ಬ್ರಾಹ್ಮಣೇತರರು ಬ್ರಾಹ್ಮಣರ ಪಾದ ಮುಟ್ಟಿ ಪಾವನರಾಗಬೇಕು ಎಂಬ ಮೌಢ್ಯವನ್ನು ನಾಜೂಕಾಗಿ ಹೇರಲಾಗುತ್ತಿದೆ. ಸನಾತನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶ್ರೇಷ್ಠ ಎಂಬ ಭಾವನೆ ಬಿತ್ತಲಾಗುತ್ತಿದೆ. ಜಾತಿ ವ್ಯವಸ್ಥೆಯು ನವಭಾರತದಲ್ಲಿ ಮತ್ತೆ ಮುನ್ನೆಲೆಗೆ ಬರುತ್ತಲಿದೆ...
ಭಾರತೀಯ ಸಮಾಜದಲ್ಲಿ 21ನೇ ಶತಮಾನದ ಆರಂಭದಿಂದ ಬಲಪಂಥೀಯವಾದವು ಮತ್ತೆ ಪ್ರವರ್ಧಮಾನಕ್ಕೆ ಬಂದಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ, ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿ-ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾ ‘ಬ್ರಾಹ್ಮಣ್ಯವಾದ ಮತ್ತು ಮನುವಾದ’ ಜಾರಿಯ ಚರ್ಚೆಗಳು, ಜಾತಿ ಆಧಾರಿತ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ಹೆಚ್ಚುತ್ತಿವೆ. ಸಮಾಜದಲ್ಲಿ ಸಹಜ ಎಂಬ ರೀತಿಯಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.
ಆಧುನಿಕರಣ, ವಿಜ್ಞಾನ ಯುಗದ ಪ್ರಸ್ತುತ ಸಂದರ್ಭದಲ್ಲಿಯೂ ಹಿಂದುಳಿದ ಮತ್ತು ತಳ ಸಮುದಾಯದವರು ಬ್ರಾಹ್ಮಣರ ಪಾದಕ್ಕೆರಗಿದರೆ ಪಾವನರಾಗುತ್ತಾರೆ. ಮಡೆ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಎಂಬಿತ್ಯಾದಿ ಮೌಡ್ಯ ವ್ಯಾಪಕವಾಗಿ ಆವರಿಸುತ್ತಿದೆ. ಇಂತಹದ್ದೊಂದು ಮೌಢ್ಯ ಪ್ರಹಸನದಲ್ಲಿ ಪಶ್ಚಿಮ ಬಂಗಾಳದ ಪುರುಲಿಯಾ ಮನ್ಬಜಾರ್ ಪ್ರದೇಶದ ಕುರ್ಮಸೋಲ್ ಗ್ರಾಮದಲ್ಲಿ ಬ್ರಾಹ್ಮಣ್ಯವೇ ತಾಂಡವವಾಡುತ್ತಿದೆ. ಒಬಿಸಿ, ಆದಿವಾಸಿ, ಬಡಕಟ್ಟು ಸಮುದಾಯದ ಜನರನ್ನು ಬ್ರಾಹ್ಮಣ ಸಮುದಾಯವು ತಮ್ಮ ಅಧೀನದಲ್ಲಿಟ್ಟುಕೊಂಡು, ದಬ್ಬಾಳಿಕೆ ನಡೆಸುತ್ತಿದೆ.
ಕುರ್ಮಸೋಲ್ ಗ್ರಾಮದಲ್ಲಿ 35 ಮುಸ್ಲಿಂ ಮನೆಗಳು ಸೇರಿದಂತೆ 300 ಕುಟುಂಬಗಳು ವಾಸಿಸುತ್ತಿವೆ. ಒಂದು ಕಾಲದಲ್ಲಿ ಈ ಗ್ರಾಮವು ಎಡಪಂಥೀಯ ವಿಚಾರಗಳನ್ನು ಧಾರೆ ಎರೆದಿದ್ದ ಶಾಲೆಯಂತಿತ್ತು. ಹಿಂದು-ಮುಸ್ಲಿಮರು ಸೌಹಾರ್ದತೆಯಿಂದ ಹಬ್ಬ, ಸಮಾರಂಭಗಳನ್ನು ನಡೆಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ ಉದ್ವಗ್ನತೆ ವ್ಯಾಪಿಸಿದೆ. ಮೌಢ್ಯ ಮನೆ ಮಾಡಿದೆ.
ಗ್ರಾಮದಲ್ಲಿ ಕುರ್ಮಿ ಮಹಾತೋ ಮತ್ತು ಬುಡಕಟ್ಟು ಸಮುದಾಯದ ಹೆಚ್ಚು ಜನರಿದ್ದಾರೆ. ಇಲ್ಲಿ, ಮರೆಯಾಗಿ ಹೋಗಿದ್ದ ‘ಬ್ರಾಹ್ಮಣ ಬಂಧನ’ ಎಂಬ ಆಚರಣೆಯು 2015ರಲ್ಲಿ ಸಾಂಕೇತಿಕವಾಗಿ ಆರಂಭವಾಯಿತು. ಈಗ ಅದು ಇಡೀ ಗ್ರಾಮದಲ್ಲಿ ಮೌಢ್ಯ, ಮನುವಾದ, ಜಾತಿ ತಾರತಮ್ಯವನ್ನು ಬೇರೂರುವಂತೆ ಮಾಡಿದೆ. ಬುಡಕಟ್ಟು ಸಂಸ್ಕೃತಿಯನ್ನು ದುರ್ಬಲಗೊಳಿಸಿದೆ. ಶ್ರೇಣೀಕೃತ ಮತ್ತು ಜಾತಿ ಪದ್ಧತಿಯನ್ನು ಹೇರಿಕೆ ಮಾಡುತ್ತಿದೆ.
2015ರಿಂದ ಗ್ರಾಮದಲ್ಲಿ ಬ್ರಾಹ್ಮಣೇತರ ಪುರುಷರು ಸಾಷ್ಟಾಂಗ ನಮಸ್ಕಾರ ಮಾಡುವ ರೀತಿಯಲ್ಲಿ ಮಲಗಿ ಅವರ ಮೇಲೆ ಬ್ರಾಹ್ಮಣ ಪುರೋಹಿತರು ನಡೆದುಕೊಂಡು ಹೋಗುವ ಅನಿಷ್ಟ, ತಾರತಮ್ಯದ ಪದ್ದತಿ ಮತ್ತೆ ಆರಂಭವಾಗಿದೆ. ಹೀಗೆ ಮಾಡುವುದರಿಂದ ಬ್ರಾಹ್ಮಣೇತರರಿಗೆ ಸಮೃದ್ಧಿ ದೊರೆಯುತ್ತದೆ ಎಂದು ನಂಬಿಸಲಾಗಿದೆ.
ಕಳೆದ ಏಪ್ರಿಲ್ 14ರಂದು, ಅದೂ ಮನುವಾದ, ಜಾತೀಯತೆಯ ವಿರುದ್ಧ ಹೋರಾಟ ನಡೆಸಿದ್ದ ಬಾಬಾಸಾಹೇಬ್ ಅಂಬೇಡ್ಕರರ ಜನ್ಮದಿನದಂದೇ ಈ ಅನಿಷ್ಟ ಆಚರಣೆಯು ಕೂರ್ಮಸೋಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಳದಲ್ಲಿ ಧಾರ್ಮಿಕ ಸ್ನಾನ ಮಾಡಿದ ಬ್ರಾಹ್ಮಣೇತರ ಪುರುಷರು ಧೋತಿಗಳು ಮತ್ತು ನಡುವಂಗಿಗಳನ್ನು ಧರಿಸಿ, ಬೀದಿಯ ಉದ್ದಕ್ಕೂ ಸಾಷ್ಟಾಂಗ ಮಲಗಿದರು. ಅವರ ಎದೆ ಮತ್ತು ಬೆನ್ನಿನ ಮೇಲೆ ಬ್ರಾಹ್ಮಣ ಪುರೋಹಿತರು ತುಳಿದುಕೊಂಡು ಹೋದರು. ಪುರೋಹಿತರ ತುಳಿತವನ್ನು ನೆರೆದಿದ್ದ ಜನಸಮೂಹ ಸಂಭ್ರಮಿಸಿತು.
ಈ ಸಂಭ್ರಮವು ತಮ್ಮನ್ನು ತಾವೇ ತಾರತಮ್ಯಕ್ಕೆ ಒಳಪಡಿಸಿಕೊಂಡು, ತುಳಿಸಿಕೊಂಡು, ದಮನಕ್ಕೊಳಗಾಗಿ ಸಂಭ್ರಮಿಸುತ್ತಿರುವಂತೆ ತೋರುತ್ತಿತ್ತು. ಆದರೂ, ‘ಬ್ರಾಹ್ಮಣರ ಪಾದಗಳು ನಮ್ಮ ಎದೆಯನ್ನು ತುಳಿದಾಗ, ಅದು ನಮ್ಮನ್ನು ಆಶೀರ್ವದಿಸುತ್ತದೆ. ಈ ನಂಬಿಕೆ ನಮ್ಮ ಅಜ್ಜರಿಂದ ಬಂದಿದೆ’ ಎಂದು ತುಳಿತಕ್ಕೊಳಗಾದವರು ಹೇಳಿದ್ದಾರೆ. ಜೊತೆಗೆ, ‘ಇಂತಹ ಆಚರಣೆಯಲ್ಲಿ ಭಾಗಿಯಾಗದಿದ್ದರೆ ಅಂತಹವರನ್ನು ಸಾಮಾಜಿಕವಾಗಿ ದೂರವಿದ್ದಾರೆಂದು ನಿಂದಿಸಲಾಗುತ್ತದೆ’ ಎಂಬ ವಿಚಾರವನ್ನೂ ಕೆಲವರು ಹೇಳಿಕೊಂಡಿದ್ದಾರೆ.
ಇದು ಏನನ್ನು ಸೂಚಿಸುತ್ತದೆ. ವೈಜ್ಞಾನಿಕ ಚಿಂತನೆಗಳು ಬೆಳೆಯಬೇಕಿದ್ದ ಸಮಾಜವನ್ನು ಮೌಢ್ಯವು ಆವರಿಸುತ್ತಿದೆ. ಸಮಾನತೆ ಗಟ್ಟಿಗೊಳ್ಳಬೇಕಿದ್ದ ನೆಲದಲ್ಲಿ ಜಾತಿ ತಾರತಮ್ಯ, ಮನುವಾದ, ಅಸ್ಪೃಶ್ಯತೆ ಮತ್ತೆ ಚಿಗುರುತ್ತಿದೆ. ಬೇರು ಬಿಡುತ್ತಿದೆ. ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಮಡಿ-ಮೈಲಿಗೆಯಂತಹ ಜಾತಿ ತಾರತಮ್ಯವು ಬಲಗೊಳ್ಳುತ್ತಿದೆ. ಬ್ರಾಹ್ಮಣವಾದವನ್ನು ಮುನ್ನೆಲೆಗೆ ತರುತ್ತಿದೆ.
ಇಂತಹ ಪ್ರಕರಣಗಳು ಅಥವಾ ಘಟನೆಗಳು ಬಂಗಾಳದಲ್ಲಿ ಮಾತ್ರವೇ ನಡೆಯುತ್ತಿಲ್ಲ. ದಲಿತರ ಮೇಲಿನ ದೌರ್ಜನ್ಯಗಳು, ದಮನಗಳು, ಅತ್ಯಾಚಾರಗಳು ದೇಶಾದ್ಯಂತ ಎಗ್ಗಿಲ್ಲದೆ ನಡೆಯುತ್ತಿವೆ. ರಾಜಸ್ಥಾನ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ದಲಿತರು ಕುದುರೆ ಸವಾರಿ ಮಾಡಿದರೆ, ಅಮಾನುಷವಾಗಿ ಹಲ್ಲೆ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ದಲಿತರಿಗೆ ದೇವಾಲಯ ಪ್ರವೇಶ ನಿರ್ಬಂಧವೂ ಬೇರುಬಿಟ್ಟಿದೆ.
ದಲಿತರ ಮೇಲೆ ದೌರ್ಜನ್ಯ ಎಸಗುವ ಪ್ರಬಲ ಜಾತಿಯ ಜನರೂ ದೇಶಾದ್ಯಂತ ಬ್ರಾಹ್ಮಣ್ಯ, ಪುರೋಹಿತಶಾಹಿಗಳಿಂದ ದಮನಕ್ಕೆ ಒಳಗಾಗುತ್ತಿದ್ದಾರೆ. ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಗ್ಗಾಗ್ಗೆ ಮಡೆ ಸ್ನಾನದಂತಹ ಅಸಹ್ಯ ಮತ್ತು ಅನಿಷ್ಟ ಆಚರಣೆ ನಡೆಯುತ್ತದೆ. ಬ್ರಾಹ್ಮಣರು ತಿಂದು ಬಿಟ್ಟ ಎಂಜಲು ಎಲೆಗಳ ಮೇಲೆ ಬ್ರಾಹ್ಮಣೇತರರು ಉರುಳು ಸೇವೆ ಮಾಡಿ, ಮಡೆ ಸ್ನಾನ ಮಾಡುತ್ತಿದ್ದಾರೆ. ಹಾಗೆ ಮಾಡುವುದರಿಂದ ತಮಗೆ ಆರೋಗ್ಯ, ಐಶ್ವರ್ಯ, ಸಂಪತ್ತು ದೊರೆಯುತ್ತದೆ ಎಂಬ ಮೌಢ್ಯ ಆವರಿಸಿಕೊಂಡಿದೆ.
ಅಂತೆಯೇ, ಓಂ ಶಕ್ತಿ, ಶಬರಿಮಲೆ, ತಿರುಪತಿ, ಕಾಶಿ, ವಾರಾಣಸಿ, ಪ್ರಯಾಗ್‌ರಾಜ್ ಸೇರಿದಂತೆ ನಾನಾ ಭಾಗಗಳಲ್ಲಿ ಇಂತಹ ಅನಿಷ್ಟ ಆಚರಣೆಗಳು ನಡೆಯುತ್ತಿವೆ. ಬ್ರಾಹ್ಮಣ್ಯ ಶ್ರೇಷ್ಠತೆಯ ವಾದವನ್ನು ಬಲಗೊಳಿಸುತ್ತಿವೆ. ಬ್ರಾಹ್ಮಣರಿಂದಲೇ ಬ್ರಾಹ್ಮಣ್ಯೇತರರು ಪಾವನರಾಗುತ್ತಾರೆ, ಕರ್ಮಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಮನುವಾದಿ ವರ್ಣಾಶ್ರಮ ಅನುಷ್ಠಾನಕ್ಕೆ ಷಡ್ಯಂತ್ರಗಳು ನಡೆಯುತ್ತಿವೆ.
ಈ ವರದಿ ಓದಿದ್ದೀರಾ?: ಆರ್‌ಎಸ್‌ಎಸ್ ಒಪ್ಪುತ್ತಿಲ್ಲ – ಮೋದಿಗೆ ಮತ್ತೊಬ್ಬ ‘ರಬ್ಬರ್ ಸ್ಟ್ಯಾಂಪ್’ ಸಿಗುತ್ತಿಲ್ಲ!
ವರ್ಣಾಶ್ರಮದಲ್ಲಿ ವಿಷ್ಣುವಿನ ತಲೆಯಲ್ಲಿ ಬ್ರಾಹ್ಮಣರು, ಭುಜದಲ್ಲಿ ಕ್ಷತ್ರಿಯರು, ಸೊಂಟದಲ್ಲಿ ವೈಶ್ಯರು ಹಾಗೂ ಪಾದದಲ್ಲಿ ಅಸ್ಪೃಶ್ಯರು ಜನಿಸಿದರು ಎಂಬ ವಾದ ಮತ್ತು ಈ ಶ್ರೇಣೀಕೃತ ತಾರತಮ್ಯ ಹೀಗೆಯೇ ಇರಬೇಕು ಎಂಬುದು ಬಿಜೆಪಿ-ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾ. ಇದನ್ನು ಸಾಕಾರಗೊಳಿಸಲು ಧಾರ್ಮಿಕ ಆಚರಣೆ-ಕಾರ್ಯಕ್ರಮಗಳಲ್ಲಿ ಈ ತಾರತಮ್ಯ ಇರುವಂತೆ ಮತ್ತು ಅದನ್ನು ಜನಸಾಮಾನ್ಯರೇ ಒಪ್ಪಿಕೊಳ್ಳುವಂತೆ ಮಾಡಲು ಎಲ್ಲ ರೀತಿಯಲ್ಲೂ ಪ್ರಯತ್ನಗಳು ನಡೆಯುತ್ತಿವೆ.
ಮಠಗಳು ನಡೆಸುವ ಶಾಲೆಗಳು ‘ಬ್ರೈನ್ ವಾಶ್’ ಮಾಡುವ ಕೇಂದ್ರಗಳಾಗಿ ಬಳಕೆಯಾಗುತ್ತಿವೆ. ಅಲ್ಲಿ, ಬ್ರಾಹ್ಮಣ್ಯವನ್ನು ಹೇರಳವಾಗಿ ಮಕ್ಕಳ ತಲೆಗೆ ತುಂಬಲಾಗುತ್ತಿದೆ. ಬೆಳೆಯುವ ಮಕ್ಕಳಲ್ಲಿ ಜಾತಿವಾದಿ ತಾರತಮ್ಯದ ಬೀಜ ಬಿತ್ತಲಾಗುತ್ತಿದೆ. ಬ್ರಾಹ್ಮಣೇತರರು ಬ್ರಾಹ್ಮಣರ ಪಾದದಡಿಯಲ್ಲಿ ಇರಬೇಕು. ಅವರ ಪಾದ ಮುಟ್ಟಿ ಪಾವನರಾಗಬೇಕು ಎಂಬ ಮೌಢ್ಯವನ್ನು ನಾಜೂಕಾಗಿ ಹೇರಲಾಗುತ್ತಿದೆ. ಸನಾತನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶ್ರೇಷ್ಠ ಎಂಬ ಭಾವನೆ ಬಿತ್ತಲಾಗುತ್ತಿದೆ.
ಇದನ್ನು ಕೂರ್ಮಸೋಲ್‌ನಲ್ಲಿ ನಡೆದ ‘ಬ್ರಾಹ್ಮಣ ಬಂಧನ’ ಆಚರಣೆಯು ಬಹಿರಂಗಪಡಿಸಿದೆ. ಈ ಜಾತಿ ದೌರ್ಜನ್ಯ, ತಾರತಮ್ಯ, ವರ್ಣಾಶ್ರಮಗಳ ಹಿಂದಿನ ಮನುವಾದಿ ಅಜೆಂಡಾವನ್ನು ಸಮಾಜ ಅರಿತುಕೊಳ್ಳದಿದ್ದರೆ, ಜಾಗೃತಗೊಳ್ಳದಿದ್ದರೆ, ಸಂವಿಧಾನಪೂರ್ವದ ಜಾತಿ ವ್ಯವಸ್ಥೆಯು ನವಭಾರತದಲ್ಲಿ ಮತ್ತೆ ಮುನ್ನೆಲೆಗೆ ಬರಲಿದೆ. ಬ್ರಾಹ್ಮಣೇತರರು ಮತ್ತು ಮಹಿಳೆಯರ ಶಿಕ್ಷಣ ಸೇರಿದಂತೆ ಹಲವಾರು ಹಕ್ಕುಗಳನ್ನು ಕಸಿದುಕೊಂಡು ಗುಲಾಮಗಿರಿ ತರಲಿದೆ.