ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು ಯಾಕೆ ಮೂಕಪ್ರೇಕ್ಷಕರಾಗಿದ್ದಾರೆಂದು ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಪ್ರಶ್ನಿಸಿದ್ದಾರೆ. ಈ ನರಮೇಧ ನಿಲ್ಲಿಸಲು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಕಠಿಣ ಕ್ರಮ ಜರುಗಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರೇ ಹಸ್ತಕ್ಷೇಪ ಮಾಡಬೇಕಿದೆ ಎಂಬುದು ದವೆ ಕಾಳಜಿ.
ಮಯನ್ಮಾರ್ ಎಂಬ ಭಾರತದ ನೆರೆಹೊರೆಯ ದೇಶದ ಸರಹದ್ದಿನಲ್ಲಿರುವ ಮಣಿಪುರಕ್ಕೆ ಜನಾಂಗೀಯ ಹಿಂಸೆ ಹೊಸತೇನೂ ಅಲ್ಲ. ಮೂವತ್ತಮೂರು ಬುಡಕಟ್ಟುಗಳಿರುವ ಮಣಿಪುರದ್ದು ಬಲು ದಟ್ಟ ವೈವಿಧ್ಯ. ಅಷ್ಟೇ ಒಡೆದು ಹಂಚಿ ಹೋಗಿರುವ ಜನಬಾಹುಳ್ಯ. ನಿಜವಾದ ಮಣ್ಣಿನ ಮಕ್ಕಳು ನಾವೇ ಎಂಬ ಸೆಣೆಸಾಟದಲ್ಲಿ ಮೈತೇಯಿ-ಕುಕಿ-ನಾಗಾ ಸಮುದಾಯಗಳು ಪರಸ್ಪರರ ವಿರುದ್ಧ ತುಪಾಕಿಗಳನ್ನು ಎತ್ತಿಕೊಂಡು ಬಹುಕಾಲವಾಯಿತು.
ಮೈತೇಯಿಗಳು ವೈಷ್ಣವ ಸಂಪ್ರದಾಯದ ಹಿಂದೂಗಳು. ಕೇಂದ್ರೀಯ ಕಣಿವೆ ಪ್ರದೇಶ ಅವರ ವಸತಿಸೀಮೆ. ಮಣಿಪುರದ ಜನಸಂಖ್ಯೆಯಲ್ಲಿ ಮೈತೇಯಿಗಳ ಪ್ರಮಾಣ ಶೇ.53ರಷ್ಟು. ಈ ಸಮುದಾಯದಲ್ಲಿ ಹಿಂದೂ ಅಸ್ಮಿತೆಯನ್ನು ಬಡಿದೆಬ್ಬಿಸುವ ಕೆಲಸ ಬಹುಕಾಲದಿಂದ ನಡೆದಿದೆ. ಬಿಜೆಪಿಗೆ ದೊಡ್ಡ ರೀತಿಯಲ್ಲಿ ಬೆಂಬಲ ನೀಡಿರುವ ಸಮುದಾಯವಿದು. ಆದರೆ ಕುಕಿಗಳ ಪೈಕಿ ಬಿಜೆಪಿಗೆ ದೊರೆತಿದ್ದ ಅಷ್ಟಿಷ್ಟು ಬೆಂಬಲ ಕೂಡ ಮುಖ್ಯಮಂತ್ರಿ ಬೀರೇನ್ ಸಿಂಗ್ ಸರ್ಕಾರದ ಕುಕಿ ವಿರೋಧಿ ನೀತಿಯಿಂದ ಅಳಿದು ಹೋಗಿದೆ.
ಅಫೀಮು ಕೃಷಿ ಮತ್ತು ಮಾದಕ ದ್ರವ್ಯಗಳನ್ನು ಹತ್ತಿಕ್ಕುವ ನೆವದಲ್ಲಿ ಬೀರೇನ್ ಸಿಂಗ್ ಸರ್ಕಾರ ಕುಕಿಗಳ ವಿರುದ್ಧ ಯುದ್ಧ ಸಾರಿದೆ. ಸಂರಕ್ಷಿತ ಅರಣ್ಯಗಳ ಅತಿಕ್ರಮಣವನ್ನು ತೆರವುಗೊಳಿಸುವ ಹೆಸರಿನಲ್ಲಿ ದೌರ್ಜನ್ಯಗಳು ಜರುಗಿವೆ.
ಮಣಿಪುರದಲ್ಲಿನ ಒಟ್ಟು ಜಮೀನಿನ ಶೇ.10 ಮೈತೇಯಿಗಳು ವಾಸಿಸುವ ಕಣಿವೆ ಪ್ರದೇಶದಲ್ಲಿದೆ. ಉಳಿದ ಜಮೀನು ಗುಡ್ಡಗಾಡುಗಳಲ್ಲಿದೆ. ರಾಜ್ಯದ ಜನಸಂಖ್ಯೆಯ ಶೇ.35.4ರಷ್ಟಿರುವ ಕುಕಿ ಬುಡಕಟ್ಟು ಜನರು ಮತ್ತು ನಾಗಾಗಳು ಗುಡ್ಡಗಾಡುವಾಸಿಗಳು. ಅಧಿಕಾಂಶ ಕ್ರೈಸ್ತ ಧರ್ಮೀಯರು. ಸಂವಿಧಾನದಲ್ಲಿ ಕೈಗೊಂಡಿರುವ ಸಂರಕ್ಷಣಾ ಕ್ರಮಗಳ ಪ್ರಕಾರ ಬುಡಕಟ್ಟು ಜನರ ಜಮೀನನ್ನು ಇತರರು ಖರೀದಿಸುವಂತಿಲ್ಲ. ಮಣಿಪುರದಲ್ಲಿ ಜಮೀನಿಗಾಗಿ ಹಸಿದಿರುವ ಮಣಿಪುರದ ಮೈತೇಯಿ ಹಿಂದೂಗಳು, ಗುಡ್ಡಗಾಡಿನಲ್ಲಿರುವ ಕುಕಿ ಕ್ರೈಸ್ತರ ಜಮೀನನ್ನು ಖರೀದಿಸುವಂತಿಲ್ಲ. ಕುಕಿಗಳು ಬೇಕಾದರೆ ಮೈತೇಯಿಗಳ ಜಮೀನನ್ನು ಖರೀದಿಸಬಹುದು. ಜಮೀನು ಹಂಚಿಕೆಯ ಈ ಅಸಮತೋಲನ ಮತ್ತು ತಮಗೂ ಮೀಸಲಾತಿ ಸಿಗಬೇಕೆಂಬ ಮೈತೇಯಿಗಳ ಆಗ್ರಹವೇ ಈ ಎರಡೂ ಜನಾಂಗಗಳ ಬಹುಕಾಲದ ಬೇಗುದಿಗೆ ಮುಖ್ಯ ಕಾರಣ.
ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳು ಮೈತೇಯಿಗಳು ವಾಸಿಸುವ ಕಣಿವೆ ಪ್ರದೇಶದಲ್ಲಿವೆ. ಬುಡಕಟ್ಟು ಜನರು ವಾಸಿಸುವ ಗುಡ್ಡಗಾಡು ಪ್ರದೇಶದ ಹತ್ತು ಜಿಲ್ಲೆಗಳು ಉಳಿದ 20 ಶಾಸಕರನ್ನು ಆರಿಸಿ ಕಳಿಸುತ್ತವೆ. ಜನಸಂಖ್ಯೆ ಮತ್ತು ಜನಪ್ರತಿನಿಧಿಗಳ ಸಂಖ್ಯೆ ಎರಡರಲ್ಲೂ ಸಿಂಹಪಾಲನ್ನು ಹೊಂದಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಬಂದೀತು ಎಂಬುದು ಕುಕಿಗಳ ಕಳವಳ.
1949ರಲ್ಲಿ ಮಣಿಪುರ ಭಾರತದಲ್ಲಿ ವಿಲೀನಗೊಂಡ ಸಮಯದಲ್ಲಿ ತಾವು ಕೂಡ ಪರಿಶಿಷ್ಟರಾಗಿದ್ದೆವು ಎಂಬುದು ಮೈತೇಯಿಗಳ ಅಹವಾಲು. ಕೇವಲ ನಾಗಾ ಮತ್ತು ಕುಕಿಗಳಿಗೆ ಮಾತ್ರವೇ ಪರಿಶಿಷ್ಟ ಸ್ಥಾನಮಾನ ನೀಡಲಾಯಿತು ಎಂಬುದು ಅವರ ದೂರು. ಆದರೆ ಮೈತೇಯಿಗಳು ಅರಸರಾಗಿ ಮಣಿಪುರವನ್ನು ಆಳಿದವರು. ಮುಂದುವರೆದವರು. ಅವರಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡುವ ಮಾನದಂಡಗಳನ್ನು ಅನ್ವಯಿಸಲು ಬರುವುದಿಲ್ಲ. ಮಿಗಿಲಾಗಿ ಮೈತೇಯಿಗಳಿಗೆ ಓ.ಬಿ.ಸಿ. ಮತ್ತು ಪರಿಶಿಷ್ಟ ಜಾತಿಯ ಸ್ಥಾನಮಾನ ಈಗಾಗಲೆ ಸಿಕ್ಕಿದೆ ಎಂಬುದು ಕುಕಿಗಳ ವಾದ.
ಮೈತೇಯಿ ಜನಾಂಗಕ್ಕೆ ಸೇರಿದ ಮುಖ್ಯಮಂತ್ರಿ ಬೀರೇನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಂದ ಕುಕಿಗಳನ್ನು ವಿದೇಶೀಯರು, ಅಕ್ರಮ ವಲಸಿಗರು, ನೆರೆಯ ಬರ್ಮಾದಿಂದ ಅಕ್ರಮ ವಲಸೆಗೆ ಕುಮ್ಮಕ್ಕು ನೀಡುತ್ತಿರುವವರು ಎಂದೆಲ್ಲ ಟೀಕಿಸಿದ್ದಾರೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವವರು, ಅಫೀಮು ಕೃಷಿಯಲ್ಲಿ ತೊಡಗಿರುವವರು ಎಂದೆಲ್ಲ ಕುಕಿಗಳನ್ನು ನಿಂದಿಸಿದ್ದಾರೆ.
ಮಣಿಪುರ ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ನಿತ್ಯ ನಿರಂತರ ಬೇಯತೊಡಗಿ ಒಂದೂವರೆ ವರ್ಷಗಳೇ ಉರುಳಿವೆ. ಕುಕಿ-ನಾಗಾ ಬುಡಕಟ್ಟುಗಳು ಮತ್ತು ಮೈತೇಯಿ ಹಿಂದೂ ಜನಾಂಗದ ನಡುವಣ ಘರ್ಷಣೆಗಳಲ್ಲಿ ನೂರಾರು ಹತ್ಯೆಗಳು ನಡೆದಿವೆ. ಅಗ್ನಿಸ್ಪರ್ಶದಲ್ಲಿ ಸಾವಿರಾರು ಮನೆಗಳು ಹೊತ್ತಿ ಉರಿದು ಲಕ್ಷಾಂತರ ಮಂದಿ ನಿರ್ವಸಿತರಾಗಿ ಪರಿಹಾರ ಶಿಬಿರಗಳಲ್ಲಿದ್ದಾರೆ. ಈ ಪರಿಹಾರ ಶಿಬಿರಗಳೂ ಜನಾಂಗೀಯ ದ್ವೇಷದ ಉರಿಯಿಂದ ಬಚಾವಾಗಿಲ್ಲ. ಯುದ್ಧಗಳು, ಕದನಗಳು, ಕೋಮು ದಂಗೆಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳು ಅನಾಚಾರಗಳು ಜರುಗುತ್ತ ಬಂದಿವೆ. ಇಲ್ಲಿಯೂ ಮಹಿಳೆಯರನ್ನು ನಗ್ನಗೊಳಿಸಿ ಅವಹೇಳನ- ಘೋರ ಚಿತ್ರಹಿಂಸೆ ಎಸಗಿ ಅತ್ಯಾಚಾರ ಮಾಡಿ ಕೊಲ್ಲುತ್ತಿರುವ ಪ್ರಕರಣಗಳು ನಿಲ್ಲದೆ ನಡೆಯುತ್ತ ಬಂದಿವೆ. ಮಹಿಳೆಯನ್ನು ಆಕೆಯ ಒಡಲನ್ನು ತನ್ನ ಖಾಸಗಿ ಆಸ್ತಿಯೆಂದು ಗಂಡಾಳಿಕೆ ಬಗೆದಿದೆ. ಅದನ್ನು ನಿರಂತರ ಆಳುತ್ತ ಬಂದಿದೆ. ಹೆಣ್ಣುದೇಹವೆಂಬುದು ಗಂಡಾಳಿಕೆಯ ಕದನ ಮೈದಾನವಾಗಿ ಹೋಗಿದೆ. ಮಣಿಪುರದ ಜನಾಂಗೀಯ ಗಲಭೆಗಳೂ ಈ ಮಾತಿಗೆ ಹೊರತಲ್ಲ.
ರಾಜ್ಯ ಬಿಜೆಪಿ ಸರ್ಕಾರದ ಮಣಿಪುರದ ಜನರ ನಂಬಿಕೆ ಕಳೆದುಕೊಂಡಿದೆ. ಸಾಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದಿದೆ. ಕೇಂದ್ರ ಸರ್ಕಾರ ಮೂಕಪ್ರೇಕ್ಷಕನಾಗಿದೆ. ಎಂಟು ಮಂದಿ ಬಿಜೆಪಿ ಶಾಸಕರ ನಿಯೋಗ ಕಳೆದ ವರ್ಷ ದೆಹಲಿಯಲ್ಲಿ ದಿನಗಟ್ಟಲೆ ಕಾದರೂ ಮೋದಿಯವರು ದರ್ಶನ ನೀಡಲಿಲ್ಲ. ಮೋದಿ ಆಡಳಿತದ ಸಂಭ್ರಮ ಆಚರಿಸಲು ತ್ರಿಪುರಾಕ್ಕೆ ಹೋಗುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಕದ ಮಣಿಪುರದತ್ತ ತಿರುಗಿಯೂ ನೋಡಲಿಲ್ಲ! ಈಶಾನ್ಯ ಭಾರತವನ್ನು ಬಿಜೆಪಿ ಮಡಿಲಿಗೆ ಹಾಕುವ ಜವಾಬ್ದಾರಿ ನಿಭಾಯಿಸುತ್ತಿರುವ ಹಿಮಂತ ಬಿಸ್ವ ಸರ್ಮ, ಈಶಾನ್ಯ ಭಾರತ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುವ ಸಂಬಿತ್ ಪಾತ್ರ ಮಣಿಪುರದತ್ತ ತಲೆ ಹಾಕಿ ಮಲಗುತ್ತಿಲ್ಲ ಯಾಕೆ?
ಚುನಾವಣೆಗಳಿದ್ದರೆ ಕುಣಿದು ಕುಪ್ಪಳಿಸಿ ಧಾವಿಸಿ ರೋಡ್ ಶೋ ನಡೆಸಿ, ದ್ವೇಷ ಭಾಷಣ ಮಾಡಿ ಸಂಭ್ರಮಿಸುವ ಬಿಜೆಪಿ ನಾಯಕರು, ಸಂಕಟದ ಗಳಿಗೆಗಳಲ್ಲಿ ತಿರುಗಿಯೂ ನೋಡದಿರುವುದು ಅಕ್ಷಮ್ಯ ಅಪರಾಧ ಮತ್ತು ಸಂವಿಧಾನ ದ್ರೋಹ.
ಉಕ್ರೇನ್ ಯುದ್ಧವನ್ನು ನಿಲ್ಲಿಸಿ ನೊಬೆಲ್ ಶಾಂತಿ ಪಾರಿತೋಷಕ ಪಡೆಯುತ್ತಾರೆಂದು ಪ್ರಚಾರ ಪಡೆದವರು ತಮ್ಮದೇ ದೇಶದ ಹಿತ್ತಿಲಿನ ಪುಟ್ಟ ರಾಜ್ಯವೊಂದರ ಗಲಭೆಗಳನ್ನು ಒಂದೂವರೆ ವರ್ಷದ ನಂತರವೂ ನಿಲ್ಲಿಸದಿರುವುದು ಸೋಜಿಗವೇ ಸರಿ.
ಇಲ್ಲಿನ ಕಾನೂನು ಸುವ್ಯವಸ್ಥೆ ಎಂದೋ ಮುರಿದುಬಿದ್ದು ಮಣ್ಣುಪಾಲಾಗಿದೆ. ಇಲ್ಲಿನ ಬಿಜೆಪಿ ಸರ್ಕಾರ ತನ್ನ ಪ್ರಜೆಗಳ ಪ್ರಾಣ, ಘನತೆ, ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳನ್ನು ರಕ್ಷಿಸಲಾರದಾಗಿದೆ. ಶಾಂತಿ ಸಾಮರಸ್ಯ ಮೂಡಿಸುವುದು ದೂರದ ಮಾತೇ ಸರಿ.
2023ರ ಮೇ 8ರಂದು ಮಣಿಪುರ ಹಿಂಸೆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಸಂಬಂಧ ಹೊರಡಿಸಿದ್ದ ಆದೇಶ-ಕಳೆದ ಎರಡು ದಿನಗಳಿಂದ ಹಿಂಸಾಚಾರದ ವರದಿಯಾಗಿಲ್ಲ. ಕ್ರಮೇಣ ಮಾಮೂಲು ಪರಿಸ್ಥಿತಿ ಹಿಂದಿರುಗುತ್ತಿದೆ ಎಂದ ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ನಿವೇದಿಸಿಕೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಪರಿಹಾರ-ಪುನರ್ವಸತಿ ಒದಗಿಸುವುದು ಅತ್ಯಂತ ಮುಖ್ಯ ಹಿಂಸೆ ಮರುಕಳಿಸದಂತೆ ತೀವ್ರ ಜಾಗ್ರತೆ ವಹಿಸಬೇಕು.
2023ರ ಜುಲೈ ತಿಂಗಳಲ್ಲಿ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ವಿಡಿಯೋ ಹೊರಬಿದ್ದಿತ್ತು. ಸುಪ್ರೀಮ್ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿತ್ತು. ಮಣಿಪುರದಲ್ಲಿ ಮಹಿಳೆಯರ ಮೇಲೆ ಜರುಗುತ್ತಿರುವ ಲೈಂಗಿಕ ಹಲ್ಲೆ ಮತ್ತು ಹಿಂಸೆಯ ದೃಶ್ಯಗಳು ನ್ಯಾಯಾಲಯವನ್ನು ತೀವ್ರವಾಗಿ ಬಾಧಿಸಿವೆ. ಮಾನವ ಹಕ್ಕುಗಳಿಗೆ ಗಂಡಾಂತರ ಒಡ್ಡಿರುವ ಸಂವಿಧಾನಬಾಹಿರ ಕೃತ್ಯಗಳಿವು. ಸಾಂವಿಧಾನಿಕ ಜನತಂತ್ರದಲ್ಲಿ ಇಂತಹ ಕೃತ್ಯಗಳನ್ನು ಒಪ್ಪಲಾಗದು. ಈ ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಿದ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಈ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ತಾಕೀತು ಮಾಡಿತ್ತು.
ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು ಯಾಕೆ ಮೂಕಪ್ರೇಕ್ಷಕರಾಗಿದ್ದಾರೆಂದು ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಪ್ರಶ್ನಿಸಿದ್ದಾರೆ. ಈ ಈಶಾನ್ಯ ರಾಜ್ಯವನ್ನು ಆವರಿಸಿ ಆಪೋಶನ ತೆಗೆದುಕೊಳ್ಳುತ್ತಿರುವ ಹಿಂಸೆಯ ಕುರಿತು ಸುಪ್ರೀಮ್ ಕೋರ್ಟು ಈವರೆಗೆ 27 ಸಲ ‘ಹಿಯರಿಂಗ್’ ನಡೆಸಿದೆ. ಆದರೂ ಹಿಂಸೆ ನಿಂತಿಲ್ಲ. ಸುಪ್ರೀಮ್ ಕೋರ್ಟಿನ ಮಾತುಗಳಿಗೂ ಬೆಲೆಯಿಲ್ಲವಾಗಿದೆ. ಮೂರು ಮಕ್ಕಳ ತಾಯಿಯನ್ನು ಚಿತ್ರಹಿಂಸೆಗೆ ಗುರಿಮಾಡಿ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಮೊನ್ನೆ ಮೊನ್ನೆ ವರದಿಯಾಗಿದೆ. ಜೀರಮ್ ನದಿಯಲ್ಲಿ ಹೆಣಗಳು ತೇಲಿದ ವರದಿಯಾಗಿತ್ತು. ಸುಪ್ರೀಮ್ ಕೋರ್ಟು ಇತ್ತೀಚಿನ ವರ್ಷಗಳಲ್ಲಿ ದುರ್ಬಲವಾಗುತ್ತಿರುವುದನ್ನು ಈ ಬೆಳವಣಿಗೆ ತೋರಿಸುತ್ತಿಲ್ಲವೇ ಎಂದಿದ್ದಾರೆ.
ಇದನ್ನೂ ಓದಿ ವಿಕ್ರಂ ಗೌಡ ಶೂಟೌಟ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ : ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಆಗ್ರಹ
ಈ ನರಮೇಧ ನಿಲ್ಲಿಸಲು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಕಠಿಣ ಕ್ರಮ ಜರುಗಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರೇ ಹಸ್ತಕ್ಷೇಪ ಮಾಡಬೇಕಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವ ಸಂವಿಧಾನದ 356ನೆಯ ವಿಧಿಯು ಬಳಕೆಗಿಂತ ದುರ್ಬಳಕೆಯಾಗಿರುವುದೇ ಅಧಿಕ. ಆದರೆ ಮಣಿಪುರದ ಜ್ವಾಲೆಗಳನ್ನು ನಂದಿಸಲು ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವುದೇ ಸೂಕ್ತ ಎಂಬುದು ದವೆ ಕಾಳಜಿ.
ದುಷ್ಯಂತ್ ದವೆ ವಾದದಲ್ಲಿ ದೇಶದ ಹಿತ ಅಡಗಿದೆ. ಮಣಿಪುರದ ಹಿತ ಅಡಗಿದೆ. ಆದರೆ ಬಿಜೆಪಿ-ಮೋದಿ-ಶಾ ಅವರ ಹಿತ ಅಡಗಿಲ್ಲ. ಈ ಈಶಾನ್ಯ ರಾಜ್ಯ ಹೊತ್ತಿ ಉರಿಯುತ್ತಿದ್ದರೂ ಹಿಂದೂಗಳು ಅಪಾಯದಲ್ಲಿದ್ದಾರೆಂಬ ಪಿಟೀಲು ಬಾರಿಸತೊಡಗಿದ್ದಾರೆ. ದೇಶ ಹಿತವೇ ಪ್ರಥಮ ಎಂದು ಎತ್ತರೆತ್ತರದಲ್ಲಿ ತುತ್ತೂರಿ ಊದುವವರು ತಮ್ಮ ಈ ಮಾತನ್ನು ನಡೆಸಿಕೊಡಬೇಕಿದೆ.
https://www.youtube.com/watch?v=jaoaCgS7kp8
