ತಾನು ರೂಪಿಸಿ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ತುಂಬಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ನಿಧಿಗೆ ಕೈ ಹಾಕಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ.
ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ (2014-15ರಿಂದ 2022-23) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಧಿಯ ಪೈಕಿ ಒಟ್ಟು 15,553 ಕೋಟಿ ರುಪಾಯಿಗಳನ್ನು ಅನ್ಯ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ.
ಈ ಅನ್ಯಾಯದ ವಾಸ್ತವ ಸಂಗತಿಯನ್ನು ರಾಜ್ಯ ಸರ್ಕಾರ ಖುದ್ದು ಒಪ್ಪಿಕೊಂಡಿದೆ. 2023 ಮತ್ತು 24-25ರಲ್ಲಿ ಪರಿಶಿಷ್ಟರ ಇದೇ ನಿಧಿಯಿಂದ ಒಟ್ಟು 25,396.38 ಕೋಟಿ ರುಪಾಯಿಗಳನ್ನು ತನ್ನ ಐದು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಿಕೊಂಡಿದೆ. ಪರಿಶಿಷ್ಟರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮೀಸಲಿಡುತ್ತಿರುವ ಅನುದಾನವು ಈ ಸಮುದಾಯಗಳನ್ನು ಸರಿಯಾಗಿ ತಲುಪುತ್ತಿಲ್ಲ ಎಂಬುದಾಗಿ ರಾಜ್ಯ ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ವರದಿ ಹೇಳಿದೆ. ಈ ಸಂಬಂಧದಲ್ಲಿ ಅನುದಾನದ ಸಾರ್ಥಕ ಬಳಕೆಗಾಗಿ ಹೊಸ ವ್ಯವಸ್ಥೆಯನ್ನು ರೂಪಿಸಬೇಕು ಎಂಬುದಾಗಿ ಸಮಿತಿ ಮಾಡಿರುವ ಶಿಫಾರಸನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ರಾಜ್ಯ ಸರ್ಕಾರ ತನ್ನ ವಾರ್ಷಿಕ ಬಜೆಟ್ಟಿನ ಶೇ.24.10ರಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವೆಚ್ಚ ಮಾಡಲೇಬೇಕು. 2013ರ ಕರ್ನಾಟಕ ಪರಿಶಿಷ್ಟ ಜಾತಿ ಉಪಯೋಜನೆ (ಎಸ್ ಸಿ ಎಸ್.ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿ.ಎಸ್.ಪಿ) ಕಾಯಿದೆ ಪ್ರಕಾರ ಪರಿಶಿಷ್ಟರ ಕಲ್ಯಾಣಕ್ಕೆ ಶೇ.24.10ರಷ್ಟು ವೆಚ್ಚ ಕಡ್ಡಾಯ. ಇಂತಹ ನ್ಯಾಯಪರ ಕಾಯಿದೆಯನ್ನು 2013ರಲ್ಲಿ ಜಾರಿಗೊಳಿಸಿದ್ದು ಸಿದ್ದರಾಮಯ್ಯ ಅವರ ಸರ್ಕಾರವೇ. ಅದೇ ಸರ್ಕಾರ ಈ ನಿಧಿಯನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸುವುದು ಕಾಯಿದೆಯ ನಿಚ್ಚಳ ಉಲ್ಲಂಘನೆ.
ಈ ಕಾಯಿದೆಯ ಸೆಕ್ಷನ್ 7 ಡಿ ಅಡಿಯಲ್ಲಿನ ‘ಪರಿಭಾವಿತ ವೆಚ್ಚ’ದ ಅರ್ಥವನ್ನು ರಾಜ್ಯವನ್ನು ಆಳುತ್ತ ಬಂದಿರುವ ಎಲ್ಲ ಸರ್ಕಾರಗಳು ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡಿಕೊಂಡು ಪರಿಶಿಷ್ಟರ ಪಾಲಿನ ಅನುದಾನವನ್ನು ತಮ್ಮ ಅನುಕೂಲದ ಪ್ರಕಾರ ಬಳಸಿವೆ.ರಸ್ತೆಗಳು ಸೇತುವೆಗಳಂತಹ ಮೂಲಸೌಲಭ್ಯಗಳನ್ನು ಪರಿಶಿಷ್ಟರೂ ಬಳಸುತ್ತಾರೆ ಎಂಬ ನೆಪ ಮುಂದೆ ಮಾಡಿವೆ.
ಪರಿಶಿಷ್ಟ ಜಾತಿ ಪಂಗಡಗಳ ಉಪಯೋಜನೆ ಕಾಯಿದೆಯ ಸೆಕ್ಷನ್ 7 ಡಿ ಪ್ರಕಾರ ಮೂಲಸೌಲಭ್ಯ ಯೋಜನೆಗಳಿಗೆ ಬಳಕೆ ಮಾಡುವ ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿಗಾಗಿಯೇ ಬಳಸಲಾಗಿದೆ ಎಂದು ಪರಿಭಾವಿಸಬಹುದು ಎಂದು ರಾಜ್ಯ ಸರ್ಕಾರಗಳು ವ್ಯಾಖ್ಯಾನ ಮಾಡಿಕೊಂಡಿವೆ. ಸೆಕ್ಷನ್ ಸಿ ಅಡಿಯಲ್ಲಿ ಎಲ್ಲ ಜಾತಿ ಧರ್ಮಗಳಿಗೂ ಅನ್ವಯ ಆಗುವ ಶಿಕ್ಷಣ ಆರೋಗ್ಯ ಇತ್ಯಾದಿ ಯೋಜನೆಗಳಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಮಾತ್ರ ಅನುದಾನ ಬಿಡುಗಡೆ ಮಾಡಬೇಕೆಂದು ಹೇಳಲಾಗಿದೆ. 7 ಸಿ ಮತ್ತು 7 ಡಿ ಎಂಬ ಎರಡೂ ಸೆಕ್ಷನ್ ಗಳು ಪರಿಶಿಷ್ಟರ ಅನುದಾನಕ್ಕೆ ಕನ್ನ ಹಾಕಲು ಅವಕಾಶ ಮಾಡಿಕೊಟ್ಟಿವೆ.
ರಾಜ್ಯ ಸರ್ಕಾರದ ನಡೆಯನ್ನು ರಾಜ್ಯ ಬಿಜೆಪಿಯು ದಲಿತ ವಿರೋಧಿ ಎಂದು ಬಣ್ಣಿಸಿದೆ. ಆದರೆ ಇಂತಹ ದಲಿತವಿರೋಧಿ ನಡೆಯಲ್ಲಿ ಬಿಜೆಪಿ ತಾನೇನೂ ಹಿಂದೆ ಬಿದ್ದಿರಲಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ 10 ಸಾವಿರ ಕೋಟಿ ರುಪಾಯಿಗಳಷ್ಟು ಮೊತ್ತವನ್ನು ಇತರೆ ಉದ್ದೇಶಗಳಿಗೆ ವರ್ಗಾಯಿಸಿತ್ತು. ರಸ್ತೆ, ಜಲಾಶಯಗಳು ಮುಂತಾದ ಭಾರೀ ಮೂಲಸೌಲಭ್ಯಗಳನ್ನು ಸಾಮಾನ್ಯ ವರ್ಗಗಳ ಜನ ಮಾತ್ರವೇ ಬಳಸುವುದಿಲ್ಲ. ಇವುಗಳ ಪ್ರಯೋಜನವನ್ನು ಪರಿಶಿಷ್ಟ ಫಲಾನುಭವಿಗಳೂ ಪಡೆಯುತ್ತಾರೆ ಎಂಬುದು ಬಿಜೆಪಿ ಸರ್ಕಾರದ ಸಮರ್ಥನೆಯಾಗಿತ್ತು.
ಉರ್ದುವನ್ನು ಆಡುಮಾತಿನಲ್ಲಿ ಹೆಚ್ಚು ಬಳಸುವ ಕಲ್ಯಾಣ ಕರ್ನಾಟಕ ಸೀಮೆಯಲ್ಲಿ ಗಾದೆಯೊಂದು ಬಳಕೆಯಲ್ಲಿದೆ. ‘ಹಮಾಮ್ ಮೇಂ ಸಬ್ ನಂಗಾ ಹೈ’ (ಸ್ನಾನದ ಕೋಣೆಯಲ್ಲಿ ಎಲ್ಲರೂ ನಗ್ನರೇ) ಎಂಬ ಈ ಗಾದೆ ಬಿಜೆಪಿ-ಕಾಂಗ್ರೆಸ್ಸು ಎರಡಕ್ಕೂ ಅನ್ವಯಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕರು ಪಕ್ಷಭೇದ ಮರೆತು ಈ ದಲಿತವಿರೋಧಿ ನಡೆಗಳನ್ನು ವಿರೋಧಿಸಬೇಕಿತ್ತು.
2023-24ನೆಯ ಸಾಲಿನಿಂದ ಸೆಕ್ಷನ್ ‘ಡಿ’ಯನ್ನು ರದ್ದುಗೊಳಿಸಲಾಗಿದೆ. ಆದರೆ ಸೆಕ್ಷನ್ ಸಿ ಹಾಗೆಯೇ ಮುಂದುವರೆದಿದೆ. ಈ ಸೆಕ್ಷನ್ ಅಡಿಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಪರಿಶಿಷ್ಟರ ಕಲ್ಯಾಣ ನಿಧಿ ಬಳಕೆ ಮುಂದುವರೆದಿದೆ. ಸೆಕ್ಷನ್ 7 ಡಿ ಯನ್ನು ರದ್ದು ಮಾಡಿರುವಂತೆ ಸೆಕ್ಷನ್ 7 ಸಿಯನ್ನೂ ಕೂಡ ರಾಜ್ಯ ಸರ್ಕಾರ ಕೂಡಲೇ ರದ್ದುಗೊಳಿಸಬೇಕು. ವಿಧಾನಮಂಡಲ ಸಮಿತಿಯ ಆಗ್ರಹದ ಪ್ರಕಾರ ಪರಿಶಿಷ್ಟರ ಕಲ್ಯಾಣ ನಿಧಿಯನ್ನು ಅನ್ಯ ಉದ್ದೇಶಗಳಿಗೆ ವೆಚ್ಚ ಮಾಡಿರುವ ಕುರಿತು ಶ್ವೇತಪತ್ರ ಪ್ರಕಟಿಸಬೇಕು.
ತಾನು ರೂಪಿಸಿ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ತುಂಬಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ನಿಧಿಗೆ ಕೈ ಹಾಕಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ರಾಜ್ಯಕ್ಕೆ ಬರಬೇಕಿರುವ ಅನುದಾನಗಳನ್ನು ಕೇಂದ್ರ ಸರ್ಕಾರ ಹಿಡಿದಿಟ್ಟುಕೊಂಡಿರುವ ಕಾರಣವನ್ನು ರಾಜ್ಯ ಸರ್ಕಾರ ಮುಂದೆ ಮಾಡಿದೆ. ಈ ದೂರಿನಲ್ಲಿ ವಾಸ್ತವಾಂಶ ಇದ್ದೀತು. ಆದರೆ ಈ ಕೊರತೆಯ ಕೊಡಲಿ ಪೆಟ್ಟು ದನಿ ಸತ್ತ, ದಲಿತ ದಮನಿತ ಸಮುದಾಯಗಳ ಮೇಲೆಯೇ ಯಾಕೆ ಬೀಳಬೇಕು?
ಈ ದಲಿತ ವಿರೋಧಿ ಕ್ರಮದ ವಿರುದ್ಧ ದಲಿತ ಸಂಘಟನೆಗಳು ತೋಳೇರಿಸಿರುವುದು ಸರ್ವಥಾ ಸಮರ್ಥನೀಯ. ದೀನದಲಿತರು ಶೋಷಿತರ ಪರ ಕಾರ್ಯಸೂಚಿ ಹೊಂದಿದ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳೇ ದಲಿತರ ಬೆನ್ನಿಗೆ ಇರಿದರೆ ಪೊರೆಯುವವರು ಯಾರು?
ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಿಕೊಳ್ಳಲಾಗಿರುವ ಹಣವನ್ನು ಪರಿಶಿಷ್ಟರಿಗೇ ವೆಚ್ಚ ಮಾಡಲಾಗುವುದು ಎಂಬುದು ರಾಜ್ಯ ಸರ್ಕಾರದ ಸಮಜಾಯಿಷಿ. ಆದರೆ ಅವರಿಗೆಂದು ಕಾಯಿದೆ ಪ್ರಕಾರ ಮೀಸಲಿಟ್ಟ ಹಣವನ್ನು ಅವರಿಗೆ ನೀಡಲಾಗುತ್ತಿದೆಯೇ ವಿನಾ, ದಲಿತರಿಗೆ ಹೊಸದಾಗಿ ಸಿಕ್ಕಿದ್ದಾದರೂ ಏನು? ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಹೆಣ್ಣು ಮಕ್ಕಳಿಗೆ ಜಾತಿ ಕೇಳಿ ಟಿಕೆಟ್ ಕೊಡ್ತೀರಾ, ಅನ್ನಭಾಗ್ಯದಲ್ಲಿ ಜಾತಿ ಪರಿಶೀಲಿಸಿ ಅಕ್ಕಿ ಕೊಡ್ತೀರಾ ಎಂಬ ದಲಿತ ಸಂಘಟನೆಗಳ ಪ್ರಶ್ನೆ ನ್ಯಾಯಯುತವಾಗಿದೆ.
ದಲಿತ ಸಮುದಾಯಗಳಲ್ಲಿ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಸೂಕ್ತ ಹಾಸ್ಟೆಲ್ ಸೌಲಭ್ಯಗಳ ಕೊರತೆಯಿದೆ. ಮಹಿಳೆಯರ ಸ್ಥಿತಿಗತಿಗಳು ಶೋಚನೀಯ. ಈ ಹಿನ್ನೆಲೆಯಲ್ಲಿ ಮೀಸಲು ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಿಕೊಳ್ಳುವುದು ಯಾವ ನ್ಯಾಯ ಎಂಬ ದಲಿತರ ಪ್ರಶ್ನೆ ನ್ಯಾಯಬದ್ಧವಾಗಿದೆ. ತಲೆಮಾರುಗಳುದ್ದಕ್ಕೂ ನಡೆದು ಬಂದಿರುವ ಮೋಸದ ಮುಂದುವರಿಕೆಯಿದು
ದಲಿತ ಸಮುದಾಯಗಳನ್ನು ನಿತ್ಯವೂ ಸುಟ್ಟು ತಿನ್ನುವ ಹತ್ತಾರು ಸಮಸ್ಯೆಗಳು ಜೀವಂತವಾಗಿಯೇ ಇವೆ.
ದಲಿತರು- ಆದಿವಾಸಿ ವಿದ್ಯಾರ್ಥಿಗಳ ಶಾಲಾಕಾಲೇಜು ಶಿಕ್ಷಣ ಕುಂಟತೊಡಗಿದೆ. ವಿದ್ಯಾರ್ಥಿವೇತನ ಬಿಡುಗಡೆಯಲ್ಲಿ ವರ್ಷಗಟ್ಟಲೆ ವಿಳಂಬ ಆಗತೊಡಗಿದೆ. ಶಿಕ್ಷಣ ಸಂಸ್ಥೆಗಳು ಅವರಿಂದ ಮುಂಗಡವಾಗಿ ಶುಲ್ಕ ಪಾವತಿಗೆ ಆಗ್ರಹಿಸಿವೆ. ಪರಿಣಾಮವಾಗಿ ಭಾರೀ ಸಂಖ್ಯೆಯ ದಲಿತ-ದಮನಿತರು ಶಿಕ್ಷಣದಿಂದ ವಂಚಿತರಾಗತೊಡಗಿದ್ದಾರೆ. ಸದ್ದಿಲ್ಲದೆ ಜರುಗಿರುವ ಅಕ್ಷರವಂಚನೆಯಿದು.
