ಈ ದಿನ ಸಂಪಾದಕೀಯ | ಮಣಿಪುರದ ನಾಗಾ, ಕುಕಿಗಳೂ ಬುಡಕಟ್ಟು ಜನರು ಎಂದು ಪ್ರಧಾನಿಗೆ ನೆನಪಿಸಬೇಕಿದೆ

Date:

Advertisements

ಈಗ ಜಾರ್ಖಂಡ್‌ ಬುಡಕಟ್ಟು ಜನರ ಬಗ್ಗೆ ಇಷ್ಟೊಂದು ಕಾಳಜಿ ತೋರುವ ಮೋದಿಯವರು ಮಣಿಪುರದ ಬುಡಕಟ್ಟು ಜನರ ಮೇಲೆ ಯಾಕಿಷ್ಟು ಸಿಟ್ಟು ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ. ಒಂದೂವರೆ ವರ್ಷದಿಂದ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಬುಡಕಟ್ಟು ಜನರ ಕೈ, ಕಾಲು ಕತ್ತರಿಸಿ ಭೀಕರವಾಗಿ ಕೊಂದು ಹಾಕಲಾಗುತ್ತಿದೆ.

ಜಾರ್ಖಂಡ್‌ನ ಬುಡಕಟ್ಟು ಜನಾಂಗದ ನಾಯಕ, ಬ್ರಿಟಿಷರ ವಿರುದ್ಧ ಹೋರಾಡಿದ್ದ ಬಿರ್ಸಾ ಮುಂಡಾ ಅವರ ಜಯಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಪಕ್ಷ ದೇಶದ ಎಲ್ಲಾ ಭಾಷಾ ಪತ್ರಿಕೆಗಳಿಗೆ ಇಡೀ ಪುಟದ ಜಾಹೀರಾತು ನೀಡಿದೆ. ಪ್ರಧಾನಿಯವರು ಬಿರ್ಸಾ ಮುಂಡಾನ ಪ್ರತಿಮೆಗೆ ಶಿರಬಾಗಿ ನಮಿಸುತ್ತಿರುವ ಆಕರ್ಷಕ ಚಿತ್ರ ಜಾಹೀರಾತಿನಲ್ಲಿ ಎದ್ದು ಕಾಣುತ್ತಿದೆ. ನವೆಂಬರ್‌ 15ನ್ನು ʼಜನಜಾತಿಯ (ಬುಡಕಟ್ಟು) ಗೌರವ್‌ ದಿವಸ್‌ʼ ಎಂದು ಕೇಂದ್ರ ಸರ್ಕಾರ 2021ರಲ್ಲಿಯೇ ಘೋಷಿಸಿದೆ. ಇಂದು ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಾಂಗದ ₹24,000 ಕೋಟಿಗಳ ಕಲ್ಯಾಣ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಬಿರ್ಸಾ ಮುಂಡಾ ಭೂಮಿಯಿಂದ ʼವಿಕಸಿತ ಭಾರತ ಸಂಕಲ್ಪ ಯಾತ್ರೆʼ ಆರಂಭವಾಗಲಿದೆ. ಅದು ಎರಡು ತಿಂಗಳ ಕಾಲ ದೇಶದಾದ್ಯಂತ ಸಂಚರಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮಧ್ಯೆ ಬುಡಕಟ್ಟುಗಳ ʼಸರ್ನಾʼ ಧರ್ಮಕ್ಕೆ ಸರ್ಕಾರಿ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಕೇಂದ್ರ ಸರ್ಕಾರದ ಮುಂದೆ ಬಾಕಿ ಇದೆ ಎಂಬುದನ್ನು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ನೆನಪಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಬುಡಕಟ್ಟು ಜನರ ಮೇಲಿನ ಹುಸಿ ಪ್ರೀತಿ ಆಗಾಗ ಬೇರೆ ಬೇರೆ ರೂಪದಲ್ಲಿ ಹೊರಗೆ ಬರುತ್ತಿರುತ್ತದೆ. ಎರಡು ವರ್ಷಗಳ ಹಿಂದೆ ರಾಷ್ಟ್ರಪತಿಯಾಗಿ ಬುಡಕಟ್ಟು ಸಮುದಾಯದ ಬಿಜೆಪಿ ನಾಯಕಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡುವ ಮೂಲಕ ‘ಬುಡಕಟ್ಟು ಪ್ರೇಮ’ ತೋರಿಸಿದ್ದರು. ಬುಡಕಟ್ಟು ಮಹಿಳೆಯೊಬ್ಬಳನ್ನು ರಾಷ್ಟ್ರಪತಿಯಂಥ ಉನ್ನತ ಸ್ಥಾನದಲ್ಲಿ ಕೂರಿಸಿದ್ದೇವೆ ಎಂದು ಬಿಜೆಪಿ ಮತ್ತು ಮೋದಿ ಭಕ್ತರು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದರು. ಆದರೆ, ಮೋದಿಯವರು ಬುಡಕಟ್ಟು ಸಮುದಾಯದ ರಾಜಕೀಯೇತರ ಮಹಿಳೆಯನ್ನು ಹುಡುಕಿ ತಂದು ಕೂರಿಸಿದ್ದರೆ ಭೇಷ್‌ ಎನ್ನಬಹುದಿತ್ತು. ಜಾರ್ಖಂಡ್‌ನಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಗಾದಿಯಿಂದ ಶುರುವಾಗಿ ಶಾಸಕಿಯಾಗಿ, ಸಚಿವೆಯಾಗಿ ಕಡೆಗೆ ರಾಜ್ಯಪಾಲೆಯಾಗಿ ಅಧಿಕಾರ ಅನುಭವಿಸಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದರಲ್ಲಿ ರಾಜಕೀಯ ಲಾಭದ ವಿನಾ ಬೇರೆ ಯಾವ ಘನ ಕಾಳಜಿಯೂ ಕಂಡಿಲ್ಲ.

Advertisements

ಈಗ ಜಾರ್ಖಂಡ್‌ ಬುಡಕಟ್ಟು ಜನರ ಬಗ್ಗೆ ಇಷ್ಟೊಂದು ಮಮತೆ ತೋರುವ ಮೋದಿಯವರಿಗೆ ಮಣಿಪುರದ ಬುಡಕಟ್ಟು ಜನರ ಮೇಲೆ ಯಾಕಿಷ್ಟು ಸಿಟ್ಟು ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕಿದೆ. ಒಂದೂವರೆ ವರ್ಷದಿಂದ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಬುಡಕಟ್ಟು ಜನರ ಕೈ ಕಾಲು ಕತ್ತರಿಸಿ ಭೀಕರವಾಗಿ ಕೊಂದು ಹಾಕಲಾಗುತ್ತಿದೆ. ಮಹಿಳೆಯರನ್ನು ಬೆತ್ತಲುಗೊಳಿಸಿ ಸಾಮೂಹಿಕ ಅತ್ಯಾಚಾರಗೈದು ಸುಟ್ಟು ಹಾಕಲಾಗುತ್ತಿದೆ. ಆದರೆ, ವಿದೇಶಗಳನ್ನೆಲ್ಲ ಸುತ್ತಿ ಬರುವ ಮೋದಿ ಆ ರಾಜ್ಯಕ್ಕೆ ಕಾಲಿಟ್ಟಿಲ್ಲ. ಲೋಕಸಭಾ ಚುನಾವಣೆಗೆ ದೇಶದೆಲ್ಲೆಡೆ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡಿದ್ದ ಮೋದಿಯವರು ದೆಹಲಿಯಿಂದ ಕೇವಲ ಎರಡೂವರೆ ಸಾವಿರ ಕಿ.ಮೀ. ದೂರವಿರುವ ಮತ್ತು ಎರಡೂವರೆ ತಾಸುಗಳ ವಿಮಾನ ಪ್ರಯಾಣ ಅವಧಿ ತಗಲುವ ಮಣಿಪುರಕ್ಕೆ ಮಾತ್ರ ಕಾಲಿಡುವ ಧೈರ್ಯ ಮಾಡಿಲ್ಲ. ಲೋಕಸಭಾ ಚುನಾವಣೆಗಳಲ್ಲಿ ಕೇವಲ ವಿಡಿಯೋ ಸಂದೇಶದ ಮೂಲಕ ಮತಯಾಚನೆ ಮಾಡಿದ್ರು. 56 ಇಂಚಿನ ಎದೆಗಾರಿಕೆ ತಮ್ಮದೆಂದು ಕೊಚ್ಚಿಕೊಳ್ಳುವ ನಮ್ಮ ಪ್ರಧಾನಿ ನಿಜಕ್ಕೂ ಅಷ್ಟೊಂದು ಪುಕ್ಕಲರೇ?

ಮಣೀಪುರದಲ್ಲಿ ಜನಾಂಗೀಯ ಗಲಭೆಗಳು ಶುರುವಾದಾಗ ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ರೋಡ್ ಶೋಗಳನ್ನು ಮಾಡಿ ಮತ ಯಾಚಿಸಿದ್ದ ಮೋದಿ ಚುನಾವಣೆ ಮುಗಿದ ಮೇಲಾದರೂ ಅಲ್ಲಿಗೆ ಹೋಗಿ ಆ ರಾಜ್ಯದ ಜನರಿಗೆ ಅಭಯ ನೀಡಬಹುದಿತ್ತು. ಅದಕ್ಕೆ ತಡೆಯೊಡ್ಡಿದವರು ಯಾರು? ಅಲ್ಲಿ ತಮ್ಮದೇ ಸರ್ಕಾರ ಇದ್ದರೂ ಹಿಂಸಾಚಾರ ತಡೆಯಲು ಯಾಕೆ ಯಾವುದೇ ಪ್ರಯತ್ನ ಮಾಡಿಲ್ಲ ಎಂಬ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸಿದ್ದರೆ ಇಂದಿನ ಅವರ ಬುಡಕಟ್ಟು ಜನರ ಕಲ್ಯಾಣ ಯೋಜನೆಗಳನ್ನು ಶ್ಲಾಘಿಸಬಹುದಿತ್ತು. ಆದರೆ, ಜಾರ್ಖಂಡ್‌ನಲ್ಲಿ ಮೊನ್ನೆಯಷ್ಟೇ ಮೊದಲ ಹಂತದ ಮತದಾನ ಮುಗಿದಿದೆ. ಎರಡನೇ ಹಂತದ ಮತದಾನ 20ರಂದು ನಡೆಯಲಿದೆ. ಈ ಮಧ್ಯೆ ಹೊಸ ಯೋಜನೆಗೆ ಚಾಲನೆ ನೀಡುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ? ಅಥವಾ ನೀತಿ ನಿಯಮಗಳೆಲ್ಲ ಬೇರೆ ಪಕ್ಷಗಳಿಗೆ ಮಾತ್ರವೇ? ಚುನಾವಣಾ ಸಮಯದಲ್ಲಿ ಬುಡಕಟ್ಟುಗಳ ಮೇಲೆ ಇನ್ನಿಲ್ಲದ ಪ್ರೇಮ ಪ್ರವಾಹ ಉಕ್ಕಿ ಹರಿದಿದೆ. ಜಾರ್ಖಂಡ್‌ ಬುಡಕಟ್ಟುಗಳ ಮೇಲಿರುವ ಪ್ರೀತಿ, ಕಾಳಜಿ ಮಣಿಪುರ ಜನರ ಮೇಲೆ ಯಾಕಿಲ್ಲ ಎಂದು ಇಂದು ಇಡೀ ದೇಶವೇ ಮೋದಿಯವರನ್ನು ಜಗ್ಗಿಸಿ ಕೇಳಬೇಕಿದೆ.

ಮಣಿಪುರದ ಜಿರಿಬಮ್‌ ಜಿಲ್ಲೆಯಲ್ಲಿ ನವೆಂಬರ್ 7ರಂದು 31 ವರ್ಷದ ಬುಡಕಟ್ಟು ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಇದೀಗ ಬಹಿರಂಗವಾಗಿದ್ದು, ಆಘಾತಕಾರಿ ಅಂಶಗಳು ಹೊರಬಂದಿವೆ. ಮಹಿಳೆಗೆ ಅಸಹನೀಯ ರೀತಿಯ ಚಿತ್ರಹಿಂಸೆ ನೀಡಿರುವುದನ್ನು ವರದಿ ವಿವರವಾಗಿ ತಿಳಿಸಿದೆ. ಮರಣೋತ್ತರ ಪರೀಕ್ಷೆ ಅಸ್ಸಾಂನ ಸಿಲ್ಚರ್‌ನಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನವೆಂಬರ್ 9ರಂದು ನಡೆದಿತ್ತು. ಮಹಿಳೆಯ ಕೈ, ಕಾಲುಗಳೂ ಸೇರಿದಂತೆ ದೇಹದ ವಿವಿಧ ಭಾಗಗಳು ಇರಲಿಲ್ಲ. ಬಹುತೇಕ ಭಾಗಗಳು ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದವು. ಅತ್ಯಂತ ಕ್ರೂರ ರೀತಿಯಲ್ಲಿ ಆಕೆಯನ್ನು ಕೊಂದು ಹಾಕಲಾಗಿದೆ. ದೇಹದ ಶೇ 99ರಷ್ಟು ಭಾಗಗಳು ಬೆಂಕಿಯಿಂದ ಸುಟ್ಟು ಹೋಗಿದ್ದವು. ಬೆಂಕಿಯ ತೀವ್ರತೆಗೆ ಎಲುಬುಗಳೂ ಸುಟ್ಟಿದ್ದವು. ದೇಹದ ಒಂದೇ ಒಂದು ಅಂಗ ಸರಿಯಾಗಿ ಇರಲಿಲ್ಲ. ಆಕೆಯ ಗುಪ್ತಾಂಗದ ಭಾಗಗಳ ಮೈಕ್ರೋಸ್ಕೋಪಿಕ್ ಪರೀಕ್ಷೆಯೂ ಸಾಧ್ಯವಾಗಿಲ್ಲ. ಎಡಭಾಗದ ತೊಡೆಗೆ ಲೋಹದ ಮೊಳೆ ಜಡಿಯಲಾಗಿತ್ತು. ಊಹೆಗೂ ನಿಲುಕದ ರೀತಿಯಲ್ಲಿ ಚಿತ್ರಹಿಂಸೆ ನೀಡಿರುವುದು ಮೃತದೇಹದಲ್ಲಿ ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಚಿತ್ರಹಿಂಸೆಗೂ ಮುನ್ನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದದ್ದಾಗಿ ಆಕೆಯ ಪತಿ ಹೇಳಿದ್ದಾರೆ. 2023ರ ಮೇ ತಿಂಗಳಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಭೀಕರ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 220ಕ್ಕೂ ಹೆಚ್ಚು ಜನರು ಹತ್ಯೆಗೀಡಾಗಿದ್ದಾರೆ. ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ನೂರಾರು ಕುಟುಂಬಗಳು ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿವೆ.

ಜಿರಿಬಮ್‌ ಪ್ರದೇಶದಲ್ಲಿ ಕಳೆದ ವರ್ಷದ ಜೂನ್‌ ತಿಂಗಳಲ್ಲಿ ರೈತರೊಬ್ಬರ ಮೃತದೇಹ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆಯ ನಂತರ ಅಲ್ಲಿಯವರೆಗೂ ಶಾಂತವಾಗಿದ್ದ ಈ ಪ್ರದೇಶ ಹಿಂಸಾಚಾರದಿಂದ ತತ್ತರಿಸಿದೆ. ರಾಜ್ಯದ ಜನಸಂಖ್ಯೆಯ ಶೇ 40ರಷ್ಟಿರುವ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳು ಬಹುಸಂಖ್ಯಾತ ಮೈತೇಯಿಗಳಿಂದ ಸಾಮೂಹಿಕ ಅತ್ಯಾಚಾರ, ಹಿಂಸೆ, ಕೊಲೆಯಂತಹ ದುರಂತಕ್ಕೆ ಬಲಿಯಾಗುತ್ತಿದ್ದಾರೆ. ಆದರೂ ಅಲ್ಲಿನ ಬಿಜೆಪಿ ಮುಖ್ಯಮಂತ್ರಿಯ ಕೂದಲೂ ಕೊಂಕಿಲ್ಲ. ಅತ್ತ ನಾಗರಿಕರಿಗೆ ರಕ್ಷಣೆಯೂ ಸಿಗುತ್ತಿಲ್ಲ.

ಮಣಿಪುರದ ಒಟ್ಟು ಜನಸಂಖ್ಯೆಯಲ್ಲಿ ಮೈತೇಯಿ ಸಮುದಾಯ ಶೇ 53ರಷ್ಟಿದ್ದು, ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನುಳಿದಂತೆ ನಾಗಾ, ಕುಕಿ ಸಮುದಾಯದ ಜನರು ಶೇ 40ರಷ್ಟಿದ್ದು ಗುಡ್ಡಗಾಡು ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಅವರಲ್ಲಿ ಬಹುತೇಕರು ಕ್ರೈಸ್ತರು ಮತ್ತು ವಲಸಿಗರು. ಈ ಕಾರಣಕ್ಕೆ ಜನಾಂಗೀಯ ದ್ವೇಷದ ಬೆಂಕಿಯನ್ನು ಆರಿಸದೆ ಉರಿಯುತ್ತಲೇ ಇರಲು ಬಿಟ್ಟಿರುವ ಆರೋಪವಿದೆ. ಆದರೆ, ಸದಾ ಬಿಜೆಪಿಯನ್ನು ಬೆಂಬಲಿಸಿದ್ದ ಮೈತೇಯಿಗಳೂ ಈಗ ಡಬಲ್‌ ಎಂಜಿನ್‌ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಕುಪಿತಗೊಂಡಿದ್ದಾರೆ. ಈ ಬಾರಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ವಿಶ್ಲೇಷಿಸಲಾಗಿದೆ. ಆದರೆ, ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಜನರ ರಕ್ಷಣೆಯ ಹೊಣೆ ಕೇಂದ್ರ ಸರ್ಕಾರದ್ದು. ಆದರೆ, ಕೇಂದ್ರದಲ್ಲಿ ಮೋದಿಯವರ ಚಕ್ರಾಧಿಪತ್ಯ ಶುರುವಾದ ನಂತರ ಒಕ್ಕೂಟ ವ್ಯವಸ್ಥೆಯ ಮೂಲ ತತ್ವಕ್ಕೇ ಸಮಾಧಿ ಕಟ್ಟಲಾಗಿದೆ. ಅನುದಾನ ಕೊಡುವಲ್ಲಿಂದ ಶುರುವಾಗಿ, ಭಾಷಾ ನೀತಿ, ಬೃಹತ್‌ ಯೋಜನೆಗಳು ಹೀಗೆ ಎಲ್ಲದರಲ್ಲೂ ತಾರತಮ್ಯ ಢಾಳಾಗಿ ಕಾಣಿಸುತ್ತಿದೆ. ವಿದೇಶಿ ಬಂಡವಾಳವನ್ನೆಲ್ಲ ನಿರಂತರ ಗುಜರಾತಿಗೆ ತಿರುಗಿಸುತ್ತಿರುವ ಪರಿಯನ್ನು ನೋಡಿದ್ದೇವೆ. ಹೀಗೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಸವರುವುದರಲ್ಲಿ ಒಕ್ಕೂಟ ಸರ್ಕಾರಕ್ಕೆ ಯಾವುದೇ ಅಂಜಿಕೆಯಿಲ್ಲ.

ಇಂದು ಬಿರ್ಸಾ ಮುಂಡಾನ ಗುಣಗಾನ ಮಾಡುವ, ಬುಡಕಟ್ಟು ಜನರನ್ನು ಹಾಡಿ ಹೊಗಳುವ ಮೋದಿ ಪರಿವಾರಕ್ಕೆ ಮಣಿಪುರದ ನಾಗಾ ಮತ್ತು ಕುಕಿಗಳೂ ಬುಡಕಟ್ಟು ಸಮುದಾಯದವರು, ಅವರೂ ಮನುಷ್ಯರು ಮತ್ತು ಈ ದೇಶದ ಪ್ರಜೆಗಳು ಎಂಬುದನ್ನು ನೆನಪಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X