ಸಂಘರ್ಷದಲ್ಲಿ ಗೆಲುವಿನ ಆಚೆಗೂ ಗಡಿ ಭಾಗದಲ್ಲಿ ನಿರಂತರ ಸಂಕಷ್ಟ, ಆತಂಕದಲ್ಲಿ ಬದುಕುತ್ತಿರುವ ಜನರ ಅಳಲು, ಮನವಿಯನ್ನು ಸರ್ಕಾರಗಳು ಆಲಿಸಬೇಕು. ಅವರಿಗೆ ನೆಮ್ಮದಿಯ ಬದುಕನ್ನು ಒದಗಿಸಬೇಕು. ರಕ್ಷಣೆ ನೀಡಬೇಕು. ಮುಖ್ಯವಾಗಿ ಕಾಶ್ಮೀರಿಗಳೊಂದಿಗೆ ಸರ್ಕಾರಗಳು ಸಂಪರ್ಕ ಸಾಧಿಸಬೇಕು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಿಂದ ಉದ್ವಿಗ್ನಗೊಂಡು ಭಾರತ ಮತ್ತು ಪಾಕ್ ನಡುವಿನ ಸಂಘರ್ಷವು ತಣ್ಣಗಾಗಿದೆ. ಕದನ ವಿರಾಮ ಘೋಷಿಸಲಾಗಿದ್ದರೂ, ಗಡಿ ಭಾಗದಲ್ಲಿ ಆತಂಕ, ಭಯ ಆವರಿಸಿದೆ. ಸಂಘರ್ಷದ ಸಮಯದಲ್ಲಿ ಕಾಶ್ಮೀರಿಗಳು ಸೇರಿದಂತೆ ಭಾರತದ ಹಲವಾರು ಮಂದಿ ‘ಯುದ್ಧ ಬೇಡ – ಶಾಂತಿ ಬೇಕು’ ಎಂದು ಹೇಳಿದ್ದಿದೆ. ಅವರೆಲ್ಲರೂ ಶಾಂತಿ ಬಯಸಿದ್ದರು. ಆದರೆ, ಯುದ್ಧ ಬೇಡ ಎಂದವರನ್ನು ದೇಶದ್ರೋಹಿಗಳು, ಪಾಕ್ ಪ್ರೇಮಿಗಳು, ಶೌರ್ಯ ಇಲ್ಲದವರು ಇತ್ಯಾದಿ ಪದಗಳಲ್ಲಿ ತುಚ್ಛವಾಗಿ ನಿಂದಿಸಿದ್ದೂ ನಡೆದಿದೆ.
ಯುದ್ಧ ಎಂದಿಗೂ ಸಮಾಜಕ್ಕೆ ಒಳಿತು ಮಾಡುವುದಿಲ್ಲ. ಅಂತಹ ಇತಿಹಾಸವೂ ಇಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧ, ಭಾರತ-ಪಾಕಿಸ್ತಾನ ನಡುವಿನ 1965, 1971 ಹಾಗೂ 1999ರ ಯುದ್ಧಗಳು, ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್, ಹಮಾಸ್-ಇಸ್ರೇಲ್ ಯುದ್ಧಗಳು ಸೇರಿದಂತೆ ಜಗತ್ತಿನಲ್ಲಿ ನಡೆದಿರುವ ಯಾವುದೇ ಯುದ್ಧವು ಗೆಲುವು-ಸೋಲು, ಭೂಅತಿಕ್ರಮಣದಾಚೆಗೆ ಸಮಾಜಕ್ಕೆ ಒಳಿತು ಮಾಡಿದ ನಿದರ್ಶನಗಳಿಲ್ಲ.
ಬದಲಾಗಿ, ಎರಡೂ ರಾಷ್ಟ್ರಗಳ ಸೈನಿಕರು, ಅಮಾಯಕ ನಾಗರಿಕರ ಮಾರಣಹೋಮಗಳಾಗಿವೆ. ಪರಿಸರ ಸಂಪತ್ತು ನಾಶವಾಗಿದೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿ ನಾಶವಾಗಿವೆ. ಅಂತಹ ನಾಶಕ್ಕೆ ಪ್ಯಾಲೆಸ್ತೀನ್ ಉದಾಹರಣೆಯಾಗಿ ನಮ್ಮ ಕಣ್ಣೆದುರಿಗಿದೆ. ಎರಡನೇ ಮಹಾಯುದ್ಧದಲ್ಲಿ ಹಿರೋಶಿಮಾ, ನಾಗಸಾಕಿ ಮೇಲೆ ಅಮೆರಿಕ ನಡೆಸಿದ ಅಣು ಬಾಂಬ್ ಕ್ರೌರ್ಯದಿಂದ ಅಲ್ಲಿನ ಜನರು ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನ್ಮದೋಷದಂತಹ ಆರೋಗ್ಯದ ಗಂಭೀರ ಪರಿಣಾಮಗಳು ಅವರನ್ನು ಕಾಡುತ್ತಿವೆ.
ಇಂತಹ ಭೀಕರತೆಯನ್ನು ಸೃಷ್ಟಿಸುವ ಯುದ್ಧವನ್ನು ಯಾವುದೇ ದೇಶದ ಪ್ರಜ್ಞಾವಂತ ನಾಗರಿಕರು ಬಯಸುವುದಿಲ್ಲ. ಭೀಕರತೆಯ ಆಚೆಗೂ ಯುದ್ಧ ಬಯಸುವವರು ಆಳುವವರು ಮಾತ್ರ. ರಾಜಕೀಯ ಲಾಲಸೆ, ಅಧಿಕಾರ, ತಮ್ಮ ಸಾಮರ್ಥ್ಯ ಪ್ರದರ್ಶಿಸಲು ದಾಳಿಗಳು, ಯುದ್ಧಗಳು ನಡೆಯುತ್ತಿವೆ. ಭಾರತದ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸುತ್ತಿರುವುದೂ ಇದೇ ರಾಜಕೀಯ, ಸ್ವಾರ್ಥ ಲಾಲಸೆಯಿಂದಲೇ.
ದಾಳಿಗಳು ನಡೆದಾಗ ಪ್ರತಿಕ್ರಿಯಿಸಬೇಕು, ದಾಳಿ ನಡೆಸಿದವರನ್ನು ಹಿಮ್ಮೆಟ್ಟಿಸಬೇಕು. ನಾಗರಿಕರ ಹತ್ಯೆಗೈದ ಭಯೋತ್ಪಾದಕರನ್ನು ಸದೆ ಬಡಿಯಬೇಕು. ಆದರೆ, ಇದೆಲ್ಲವೂ ಯುದ್ಧದಿಂದ ಮಾತ್ರವೇ ಸಾಧ್ಯ ಎನ್ನಲಾಗದು. ಯುದ್ಧದ ಆಚೆಗಿನ ರಹಸ್ಯ ಕಾರ್ಯಾಚರಣೆಗಳು, ಮಾತುಕತೆಗಳು, ಭದ್ರತೆಗಳ ಮೂಲಕವೂ ಭಯೋತ್ಪಾದಕರನ್ನು ಸದೆಬಡಿದು, ಭಯೋತ್ಪಾದನೆಯನ್ನು ನಿಗ್ರಹಿಸಬಹುದು. ಉದಾಹರಣೆಗೆ ಒಸಮಾ ಬಿನ್ ಲಾಡೆನ್‌ನನ್ನು ಅಮೆರಿಕ ಹುಡುಕಿ ಹೊಡೆದದ್ದನ್ನು ಗಮನಿಸಬಹುದು. ಹಾಗೆಯೇ ನಮ್ಮ ದೇಶವೂ ಅದಕ್ಕೆ ಅಗತ್ಯವಿರುವ ಸಾಮರ್ಥ, ತಂತ್ರಜ್ಞಾನ ಎಲ್ಲವನ್ನೂ ಹೊಂದಿದೆ.
ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯ ಸಮಯದಲ್ಲಿ, ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ನಡೆಸಬಹುದಾದ ಕಾರ್ಯಾಚರಣೆ, ಸಂಘರ್ಷಗಳ ಬಗ್ಗೆ ಹೆಚ್ಚು ಗಮನಹರಿಸಿತ್ತು. ಅದರ ಜೊತೆಗೆ, ಸರ್ಕಾರವು ಜಮ್ಮುವಿನ ರಾಜೌರಿ ಮತ್ತು ಪೂಂಚ್ ಪ್ರದೇಶಗಳಿಂದ ಮೊಳಗುತ್ತಿದ್ದ ಶಾಂತಿ ಮತ್ತು ಸ್ಥಿರತೆಗಾಗಿನ ಧನಿಯನ್ನೂ ಕೇಳಬೇಕಿತ್ತು.
ಸಂಘರ್ಷಪೀಡಿತ ಪ್ರದೇಶದ ಜನರು ದಾಳಿ, ಪ್ರತಿದಾಳಿ, ಘರ್ಷಣೆಗಳಿಂದ ಕಂಗೆಟ್ಟಿದ್ದಾರೆ. ಅವರಿಗೆ ಯುದ್ಧ ಬೇಕಿಲ್ಲ, ಸಂಘರ್ಷ ಬೇಕಿಲ್ಲ, ಹಿಂಸೆ ಬೇಕಿಲ್ಲ. ಅವರಿಗೆ ಬೇಕಿರುವುದು ಶಾಂತಿ ಮತ್ತು ನೆಮ್ಮದಿಯ ನಿಟ್ಟುಸಿರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರತಿ ಬಾರಿ ಉದ್ವಿಗ್ನತೆ ಉಂಟಾದಾಗ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಗಂಭೀರ ಪರಿಣಾಮ, ಹೊರೆ ಹೊರಬೇಕಾಗುತ್ತದೆ. ಭಾರತದ ಸರ್ಕಾರಗಳು ಭಯೋತ್ಪಾದಕರು ಅಥವಾ ಎದುರಾಳಿಗಳ ವಿರುದ್ಧದ ಹೋರಾಟ ಮತ್ತು ಸಂಘರ್ಷದ ಬಗ್ಗೆ ಹೆಚ್ಚು ಗಮನ ಹರಿಸುತ್ತವೆ. ಆದರೆ, ಉಭಯ ರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ ಬಲಿಯಾದ, ಮನೆ, ಆಸ್ತಿಗಳನ್ನು ಕಳೆದುಕೊಂಡ ಗಡಿ ಭಾಗದ ಜನರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಂತರ ಪಾಕ್ ನಡೆಸಿದ ದಾಳಿಯಲ್ಲಿ ರಾಚೌರಿ ಜಿಲ್ಲೆಯ ಹಲವಾರು ಜನರು ತಮ್ಮ ನಿವಾಸಗಳನ್ನು ಕಳೆದುಕೊಂಡಿದ್ದಾರೆ. ಈವರೆಗೆ ಅವರಿಗೆ ಪುನರ್ವಸತಿ, ಪರಿಹಾರ ದೊರೆತಿಲ್ಲ. ಅವರೆಲ್ಲರೂ ತಮ್ಮ ನೆಲದಲ್ಲಿ ನಿರಾಶ್ರಿತರಾಗಿದ್ದಾರೆ. ನಿರ್ಗತಿಕರಾಗಿದ್ದಾರೆ. ಸರ್ಕಾರದ ನೆರವಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ, ಅವರ ಅಳಲನ್ನು ಆಲಿಸುವವರಿಲ್ಲ.
ಇಂತಹ ಸಂದಿಗ್ಧ ಭೀಕರತೆಯ ಕಾರಣಕ್ಕಾಗಿಯೇ ಕಾಶ್ಮೀರಿಗಳು ಶಾಂತಿಗಾಗಿ ಒತ್ತಾಯಿಸುತ್ತಿದ್ದಾರೆ. ಶಾಂತಿ ಬಯಸುವ ಕಾಶ್ಮೀರಿಗಳನ್ನು, ಅದರಲ್ಲೂ ಕಾಶ್ಮೀರಿ ಮುಸ್ಲಿಮರನ್ನು ಭಯೋತ್ಪಾದಕರ ಬೆಂಬಲಿಗರು, ದೇಶದ್ರೋಹಿಗಳು ಎಂದು ಅಪಮಾನ ಮಾಡಲಾಗುತ್ತಿದೆ. ಹಣೆಪಟ್ಟಿ ಕಟ್ಟಲಾಗುತ್ತಿದೆ.
ಇದನ್ನು ಓದಿದ್ದೀರಾ?: ತಿರಂಗಾ ಯಾತ್ರೆ, ಸೈನಿಕರ ನಿಂದನೆ ಮತ್ತು ದೇಶಭಕ್ತಿ
ಮಾತುಕತೆ, ಸಂವಾದ, ಚರ್ಚೆ, ಒಪ್ಪಂದಗಳು ಶಾಂತಿ ಮತ್ತು ಸ್ಥಿರತೆಗೆ ಕಾರಣವಾಗುತ್ತವೆ. ದೆಹಲಿಯಲ್ಲಿರುವ ಕೇಂದ್ರ ಸರ್ಕಾರವು ಕಾಶ್ಮೀರಿಗಳೊಂದಿಗೆ ವಿಶ್ವಾಸ ವೃದ್ಧಿ ಮಾಡಿಕೊಳ್ಳಬೇಕು, ಭಾರತ-ಪಾಕ್ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಅತ್ಯುತ್ತಮ ಮಾರ್ಗವನ್ನು ಹುಡುಕಬೇಕು. ಆ ಮಾರ್ಗ ಯುದ್ಧವಲ್ಲ ಎಂಬುದು ಕಾಶ್ಮೀರಿಗಳ ವಾದ. ಯುದ್ಧ ಬೇಡ ಎನ್ನುವ ಕಾರಣಕ್ಕೆ ಅವರನ್ನು ದೇಶದ್ರೋಹಿಗಳನ್ನಾಗಿ ಮನುವಾದಿಗಳು ಬಿಂಬಿಸುತ್ತಿದ್ದಾರೆ. ಒಂದು ವೇಳೆ, ಅದೇ ಜನರು ‘ಯುದ್ಧ ಮಾಡಿ, ಯುದ್ಧ ಬೇಕು’ ಎಂದರೆ, ಅವರನ್ನು ಅಪ್ರತಿಮ ದೇಶಭಕ್ತರೆಂದು ಇದೇ ಮನುವಾದಿಗಳು ಕೊಂಡಾಡುತ್ತಾರೆಯೇ?
ಹಿಂಸೆ, ಸಂಘರ್ಷ, ಘರ್ಷಣೆ, ಯುದ್ಧ ಬೇಡ – ಶಾಂತಿ ನೆಲೆಸಬೇಕು ಎಂದು ಹೇಳುವ, ಪ್ರತಿಪಾದಿಸುವ ಕಾರಣಕ್ಕಾಗಿ ದೇಶದ ಜನರು ರಾಷ್ಟ್ರ ವಿರೋಧಿಗಳಾಗುತ್ತಾರೆಯೇ? ಅವರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಬಹುದೇ? ಅದೂ ಕಾಶ್ಮೀರಿಗಳು ಪಾಕಿಸ್ತಾನವನ್ನು ಬಹಿರಂಗವಾಗಿ, ಗಟ್ಟಿ ದನಿಯಿಂದ ಟೀಕಿಸುತ್ತಿರುವ ಈ ಸಂದರ್ಭದಲ್ಲಿ ಅದು ಸಲ್ಲದು.
ಸಂಘರ್ಷದಲ್ಲಿ ಗೆಲುವಿನ ಆಚೆಗೂ ಗಡಿ ಭಾಗದಲ್ಲಿ ನಿರಂತರ ಸಂಕಷ್ಟ, ಆತಂಕದಲ್ಲಿ ಬದುಕುತ್ತಿರುವ ಜನರ ಅಳಲು, ಮನವಿಯನ್ನು ಸರ್ಕಾರಗಳು ಆಲಿಸಬೇಕು. ಕಾಶ್ಮೀರಿ ಜನರಿಗೆ ನೆಮ್ಮದಿಯ ಬದುಕನ್ನು ಒದಗಿಸಬೇಕು. ರಕ್ಷಣೆ ನೀಡಬೇಕು. ಮುಖ್ಯವಾಗಿ ಕಾಶ್ಮೀರಿಗಳೊಂದಿಗೆ ಸರ್ಕಾರಗಳು ಸಂಪರ್ಕ ಸಾಧಿಸಬೇಕು. ಜೊತೆಗಿದ್ದೇವೆ ಎಂಬ ಭರವಸೆ ಮೂಡಿಸಬೇಕು. ಯುದ್ಧ ಮಾರ್ಗದ ಬದಲಾಗಿ, ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಆ ಮಾರ್ಗದ ಮೂಲಕ ಭಯೋತ್ಪಾದನೆಯನ್ನು ನಿಗ್ರಹಿಸಬೇಕು. ಆಗ ಶಾಂತಿಯೂ ನೆಲೆಸುತ್ತದೆ, ಯುದ್ಧವೂ ತಪ್ಪುತ್ತದೆ, ಭಯೋತ್ಪಾದಕರ ನಿಗ್ರಹವೂ ಸಾಧ್ಯವಾಗುತ್ತದೆ.