ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ

Date:

Advertisements
ಪಹಲ್ಗಾಮ್‌ ಭಯೋತ್ಪಾದಕ ಕೃತ್ಯ ಎಸಗಿದವರ ಮತ್ತು ಅದರ ಹಿಂದೆ ಇರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಭಯೋತ್ಪಾದಕ ದಾಳಿಗೆ ಭದ್ರತಾ ಮತ್ತು ಗುಪ್ತಚರ ವೈಫಲ್ಯವೂ ಕಾರಣ. ಈ ವೈಫಲ್ಯದ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕು. 

ಏಪ್ರಿಲ್ 22ರ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ದುರ್ಘಟನೆ ನಡೆದುಹೋಗಿದೆ. ಭಯೋತ್ಪಾದಕರು 28 ಮಂದಿಯನ್ನು ಹತ್ಯೆಗೈದು ವಿಕೃತ ಅಟ್ಟಹಾಸ ಮೆರೆದಿದ್ದಾರೆ. ಮೃತರಲ್ಲಿ ಓರ್ವ ಸ್ಥಳೀಯ ಮುಸ್ಲಿಂ, ಇಬ್ಬರು ವಿದೇಶಿಯರು, ಮೂವರು ಕನ್ನಡಿಗರೂ ಸೇರಿದ್ದಾರೆ. ಭಯೋತ್ಪಾದಕರ ದಾಳಿ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಶ್ಮೀರದ ಸ್ಥಳೀಯ ಮುಸ್ಲಿಮರು ಭಯೋತ್ಪಾದನಾ ಕೃತ್ಯವನ್ನು ಖಂಡಿಸಿದ್ದಾರೆ. ಅಟ್ಟಹಾಸ ಮೆರೆದವರನ್ನು ಸದೆ ಬಡಿಯಬೇಕೆಂದು ಆಗ್ರಹಿಸುತ್ತಿದ್ದಾರೆ. ಪ್ರತಿಭಟನೆ, ಬಂದ್‌ಗಳನ್ನು ನಡೆಸಿದ್ದಾರೆ.

ಭಯೋತ್ಪಾದನೆ ವಿರುದ್ದ ಇಡೀ ದೇಶ ಒಗ್ಗಟ್ಟಾಗಿರಬೇಕೆಂಬ ಒಗ್ಗಟ್ಟಿನ ಮಂತ್ರ ಭಾರತದಾದ್ಯಂತ ಕೇಳಿಬಂದಿದೆ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿಲ್ಲುವುದಾಗಿ ವಿಪಕ್ಷಗಳು ಹೇಳಿವೆ. ಜೊತೆಗೆ, ಭದ್ರತಾ ವೈಫಲ್ಯಗಳ ಕುರಿತು ಪ್ರಶ್ನೆಯನ್ನೂ ಎತ್ತಿವೆ. ಭದ್ರತಾ ವೈಫಲ್ಯ, ಪ್ರವಾಸಿಗರ ರಕ್ಷಣೆ ಹಾಗೂ ಭಯೋತ್ಪಾದನಾ ನಿಗ್ರಹ ಕ್ರಮಗಳ ಕುರಿತು ಚರ್ಚೆಗಳು ನಡೆಯಬೇಕಿದ್ದ ಸಂದರ್ಭದಲ್ಲಿ, ಬಾಹ್ಯ ಭಯೋತ್ಪಾದಕರು ನಡೆಸಿದ ಕೃತ್ಯದ ಹೊಣೆಗಾರಿಕೆಯನ್ನು ಭಾರತೀಯ ಮುಸ್ಲಿಮರ ತಲೆಗೆ ಕಟ್ಟುವ, ದೇಶದ ಮುಸ್ಲಿಮರೇ ಭಯೋತ್ಪಾದಕರು ಎಂದು ಬಿಂಬಿಸುವ, ಕೋಮುದ್ವೇಷ ಹರಡುವ ಹುನ್ನಾರ, ಕೊಳಕು ರಾಜಕಾರಣ ತಾಂಡವವಾಡುತ್ತಿದೆ. ಕೋಮುದ್ವೇಷ ದೇಶಾದ್ಯಂತ ಆವರಿಸಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಸಂಘಪರಿವಾರ ದೇಶದ ಮುಸ್ಲಿಮರನ್ನು ದೂರುತ್ತಿದೆ. ಅದಕ್ಕೆ ಮಾಧ್ಯಮಗಳು ಕೈಜೋಡಿಸುತ್ತಿವೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದನೆಯ ಕೃತ್ಯ ಎಸಗಿದ್ದು ತಾವೇ ಎಂದು ಲಷ್ಕರ್-ಎ-ತೈಬಾ (ಎಲ್‌ಇಟಿ) ಅಂಗ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹೇಳಿಕೊಂಡಿದೆ. ಕೇಂದ್ರ ಸರ್ಕಾರವೂ ಅದನ್ನೇ ಹೇಳಿದೆ. ಆ ಸಂಘಟನೆಯ ಭಯೋತ್ಪಾದಕರು ಮುಸ್ಲಿಮರೇ ಆಗಿದ್ದಾರೆ. ಆ ಕಾರಣಕ್ಕೆ ಇಡೀ ಸಮುದಾಯವನ್ನೇ ಭಯೋತ್ಪಾದಕರು ಎನ್ನುವುದು, ಎಲ್ಲ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡುವುದು ಸಲ್ಲದು.

Advertisements

ಹಾಗೆ ನೋಡಿದರೆ, ಪಹಲ್ಗಾಮ್‌ ಭಯೋತ್ಪಾದನಾ ಕೃತ್ಯ ನಡೆದಾಗ ಸಂತ್ರಸ್ತರ ನೆರವಿಗೆ ಮೊದಲು ಧಾವಿಸಿದ್ದೇ ಸ್ಥಳೀಯ ಕಾಶ್ಮೀರಿ ಮುಸ್ಲಿಮರು. ಪ್ರವಾಸಿಗರನ್ನು ರಕ್ಷಿಸಲು ಭಯೋತ್ಪಾದಕರಿಂದ ಬಂದೂಕು ಕಸಿದುಕೊಳ್ಳಲು ಹೋಗಿ, ಹೋರಾಡಿ, ಭಯೋತ್ಪಾದಕರ ಗುಂಡಿಗೆ ಬಲಿಯಾದ ಸೈಯದ್ ಆದಿಲ್ ಹುಸೇನ್ ಶಾ ಓರ್ವ ಮುಸ್ಲಿಂ. ಪ್ರವಾಸಿಗರನ್ನು ಕಾರಿನಲ್ಲಿ ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತಿದ್ದದ್ದು ಮುಸ್ಲಿಮರು, ಪ್ರವಾಸಿಗರು ತಂಗಿದ್ದ ಹೋಟೆಲ್‌ಗಳ ಮಾಲೀಕರು ಮುಸ್ಲಿಮರು, ಕುದುರೆ ಸವಾರಿ ಮಾಡಿಸುತ್ತಿದ್ದದ್ದೂ ಮುಸ್ಲಿಮರು, ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತಿದ್ದದ್ದು ಮುಸ್ಲಿಮರು, ಭಯೋತ್ಪಾದಕ ದಾಳಿ ನಡೆದಾಗ ಪ್ರವಾಸಿಗರನ್ನು ರಕ್ಷಿಸಿದ್ದು ಮುಸ್ಲಿಮರು, ಗಾಯಗೊಂಡ ಪ್ರವಾಸಿಗರನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ಕೊಡಿಸಿದವರು ಮತ್ತು ಉಪಚಾರ ಮಾಡಿದವರು ಮುಸ್ಲಿಮರು, ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದವರು ಮುಸ್ಲಿಮರು, ಚಿಕಿತ್ಸೆ ನೀಡಿದ ವೈದ್ಯರು ಮತ್ತು ದಾದಿಯರು ಕೂಡ ಮುಸ್ಲಿಮರು, ಪ್ರವಾಸಿಗರನ್ನು ಪಹಲ್ಗಾಮ್‌ನಿಂದ ಶ್ರೀನಗರಕ್ಕೆ ರವಾನಿಸಿದವರು ಮುಸ್ಲಿಮರು.

ಹೀಗಿರುವಾಗ, ಭಯೋತ್ಪಾದಕ ಕೃತ್ಯವನ್ನು ‘ಹತ್ಯೆಗೀಡಾದ ಪ್ರವಾಸಿಗರೆಂದರೆ ಹಿಂದುಗಳು, ಹತ್ಯೆ ಮಾಡಿದವರೆಂದರೆ ಮುಸ್ಲಿಮರು’ ಎಂದು ವಾದಿಸುವುದು, ದೂರುವುದು ಸ್ವೀಕಾರಾರ್ಹ ಧೋರಣೆಯಲ್ಲ. ಇಂತಹ ಸಂದರ್ಭದಲ್ಲಿ ಕಾಶ್ಮೀರ ಮತ್ತು ಭಾರತದ ಉಳಿದ ಭಾಗ ಜೊತೆಯಾಗಿ ನಿಲ್ಲುವುದು ಮುಖ್ಯ. ಆದರೆ, ಭಯೋತ್ಪಾದಕರ ಅಟ್ಟಹಾಸವನ್ನು ಬಳಸಿಕೊಂಡು ಆಂತರಿಕ ಕೋಮುದ್ವೇಷ ಬಿತ್ತುವ ಹುನ್ನಾರ ನಡೆಯುತ್ತಿದೆ. ಇದು, ಹೊಡೆದಾಡುವುದನ್ನು ಭಯೋತ್ಪಾದಕರೂ ಬಯಸಿದ್ದರು, ಇವರು ಕೂಡ ಅದನ್ನೇ ಬಯಸುತ್ತಿದ್ದಾರೆ ಎಂಬಂತೆ ಕಾಣುತ್ತದೆ.

ಅದಕ್ಕೆ ಉದಾಹರಣೆಯಾಗಿ ಕಲಬುರಗಿಯಲ್ಲಿ ಒಂದು ಘಟನೆ ನಡೆದಿದೆ. ಪಾಕ್‌ ಧ್ವಜಗಳನ್ನ ಬಜರಂಗ ದಳದ ಕಾರ್ಯಕರ್ತರು ರಸ್ತೆಯಲ್ಲಿ ಹಾಕಿದ್ದಾರೆ. ಅವರನ್ನ ಪೊಲೀಸರು ಬಂಧಿಸಿದ್ದಾರೆ. ಬಜರಂಗದಳ ಮತ್ತು ಸಂಘಪರಿವಾರ ಇಂತಹ ಕತ್ಯಗಳನ್ನು ಎಸಗಿ, ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸುತ್ತವೆ ಎಂಬುದಕ್ಕೆ ಈ ಹಿಂದೆ ದೇಶದಲ್ಲಿ ನಡೆದ ಹಲವು ಪ್ರಕರಣಗಳನ್ನು ಗಮನಿಸಬಹುದಾಗಿದೆ. ಅಂತೆಯೇ, ಮಾಧ್ಯಮಗಳೂ ನಡೆದುಕೊಂಡಿವೆ. ಆರಂಭದಲ್ಲಿ ಮಾಧ್ಯಮಗಳು ‘ಮುಸ್ಲಿಮರು ರಸ್ತೆಯಲ್ಲಿ ಪಾಕಿಸ್ತಾನದ ಧ್ವಜ ಅಂಟಿಸಿ ಪಾಕ್‌ ಪ್ರೇಮ ಮೆರೆದಿದ್ದಾರೆ’ ಎಂದು ಸುದ್ದಿ ಮಾಡಿದವು. ಆದರೆ, ಅವುಗಳನ್ನು ಹಾಕಿದ್ದು ಬಜರಂಗದಳದ ಕಾರ್ಯಕರ್ತರೆಂದು ಗೊತ್ತಾದ ಬಳಿಕ ಮೌನಕ್ಕೆ ಜಾರಿದವು. ಅಲ್ಲದೆ, ಪಾಕ್‌ ವಿರೋದ್ಧ ಆಕ್ರೋಶ ವ್ಯಕ್ತಪಡಿಸಲು ಪಾಕಿಸ್ತಾನದ ಧ್ವಜವನ್ನು ಹಿಂದುತ್ವವಾದಿಗಳು ರಸ್ತೆಗೆ ಹಾಕಿ, ತುಳಿದಿದ್ದಾರೆ ಎಂಬ ಸಮರ್ಥನೆಗೂ ಇಳಿದವು.

ಇದನ್ನು ಓದಿದ್ದೀರಾ?: ಮತ್ತೆ ಅಬ್ಬರಿಸಿದ ಭಯೋತ್ಪಾದನೆ- ಮೋಶಾರತ್ತ ದಿಟ್ಟಿ ನೆಟ್ಟ ದೇಶ

ಭಯೋತ್ಪಾದಕ ಕೃತ್ಯಗಳು ಅಥವಾ ಗಲಭೆಗಳು ನಡೆದಾಗ, ‘ನೀವು ಭಾರತಕ್ಕೆ ನಿಷ್ಠರಲ್ಲ, ಪಾಕಿಸ್ತಾನಕ್ಕೆ ನಿಷ್ಠರು’ ಎಂದು ಮುಸ್ಲಿಮರನ್ನು ದೂರುವ ಕೃತ್ಯಗಳು ದೇಶ ವಿಭಜನೆಯಾದ ಸಮಯದಿಂದ ನಡೆಯುತ್ತಲೇ ಇವೆ. ಹಾಗೆ ನೋಡಿದರೆ, ದೇಶ ವಿಭಜನೆಯ ಸಮಯದಲ್ಲಿ ಹಿಂದುಗಳಿಗೆ ಭಾರತ ಒಂದೇ ಆಯ್ಕೆಯಾಗಿತ್ತು. ಆದರೆ, ಮುಸ್ಲಿಮರಿಗೆ ಪಾಕಿಸ್ತಾನ ಮತ್ತು ಭಾರತ ಎರಡು ಆಯ್ಕೆಗಳಿದ್ದವು. ಮುಸ್ಲಿಮರು ಭಾರತವೇ ನಮ್ಮ ದೇಶ, ನಾವಿಲ್ಲಿಯೇ ಇರುತ್ತೇವೆಂದು ಆಯ್ಕೆ ಮಾಡಿಕೊಂಡು ಉಳಿದುಕೊಂಡರು ಭಾರತೀಯರಾದರು.

ಭಾರತವೇ ನಮ್ಮ ದೇಶವೆಂದು ಆಯ್ಕೆ ಮಾಡಿಕೊಂಡವರ ನಿಷ್ಠೆಯನ್ನು ಪ್ರಶ್ನಿಸುವ ಕೆಲಸಗಳು ಕಳೆದ 80 ವರ್ಷಗಳಿಂದ ನಡೆಯುತ್ತಲೇ ಇವೆ. ಇದು ನಿಧಾನಕ್ಕೆ ಸಮಾಜದಲ್ಲಿ ಬಿರುಕು ಉಂಟು ಮಾಡುತ್ತದೆ. ಬಿರುಕು ಮೂಡಿಸುವ ಕೆಲಸವನ್ನೇ ಸಂಘಪರಿವಾರ ಮಾಡುತ್ತಿದೆ. ಅದು ಈಗ ಬಹಿರಂಗವಾಗಿದೆ. ಭಾರತದಲ್ಲಿ ಎಲ್ಲಿಯೇ ಪಾಕ್‌ ಧ್ವಜ ಕಂಡರೂ ಅದನ್ನು ಸಂಘಪರಿವಾರವೇ ಉದ್ದೇಶಪೂರ್ವಕವಾಗಿ ಹಾಕಿ, ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿತ್ತದೆ ಎಂಬ ಅನುಮಾನ, ಅಭಿಪ್ರಾಯ ಭಾರತದ ಉದ್ದಗಲಕ್ಕೂ ಸಾಮಾನ್ಯ ಎಂಬಂತೆ ಆಗಿಹೋಗಿದೆ.

ಈ ಗಾಢ ಅಭಿಪ್ರಾಯಕ್ಕೆ ಕಲಬುರಗಿಯಲ್ಲಿ ಪಾಕ್‌ ಧ್ವಜ ಅಂಟಿಸಿದ ಪ್ರಕರಣ ತಾಜಾ ಉದಾಹರಣೆಯಾಗಿದೆ. ಈಗಲಾದರು ಪ್ರಧಾನಿ ಮೋದಿ, ಅಮಿತ್ ಹಾಗೂ ಉನ್ನತ ಸ್ಥಾನದಲ್ಲಿರುವವರು ತಮ್ಮ ಸಂಘಪರಿವಾರ ಮತ್ತು ಹಿಂದುತ್ವವಾದಿಗಳಿಗೆ ಬುದ್ಧಿ ಹೇಳಬೇಕು. ಕ್ಷುಲ್ಲಕ ಕುತಂತ್ರಗಳನ್ನು ನಡೆಸಿ, ಮುಸ್ಲಿಂ ವಿರೋಧಿ ದ್ವೇಷ ಬಿತ್ತುವುದನ್ನು ನಿಲ್ಲಿಸುವಂತೆ ಸೂಚಿಸಬೇಕು.

ಜೊತೆಗೆ, ಪಹಲ್ಗಾಮ್‌ ಭಯೋತ್ಪಾದಕ ಕೃತ್ಯ ಎಸಗಿದವರ ಮತ್ತು ಅದರ ಹಿಂದೆ ಇರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಭಯೋತ್ಪಾದಕ ದಾಳಿಗೆ ಭದ್ರತಾ ಮತ್ತು ಗುಪ್ತಚರ ವೈಫಲ್ಯವೂ ಪ್ರಮುಖ ಕಾರಣವಾಗಿ ತೋರುತ್ತಿದೆ. ಈ ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ತನಿಖೆ ಮಾಡಬೇಕು. ಕ್ರಮ ಕೈಗೊಳ್ಳಬೇಕು. ಈ ಲೋಪಗಳಿಗೆ ಯಾರಾದರೂ ಉತ್ತರಿಸಬೇಕು. ವೈಫಲ್ಯದ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X