ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ

Date:

Advertisements
ಬೆಂಗಳೂರು ಬೆಳೆಯುತ್ತಿರುವ ವೇಗ ನೋಡಿದರೆ, ಈ ನಗರಕ್ಕೆ ಯಾವುದೇ ಯೋಜನೆ, ದೂರದೃಷ್ಟಿ ಇಲ್ಲ. ಇಲ್ಲಿರುವ ಗುರಿ ಕೇವಲ ಬಂಡವಾಳ, ಹಣ, ಲಾಭ. ಈ ಹಣಬಾಕ ಸಂಸ್ಕೃತಿ ಇಡೀ ನಗರವನ್ನು ಹಾಳುಮಾಡುತ್ತಿದೆ

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಹಲವಾರು ರೀತಿಯ ಅದ್ವಾನ ಸೃಷ್ಟಿಸಿದೆ. ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡವೊಂದು ಕುಸಿದುಬಿದ್ದು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಿವೆ. ಮಳೆ ನಿರ್ವಹಣೆ ಕುರಿತು ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಆರೋಪ, ವಾಗ್ದಾಳಿ ನಡೆಸುತ್ತಿದೆ. ಸರ್ಕಾರ ಸಮಜಾಯಿಷಿ ನೀಡುತ್ತಿದೆ.

ಇದು, ಇವತ್ತು-ನಿನ್ನೆಯ ಕತೆಯಲ್ಲ. ವಿಪರೀತ ಬರ ಅಥವಾ ವಿಪರೀತ ಮಳೆ – ಎರಡೂ ಪ್ರಸ್ತುತ ಸಂದರ್ಭದಲ್ಲಿ ಎದುರಾಗುತ್ತಿರುವ ಪ್ರಾಕೃತಿಕ ಪ್ರವೃತ್ತಿ. ಇದು ಮುಂದಿನ ದಿನಗಳಲ್ಲಿ ನಾವು ಎದುರಿಸಬೇಕಿರುವ ಶಾಶ್ವತ ಸವಾಲು. ಇದನ್ನು, ತಡೆಯಲು ಸರ್ಕಾರಗಳಿಂದ ಅದು ಸಾಧ್ಯವಿಲ್ಲ. ಯಾಕೆಂದರೆ, ಸರ್ಕಾರಗಳ ಬಳಿ ಅಂತಹ ಯಾವುದೇ ಯೋಜನೆಗಳಿಲ್ಲ. ಅಭಿವೃದ್ದಿ ಯಾವಾಗಲು ಪ್ರಕೃತಿಯೊಂದಿಗೆ ಸಾಗಬೇಕು. ಇಂದಿನ ಅಭಿವೃದ್ಧಿಗಳು ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿವೆ. ಪರಿಣಾಮ, ಪ್ರಾಕೃತಿಕ ವಾತಾವರಣ ಬದಲಾಗುತ್ತಿದೆ. ಮಳೆ, ಚಳಿ, ಬೇಸಿಗೆಯ ಕಾಲಗಳೂ ಬದಲಾಗುತ್ತಿವೆ. ಈಗ ಸುರಿಯುತ್ತಿರುವ ಮಳೆಯನ್ನು ನಾವು ಅಕಾಲಿಕವೆಂದರೂ, ಅದು ಬದಲಾಗ ಕಾಲಮಾನದಲ್ಲಿ ಸುರಿಯುತ್ತಿರುವ ಮಳೆ ಎಂಬುದು ವಾಸ್ತವ.

ಪ್ರಾಕೃತಿಕ ವಿದ್ಯಮಾನಗಳು ಒಮ್ಮೆ ಬದಲಾದರೆ, ಹಲವು ವರ್ಷಗಳ ಕಾಲ ಅದು ಹಾಗೆಯೇ ಮುಂದುವರೆಯುತ್ತಿದೆ. ಸರ್ಕಾರಗಳು ಐದು ವರ್ಷಗಳಿಗೊಮ್ಮೆ ಬದಲಾಗಬಹುದು ಅಥವಾ ಹಿಂಬಾಗಿಲಿನ ರಾಜಕಾರಣದಿಂದ 5 ವರ್ಷಕ್ಕೂ ಮುನ್ನವೇ ಬದಲಾಗಬಹುದು. ಆದರೆ, ಪ್ರಕೃತಿ ಹಾಗಲ್ಲ. ಅದು ನಿರಂತರವಾಗಿ ಘಟಿಸುವ ವಿದ್ಯಮಾನ. ಪ್ರಕೃತಿಯನ್ನು ಎದುಹಾಕಿಕೊಂಡು ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಕೈಗಾರಿಕೀಕರಣ, ನಗರೀಕರಣ ನೈಸರ್ಗಿಕ ವಾತಾವರಣವನ್ನೇ ಬದಲಿಸುತ್ತಿದೆ. ಅದರ ಪರಿಣಾಮವನ್ನು ಬೆಂಗಳೂರಿಗರು ಎದುರಿಸುತ್ತಿದ್ದಾರೆ.

Advertisements

ಹಲವು ದಶಕಗಳ ಹಿಂದೆ ನಿರ್ಮಾಣವಾದ ಬೆಂಗಳೂರು ಬೆಳೆಯುತ್ತಲೇ ಇದೆ. ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದೆ. ಬೆಳೆಯುತ್ತಿರುವ ನಗರಕ್ಕೆ ಯಾವುದೇ ಮುನ್ನೋಟವಿಲ್ಲ. ದೂರುದೃಷ್ಟಿಯಲ್ಲ. ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಅಂದಾಜು ಇಲ್ಲ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಗೊಂಡ ಯೋಜನೆಗಳೂ ಇಲ್ಲ. ಭವಿಷ್ಯವಿರಲಿ, ವರ್ತಮಾನದ ಮೇಲಿನ ಗಮನವೂ ಬೆಂಗಳೂರನ್ನು ಆಳುತ್ತಿರುವ ಸರ್ಕಾರಕ್ಕಾಗಲೀ, ಆಕ್ರಮಿಸಿಕೊಂಡಿರುವ ಉದ್ಯಮಗಳಿಗಾಗಲೀ ಇಲ್ಲ. ಇತ್ತೀಚೆಗಷ್ಟೇ ಬೆಳೆದು ನಿಂತ ಮಾನ್ಯತಾ ಟೆಕ್‌ ಪಾರ್ಟ್‌, ಸಿಲ್ಕ್‌ಬೋರ್ಡ್‌, ಬೆಳ್ಳಂದೂರಿನಂತಹ ಐಟಿ, ಕೈಗಾರಿಕಾ ಹಬ್‌ಗಳೇ ಮಳೆ ಅಬ್ಬರಕ್ಕೆ ಹೆಚ್ಚಾಗಿ ತುತ್ತಾಗುತ್ತಿವೆ. ಅಂದರೆ, ವರ್ತಮಾನದ ಅರಿವೂ ಇಲ್ಲದೆ, ಆ ಹಬ್‌ಗಳು ತಲೆ ಎತ್ತಿವೆ.

ಪ್ರಸ್ತುತ, ಮಳೆ ಸೃಷ್ಠಿಸಿರುವ ಅವಾಂತರದ ಕಾರಣಕ್ಕೆ ಆಡಳಿತಾರೂಢ ಕಾಂಗ್ರೆಸ್‌ಅನ್ನು ವಿಪಕ್ಷ ಬಿಜೆಪಿ-ಜೆಡಿಎಸ್‌ ಮೈತ್ರಿ ದೂಷಿಸುತ್ತಿವೆ. ಈ ಹಿಂದೆಯೂ ಇಂಥದ್ದೇ ಅವಾಂತರ ಸೃಷ್ಠಿಯಾಗಿತ್ತು. ಆಗ ಬಿಜೆಪಿ ಅಧಿಕಾರದಲ್ಲಿತ್ತು. ಯಡಿಯೂರಪ್ಪ-ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‌ ದೂಷಿಸಿತ್ತು. ಮಳೆ ಅಥವಾ ಬರದ ನಿರ್ವಹಣೆಯ ಕಾರಣಕ್ಕಾಗಿ ಅಧಿಕಾರದಲ್ಲಿದ್ದವರನ್ನು ವಿಪಕ್ಷಗಳು ದೂರುವುದು ಸಹಜ. ಆದರೆ, ಈ ಆರೋಪಗಳು ನಿರಂತರವಾಗಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿವೆಯೇ? ಇಲ್ಲ.

ನಗರವೊಂದು ಹೇಗೆ ನಿರ್ಮಾಣವಾಗಬೇಕು. ನಗರ ಜೀವನ ಪ್ರಕೃತಿಗೆ ಪೂರಕವಾಗಿ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ‘ಯುಎಇ’ನ ಅಬುದಾಬಿ ನಗರ. ಪ್ರಕೃತಿಯ ಸವಾಲನ್ನು ನಿಭಾಯಿಸುವ ರೀತಿಯಲ್ಲಿ ಆ ನಗರ ನಿರ್ಮಾಣವಾಗಿದೆ. ಆದರೂ, ಕಳೆದ ವರ್ಷ ಸುರಿದ ಭಾರೀ ಮಳೆ ಅಬುದಾಬಿಯನ್ನೇ ಅಲುಗಾಡಿಸಿತು. ಅಂದರೆ, ಆ ನಗರಕ್ಕಿಂತಲೂ ಉತ್ತಮವಾಗಿ ಯೋಜಿಸಿ ನಗರವನ್ನು ಕಟ್ಟಬೇಕಿದೆ.

ಆದರೆ, ಬೆಂಗಳೂರು ಬೆಳೆಯುತ್ತಿರುವ ಪರಿ ನೋಡಿದರೆ, ಈ ನಗರಕ್ಕೆ ಯಾವುದೇ ಯೋಜನೆ, ದೂರದೃಷ್ಟಿ ಇಲ್ಲ. ಇಲ್ಲಿರುವ ಗುರಿ ಕೇವಲ ಬಂಡವಾಳ, ಹಣ, ಲಾಭ. ಈ ಹಣಬಾಕ ಸಂಸ್ಕೃತಿ ಇಡೀ ನಗರವನ್ನು ಹಾಳುಮಾಡುತ್ತಿದೆ.

ಒಂದು ನಗರ ನಿರ್ಮಾಣವಾಗುವಾಗಲೇ ಅಥವಾ ಬೆಳೆಯುವಾಗಲೇ ಪ್ರಕೃತಿಗೆ ಪೂರಕವಾಗಿ ನಗರವನ್ನು ಹೇಗೆ ಕಟ್ಟುತ್ತೇವೆ ಎಂಬುದರ ಬಗ್ಗೆ ಕನಿಷ್ಠ 25 ವರ್ಷ ಯೋಜಿಸಿ, ನೀಲನಕ್ಷೆ ಸಿದ್ದಪಡಿಸಬೇಕು. ಜೊತೆಗೆ, ಕನಿಷ್ಠ 500 ವರ್ಷಗಳ ದೂರದೃಷ್ಟಿ ಇರಬೇಕು. 500 ವರ್ಷಗಳ ಬಳಿಕವೂ ನಗರದಲ್ಲಿ ಏನಾಗಲಿದೆ ಎಂಬುದನ್ನು ವೈಜ್ಞಾನಿಕವಾಗಿ ಅಂದಾಜಿಸಿ ನಗರವನ್ನು ಕಟ್ಟಬೇಕು. ವಿಪರ್ಯಾಸ ಎಂದರೆ, ಅಷ್ಟೊಂದು ಯೋಜಿಸಲು ಯಾರೂ ಸಿದ್ದರಿಲ್ಲ.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | 9 ತಿಂಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 455 ಪೋಕ್ಸೊ ಪ್ರಕರಣ; ಹಲ್ಲಿಲ್ಲದ ಹಾವಾಯಿತೇ ಕಾಯ್ದೆ?

ಹಿಂದೆ, ರಾಜರ ಆಳ್ವಿಕೆಯಲ್ಲಿ ಅವರಿಗೆ ಭವಿಷ್ಯದ ಅರಿವಿರಲಿಲ್ಲ. ಅವರೆಲ್ಲರೂ ನಗರ ನಿರ್ಮಾಣದ ವೇಳೆ, ಪ್ರಕೃತಿಗೆ ಅನುಗುಣವಾಗಿ ಕೆರೆ, ಕಟ್ಟಿದ್ದಾರೆ. ಆ ವ್ಯವಸ್ಥೆ 400, 500 ವರ್ಷಗಳ ಕಾಲ ನಗರಗಳನ್ನು ಮುನ್ನಡೆಸಿದೆ. ಅದಕ್ಕೆ ಕಾರಣವಿಷ್ಟೇ, ಅದು ಸಂಪೂರ್ಣವಾಗಿ ಪ್ರಕೃತಿಗೆ ಪೂರಕವಾಗಿತ್ತು. ಆ ಕೆರೆಗಳನ್ನು ಎಲ್ಲೆಂದರಲ್ಲಿ ನಿರ್ಮಿಸಿದ್ದಲ್ಲ. ಮಳೆ ನೀರು ಹೇಗೆ ಹರಿಯುತ್ತದೆಯೋ ಅದೇ ಜಾಡಿನಲ್ಲಿ ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದರು.

ಆದರೆ, ಈಗ ಆ ಕೆರೆಗಳು ಹಾಗೂ ಅವುಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಹಳ್ಳ, ತೊರೆ, ಕಾಲುವೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಮುಚ್ಚಲಾಗಿದೆ. ಮಳೆ ನೀರು ಹರಿದು ಹೋಗಲು ಅವಕಾಶವೇ ಇಲ್ಲದಂತೆ ಎಲ್ಲ ಮೂಲಗಳನ್ನೂ ನಾಶ ಮಾಡಲಾಗಿದೆ. ಅಂದ ಮೇಲೆ, ಮಳೆ ನೀರು ಹೇಗೆ, ಎಲ್ಲಿಗೆ ಹರಿಯಲು ಸಾಧ್ಯ. ಮಳೆ ನೀರು ರಸ್ತೆಗಳನ್ನು ಆವರಿಸಿಕೊಳ್ಳುತ್ತದೆ. ಮನೆಗಳಿಗೆ ನುಗ್ಗುತ್ತದೆ. ಅವಾಂತರಗಳನ್ನು ಸೃಷ್ಠಿಸುತ್ತದೆ.

ಈ ಸಂಕಷ್ಟ ಬೆಂಗಳೂರಿನ ಮಾತ್ರ ಸೀಮಿತವಲ್ಲ. ಇತ್ತೀಚೆಗಷ್ಟೇ ಬೃಹದಾಕಾರವಾಗಿ ತಲೆ ಎತ್ತುತ್ತಿರುವ ಇತರ ನಗರಗಳಲ್ಲಿಯೂ ಸಮಸ್ಯೆಗಳು ಈಗಾಗಲೇ ತಲೆದೋರುತ್ತಿವೆ. ಆ ನಗರಗಳಿಗೂ ದೂರದೃಷ್ಟಿ ಇಲ್ಲ. ಜೊತೆಗೆ, ಹಳ್ಳಿಗಳೂ ಕೂಡ ಜಲಾವೃತವಾಗುತ್ತಿವೆ ಎಂಬುದು ದುರದೃಷ್ಟಕರ. ಹಳ್ಳಿಗಳಲ್ಲಿಯೂ ಹಳ್ಳ, ತೊರೆಗಳು ಒತ್ತವರಿಯಾಗುತ್ತಿವೆ. ನೀರು ಹರಿವ ಜಾಡು ಕಾಣೆಯಾಗುತ್ತಿದೆ. ನೀರು ಜಮೀನುಗಳಿಗೆ ನುಗ್ಗಿ ಅತಿವೃಷ್ಟಿ ಎದುರಾಗುತ್ತಿದೆ. ಈ ಅವಾಂತರ ಸೃಷ್ಟಿಸಿದ್ದು, ಪ್ರಕೃತಿಯಲ್ಲ ನಾವುಗಳೇ. ನಾವು ಅಂದರೆ, ಕೇವಲ ಸರ್ಕಾರ ಮಾತ್ರವಲ್ಲ, ಪ್ರತಿಯೊಬ್ಬರೂ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X