ಈ ದಿನ ಸಂಪಾದಕೀಯ | ಯುವ ಪ್ರೇಮಿಗಳನ್ನು ಅಪರಾಧಿಗಳಂತೆ ನೋಡುವುದೇಕೆ?

Date:

Advertisements
ಮದುವೆಯಾಗದೆ ಒಟ್ಟಿಗೆ ವಾಸಿಸಲು ಆಶಿಸುವ ಭಾರತೀಯ ಸಂಗಾತಿಗಳನ್ನು ತಪ್ಪಿತಸ್ಥರಂತೆ ನೋಡಲಾಗುತ್ತಿದೆ. 'ಲಿವ್-ಇನ್ ಸಂಬಂಧ'ದಲ್ಲಿ ಬದುಕುತ್ತಿರುವ ಪ್ರೇಮಿಗಳನ್ನು ಕಳಂಕಿತರಂತೆ ನೋಡಲಾಗುತ್ತಿದೆ.

ಸಮಾಜದಲ್ಲಿ ಯುವಜನರ ಪ್ರೀತಿಯನ್ನು ವಿರೋಧಿಸುವ, ಅನುಮಾನಿಸುವ ನಿಲುವು ಮತ್ತು ಧೋರಣೆ ಯಾವಾಗಲೂ ಇದ್ದೇ ಇರುತ್ತದೆ. ಅದು ಎಲ್ಲರ ಮನಸ್ಸಿನಲ್ಲಿ ಹುಳುವಿನಂತೆ ಗುಯ್‌ಗುಡುತ್ತಲೇ ಇರುತ್ತದೆ. ಹಿಂದೆಯೂ-ಇಂದೂ ಆ ಹುಳು ನಾನಾ ರೀತಿಯಲ್ಲಿ ರೂಪಾಂತರಗೊಂಡಿದೆಯೇ ಹೊರತು, ಅದಕ್ಕೆ ಔಷಧ ದೊರೆತಿಲ್ಲ.

ಪ್ರೀತಿಯನ್ನು ನಿರಾಕರಿಸುವ, ವಿರೋಧಿಸುವ ಒಂದು ವರ್ಗ ಸಮಾಜದಲ್ಲಿ ಇರುವಾಗಲೇ, ಪ್ರೀತಿಯು ಮತ್ತೊಂದು ಹಂತಕ್ಕೆ ಏರಿಕೆಯಾಗಿದೆ. ಪ್ರೇಮಿಗಳು ‘ಲಿವ್-ಇನ್ ಸಂಬಂಧ’ದೊಂದಿಗೆ ಜೊತೆಯಾಗಿ ಬದುಕಲು ಆರಂಭಿಸಿದ್ದಾರೆ. ಆದರೆ, ಪ್ರೀತಿಯನ್ನೇ ಒಪ್ಪದ ಸಮಾಜ, ‘ಲಿವ್-ಇನ್ ಸಂಬಂಧ’ವನ್ನು ಒಪ್ಪಲು ಸಾಧ್ಯವೇ? ಅದರಲ್ಲೂ ವಿದ್ಯಾವಂತ, ಅಧಿಕಾರಸ್ಥ ಪುರುಷರಲ್ಲಿ ಪ್ರೀತಿ ವಿರೋಧಿ ಧೋರಣೆ ಇನ್ನೂ ಹೆಚ್ಚು.

ಇತ್ತೀಚೆಗೆ, ಉತ್ತರ ಪ್ರದೇಶದ ನೋಯ್ಡಾದಲ್ಲಿ ವಸತಿ ಸೊಸೈಟಿಯೊಂದರ ಅಧ್ಯಕ್ಷರು ‘ತಮ್ಮ ವಸತಿ ಸಮುಚ್ಛಯದಲ್ಲಿ ವಾಸಿಸುವ ಗಂಡು-ಹೆಣ್ಣು ಬಾಡಿಗೆದಾರರು ತಮ್ಮ ಕುಟುಂಬಗಳಿಂದ ಒಪ್ಪಿಗೆ ಪತ್ರವನ್ನು ಹೊಂದಿರಬೇಕು. ಇಲ್ಲವೇ, ವಿವಾಹ ಪ್ರಮಾಣಪತ್ರ ಹೊಂದಿರಬೇಕು’ ಎಂದು ತಮ್ಮ ನಿವಾಸಿಗಳಿಗೆ ಸುತ್ತೋಲೆಯನ್ನು ಕಳುಹಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ

ಅವರ ಪತ್ರವು ತಾವು ಯುವ ಪ್ರೇಮಿಗಳ ಪ್ರೀತಿ ಅಥವಾ ‘ಲಿವ್-ಇನ್’ ಸಂಬಂಧದ ಬಗ್ಗೆ ಹೊಂದಿರುವ ಧೋರಣೆಯನ್ನು ಸೂಚಿಸುತ್ತದೆ. ಆದಾಗ್ಯೂ, ಅವರು ತಾವು ಇಂತಹ ಪತ್ರವನ್ನು ಕಳುಹಿಸಲು ಇತ್ತೀಚೆಗೆ ಯುವಕನೊಬ್ಬ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದೇ ಕಾರಣವೆಂದು ಹೇಳಿಕೊಂಡಿದ್ದಾರೆ. ಇಲ್ಲಿ, ಮುಖ್ಯವಾಗಿ ಪ್ರಶ್ನೆಯೊಂದು ಉದ್ಭವಿಸುತ್ತದೆ- ಅವಿವಾಹಿತ ಸಂಗಾತಿಗಳು ಒಟ್ಟಿಗೆ ವಾಸಿಸುವುದಕ್ಕೂ ಈ ದುರಂತಕ್ಕೂ ಏನು ಸಂಬಂಧ?

ಇನ್ನೊಂದೆಡೆ, ಉತ್ತರಾಖಂಡ ಸರ್ಕಾರವು ‘ಏಕರೂಪ ನಾಗರಿಕ ಸಂಹಿತೆ’ಯನ್ನು ಜನವರಿ 27ರಂದು ಜಾರಿಗೆ ತಂದಿದೆ. ಅದರಲ್ಲಿಯೂ, ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ನಿಮಯಗಳನ್ನು ರೂಪಿಸಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ‘ವಿವಾಹೇತರ ಪ್ರೇಮ ಸಂಬಂಧದಿಂದ ನಡೆಯುತ್ತಿರುವ ಅಪರಾಧಗಳನ್ನು ತಪ್ಪಿಸಲು ಇಂತಹ ನಿಯಂತ್ರಣ ಮತ್ತು ಕ್ರಮಗಳು ಅಗತ್ಯ’ ಎಂದು ಹೇಳಿದ್ದಾರೆ.

ಇದೇ ಸದಂರ್ಭದಲ್ಲಿ, ಜನವರಿ 29ರಂದು ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್  ಅವರು ”ಲಿವ್-ಇನ್ ಸಂಬಂಧದ ಕಲ್ಪನೆಯು ವಿಶಿಷ್ಟ ಮತ್ತು ಆಕರ್ಷಕವಾಗಿ ಕಾಣಿಸಬಹುದು. ಆದರೆ, ವಾಸ್ತವದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು ಮತ್ತು ಸವಾಲುಗಳಿವೆ. ಈ ಸಂಬಂಧವು ಸಾಮಾಜಿಕ ಅನುಮೋದನೆ ಅಥವಾ ಪಾವಿತ್ರ್ಯತೆಯನ್ನು ಹೊಂದಿರುವುದಿಲ್ಲ. ಲಿವ್-ಇನ್‌ ಸಂಬಂಧಕ್ಕೆ ರಕ್ಷಣೆ ಕೊಡುವ ಕಾನೂನು ಜಾರಿಗೆ ಬರುವವರೆಗೆ, ಲಿವ್-ಇನ್ ಸಂಬಂಧಗಳನ್ನು ಸಕ್ಷಮ ಪ್ರಾಧಿಕಾರ/ನ್ಯಾಯಮಂಡಳಿಯಲ್ಲಿ ನೋಂದಾಯಿಸಬೇಕು. ಅದಕ್ಕಾಗಿ ಸರ್ಕಾರ ಹೊಸ ವೆಬ್‌ ಪೋರ್ಟಲ್ ತೆರೆಯಬೇಕು” ಎಂದು ಹೇಳಿದ್ದಾರೆ.

ಇಂತಹ ಹಲವಾರು ನಿದರ್ಶನಗಳು ಒಂದಾದ ಮೇಲೊಂದರಂತೆ ಘಟಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ, 2022ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬಳನ್ನು ಆಕೆಯ ‘ಲಿವ್-ಇನ್’ ಸಂಗಾತಿಯೇ ಹತ್ಯೆಗೈದಿದ್ದ ಪ್ರಕರಣ, ಉತ್ತರ ಪ್ರದೇಶದಲ್ಲಿ ಪ್ರೇಮಿಯೊಬ್ಬನ ಆತ್ಮಹತ್ಯೆ ಪ್ರಕರಣದಂತಹ ಉದಾಹರಣೆಗಳನ್ನು ಮುನ್ನೆಲೆಗೆ ತರಲಾಗಿದೆ.

ಒಟ್ಟಾರೆಯಾಗಿ, ಮದುವೆಯಾಗದೆ ಒಟ್ಟಿಗೆ ವಾಸಿಸಲು ಆಶಿಸುವ ಭಾರತೀಯ ಸಂಗಾತಿಗಳನ್ನು ತಪ್ಪಿತಸ್ಥರಂತೆ ನೋಡಲಾಗುತ್ತಿದೆ. ‘ಲಿವ್-ಇನ್ ಸಂಬಂಧ’ದಲ್ಲಿ ಬದುಕುತ್ತಿರುವ ಪ್ರೇಮಿಗಳನ್ನು ಕಳಂಕಿತರಂತೆ ನೋಡಲಾಗುತ್ತಿದೆ.

ಇದನ್ನು ಓದಿದ್ದೀರಾ?: ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?

ಮೇಲಿನ ಮೂರು ನಿದರ್ಶನಗಳನ್ನು ಗಮನಿಸಿದರೆ, ಪ್ರೀತಿ, ಪ್ರೇಮ ಅಥವಾ ಲಿವ್-ಇನ್ ಸಂಬಂಧವೇ ತಪ್ಪು ಎಂಬ ಭಾವ ‘ಅಂಡರ್‌ಲೈನ್‌’ನಲ್ಲಿ ಎದ್ದು ಕಾಣುತ್ತಿದೆ. ಇದು ಸಾಮಾಜಿಕ ಖಂಡನೆಯ ದೊಡ್ಡ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಹತ್ಯೆ-ಆತ್ಮಹತ್ಯೆಗಳಿಗೆ ಪ್ರೀತಿಯೇ ಕಾರಣವೆಂದು ಪ್ರತಿಪಾದಿಸುತ್ತದೆ.

ಈ ಸಂದರ್ಭದಲ್ಲಿ ಎದುರಾಗುವ ಪ್ರಮುಖ ಪ್ರಶ್ನೆ, ಮದುವೆ ಸಂಬಂಧದಲ್ಲಿ ಅತ್ಯಾಚಾರ ನಡೆದಾಗ ಅದನ್ನು ಸರ್ಕಾರ, ಸಮಾಜ ಹೇಗೆ ನೋಡುತ್ತದೆ? ಇದೇ ವಿವಾಹ ಸಂಬಂಧಗಳಲ್ಲಿ ವರದಕ್ಷಿಣೆ ದೌರ್ಜನ್ಯ ನಡೆದಾಗ ಅದನ್ನು ಹೇಗೆ ವ್ಯಾಖ್ಯಾನಿಸುತ್ತದೆ? ಮಡದಿಯನ್ನೇ ಪತಿ ಹತ್ಯೆಗೈದಾಗ ಮದುವೆ ಸಂಬಂಧವನ್ನು ಯಾವ ರೀತಿಯಲ್ಲಿ ನೋಡಲಾಗುತ್ತದೆ? ಒಂದು ಹತ್ಯೆ, ಒಂದು ದೌರ್ಜನ್ಯದ ಆಧಾರದ ಮೇಲೆ ಆ ಸಂಬಂಧವೇ ತಪ್ಪು ಎಂದು ಹೇಳಲಾದೀತೆ?

ಪ್ರೀತಿ ಮತ್ತು ಲಿವ್-ಇನ್ ಸಂಬಂಧಗಳೂ ಅಂತೆಯೇ. ಕೆಲವೊಮ್ಮೆ ಸಂಗಾತಿಯ ಆಯ್ಕೆ ತಪ್ಪಾಗಿರುತ್ತದೆಯೇ ಹೊರತು, ಸಂಬಂಧವೇ ತಪ್ಪಾಗಲಾರದು. ಸಂಪ್ರದಾಯದ ಕಟ್ಟುಪಾಡುಗಳೊಂದಿಗೆ ಹೇರಲಾದ ಬಿಗಿ ನಿರ್ಬಂಧಗಳನ್ನು ಮೀರಿ ಪ್ರೀತಿ ಮತ್ತು ಒಡನಾಟದ ಬದುಕನ್ನು ಆಯ್ಕೆ ಮಾಡಿಕೊಳ್ಳುವವರನ್ನು ದೂಷಿಸಲು, ಖಂಡಿಸಲು ಸಾಧ್ಯವಿಲ್ಲ.

ಅವಿವಾಹಿತ ಸಂಗಾತಿಗಳ ಬದುಕು ಮತ್ತು ಆಯ್ಕೆಯನ್ನು ನಿಯಂತ್ರಿಸುವ ಪ್ರಯತ್ನಗಳು ಕೇವಲ 21ನೇ ಶತಮಾನದ ಪ್ರವೃತ್ತಿ ಮಾತ್ರವಲ್ಲ. ಮಹಿಳೆಯರ ಜೀವನವನ್ನು ನಿಯಂತ್ರಿಸುವ ಅತ್ಯಂತ ಹಳೆಯ ಧೋರಣೆ ಭಾಗವಾಗಿ ಈ ‘ಲಿವ್-ಇನ್’ ಸಂಬಂಧವನ್ನು ವಿರೋಧಿಸುವ ಪ್ರವೃತ್ತಿ ಬೆಳೆದುಕೊಂಡಿದೆ. ಪ್ರೀತಿ, ಪ್ರೇಮದ ಸಂಬಂಧವನ್ನು ವಿರೋಧಿಸುವ ಸಮಾಜದಲ್ಲಿನ ಹುಳಕ್ಕೆ ಅರಿವಿನ ಚಿಕಿತ್ಸೆ ನೀಡುವ ಅಗತ್ಯವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X