ಕುಂಭಮೇಳದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ಕು ಮಂದಿ ಶ್ರದ್ಧಾಳುಗಳ ಕಳೇಬರಗಳನ್ನು ತರಲು ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಇಬ್ಬರು ಅಧಿಕಾರಿಗಳನ್ನು ಪ್ರಯಾಗರಾಜ್ ಗೆ ಕಳಿಸುವ ಕಾಳಜಿ ವಹಿಸಿದ್ದರು.
ಆಳುವವರ ಬೂಟು ನೆಕ್ಕುವ ಮೀಡಿಯಾ ಎಂದಿನಂತೆ ಸರ್ಕಾರ ಹೇಳಿದ್ದಕ್ಕೆಲ್ಲ ಹಿಮ್ಮೇಳ ಹಾಡಿ ಹೌದಪ್ಪಾ ಹೌದೋ ಎನ್ನುತ್ತಿದೆ. ಕುಂಭದ ಕಾಲ್ತುಳಿತದಲ್ಲಿ ಸತ್ತಿರುವ ಮತ್ತು ಗಾಯಗೊಂಡಿರುವ ಜಸಾಮಾನ್ಯರ ಪ್ರಾಣಗಳು ಲೆಕ್ಕಕ್ಕೇ ಇಲ್ಲ ಎಂಬಂತೆ ವರ್ತಿಸಿವೆ ದೇಶದ ಗೋದಿ ಮೀಡಿಯಾ.
ಕಣ್ಣಿಗೆ ಕಾಣುವ ಗಂಗೆ-ಯಮುನೆಯರ ಜೊತೆ ಕಣ್ಣಿಗೆ ಕಾಣದಂತೆ ಸುಪ್ತವಾಗಿ ಹರಿದಿದ್ದಾಳೆನ್ನಲಾಗುವ ಸರಸ್ವತಿ ನದಿ ಕೂಡುವ ತ್ರಿವೇಣಿ ಸಂಗಮದಲ್ಲಿ ಮುಳುಗೇಳುವ ಪಾವನ ಕ್ರಿಯೆಯಲ್ಲಿ ಮಾಡಿದ ಪಾಪಗಳೆಲ್ಲ ತೊಳೆದು ಹೋಗುತ್ತವೆನ್ನುವುದು ಹಿಂದು ಶ್ರದ್ಧಾಳುಗಳ ನಂಬಿಕೆ.
ಮೌನಿ ಅಮಾವಾಸ್ಯೆಯಂದು ಪ್ರಯಾಗರಾಜದ ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಸಿಕ್ಕಿ ಸತ್ತ ಭಕ್ತಾದಿಗಳ ಕಳೇಬರಗಳನ್ನು ನದಿ ಎಸೆಯಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಆರೋಪಿಸಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಮಾತಾಡಿದ ಪಪ್ಪೂ ಯಾದವ್ ಕುಂಭ ಕಾಲ್ತುಳಿತ ದುರಂತದಲ್ಲಿ ಗತಿಸಿದ ನೂರಾರು ಭಕ್ತರ ಶವಗಳಿಗೆ ಹಿಂದೂ ಸಂಸ್ಕಾರ ಯಾಕಿಲ್ಲ ಎಂದು ಪ್ರಶ್ನಿಸಿದರು. ಮಹಾಕುಂಭದ ಈ ದುರಂತ ಮಾಮೂಲು ಘಟನೆ ಎಂದಿದ್ದಾರೆ ಬಿಜೆಪಿ ಲೋಕಸಭಾ ಸದಸ್ಯೆ ಮತ್ತು ನಟಿ ಹೇಮಾಮಾಲಿನಿ. ಜಯಾಬಚ್ಚನ್ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದೆ ವಿಶ್ವಹಿಂದು ಪರಿಷತ್ತು.
ಉತ್ತರಪ್ರದೇಶ ಸರ್ಕಾರ ನೀಡಿರುವ ಅಧಿಕೃತ ಸಂಖ್ಯೆಯ ಪ್ರಕಾರ ಕಾಲ್ತುಳಿತದಲ್ಲಿ ಸತ್ತವರು ಮೂವತ್ತು ಮಂದಿ. ತೀವ್ರವಾಗಿ ಗಾಯಗೊಂಡವರು ನೂರಾರು ಮಂದಿ. ಸತ್ತಿರುವವರ ಸಂಖ್ಯೆ ಹತ್ತಾರು ಪಟ್ಟು ದೊಡ್ಡದೆಂದು ಆಪಾದಿಸಿದ ಕೆಲ ಪ್ರತ್ಯಕ್ಷದರ್ಶಿಗಳು ನಾಪತ್ತೆಯಾಗಿದ್ದಾರೆ. ನಿಜಕ್ಕೂ ಸತ್ತ ಬಡಪಾಯಿಗಳ ಸಂಖ್ಯೆಯ ಕುರಿತು ಪ್ರಶ್ನೆಗಳಿವೆ. ಇವರ ಪೈಕಿ ಮುಕ್ಕಾಲು ಪಾಲು ಮಂದಿ ಅತ್ಯಂತ ಸಾಮಾನ್ಯ ಅಮಾಯಕ ಜನ. ಅಕ್ಕಿ ಬೇಳೆ ಬೆಲ್ಲ ಬಟ್ಟೆಗಳ ಗಂಟು ಗದಡಿಗಳ ಹೊತ್ತು ಕಾಲಲ್ಲಿ ಹವಾಯಿಯಂತಹ ಸಾಧಾರಣ ಚಪ್ಪಲಿ ತೊಟ್ಟವರು. ದುರಂತದ ಸ್ಥಳಗಳಲ್ಲಿ ರಾಶಿ ರಾಶಿ ಬಿದ್ದ ಅನಾಥ ಗಂಟುಮೂಟೆ ಬ್ಯಾಗು ಚಪ್ಪಲಿ ಅರಿವೆ ಹಚ್ಚಡಗಳನ್ನು ನಿರುಕಿಸಿ ನೋಡಿದರೆ ತಿಳಿದೀತು ಈ ಜನವರ್ಗ ಯಾವುದೆಂದು. ಅಮೃತ ಕಾಲ ಬಂದಿದೆಯೆಂದು ಹೇಳುವವರು ದೇಶದ ಶೇ.80ರಷ್ಟು ಜನಸಂಖ್ಯೆ ಉಚಿತ ಪಡಿತರದಲ್ಲಿ ದಿನ ದೂಡುವ ದುಸ್ಥಿತಿಯಲ್ಲಿ ಯಾಕಿದೆ ಎಂದು ವಿವರಣೆ ನೀಡಬೇಕಿದೆ.
ಕುಂಭಮೇಳದಲ್ಲಿ ಜನಸಾಮಾನ್ಯ ಭಕ್ತಾದಿಗಳು ಸಾಗುವ ಹಾದಿಯಲ್ಲೇ ವಿವಿಐಪಿಗಳ (ಅತಿಗಣ್ಯ ವ್ಯಕ್ತಿಗಳು) ವಾಹನಗಳು ಧೂಳೆಬ್ಬಿಸಿ ಅನಾಹುತ ಉಂಟು ಮಾಡಿವೆ. ಜನರು ನಡೆಯಲು ಜಾಗವಿಲ್ಲದೆ ಕಿಕ್ಕಿರಿದಿದ್ದ ಪಾಂಟೂನ್ ಸೇತುವೆಗಳ ಮೇಲೆ ವಿವಿಐಪಿಗಳ ವಾಹನಗಳ ಹಾವಳಿಯೂ ಕಾಲ್ತುಳಿತದ ಗೊಂದಲಕ್ಕೆ ಕಾರಣವಾಗಿದೆ. ವಿಐಪಿ ಸಂಸ್ಕೃತಿಯನ್ನು ತ್ಯಜಿಸುತ್ತಿರುವುದಾಗಿ ಹೇಳಿ ಯೋಗಿ ಆದಿತ್ಯನಾಥ ಅವರು ಈ ಹಿಂದೆ ಭಾರೀ ಪ್ರಚಾರ ಪಡೆದಿದ್ದರು. ವಿವಿಐಪಿ ಬದಲು ಇಪಿಐ (Every Person Is Important) ಎಂಬ ಪ್ರಧಾನಿ ಮೋದಿಯವರ ಅಮೃತವಾಣಿಯನ್ನು ಕೊಂಡಾಡಿ ಕೃತಾರ್ಥವಾಗಿದ್ದವು ಗೋದಿ ಮೀಡಿಯಾ. ಹಾಗಿದ್ದರೆ ಕುಂಭಮೇಳದಲ್ಲಿ ವಿವಿಐಪಿ ಸಂಸ್ಕೃತಿ ನುಸುಳಿದ್ದಾದರೂ ಹೇಗೆ? ಅಂಬಾನಿ ಅದಾನಿ ಸಿನೆಮಾ ನಟ ನಟಿಯರು ಗೋದಿ ಮೀಡಿಯಾದ ಚೌಧರಿಗಳು, ಓಂ ಕಶ್ಯಪಗಳು ಮುಂತಾದವರು ತ್ರಿವೇಣಿ ಸಂಗಮದಲ್ಲಿ ಮಿಂದು ಪೂಜೆ ಸಲ್ಲಿಸಿದ್ದಾದರೂ ಎಂತು? ಮಹಾಮಂಡಲೇಶ್ವರರ ಕಾರಿನ ಚಕ್ರಗಳಿಗೆ ಸಿಕ್ಕಿ ಏಳು ಮಂದಿ ಭಕ್ತಾದಿಗಳು ಪ್ರಾಣ ಬಿಟ್ಟದ್ದಾದರೂ ಯಾಕೆ?
ಹೀಗೆ ಕುಂಭಮೇಳದ ಕಾಲ್ತುಳಿತಕ್ಕೆ ಸಿಕ್ಕಿ ಸತ್ತ ಭಕ್ತಾದಿಗಳ ಪೈಕಿ ರಾಜ್ಯದ ಬೆಳಗಾವಿ ಜಿಲ್ಲೆಯ ಐದು ಮಂದಿ ಸೇರಿದ್ದಾರೆ. ರಾಜ್ಯದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ, ಉಗ್ರ ಹಿಂದುತ್ವವಾದಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಯಾರೂ ಮೃತರ ಮನೆಗಳಿಗೆ ಹೋಗಿ ಸಂತಾಪ ಸೂಚಿಸಲಿಲ್ಲ. ಕೊಲೆಯಾದ ಶಿವಮೊಗ್ಗದ ಹರ್ಷ, ಸುಳ್ಯದ ಪ್ರವೀಣ್ ನೆಟ್ಟಾರು, ಹುಬ್ಬಳ್ಳಿಯ ನೇಹಾ ಹಿರೇಮಠ, ಗೋರಿಪಾಳ್ಯದ ಚಂದ್ರು ಕುಟುಂಬಗಳಿಗೆ ಭೇಟಿ ನೀಡಿ ಕಂಬನಿ ಸುರಿಸಿದ ಬಿಜೆಪಿ ನಾಯಕರಿವರು. ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಲ್ಲಿಗೆ ಧಾವಿಸಿತ್ತು ಈ ಹಿಂಡು. ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಯಾವ ಬಿಜೆಪಿ ನಾಯಕರೂ ಹೋಗಲಿಲ್ಲ. ಭೇಟಿ ನೀಡಿ ಸಂತಾಪ ಸೂಚಿಸಿದ ಏಕೈಕ ಬಿಜೆಪಿ ನಾಯಕ ಸಂಸದ ಜಗದೀಶ್ ಶೆಟ್ಟರ್. ಅವರು ಮೃತಪಟ್ಟವರ ಕುಟುಂಬಗಳಿರುವ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದವರು.
ಕುಂಭಮೇಳದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ಕು ಮಂದಿ ಶ್ರದ್ಧಾಳುಗಳ ಕಳೇಬರಗಳನ್ನು ತರಲು ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಇಬ್ಬರು ಅಧಿಕಾರಿಗಳನ್ನು ಪ್ರಯಾಗರಾಜ್ ಗೆ ಕಳಿಸುವ ಕಾಳಜಿ ವಹಿಸಿದ್ದರು. ಆಳುವವರ ಬೂಟು ನೆಕ್ಕುವ ಮೀಡಿಯಾ ಎಂದಿನಂತೆ ಸರ್ಕಾರ ಹೇಳಿದ್ದಕ್ಕೆಲ್ಲ ಹಿಮ್ಮೇಳ ಹಾಡಿ ಹೌದಪ್ಪಾ ಹೌದೋ ಎನ್ನುತ್ತಿದೆ. ಕುಂಭದ ಕಾಲ್ತುಳಿತದಲ್ಲಿ ಸತ್ತಿರುವ ಮತ್ತು ಗಾಯಗೊಂಡಿರುವ ಜನಸಾಮಾನ್ಯರ ಪ್ರಾಣಗಳು ಲೆಕ್ಕಕ್ಕೇ ಇಲ್ಲ ಎಂಬಂತೆ ವರ್ತಿಸಿವೆ ದೇಶದ ಗೋದಿ ಮೀಡಿಯಾ. ಈ ಜನಸಾಮಾನ್ಯರು ನೋಡುತ್ತ ಬಂದಿರುವ ಬಹುತೇಕ ಸುದ್ದಿ ಚಾನೆಲ್ಲುಗಳು ಮತ್ತು ಸುದ್ದಿ ಪತ್ರಿಕೆಗಳು ಅವರ ಸಾವಿನ ಸುದ್ದಿಯನ್ನೂ ಒಳಪುಟಕ್ಕೆ ಸರಿಸಿ ಹೂತು ಹಾಕಿವೆ.
ದೈನಿಕ ಜಾಗರಣ್ ಎಂಬ ಹಿಂದಿ ದಿನಪತ್ರಿಕೆ ತಾನೇ ಹೇಳಿಕೊಂಡಿರುವ ಪ್ರಕಾರ ಹನ್ನೊಂದು ರಾಜ್ಯಗಳಲ್ಲಿ 37 ಆವೃತ್ತಿಗಳನ್ನು ತರುತ್ತದೆ. ತನ್ನ ಓದುಗರ ಸಂಖ್ಯೆ 55 ಕೋಟಿ (ಭಾರತದ ಅರ್ಧದಷ್ಟು ಜನಸಂಖ್ಯೆಗೆ ತುಸು ಕಡಿಮೆ) ಎಂಬುದು ಈ ಪತ್ರಿಕೆಯ ದಾವೆ. ದೇಶದ ಹಿಂದಿ ಪ್ರದೇಶದ ‘ನಂಬರ್ ಒನ್’ ಪತ್ರಿಕೆ. ಆಳುವವರು ಹೇಳಿದ್ದನ್ನು ಪರಮಪಾವನ ಪ್ರಸಾದವೆಂದು ಸ್ವೀಕರಿಸಿ ತಲೆಯ ಮೇಲೆ ಹೊರುವ ‘ಜನದನಿʼ. ಈ ಪತ್ರಿಕೆ ಸಾವುಗಳ ಸುದ್ದಿಯನ್ನು ಒಳಪುಟಗಳಿಗೆ ತಳ್ಳಿತು. ಸಾಧ್ಯವಿರುವಷ್ಟೂ ಸ್ವತಂತ್ರ ದನಿಯಾಗಿರುವ ಹಿಂದಿ ಪತ್ರಿಕೆ ‘ದೈನಿಕ್ ಭಾಸ್ಕರ್’ ಪ್ರಕಾರ ಕುಂಭದಲ್ಲಿ ಸತ್ತವರ ಸಂಖ್ಯೆ 60. ಮೃತರ ಸಂಖ್ಯೆ 30 ಮಾತ್ರವೇ ಎಂದಿಟ್ಟುಕೊಂಡರೂ ಹಿಂದಿ ಚಾನೆಲ್ಲುಗಳು ಈ ಸುದ್ದಿಯನ್ನು ಹನ್ನೆರಡು ತಾಸುಗಳ ಕಾಲ ಮರೆಮಾಚಿ ಕೇವಲ ಸ್ಕ್ರೋಲ್ ಸುದ್ದಿಯಾಗಿ ಪ್ರಕಟಿಸಿದ ಆಪಾದನೆಯಿದೆ! ಪತ್ರಿಕೆಗಳು ಮುಖಪುಟಗಳಲ್ಲಿ ಮೌನಿ ಅಮಾವಾಸ್ಯೆಯ ಶಾಹೀ ಸ್ನಾನಕ್ಕೆ ನೀಡಿದಷ್ಟು ಜಾಗವನ್ನು ಒಳಪುಟಗಳಲ್ಲಿ ಶ್ರದ್ಧಾಳುಗಳ ಮರಣಕ್ಕೆ ನೀಡುವುದಿಲ್ಲ! ಪ್ರಯಾಗರಾಜ್ ನಗರಿಯನ್ನು ಜಪಾನಿನ ಟೋಕಿಯೋ ನಗರದೊಂದಿಗೆ ಹೋಲಿಸಿ ಸಂಭ್ರಮಿಸುತ್ತವೆ. ಕುಂಭಮೇಳದ ಸರ್ಕಾರಿ ಜಾಹೀರಾತು ಸರಣಿಗಳ ಝಣ ಝಣ ಕಾಂಚಾಣದ ಭಾರದಡಿ ಮೂಕಬಧಿರವಾಗುತ್ತವೆ.
ಇಂತಹ ದುರಂತಗಳು ದುರ್ಘಟನೆಗಳು ಅಪಘಾತಗಳನ್ನು ‘ಕಾಲ್ಪನಿಕ ಭಯೋತ್ಪಾದಕ’ರ ತಲೆಗೆ ಕಟ್ಟುವುದು ‘ಮೋದಿ-ಯೋಗಿ ಯುಗ’ದ ಪರಿಪಾಠವೇ ಆಗಿ ಹೋಗಿದೆ. 2016ರ ಕಾನ್ಪುರ ರೈಲು ಅಪಘಾತದಲ್ಲಿ ಆತಂಕವಾದಿಗಳ ಕೈವಾಡ ಇದೆಯೆಂಬ ಹೇಳಿಕೆ ನಿಜವಲ್ಲ ಎಂದು ರೇಲ್ವೆ ಇಲಾಖೆಯೇ ಸ್ಪಷ್ಟೀಕರಿಸಿತು. 2017ರಲ್ಲಿ ಆಂಧ್ರಪ್ರದೇಶದಲ್ಲಿ ಹಿರಾಖಂಡ್ ಎಕ್ಸ್ ಪ್ರೆಸ್ ಅಪಘಾತದಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದು ಸತ್ಯದೂರ ಸಂಗತಿಯೆಂದು ಅಧಿಕೃತ ವಿವರಣೆ ಹೊರಬಿತ್ತು. 2023ರ ಒಡಿಶಾ ಬಾಲೇಶ್ವರದ ರೈಲು ಅಪಘಾತ ಮುಸ್ಲಿಮ್ ಸ್ಟೇಷನ್ ಮಾಸ್ಟರ್ ನಿಂದ ಘಟಿಸಿದ್ದು ಎಂಬ ಮಹಾ ಅಪಪ್ರಚಾರವನ್ನೂ ಸರ್ಕಾರವೇ ತಳ್ಳಿ ಹಾಕಿತು. ಅಪಘಾತಗಳ ಸರಣಿ ಕುರಿತು ಜನತೆ ಸರ್ಕಾರವನ್ನು ಪ್ರಶ್ನಿಸುವ ಮುನ್ನವೇ ಕೇಸರಿ ವಾಟ್ಸ್ಯಾಪ್ ಯೂನಿವರ್ಸಿಟಿ ಮುಸ್ಲಿಮ್ ಭಯೋತ್ಪಾದಕರು- ಪಾಕಿಸ್ತಾನೀ ಕೈವಾಡಗಳ ವದಂತಿಗಳನ್ನು ಹರಿಯಬಿಡುತ್ತದೆ. ಗೋದಿ ಮೀಡಿಯಾ ಈ ವದಂತಿಗಳಿಗೆ ನಿರಂತರ ಧ್ವನಿವರ್ಧಕ ಹಿಡಿಯುತ್ತದೆ.
ದುರಂತದ ನಂತರ ಲಕ್ಷಾಂತರ ಮಂದಿ ಪ್ರಯಾಗರಾಜದ ಹೊರವಲಯದಲ್ಲಿ ಕಿಲೋಮೀಟರುಗಷ್ಟು ದೂರದ ಟ್ರ್ಯಾಫಿಕ್ ಜಾಮ್ ನಲ್ಲಿ ಸಿಲುಕಿ ದಿನಗಳನ್ನು ನೂಕಿದ್ದಾರೆ. ಹತ್ತು ವರ್ಷಗಳಿಂದ ಮೋಶಾ ಯುಗದ ಕಡುದ್ವೇಷಕ್ಕೆ ತುತ್ತಾಗಿರುವ ಅದೇ ಮುಸಲ್ಮಾನ ಸಮುದಾಯ ಮಹಾಕುಂಭಮೇಳದ ಭಕ್ತಾದಿಗಳಿಗೆ ಮಸೀದಿಗಳು ಮದರಸಾಗಳ ಬಾಗಿಲು ತೆರೆದು ವಸತಿ ಒದಗಿಸಿತು.
ವಿಚಿತ್ರವೆಂದರೆ ಅವರು ಕನ್ಯಾಕುಮಾರಿಯ ಸಮುದ್ರದಂಡೆಯ ಶಿಲೆಗಳ ಮೇಲೆ ಧ್ಯಾನ ಮಾಡುವ, ಕೇದಾರನಾಥದ ಗುಹೆಗಳಲ್ಲಿ ಧ್ಯಾನಕ್ಕೆ ತೆರಳುವ ದಿನಗಳನ್ನೇ ಚುನಾವಣಾ ಆಯೋಗ ಮತದಾನದ ಅಥವಾ ಚುನಾವಣಾ ಪ್ರಚಾರದ ಕಡೆಯ ದಿನಾಂಕಗಳನ್ನಾಗಿ ಆರಿಸಿಕೊಳ್ಳುತ್ತದೆ! ಅದ್ಭುತ ಕಾಕತಾಳೀಯವಿದು! ಅವರು ಕಾಷಾಯವಸ್ತ್ರ ಧರಿಸಿ ಧ್ಯಾನ ಮಾಡುವಾಗಲೆಲ್ಲ ಎಂಟರಿಂದ ಹತ್ತು ಕ್ಯಾಮೆರಾಗಳು ಅಷ್ಟು ಕೋನಗಳಿಂದ ಅವರ ಧ್ಯಾನವನ್ನು ಚಿತ್ರೀಕರಿಸುವುದು ಕೂಡ ಕಾಕತಾಳೀಯವೇ! ಈ ಚಿತ್ರೀಕರಣವನ್ನು ಗೋದಿ ಮೀಡಿಯಾ ಚಾನೆಲ್ಲುಗಳು ಹಗಲಿರುಳು ಪ್ರಸಾರ ಮಾಡುವುದು ಪರಮ ಕಾಕತಾಳೀಯ! ಮೋದಿಯವರಿಗಾಗಲೀ, ಗೋದಿ ಮೀಡಿಯಾ ಚಾನೆಲ್ಲುಗಳಿಗೇ ಆಗಲಿ ಮತದಾನದ ದಿನದಂದು ಮತದಾರರ ಮೇಲೆ ಪ್ರಭಾವ ಬೀರುವ ಹಿತಾಸಕ್ತ ಉದ್ದೇಶ ಇರುವುದೇ ಇಲ್ಲ! ಅಂತಹ ಆರೋಪ ಹೊರಿಸುವುದೇ ಅನ್ಯಾಯ. ಕುಂಭಮೇಳದ ತ್ರಿವೇಣಿಸಂಗಮದಲ್ಲಿ ಇಂದು ಮುಳುಗೆದ್ದರು ಪ್ರಧಾನಿ ಮೋದಿ. ಇಂದು ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ದಿನ! ಮೋದಿಯವರು ತ್ರಿವೇಣಿ ಸಂಗಮದಲ್ಲಿ ಮುಳುಗೇಳುವ ಇಂದಿನ ದಿನವನ್ನೇ ಮತದಾನದ ದಿನವನ್ನಾಗಿ ನಿಗದಿ ಮಾಡಿದ್ದು ಚುನಾವಣಾ ಆಯೋಗದ್ದೇ ಅಪರಾಧ.
ಜನವರಿ 13ರಂದು ಆರಂಭವಾದ ಈ ಮಹಾಕುಂಭ ಪರ್ವ ಫೆಬ್ರವರಿ 26ರಂದು ಅಂತ್ಯಗೊಳ್ಳಲಿದೆ. ನೂರು ಕೋಟಿ ಜನ ಬಂದರೂ ಸಂಭಾಳಿಸುವಷ್ಟು ಭವ್ಯ ದಿವ್ಯ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ಎದೆಯುಬ್ಬಿಸಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿಯವರ ಮಾತುಗಳು ಉಳಿದಿರುವ ದಿನಗಳಿಗಾದರೂ ನಿಜವಾಗಲಿ.
.
