'ಪ್ರಿಡೇಟರ್', 'ಕಾಗ್ನೈಟ್’, ‘ಕ್ವಾಡ್ರೀಮ್’ ಬೇಹುಗಾರಿಕೆ ಸೈಬರಾಸ್ತ್ರಗಳ ಖರೀದಿಗೆ ಮುಂದಾಗಿದೆ ‘ಮೋಶಾ’ ಜೋಡಿ
ದೇಶದ ಎಲ್ಲ ಜನತಾಂತ್ರಿಕ ಸ್ತಂಭಗಳ ಮೇಲೆ ‘ಪೆಗಸಸ್’ ಎಂಬ ಕುಖ್ಯಾತ ಇಸ್ರೇಲಿ ಬೇಹುಗಾರಿಕೆ ಸೈಬರ್ ಅಸ್ತ್ರದ ಅನಾಗರಿಕ ದಾಳಿಯನ್ನು ‘ಮೋಶಾ’ ಸರ್ಕಾರ ವರ್ಷಗಳ ಹಿಂದಷ್ಟೇ ನಡೆಸಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ನಾಲ್ಕನೆಯ ಅಂಗವೆಂದು ಕರೆಯಲಾಗುವ ಪತ್ರಿಕಾಂಗಗಳು ಈ ಅಕ್ರಮ ಅನೈತಿಕ, ಜನತಂತ್ರ ವಿರೋಧಿ ದಾಳಿಗೆ ತುತ್ತಾಗಿದ್ದವು. ಸಾಮಾಜಿಕ ರಾಜಕೀಯ ಹೋರಾಟಗಾರರನ್ನೂ ಬಿಟ್ಟಿರಲಿಲ್ಲ.
ಅತ್ಯಾಧುನಿಕ ಬೇಹುಗಾರಿಕೆಯ ಈ ತಂತ್ರಾಂಶವನ್ನು ಶಸ್ತ್ರಾಸ್ತ್ರ ಎಂದು ಖುದ್ದು ಇಸ್ರೇಲ್ ಸರ್ಕಾರವೇ ಕರೆದಿದೆ. ‘ಪೆಗಸಸ್’ ಎಂಬ ಈ ಅಸ್ತ್ರದ ಖರೀದಿಗೆ ಅಧಿಕಾರ ನೀಡಿದವರು ಯಾರು ಎಂಬ ಅಂಶವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ. ಈ ಸೈಬರಾಸ್ತ್ರವನ್ನು ಖರೀದಿ- ಬಳಕೆ ಕುರಿತು ಸುಪ್ರೀಮ್ ಕೋರ್ಟು ತನಿಖೆಗೆ ಆದೇಶ ನೀಡಿತ್ತು. ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಆದರೂ ತನಿಖೆ ಪೂರ್ಣಗೊಂಡಿದ್ದು, ವರದಿ ಈಗಲೂ ಮೊಹರು ಮಾಡಿದ ಲಕೋಟೆಯಲ್ಲಿ ‘ಬಂದಿ’ಯಾಗಿದೆ.
ಈ ಸೈಬರಾಸ್ತ್ರ ಎಬ್ಬಿಸಿದ್ದ ಬಿರುಗಾಳಿಯ ರಭಸ ಅಡಗುವ ತನಕ ಕಾದಿತ್ತು ಮೋದಿ ಸರ್ಕಾರ. ಹೀನಸುಳಿ ಬೋಳಿಸಿದರೆ ಹೋದೀತೇ ಎಂಬ ಗಾದೆ ಮಾತಿದೆ. ಪೆಗಸಸ್ ನಂತಹುದೇ ಮತ್ತೊಂದು ಬೇಹುಗಾರಿಕೆ ಸೈಬರಾಸ್ತ್ರದ ಖರೀದಿಗೆ ಇದೀಗ ಪುನಃ ಮುಂದಾಗಿದೆ ‘ಮೋಶಾ’ ಜೋಡಿ. ಈ ಸುದ್ದಿಯನ್ನು ಬಯಲಿಗೆಳೆದಿದೆ ಬ್ರಿಟನ್ನಿನ ಪ್ರಸಿದ್ಧ ದಿನಪತ್ರಿಕೆ ‘ಫೈನಾನ್ಷಿಯಲ್ ಟೈಮ್ಸ್’. ಪೆಗಸಸ್ ನ ಪರ್ಯಾಯ ಬೇಹುಗಾರಿಕೆ ಸಾಧನಗಳ ಪೂರೈಕೆಗಾಗಿ ಭಾರತ ಸರ್ಕಾರ ವಿದೇಶೀ ಸಂಸ್ಥೆಗಳಿಂದ ‘ಬಿಡ್’ ಕರೆದಿದೆ. ಈ ಹೊಸ ಬೇಹುಗಾರಿಕೆ ಸಾಧನಗಳನ್ನು ‘ಪ್ರಿಡೇಟರ್,’ ‘ಕಾಗ್ನೈಟ್’, ‘ಕ್ವಾಡ್ರೀಮ್’ ಎಂದು ಗುರುತಿಸಿದೆ.
ಪ್ರತಿಪಕ್ಷಗಳ ನಾಯಕರು, ನ್ಯಾಯಮೂರ್ತಿಗಳು, ಪತ್ರಕರ್ತರು, ರಾಜಕೀಯ ಎದುರಾಳಿಗಳನ್ನು ಜನತಂತ್ರ ವಿರೋಧಿ ದಾರಿಗಳಿಂದ ಬಗ್ಗು ಬಡಿಯುವ ಚಾಳಿಯನ್ನು ಮೋಶಾ ಸರ್ಕಾರ ಸುಲಭಕ್ಕೆ ಕೈಬಿಡುವುದಿಲ್ಲ ಎಂಬುದಕ್ಕೆ ಇದೊಂದು ಜೀವಂತ ನಿದರ್ಶನ.
ನಿರ್ದಿಷ್ಟ ಮೊಬೈಲ್ ಫೋನ್ ಅಥವಾ ಕಂಪ್ಯೂಟರಿಗೆ ಸುಳಿವೇ ಇಲ್ಲದಂತೆ ನುಗ್ಗಿಸಲಾಗುವ ಈ ಅಸ್ತ್ರ ಸಂಬಂಧಪಟ್ಟ ಫೋನ್ ಅಥವಾ ಕಂಪ್ಯೂಟರನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅರ್ಥಾತ್ ಆ ಪೋನ್ -ಕಂಪ್ಯೂಟರನ್ನು ಬೇಹುಗಾರಿಕೆ ನಡೆಸುವವರ ನಿಯಂತ್ರಣಕ್ಕೆ ಒಪ್ಪಿಸಿಕೊಡುತ್ತದೆ. ಆ ಫೋನಿನ ಮಾಲೀಕ ನಿರ್ದಿಷ್ಟ ಫೋನಿನಲ್ಲಿ ಮಾಡಬಹುದಾದ ಎಲ್ಲ ಕ್ರಿಯೆಗಳನ್ನು ಬೇಹುಗಾರಿಕೆ ನಡೆಸುವವರೂ ಮಾಡಬಹುದು.
ಅಷ್ಟೇ ಅಲ್ಲ, ಶಿಕಾರಿಯಾದ ಫೋನಿನ ಆಸುಪಾಸು ನಡೆಯುವ ಮಾತುಕತೆಗಳು, ಚಟುವಟಿಕೆಗಳ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಫೋನಿನ ಕ್ಯಾಮೆರಾ ತಂತಾನೇ ಚಾಲನೆಯಾಗಿ ಫೋನಿನ ಆಸುಪಾಸು ನಡೆಯುವ ಎಲ್ಲ ದೃಶ್ಯಗಳನ್ನೂ ಚಿತ್ರೀಕರಿಸಿಕೊಂಡು ಬೇಹುಗಾರರಿಗೆ ರವಾನಿಸುತ್ತದೆ. ಬೇಹುಗಾರಿಕೆಗೆ ಶಿಕಾರಿಯಾದ ಫೋನನ್ನು ಸೈಬರಾಸ್ತ್ರ ಪ್ರವೇಶ ಮಾಡುವುದರಿಂದ ಹಿಡಿದು, ಅದು ನಡೆಸುವ ಈ ಯಾವುದೇ ಕ್ರಿಯೆಯು ಫೋನಿನ ಒಡತಿ-ಒಡೆಯನ ಅರಿವಿಗೆ ಬರುವುದೇ ಇಲ್ಲ.
ನಾಲ್ಕು ಗೋಡೆಯ ನಡುವೆ ನಡೆಯುವ ತಮ್ಮ ಎಲ್ಲ ಚಟುವಟಿಕೆಗಳನ್ನು ಬಟಾಬಯಲಿನಲ್ಲಿ ನಡೆಸಿದಂತೆ. ಊಹೆಗೂ ನಿಲುಕದ ಭಯಾನಕ ಸ್ಥಿತಿ. ಹೀಗಾಗಿ ಈ ಬೇಹುಗಾರಿಕೆ ಇಲ್ಲಿಯ ತನಕ ನಾವು ಕಂಡು ಕೇಳಿರುವ ಕೇವಲ ಫೋನುಗಳ ಕದ್ದಾಲಿಕೆಯ ಸಾಧಾರಣ ಬೇಹುಗಾರಿಕೆ ಅಲ್ಲ.
ಭಯೋತ್ಪಾದನೆ ಮತ್ತಿತರೆ ಘೋರ ಪಾತಕಗಳನ್ನು ಮುಂಚಿತವಾಗಿಯೇ ತಿಳಿದು ತಡೆಯಲು ಮತ್ತು ಅಪರಾಧಗಳ ತನಿಖೆಯ ಕಾನೂನಾತ್ಮಕ ಬಳಕೆಗೆ ಈ ತಂತ್ರಾಂಶ ಮೀಸಲು. ಕೇವಲ ಸರ್ಕಾರಗಳಿಗೆ ಮಾತ್ರವೇ ಈ ಸೈಬರ್ ಅಸ್ತ್ರವನ್ನು ಮಾರಾಟ ಮಾಡಲಾಗುವುದು ಎಂದು ಇಸ್ರೇಲ್ ಸರ್ಕಾರ ಮತ್ತು ಪೆಗಸಸ್ ತಯಾರಿಸುವ ಎನ್.ಎಸ್.ಒ. ಸ್ಪಷ್ಟಪಡಿಸಿದ್ದವು. ಆದರೆ ಈ ಅಸ್ತ್ರವನ್ನು ಭಾರತವೂ ಸೇರಿದ 50 ದೇಶಗಳ ಪತ್ರಕರ್ತರು, ಹೋರಾಟಗಾರರು, ಪ್ರತಿಪಕ್ಷಗಳ ರಾಜಕಾರಣಿಗಳು ಹಾಗೂ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಲು ದುರುಪಯೋಗ ಮಾಡಲಾಗಿತ್ತು. ಜಗತ್ತಿನ ಬಹುತೇಕ ದೇಶಗಳು ‘ಪೆಗಸಸ್’ನ್ನು ಕಪ್ಪು ಪಟ್ಟಿಗೆ ಸೇರಿಸಿವೆ.
ಬೇಹುಗಾರಿಕೆ ಎಂಬುದು ರಾಜ್ಯಾಡಳಿತದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಈ ಕ್ರಿಯೆಗೆ ಧರ್ಮ- ಕರ್ಮದ ನೈತಿಕ ತಳಹದಿ ಇರಬೇಕು. ನೀತಿ ಸಂಹಿತೆ ಹೊಂದಿರಬೇಕು.ಎಂದು ಮೋಶಾ ಮೆಚ್ಚುವ ಕೌಟಿಲ್ಯನ ಅರ್ಥಶಾಸ್ತ್ರವೇ ವಿಧಿಸಿದೆ.
ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು, ಸಾರ್ವಜನಿಕ ಒಳಿತು ಸಾಧಿಸಲು ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಗೋಪ್ಯ ನಿಗಾ ಇರಿಸಿ ಅವರ ದೂರವಾಣಿ ಮಾತುಕತೆಗಳು ಮತ್ತು ಡಿಜಿಟಲ್ ಮಾಹಿತಿಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುವ ಅಧಿಕಾರ ಸರ್ಕಾರಗಳಿಗೆ ಇದೆ.
ಭಾರತೀಯ ಟೆಲಿಗ್ರಾಫ್ ಕಾಯಿದೆ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಗೆ ಮಾಡಲು ಕಾನೂನು ವಿಧಿ ವಿಧಾನಗಳಿವೆ. ಬೇಕಾಬಿಟ್ಟಿ ನಡೆಸಲಾಗುವುದಿಲ್ಲ.
ತನ್ನ ಪ್ರಜೆಗಳ ನಾಗರಿಕ ಹಕ್ಕುಗಳು ಮತ್ತು ಖಾಸಗಿತನವನ್ನು ಗೌರವಿಸಿ ರಕ್ಷಿಸುವುದು ಆಯಾ ದೇಶದ ಸರ್ಕಾರಗಳ ಆದ್ಯ ಕರ್ತವ್ಯ. ವಿಶ್ವದ ಜನತಂತ್ರದ ಜನನಿ ಭಾರತ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುವ ಮೋಶಾ ಜೋಡಿ ಈ ಜನತಂತ್ರ ವಿರೋಧಿ ನಡವಳಿಕೆಯನ್ನು ಇಡಿಯಾಗಿ ಕೈಬಿಡಬೇಕು.
