ಕನ್ನಡ ನಾಡು ಮತ್ತು ಕನ್ನಡ ಭಾಷೆಯ ಭವಿಷ್ಯದ ಕುರಿತು ಗಂಭೀರವಾಗಿ ಚಿಂತನೆ ನಡೆಸದ ಹೊರತು, ಇಂತಹ ಸಮ್ಮೇಳನಗಳಿಂದ ಬೇರೇನೂ ಉಪಯೋಗವಿಲ್ಲ. ಇನ್ನಾದರೂ ಕನ್ನಡ ಸಾಹಿತ್ಯ ಪರಿಷತ್ತು ಎಚ್ಚೆತ್ತುಕೊಳ್ಳಲಿ, ಸಮ್ಮೇಳನವನ್ನು ಅದರ ಆಶಯದೊಂದಿಗೆ ಯಶಸ್ಸು ಮಾಡಲು ಮುಂದಾಗಲಿ.
ಮಂಡ್ಯದಲ್ಲಿ ಗೊ.ರು ಚನ್ನಬಸಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಶುಕ್ರವಾರ ನಡೆದ ವಿಧ್ಯುಕ್ತ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮದ ಮೂಲಕ ಸಮ್ಮೇಳನದ ಉದ್ಘಾಟನೆಯೂ ಆಗಿದೆ. ಮಂಡ್ಯ ನಗರದಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಆಕರ್ಷಕ ವಿದ್ಯುತ್ ದೀಪಗಳು, ಕಮಾನುಗಳು ಜನರನ್ನು ಆಕರ್ಷಿಸುತ್ತಿವೆ. ಜಾತ್ರೆಯ ಸಂಭ್ರಮ ಮನೆಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಕುರಿತು ಬಿರುಸಿನ ಭಾಷಣ ಮಾಡಿದ್ದಾರೆ. ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರು 21 ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಅನುಷ್ಠಾನಕ್ಕೆ ತರಬೇಕು ಎಂದೂ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಒತ್ತಾಯಿಸಿದ್ದಾರೆ.
ಸಮ್ಮೇಳನಾಧ್ಯಕ್ಷರ ಒತ್ತಾಯಗಳು, ಆಶಯಗಳು ಇಡೀ ನಾಡನ್ನು ಪ್ರತಿನಿಧಿಸುತ್ತಿವೆ. ಹತ್ತಾರು ವರ್ಷಗಳಿಂದ ಕನ್ನಡ ನಾಡು ಕೇಳುತ್ತಿರುವ ಮೂಲಭೂತ ಅಂಶಗಳು ಅವರ ಮಾತಿನಲ್ಲಿ ಪ್ರತಿಫಲನಗೊಂಡಿವೆ. ಆದರೆ, ಸಮ್ಮೇಳನ ನಡೆಯುತ್ತಿರುವ ಚಹರೆಯನ್ನು ಗಮನಿಸಿದರೆ, ಸಮ್ಮೇಳನಾಧ್ಯಕ್ಷರ ಆಶಯಗಳು ಭಾಷಣಕ್ಕೆ ಸೀಮಿತವಾಗಿ, ಸಂಭ್ರಮದೊಳಗೆ ಕಳೆದುಹೋಗುತ್ತವೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆಗಳು ಸಂಭ್ರಮಕ್ಕೆ ಮಾತ್ರ ಸೀಮಿತವಲ್ಲ. ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಕನ್ನಡದ ಬಗೆಗಿನ ಹಲವಾರು ಚರ್ಚೆಗಳು ನಡೆಯುತ್ತವೆ. ಹಕ್ಕೊತ್ತಾಯಗಳು ಕೇಳಿಬರುತ್ತವೆ. ಅವುಗಳಿಗೆ ಸರ್ಕಾರಗಳು ಕಿಂಚಿತ್ತಾದರೂ ಕಿವಿಗೊಡುತ್ತವೆ. ಆದರೆ, ಸಾಹಿತ್ಯ ಸಮ್ಮೇಳನಗಳು ಏನಾಗುತ್ತಿವೆ, ಸಮ್ಮೇಳನಗಳು ತಮ್ಮ ಆಶಯ, ಗುರಿ, ಉದ್ದೇಶಗಳನ್ನೇ ಕಳೆದುಕೊಳ್ಳುತ್ತಿವೆಯೇ ಎಂಬ ಪ್ರಶ್ನೆಗಳು ಎದುರಾಗುತ್ತಿವೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಹೆಚ್ಚಾಗಿ ಕನ್ನಡದ ಸಾಹಿತ್ಯದ ಬಗ್ಗೆ ಅವಲೋಕನಗಳು ನಡೆಯಬೇಕು. ಹೊಸ ಸಾಹಿತ್ಯ ರಚನೆಗೆ ಕೊಡಬೇಕಾದ ಆದ್ಯತೆಗಳ ಬಗ್ಗೆ ಚರ್ಚೆಗಳು ನಡೆಯಬೇಕು. ಹೊಸ ತಲೆಮಾರಿನ ಸಾಹಿತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಿಂತನೆಗಳು ನಡೆಯಬೇಕು. ಕನ್ನಡ ಸಾಹಿತ್ಯಕ್ಕೆ ಹಿರಿಯರು ಹಾಕಿಕೊಟ್ಟ ಬುನಾದಿಗಳ ಬಗ್ಗೆ ಗಮನ ಹರಿಸಬೇಕು. ಕನ್ನಡ ಸಂಸ್ಕೃತಿಯಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಕನ್ನಡ ಸಾಂಸ್ಕೃತಿಕ ರಂಗದ ಬೆಳವಣಿಗೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಕನ್ನಡ ಭಾಷೆಯ ಬೆಳವಣಿಗೆ, ಕನ್ನಡ ಮಾಧ್ಯಮ, ಕನ್ನಡ ನೆಲಕ್ಕೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕು.
ಆದರೆ, ಕನ್ನಡದ ಸಾಹಿತ್ಯ, ಭಾಷೆ, ನೆಲದ ಬಗ್ಗೆ ಗಂಭೀರ ಚರ್ಚೆ, ಚಿಂತನೆಗಳನ್ನು ಹುಟ್ಟುಹಾಕಬೇಕಾದ ಸಮ್ಮೇಳನವು ತನ್ನ ಹೆಸರನ್ನೇ ಬದಲಿಸಿಕೊಳ್ಳುತ್ತಿದೆ. ‘ನುಡಿ ಹಬ್ಬ’, ‘ನುಡಿ ಜಾತ್ರೆ’, ‘ಅಕ್ಷರ ಜಾತ್ರೆ’ ಎಂಬ ಹೆಸರಿನಲ್ಲಿ ಸಾಹಿತ್ಯ ಸಮ್ಮೇಳನವು ಜಾತ್ರೆಯಾಗಿ ಬದಲಾಗುತ್ತಿದೆ. ತನ್ನ ಘನತೆ-ಗಂಭೀರತೆಯನ್ನು ಕಳೆದುಕೊಳ್ಳುತ್ತಿದೆ. ಸಂಭ್ರಮಕ್ಕೆ ಸೀಮಿತವಾಗುತ್ತಿದೆ.
ಸುಮಾರು 30 ಕೋಟಿ ರೂ. ಖರ್ಚು ಮಾಡಿ ಈ ಬಾರಿಯ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೃಹತ್ ಮುಖ್ಯ ವೇದಿಕೆ, ಎರಡು ಸಮಾನಾಂತರ ವೇದಿಕೆಗಳು, ಪುಸ್ತಕ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ಸಾರ್ವಜನಿಕರಿಗೆ ಬೃಹತ್ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಸ್ಥಳಕ್ಕೆ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಾಧ್ಯಮದವರಿಗೆ ರಾಜಾತಿಥ್ಯವನ್ನೇ ನೀಡಲಾಗುತ್ತಿದೆ. ಸಮ್ಮೇಳನಕ್ಕೆ ಬರುವವರಿಗೆ ನಾನಾ ರೀತಿಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ.
ಇದೆಲ್ಲವೂ ಏತಕ್ಕಾಗಿ? ಶುಕ್ರವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರು ಹಲವಾರು ಗಂಭೀರ ವಿಚಾರಗಳ ಬಗ್ಗೆ ಗಮನ ಸೆಳೆದರು. ಕನ್ನಡ ಶಾಲೆಗಳ ಉಳಿವು, ಹಿಂದಿ ಹೇರಿಕೆ, ಕನ್ನಡ ಸಂಸ್ಕೃತಿ, ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯಂತಹ ನಾನಾ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು. ಅವರ ಒಳನೋಟವು ಕರ್ನಾಟಕ, ಕನ್ನಡದ ವಿಚಾರದಲ್ಲಿ ಕೇಂದ್ರ ಮತ್ತು ಸರ್ಕಾರಕ್ಕೆ ನಾನಾ ರೀತಿಯ ಎಚ್ಚರಿಕೆಗಳನ್ನು, ಸಲಹೆಗಳನ್ನು, ಹಕ್ಕೊತ್ತಾಯಗಳನ್ನು ಒಳಗೊಂಡಿತ್ತು.
ಆದರೆ, ಅವರ ಗಂಭಿರ ಚಿಂತನೆಗಳನ್ನು ಆಲಿಸಿದವರು ಯಾರು? ಅವರು ತಮ್ಮ ಭಾಷಣ ಆರಂಭಿಸುವ ವೇಳೆಗೆ ಸಭಾಂಗಣದಲ್ಲಿ ಅರ್ಧ ಕುರ್ಚಿಗಳು ಖಾಲಿಯಾಗಿದ್ದವು. ಸಮ್ಮೇಳನಾಧ್ಯಕ್ಷರೂ ಸೇರಿದಂತೆ ಹಲವರು ವ್ಯಕ್ತಪಡಿಸಿದ ಚಿಂತನೆಗಳನ್ನು ಸಮ್ಮೇಳನದ ಜಾತ್ರೆಯ ಸಂಭ್ರಮವು ಗೌಣವಾಗಿಸಿದೆ. ಸಮ್ಮೇಳನದ ಆಯೋಜಕರೂ ಸಂಭ್ರಮದಲ್ಲಿಯೇ ಮುಳುಗಿದ್ದಾರೆ.
ಸಮ್ಮೇಳನ, ‘ಜನ ಮರುಳೋ – ಜಾತ್ರೆ ಮರುಳೋ’ ಎಂಬಂತೆ ಭಾಸವಾಗುತ್ತಿದೆ. ಸಮ್ಮೇಳನವು ಜನ ಜಾತ್ರೆಯಾಗಿದೆ. ಭಾರೀ ಸಂಖ್ಯೆಯ ಜನರಿದ್ದರೂ ಸಮ್ಮೇಳನದ ಮುಖ್ಯ ವೇದಿಕೆಯ ಆವರಣದಲ್ಲಿಯೇ ಕೇಳುಗರು ಕಾಣೆಯಾಗಿದ್ದಾರೆ. ಸಮಾನಾಂತರ ವೇದಿಕೆಗಳಲ್ಲಂತೂ, ಕೇಳುಗರ ಸಂಖ್ಯೆಗಿಂತ ವೇದಿಕೆ ಮೇಲಿನ ಭಾಷಣಕಾರರ ಸಂಖ್ಯೆಯೇ ಹೆಚ್ಚಾಗಿದೆ. ಸಭಾಂಗಣದ ಆವರಣಗಳು ಕೇಳುಗರಿಲ್ಲದೆ ಖಾಲಿಯಾಗಿವೆ. ಖಾಲಿ ಕುರ್ಚಿಗಳು ಸಾಹಿತಿಗಳ, ಭಾಷಣಕಾರರ ಭಾಷಣಗಳನ್ನು ಆಲಿಸುತ್ತಿವೆ. ಜನರು ವೇದಿಕೆ ಆಚೆಗಿನ ಆವರಣದಲ್ಲಿ ಅಡ್ಡಾಡುತ್ತಿದ್ದಾರೆ. ಸೆಲ್ಫಿ, ವೈವಿಧ್ಯಮಯ ಆಹಾರ, ಸುತ್ತಾಟಗಳಲ್ಲಿ ಮುಳುಗಿದ್ದಾರೆ. ಕೆಲವು ಸಾಹಿತ್ಯಾಸಕ್ತರು ಮಾತ್ರ ಪುಸ್ತಕ ಮಳಿಗೆಗಳತ್ತ ಚಿತ್ತ ಹರಿಸುತ್ತಿದ್ದಾರೆ. ಒಂದಷ್ಟು ಪುಸ್ತಕಗಳನ್ನು ಕೊಳ್ಳುವ ಭರಾಟೆಯಲ್ಲಿದ್ದಾರೆ.
ಇದನ್ನು ಓದಿದ್ದೀರಾ?: ‘ಕಾಂಗ್ರೆಸ್ ಒಂದು ಪಕ್ಷವಾಗುವುದು’ ಯಾವಾಗ?
ಸಾವಿರಾರು ಜನರನ್ನೊಳಗೊಂಡ ಜಾತ್ರೆ ಮಾಡಿಬಿಟ್ಟರೆ ಸಮ್ಮೇಳನ ಯಶಸ್ವಿಯಾಗುವುದೇ? ಕನ್ನಡ ನೆಲ, ಜಲ, ನುಡಿ, ಸಂಸ್ಕೃತಿಯ ಬಗ್ಗೆ ಚರ್ಚೆಯಾದಾಗ, ಗಂಭೀರ ಚಿಂತನೆಗಳು ನಡೆದಾಗ, ನಿರ್ಣಯಗಳು ನಿರ್ಧಾರಗಳಾಗಿ ಅನುಷ್ಠಾನಗೊಂಡಾಗ ಮಾತ್ರವೇ ಸಮ್ಮೇಳನಗಳು ಯಶಸ್ವಿಯಾಗುತ್ತವೆ. ದಶಕಗಳ ಹಿಂದೆ ಸಮ್ಮೇಳನಗಳಲ್ಲಿ ಭಾಗಿಯಾಗುವವರ ಸಂಖ್ಯೆ ತೀರಾ ಕಡಿಮೆ ಇರುತಿತ್ತು. ಆದರೆ, ಚಿಂತನೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಭಾಗವಹಿಸುವವರು ಸಾಹಿತಿಗಳ, ಚಿಂತಕರ ಮಾತುಗಳನ್ನು ಆಲಿಸುತ್ತಿದ್ದರು. ಅವಲೋಕಿಸುತ್ತಿದ್ದರು. ಒಂದಷ್ಟು ಅರಿವಿನ ಬುತ್ತಿ ಹೊತ್ತೊಯ್ಯುತ್ತಿದ್ದರು. ಹೀಗಾಗಿಯೇ ಹಿಂದಿನ ಸಮ್ಮೇಳನಗಳು ಯಶಸ್ಸು ಕಾಣುತ್ತಿದ್ದವು.
ಇತ್ತೀಚಿನ ವರ್ಷಗಳಲ್ಲಿ ಕೇವಲ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿದರೆ, ಒಂದೊಳ್ಳೆ ಊಟ ಹಾಕಿದರೆ, ಬೃಹತ್ ಮೆರವಣಿಗೆ ಮಾಡಿಬಿಟ್ಟರೆ ಸಮ್ಮೇಳನ ಯಶಸ್ವಿಯಾಯಿತು ಎಂದು ಭಾವಿಸಲಾಗುತ್ತಿದೆ. ಆ ಕಾರಣದಿಂದಲೇ ಶ್ರವಣ ಬೆಳಗೊಳದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ನಿರಾಕರಿಸಿದ್ದರು. ತಾವೇಕೆ ಅಧ್ಯಕ್ಷತೆಯನ್ನು ನಿರಾಕರಿಸಿದೆನೆಂದು ಬಹಿರಂಗ ಪತ್ರವನ್ನೂ ಬರೆದಿದ್ದರು. ಆದರೂ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಕನ್ನಡ ಸಾಹಿತ್ಯ ಪರಿಷತ್ತು ಎಚ್ಚೆತ್ತುಕೊಂಡಿಲ್ಲ. ಸಮ್ಮೇಳನದ ಗಂಭೀರತೆಯನ್ನು ಅರಿತುಕೊಂಡಿಲ್ಲ. ಕನ್ನಡ ನಾಡು ಮತ್ತು ಭಾಷೆಯ ಭವಿಷ್ಯದ ಕುರಿತು ಗಂಭೀರವಾಗಿ ಚಿಂತನೆ ನಡೆಸದ ಸಮ್ಮೇಳನಗಳು ನಡೆಯುವುದರಿಂದ ಉಪಯೋಗವಿಲ್ಲ. ಇನ್ನಾದರೂ ಕನ್ನಡ ಸಾಹಿತ್ಯ ಪರಿಷತ್ತು ಎಚ್ಚೆತ್ತುಕೊಳ್ಳಲಿ, ಸಮ್ಮೇಳನವನ್ನು ಅದರ ಆಶಯದೊಂದಿಗೆ ಯಶಸ್ಸು ಮಾಡಲು ಮುಂದಾಗಲಿ.