ಈ ದಿನ ಸಂಪಾದಕೀಯ | ಕನ್ನಡ ಶಾಲೆಗಳೇಕೆ ಕದ ಮುಚ್ಚುತ್ತಿವೆ? ಬಡವರ ಗುಡಿಸಲುಗಳಂತಾಗಿವೆ?

Date:

Advertisements

ರಾಜ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಹೇಗಿದೆ? ವರ್ಷದಲ್ಲಿ ಎಷ್ಟು ಶಾಲೆಗಳು ಮುಚ್ಚುತ್ತಿವೆ? ಕನ್ನಡ ಶಾಲೆಗಳಿಗೆ ಗ್ರಾಮೀಣ ಭಾಗದ ಮಕ್ಕಳೂ ಬರದಿರುವುದಕ್ಕೆ ಏನು ಕಾರಣ? ರಾಜ್ಯ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತಿದೆ, ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನಕ್ಕೆ ಜಿಗಿದಿದೆ ಎಂದು ಪುಟಗಟ್ಟಲೆ ಜಾಹೀರಾತು ಕೊಡುವ ಸರ್ಕಾರ ರಾಜ್ಯೋತ್ಸವದ ದಿನ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ.

ನಾಡು 69ನೇ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದೆ. ಜೊತೆಗೆ ಕರ್ನಾಟಕ ಎಂಬ ಹೆಸರು ಮರು ನಾಮಕರಣವಾಗಿ ಐದು ದಶಕ ಪೂರೈಸಿದೆ. ಸರ್ಕಾರ ಈ ಬಾರಿ 69 ಸಾಧಕರಿಗೆ ರಾಜ್ಯೋತ್ಸವ ನೀಡಿದೆ. ಪ್ರಶಸ್ತಿಯ ಜೊತೆಗೆ ನಗದು ಪುರಸ್ಕಾರ 2021ರವರೆಗೂ 1ಲಕ್ಷ ರೂ.ಇತ್ತು. ಬಸವರಾಜ ಬೊಮ್ಮಾಯಿ ಅವರು 2022ರಲ್ಲಿ ಈ ಮೊತ್ತವನ್ನು ಐದು ಲಕ್ಷಕ್ಕೆ ಏರಿಸಿದ್ದರು. ಜೊತೆಗೆ 25 ಗ್ರಾಂ ಚಿನ್ನದ ಪದಕ! ಚಿನ್ನದ ಬೆಲೆ ಈಗ ಗಗನಕ್ಕೇರಿದೆ. ಇಂದಿನ ದರದ ಪ್ರಕಾರ 25 ಗ್ರಾಂ ಚಿನ್ನದ ದರ 2ಲಕ್ಷ ದಾಟುತ್ತದೆ. ಇನ್ನು ಫಲಕ, ಹಾರ, ಶಾಲು, ಹಣ್ಣು ಎಲ್ಲ ಸೇರಿ ಇನ್ನೊಂದಷ್ಟು ಖರ್ಚುಗಳಿವೆ. ನಗದು, ಚಿನ್ನ ಸೇರಿ ಪ್ರತಿಯೊಬ್ಬರಿಗೂ ಕನಿಷ್ಠ ಏಳೂವರೆ ಲಕ್ಷದಷ್ಟು ಖರ್ಚಾಗುತ್ತದೆ. ಜೊತೆಗೆ ಈ ಬಾರಿ ಸುವರ್ಣ ವರ್ಷಾಚರಣೆಯ ನೆನಪಿನಲ್ಲಿ ನೂರು ಮಂದಿ ಸಾಧಕರನ್ನು ಗುರುತಿಸಿ ವಿಶೇಷ ಪ್ರಶಸ್ತಿಯನ್ನು ಸರ್ಕಾರ ಕೊಡುತ್ತಿದೆ. ಈ ಪ್ರಶಸ್ತಿಯ ಜೊತೆ 1 ಲಕ್ಷ ರೂ. ನಗದು ಕೂಡಾ ಇರಲಿದೆ. ಇನ್ನು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿಯೂ ಪ್ರಶಸ್ತಿ ನೀಡಲಾಗುತ್ತದೆ. ಒಟ್ಟಾರೆಯಾಗಿ ಸರ್ಕಾರ ರಾಜ್ಯೋತ್ಸವದ ಹೆಸರಿನಲ್ಲಿ ಪ್ರತಿವರ್ಷ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದೆ. ಕನ್ನಡ ನಾಡಿಗೆ ಇದರಿಂದ ಆಗುತ್ತಿರುವ ಲಾಭವೇನು? ಪ್ರಶಸ್ತಿ ಪಡೆದವರಿಗೆ ಇದರಿಂದ ವೈಯಕ್ತಿಕ ಲಾಭವಾಗುತ್ತದೆಯೇ ಹೊರತು ಅದರಿಂದ ನಾಡಿಗೇನು ಪ್ರಯೋಜನ ಎಂದು ಕೇಳುವುದು, ಇಷ್ಟು ಹಣವನ್ನು ಕನ್ನಡ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ವ್ಯಯಿಸಬಹುದಲ್ಲಾ ಎಂಬ ಪ್ರಶ್ನಿಸುವುದು ಅಸಮಂಜಸವೇನಲ್ಲ. ಪ್ರಶಸ್ತಿ ನೀಡುವುದು ತಪ್ಪಲ್ಲ, ಅದರ ಜೊತೆಗೆ ಕನ್ನಡ ಶಾಲೆಗಳನ್ನು ಉಳಿಸುವ, ಕನ್ನಡವನ್ನು ಬೆಳೆಸುವ ಕೆಲಸ, ಕನ್ನಡದ ಮಕ್ಕಳನ್ನು ಪೊರೆಯುವ ಕೆಲಸವೂ ಸರ್ಕಾರದ ಕಡೆಯಿಂದ ಆಗಬೇಕಲ್ಲವೇ?

ರಾಜ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಹೇಗಿದೆ? ವರ್ಷದಲ್ಲಿ ಎಷ್ಟು ಶಾಲೆಗಳು ಮುಚ್ಚುತ್ತಿವೆ? ಕನ್ನಡ ಶಾಲೆಗಳಿಗೆ ಗ್ರಾಮೀಣ ಭಾಗದ ಮಕ್ಕಳೂ ಬರದಿರುವುದಕ್ಕೆ ಏನು ಕಾರಣ? ರಾಜ್ಯ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತಿದೆ, ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನಕ್ಕೆ ಜಿಗಿದಿದೆ ಎಂದು ಪುಟಗಟ್ಟಲೆ ಜಾಹೀರಾತು ಕೊಡುವ ಸರ್ಕಾರ ರಾಜ್ಯೋತ್ಸವದ ದಿನ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ.

Advertisements

ರಾಜ್ಯ ರಚನೆಯಾಗಿ ಏಳು ದಶಕ ಪೂರೈಸಿದೆ. ಇನ್ನೂ ಸರ್ಕಾರಿ ಶಾಲೆಗಳಿಗೆ ಶಿಕ್ಷಕರು, ಸುಭದ್ರ ಕಟ್ಟಡ, ಶೌಚಾಲಯ, ಪ್ರಯೋಗಾಲಯ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸಲಾಗದಷ್ಟು ದುಸ್ಥಿತಿ ಯಾಕಿದೆ? ಯಾವುದೇ ಸರ್ಕಾರ ಬಂದರೂ ಸರ್ಕಾರಿ ಶಾಲೆಗಳನ್ನು ಉದ್ದಾರ ಮಾಡುವ ಕಡೆಗೆ ಇಚ್ಛಾಶಕ್ತಿ ತೋರುತ್ತಿಲ್ಲ, ಘೋಷಣೆಗೆ ಮಾತ್ರ ಬರವಿಲ್ಲ. ಒಂದು ಕಡೆ ಮಾಹಿತಿ ತಂತ್ರಜ್ಞಾನದ ಕ್ರಾಂತಿ, ಇಂಗ್ಲಿಷ್‌ ಭಾಷೆಯ ಅನಿವಾರ್ಯತೆ, ಸಹಜವಾಗಿಯೇ ಮಕ್ಕಳ ಪೋಷಕರು ಕಷ್ಟವಾದರೂ ಸರಿ ಎಂದು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಭರಪೂರ ಹಣದ ಹರಿವು. ಈ ಮಧ್ಯೆ ಅದೇ ಹರಕು ಮುರುಕು ಕಟ್ಟಡಗಳಲ್ಲಿ ಸರ್ಕಾರಿ ಶಾಲೆ ನಡೆಯುತ್ತಿವೆ. ಮಳೆಗಾಲದಲ್ಲಿ ಶಾಲೆಯ ಚಾವಣಿ ಕುಸಿಯುವ ಸುದ್ದಿ ಮಾಮೂಲಿಯಾಗಿದೆ. ಖಾಸಗಿ ಸಹಭಾಗಿತ್ವ, ದತ್ತು ಸ್ವೀಕಾರ ಮುಂತಾದ ಕಾರಣಕ್ಕೆ ಕೆಲವು ಸರ್ಕಾರಿ ಶಾಲೆಗಳು ಹೊಸ ಕೊಠಡಿ, ಸುಣ್ಣ ಬಣ್ಣ ಕಾಣುವಂತಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಷ್ಟು ಆಕರ್ಷಕ, ಸರ್ವ ಸುಸಜ್ಜಿತವಲ್ಲದಿದ್ದರೂ ಮೂಲಸೌಕರ್ಯ ಚೆನ್ನಾಗಿದ್ದರೆ ಕೆಳ ಮಧ್ಯಮ ಕುಟುಂಬಗಳು ಖಂಡಿತವಾಗಿ ಖಾಸಗಿ ಶಾಲೆಗಳ ಮೊರೆ ಹೋಗಲಾರವು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬುದು ಎಲ್ಲ ಪೋಷಕರ ಆಸೆಯಾಗಿರುತ್ತದೆ. ಅದನ್ನು ಕಷ್ಟ ನಷ್ಟವಾದರೂ ಕೊಡಿಸಲು ಬಯಸುತ್ತಾರೆ. ಅದು ಸರ್ಕಾರಿ ಶಾಲೆಯಲ್ಲೇ ಸಿಗುವಂತಾದರೆ ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಶಾಲೆ ಮುಚ್ಚುವ ಸ್ಥಿತಿ ಬಾರದು. ಹಿಂದೆ ಅದು ಊರಿನ ಎಲ್ಲರ ಶಾಲೆಯಾಗಿತ್ತು. ಬಡವ, ಶ್ರೀಮಂತ ಎಂಬ ಬೇಧಭಾವ ಇಲ್ಲದೇ ಎಲ್ಲರನ್ನೂ ಒಂದುಗೂಡಿಸಿದ ಮಂದಿರವಾಗಿತ್ತು. ಇಂದು ಸರ್ಕಾರಿ ಶಾಲೆ/ ಕನ್ನಡ ಶಾಲೆ ಬಡವರ ಗುಡಿಸಲಿನಂತಾಗಿದೆ.

ಕನ್ನಡ ಶಾಲೆಗಳನ್ನು ಉಳಿಸುವುದಕ್ಕಾಗಿ ಅದೆಷ್ಟು ಸಮಿತಿಗಳು ವರದಿ ನೀಡಿದವೋ, ಆ ಶಿಫಾರಸ್ಸುಗಳೆಲ್ಲ ಏನಾದವು? ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಇದು ಸಂಪೂರ್ಣವಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ಎಂಬ ಟೀಕೆಗಳು ಬಂದವು. ಬಡವರ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಲಿ ತಪ್ಪೇನು ಎಂದು ಮತ್ತೊಂದು ವಾದ. ಇವೆಲ್ಲದರ ನಡುವೆ ಮುಚ್ಚಿದ ಕನ್ನಡ ಶಾಲೆಗಳ ಲೆಕ್ಕ ಇಟ್ಟವರಾರು?

2022-23ರ ಸಾಲಿನಲ್ಲಿ ರಾಜ್ಯದಲ್ಲಿ 48,066 ಸರ್ಕಾರಿ ಶಾಲೆಗಳಿದ್ದವು. ಈ ವರ್ಷ ಶಾಲೆಗಳ ಸಂಖ್ಯೆ 47,449ಕ್ಕೆ ಕುಸಿದಿದೆ. ರಾಜ್ಯದಲ್ಲಿ ಬರೊಬ್ಬರಿ 50 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಕೊರತೆ ಇದೆ. ಕರ್ನಾಟಕ ಮಾಡೆಲ್ ಶಾಲೆ ಸೇರಿದಂತೆ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿಷಯ ಬೋಧಕರಿಲ್ಲ. ಶಿಕ್ಷಣ ಇಲಾಖೆಯ ಮಾಹಿತಿಯ ಪ್ರಕಾರ ವಿದ್ಯಾರ್ಥಿಗಳ ಸಂಖ್ಯೆ 42,66,645 ಇದ್ದರೆ, ಶಿಕ್ಷಕರ ಸಂಖ್ಯೆ ಕೇವಲ 1,73,647. 6,400 ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು! ಇದು ಎಂತಹ ದುರವಸ್ಥೆ? ಈ ಕೊರತೆಯನ್ನು ನೀಗಿಸದೆ ಕೋಟಿಗಟ್ಟಲೆ ಜನರ ತೆರಿಗೆ ಹಣ ಕನ್ನಡದ ಹೆಸರಿನಲ್ಲಿ ವ್ಯರ್ಥ ಮಾಡೋದು ಯಾವ ಪುರುಷಾರ್ಥಕ್ಕೆ ಎಂದು ಕೇಳಲೇಬೇಕಿದೆ.

ಕರ್ನಾಟಕದ ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳು ಮಾತ್ರವಲ್ಲ ಕನ್ನಡ ಮಾತೃ ಭಾಷಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾತೃಭಾಷೆ ಕನ್ನಡವಾದರೆ ಮನೆಯಿಂದಾಚೆ ವ್ಯವಹಾರದಲ್ಲಿ ಪಕ್ಕದ ರಾಜ್ಯಭಾಷೆ ಮಾತನಾಡುವ ಅನಿವಾರ್ಯತೆಯಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಲ್ಲಿನ ಕನ್ನಡ ಶಾಲೆಗಳನ್ನು ಉಳಿಸುವ, ಕನ್ನಡಿಗರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಿದೆ.

ಇದನ್ನೂ ಓದಿ ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ

ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಖಾನಾಪುರ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 115 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಆದರೆ, ಪ್ರತಿ 42 ವಿದ್ಯಾರ್ಥಿಗಳಿಗೆ ಒಂದರಂತೆ ಮರಾಠಿ ಶಾಲೆ ಇದೆ. ಮಹಾರಾಷ್ಟ್ರ ಗಡಿ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ 270ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಈ ಶಾಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಕನ್ನಡ ಮಕ್ಕಳು ಕಲಿಯುತ್ತಿದ್ದಾರೆ. ಪ್ರಸ್ತುತ 1,150 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 500 ಶಿಕ್ಷಕರ ಕೊರತೆ ಇದೆ.

ಒಣ ಭಾಷಣ, ಘೋಷಣೆಗಳಿಗೆ ಇನ್ನಾದರೂ ಕಡಿವಾಣ ಹಾಕಿ ಕನ್ನಡ ಶಾಲೆಗಳ ಉಳಿವಿಗಾಗಿ, ಉದ್ಧಾರಕ್ಕಾಗಿ ಮುಕ್ತ ಮನಸ್ಸಿನಿಂದ ದುಡಿಯಬೇಕಿದೆ. ಅದು ಸರ್ಕಾರ, ಶಿಕ್ಷಣ ಇಲಾಖೆ, ಅಧಿಕಾರಿಗಳು, ಶಿಕ್ಷಕರು ಮತ್ತು ಪೋಷಕರು ಮಾತ್ರವಲ್ಲ ಕನ್ನಡ ನಾಡಿನ ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X