನ್ನು ಬದಿಗೆ ಸರಿಸಿಬಿಟ್ಟರೆ, ಭವಿಷ್ಯದ ಭದ್ರತೆಗೆ ಅಪಾಯ ಉಂಟುಮಾಡುತ್ತದೆ. ಆತ್ಮಾವಲೋಕನವು ಮುಂದಿನ ಅಪಾಯಗಳನ್ನು ತಡೆಯಲು ನೆರವಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X