ಈ ದಿನ ಸಂಪಾದಕೀಯ | ಮಾನವ ಘನತೆಗಾಗಿ ಹೋರಾಟ – ಕನ್ನಡ ತಮಿಳು ಎಂಬ ಗಡಿಗೆರೆಗಳು ಸಲ್ಲದು

Date:

Advertisements
ಶತಮಾನಗಳ ನೋವನ್ನು ಸ್ಮೃತಿಯಲ್ಲಿಟ್ಟುಕೊಂಡು, ಇಂದೂ ಅದರ ವಿವಿಧ ರೂಪಗಳು ಢಾಳಾಗಿ ಕಂಡಾಗ ಸಿಟ್ಟಿಗೇಳುವ ಹಕ್ಕು ಕೆಲವು ಸಮುದಾಯಗಳಿಗಿದೆ. ಆ ಸಮುದಾಯಗಳಿಗೆ ಸೇರಿದ ಅದ್ಭುತ ಪ್ರತಿಭೆಗಳೇ ʼತಂಗಲಾನ್‌ʼ ಅಥವಾ ʼಕೋಡಿಹಳ್ಳಿಯ ಬಾಬ್‌ ಮಾರ್ಲೆʼಯನ್ನು ಕಡೆದು ನಿಲ್ಲಿಸುತ್ತಿದ್ದಾರೆ. ಆ ರೀತಿ ಕಡೆಯುವಾಗ ಬದುಕಿಗೂ, ಕಲೆಗೂ, ಕಲೆಯೊಳಗಿನ ನೀತಿಗೂ ರಂಗು ತುಂಬುತ್ತಿದ್ದಾರೆ. ಸೀಮಿತ ಚೌಕಟ್ಟುಗಳನ್ನು ದಾಟಿ ಕತೆ ಕಟ್ಟುತ್ತಿದ್ದಾರೆ. ಪಾ. ರಂಜಿತ್‌ ಅಥವಾ ಕೆ.ಪಿ.ಲಕ್ಷ್ಮಣ್‌ ಥರದವರ ವಿಶೇಷತೆ ಇರುವುದೇ ಬದುಕಿನ ಕತೆಗಳನ್ನು ಜನಸಾಮಾನ್ಯರ ಹೃದಯಗಳಿಗೆ ಮಾಸ್‌ ಆಗಿ ತಲುಪಿಸುವ ನಾಟಕಗಳಾಗಿಸುತ್ತಿರುವುದರಲ್ಲಿ. ಅವಕ್ಕೆ ಭಾಷೆಯ ಗಡಿಗಳನ್ನೆಳೆಯದಿರೋಣ.

ಹಸಿವಿಗೆ, ನೋವಿಗೆ, ಹೋರಾಟಕ್ಕೆ ಮತ್ತು ಘನತೆಗೆ ಒಂದು ಭಾಷೆ ಇರುತ್ತದೆಯೇ? ಈ ಪ್ರಶ್ನೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಏಳುತ್ತಿದೆ. ಜಾತಿ, ಅಸ್ಪೃಶ್ಯತೆಯ ಕ್ರೌರ್ಯ ಮತ್ತು ವಸಾಹತುಶಾಹಿ ಕ್ರೌರ್ಯಕ್ಕೆದುರಾಗಿ ಬದುಕಿನ ಘನತೆಗಾಗಿ ನಡೆಯುವ ಸಂಘರ್ಷವನ್ನು ಬಿಂಬಿಸುವ ತಮಿಳು ಸಿನೆಮಾ ʼತಂಗಲಾನ್‌ʼಗೆ ಕನ್ನಡದ ಜನ ತೋರಿದ ಸ್ಪಂದನೆಯೇ ಈ ಪ್ರಶ್ನೆ ಏಳುವುದಕ್ಕೆ ಕಾರಣವಾಗಿದೆ. ಪಾ.ರಂಜಿತ್‌ ನಿರ್ದೇಶನದ ʼತಂಗಲಾನ್‌ʼ ಕೆಜಿಎಫ್‌ ಚಿನ್ನದ ಗಣಿಯ ಇತಿಹಾಸದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಹೋರಾಟದ ಕತೆ. ಇಷ್ಟೇ ಹೇಳಿದರೆ ಅಪಚಾರವಾಗುತ್ತದೆ. ನಿಜಕ್ಕೂ ಭಾರತೀಯರು ಈ ಸಿನೆಮಾದ ಯಶಸ್ಸಿನ ಕುರಿತು ಸಂಭ್ರಮಿಸಬೇಕು. ಕರ್ನಾಟಕದಲ್ಲೂ ಅಂತಹ ಸಂಭ್ರಮವನ್ನು ಬಹಳಷ್ಟು ಜನರು ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟಿನಲ್ಲಿ ಬರೆದರು. ʼತಂಗಲಾನ್‌ʼ ಕುರಿತ ಈ ಸಂಭ್ರಮ ಕೆಲವರಿಗೆ ಕಸಿವಿಸಿ ತಂದಂತಿದೆ. ಕನ್ನಡದಲ್ಲೂ ಇಂತಹ ಸಿನೆಮಾಗಳು ಬಂದಿವೆ, ಬರುತ್ತಿವೆ; ಅವುಗಳ ಬಗ್ಗೆ ಇಷ್ಟು ಸಡಗರ ಇರುವುದಿಲ್ಲ ಎಂಬುದು ಕೆಲವರ ತಕರಾರು. ಇನ್ನೂ ಕೆಲವರು ಅಷ್ಟಕ್ಕೆ ನಿಲ್ಲಿಸದೇ ಪಾ.ರಂಜಿತ್‌ರಂತಹ ನಿರ್ದೇಶಕರ ಕುರಿತ ಇಂತಹದೊಂದು ಅಭಿಮಾನವನ್ನೇ ಟೀಕೆ ಮಾಡಿದ್ದಾರೆ. ಕನ್ನಡ ಚಿತ್ರಾಭಿಮಾನ ವರ್ಸಸ್‌ ಇತರ ಭಾಷೆಗಳ ಸಿನೆಮಾಗಳ ಕುರಿತ ಅಭಿಮಾನದತನಕ ಇದನ್ನು ಹಲವರು ಎಳೆದಿದ್ದಾರೆ

ಜಗತ್ತಿನ ಯಾವುದೇ ಭಾಷೆಯಲ್ಲಿ ನಮ್ಮ ಕರುಳು ಕಲಕುವ, ಚಿಂತನೆಗೆ ಹಚ್ಚುವ, ಬದಲಾವಣೆಗೆ ಕಾರಣವಾಗುವ ಸಿನೆಮಾಗಳು ಬಂದರೂ ಸ್ವಾಗತಾರ್ಹವೇ. ಜಿ಼ಯೋನಿಸಂಅನ್ನು ವಿರೋಧಿಸಿ ಬರೆದ ಏಳೆಂಟು ಸಾಲುಗಳ ಲೀವಾ ಪ್ಯಾಲೆಸ್ತೀನಾ, ಕ್ರಾಸಾ ಜೀ಼ಯೋನೀಸಂ ಎಂಬ ಹಾಡು ಜಗತ್ತಿನೆಲ್ಲೆಡೆ ಅನುರಣಿಸುತ್ತಿದೆ. ಇಸ್ರೇಲಿ ಜನಾಂಗೀಯತೆಯನ್ನು (ಇಸ್ರೇಲಿಯನ್ನರನ್ನು ಅಲ್ಲ) ನಾಶ ಮಾಡಿ, ಪ್ಯಾಲೆಸ್ತೀನ್‌ ಚಿರಾಯುವಾಗಲಿದೆ ಎಂಬ ಹಾಡದು. ಅದರ ಭಾಷೆ ಪ್ಯಾಲೆಸ್ತೀನಿಯನ್‌ ಅರೇಬಿಕ್‌ ಅಲ್ಲ; ಅದು ಸ್ವೀಡಿಷ್‌ ಭಾಷೆಯ ಹಾಡು. ಇದ್ಯಾವುದೂ ಗೊತ್ತಿಲ್ಲದೇ, ಬಿಲಿಯನ್‌ಗಟ್ಟಲೆ ಜನರು ಆ ಹಾಡಿಗೆ ಕೊರಳಾಗಿದ್ದಾರೆ, ನರ್ತಿಸಿದ್ದಾರೆ. ನೋವೇ ಭಾಷೆಯಾಗಿ, ಸಂಘರ್ಷವೂ ಭಾಷೆಯಾಗಿ ಇರಲು ಸಾಧ್ಯ ಎಂಬುದನ್ನು ನಿರೂಪಿಸಿದ ಹಾಡು, ನಾಟಕ, ಸಿನೆಮಾಗಳು ಜಗತ್ತಿನಲ್ಲಿ ಬೇಕಾದಷ್ಟು ಬಂದಿವೆ; ಬರಲಿವೆ.

ʼತಂಗಲಾನ್‌ʼ ಒಂದು ಶೋಧದ ಕತೆ(Treasure Huntದು). ಅದು ಮಾನವ ಘನತೆಯ ನಿಧಿ ಶೋಧ. ಎಂದು ಶೋಷಣೆ ಶುರುವಾಯಿತೋ ಅಂದು ಶುರುವಾದ ಸಂಘರ್ಷ ಇಲ್ಲಿಯವರೆಗೂ ನಿಂತಿಲ್ಲ. ಆ ಸಂಘರ್ಷ ಸ್ವಾಭಿಮಾನ ಮತ್ತು ಬದುಕಿನ ಘನತೆಗಾಗಿನ ಹೋರಾಟ. ಅದು ಜಾತಿ ಶೋಷಣೆಯ ವಿರುದ್ಧ ಮಾತ್ರವೇ ಆಗಬೇಕಿಲ್ಲ. ಹಾಗೆ ನೋಡಿದರೆ ಜಾತಿ ಗೊತ್ತಿಲ್ಲದ, ಅದನ್ನು ಅಷ್ಟಾಗಿ ಆಚರಿಸದ ಬ್ರಿಟಿಷ್‌ ವಸಾಹತುಶಾಹಿ ಸಹ ತೀವ್ರವಾದ ದಬ್ಬಾಳಿಕೆ ನಡೆಸಿದ್ದು ದಲಿತ ಜೀತಗಾರರ ಮೇಲೆಯೇ ಎಂಬುದನ್ನು ʼತಂಗಲಾನ್‌ʼ ಚಿತ್ರಿಸುತ್ತದೆ. ಅವರಿಗೆ ಗೊತ್ತಿರುವುದು ಲೂಟಿಯ ಭಾಷೆ. ಇಲ್ಲಿ ಲೂಟಿಯ ಭಾಷೆ ಎಂದು ಕರೆಯುತ್ತಿರುವುದು ಇಂಗ್ಲಿಷನ್ನಲ್ಲ. ಬಂಡವಾಳಶಾಹಿಯ ಬೆಳವಣಿಗೆಯ ವ್ಯಾಕರಣವನ್ನು ಹೊಂದಿರುವ ಲಾಭಕೋರತನವನ್ನು ನಾವು ಎಲ್ಲೆಡೆ ಕಾಣಬಹುದು. ಆದರೆ, ಭಾರತದಲ್ಲಿ ಮಾತ್ರ ಕಾಣಸಿಗುವ ಜಾತಿ ಮತ್ತು ಅಸ್ಪೃಶ್ಯತೆಯ ನೋವು ಹಾಗೂ ಅದರ ವಿರುದ್ಧದ ಹೋರಾಟಕ್ಕೆ ಒಂದು ಭಾಷೆಯಿದೆ. ಅದು ಕೆಲವರಿಗೆ ಕನೆಕ್ಟ್‌ ಆಗದೆಯೂ ಇರಬಹುದು. ಅವರ ಬದುಕಿನ ಅನುಭವದ ಅಥವಾ ಅನನುಭವದ ಕಾರಣಕ್ಕೆ. ಅಂದರೆ ಆ ಭಾಷೆ ಅವರಿಗೆ ದಕ್ಕಿಲ್ಲ ಎಂದರ್ಥ. ಇನ್ನೂ ಒಂದು ಕಾರಣಕ್ಕೂ ಈ ಭಾಷೆ ಅರ್ಥವಾಗದೇ ಇರಬಹುದು. ಈ ಭಾಷೆಯು ಒಂದು ಸಂವೇದನೆಯನ್ನು ಬಯಸುತ್ತದೆ. ಅದಿಲ್ಲದೇ ಹೋದರೂ ಅರ್ಥವಾಗುವುದಿಲ್ಲ. ಇಲ್ಲಿ ಭಾಷೆಯೆನ್ನುವುದು ಕನ್ನಡ, ತಮಿಳು, ಇಂಗ್ಲಿಷಲ್ಲ.

Advertisements

ಭಾಷೆಯ ವ್ಯಾಖ್ಯಾನವನ್ನು ಇನ್ನೂ ವಿಸ್ತರಿಸಬಹುದು. ಸಿನೆಮಾಕ್ಕೊಂದು ಭಾಷೆ ಇರುತ್ತದೆ; ನಾಟಕಕ್ಕೊಂದು ಭಾಷೆ. ಕಂಪ್ಯೂಟರಿಗೆ ಹಲವು ಭಾಷೆಗಳು ಇಲ್ಲವೇ ಹಾಗೆ.

ಭಾಷೆಯ ವ್ಯಾಖ್ಯಾನ ಈ ರೀತಿ ವಿಸ್ತಾರವಾಗುತ್ತಾ ಆಗುತ್ತಾ ಹಲವು ಅಸಾಧ್ಯ ಕೊಂಡಿಗಳು ಬೆಸೆದುಕೊಳ್ಳುತ್ತವೆ. ಕುಸುಮಬಾಲೆ ಐರಿಷ್‌ ಜಾನಪದ ಕತೆಯಂತೆ ಐರಿಷ್‌ ಲೇಖಕಿ ಹೆಲೆನ್‌ ಡೈಯರ್‌ಗೆ ಅನಿಸಿದಂತೆ ಪಾತ್ರಗಳು ಬೆಸೆದುಕೊಳ್ಳುತ್ತವೆ. ಕೋಡಿಹಳ್ಳಿಯಿಂದ ಬೆಂಗಳೂರಿಗೆ ಬರುವ ಪ್ರತಿಭೆ ಬಾಬ್‌ ಮಾರ್ಲೆಯಾಗಿಬಿಡುತ್ತಾನೆ. ಬಾಬ್‌ ಮಾರ್ಲೆ ಫ್ರಂ ಕೋಡಿಹಳ್ಳಿ, ಪ್ರತಿಭಾವಂತ ಸಂವೇದನಾಶೀಲ ರಂಗನಿರ್ದೇಶಕ ಕೆ.ಪಿ.ಲಕ್ಷ್ಮಣ್‌ ಅವರ ನಿರ್ದೇಶನದ ಹೊಸ ನಾಟಕ. ಈ ನಾಟಕದಲ್ಲಿ ಏನೆಲ್ಲಾ ಬೆಸೆದುಕೊಂಡಿದೆ? ಪುರಾಣ, ಜಾನಪದ, ಸಿಲಿಕಾನ್‌ ಸಿಟಿ, ಕುಳವಾಡಿ, ಬಾಬ್‌ ಮಾರ್ಲೆ… ಹಾಗೆಯೇ ಕನ್ನಡ ಸಾಹಿತ್ಯಕ್ಕೆ ಅಪರೂಪಕ್ಕೆ ದಕ್ಕಿರುವ ನಗರ ಮತ್ತು ಗ್ರಾಮೀಣ ಅನುಭಾವವೂ ಈ ನಾಟಕದಲ್ಲಿ ಬೆಸೆದುಕೊಂಡಿದೆ. ಬಹಳ ಮುಖ್ಯವಾಗಿ ಬದಲಾಗುತ್ತಿದ್ದೂ ಉಳಿದುಕೊಂಡಿರುವ ಅಸ್ಪೃಶ್ಯತೆಯ ಕರಾಳತೆ. ಈ ನಾಟಕ ನೋಡಿದ ಬೆಂಗಳೂರು ಪೇಟೆಯ ವಿದ್ಯಾರ್ಥಿನಿಯೊಬ್ಬಳು– ಇಂತಹ ಅಸ್ಪೃಶ್ಯತೆ ಇಂದು ಆಚರಣೆಯಲ್ಲಿಲ್ಲ ಎನ್ನಬಹುದು. ಆದರೆ, ಆಕೆಯ ಮನೆಯಿರುವ ರಸ್ತೆಯಲ್ಲೇ ʼಸಸ್ಯಾಹಾರಿಗಳಿಗೆ ಮಾತ್ರʼ ಎಂಬ ಬೋರ್ಡಿರುವುದು ಸಮಸ್ಯೆ ಎನಿಸದೆಯೂ ಇರಬಹುದು. ಆದರೆ, ಈ ನಾಟಕ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲೇ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ಸಾಲಿನಲ್ಲಿ ಮೊದಲು ನಿಂತ ನನಗೆ ಮೊದಲು ಕ್ಷೌರ ಮಾಡು ಎಂದು ಕೇಳಿದ್ದಕ್ಕೆ, ದಲಿತ ಯುವಕ ಕೊಲೆಯಾದ ಘಟನೆ ನಡೆದಿದೆ. ಮಾನವ ಘನತೆಯನ್ನು ದಿನನಿತ್ಯದ ಬದುಕಿನಲ್ಲಿ ಜಾತಿ ವ್ಯವಸ್ಥೆ ಹತ್ತು ಹಲವು ರೀತಿಯಲ್ಲಿ ಕೊಲ್ಲುತ್ತಿದೆ. ಇದು ಯಾವ ಭಾಷೆಯ ಮೂಲಕ ನಮ್ಮನ್ನು ತಲುಪಬೇಕು?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ಸರ್ಕಾರದ ಆತ್ಮಾವಲೋಕನಕ್ಕಿದು ಸಕಾಲ

ಕಾರ್ಮಿಕರಾಗಿ ಬದಲಾದ ತಮಿಳು ದಲಿತ ಜೀತಗಾರರು, ಮೊದಲು ಉದಾರನಾಗಿ ತೋರಿದರೂ ವಸಾಹತುಶಾಹಿ ಕ್ರೌರ್ಯವನ್ನು ತನ್ನೊಳಗೆ ಇಟ್ಟುಕೊಂಡಿರುವ ಇಂಗ್ಲಿಷ್‌ ಕ್ಲೆಮೆಂಟ್‌, ಬುದ್ಧನನ್ನು ಅನ್ಯನನ್ನಾಗಿಸುವ ಕನ್ನಡದ ಶಾನುಭೋಗ ಪರಂಗಿಯವನ ಅಡಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವುದು- ಎಲ್ಲವೂ ಪ್ರತಿಮೆಗಳು ಮಾತ್ರ. ಇಲ್ಲಿ ತಮಿಳಿನ ಜಾಗದಲ್ಲಿ ಕನ್ನಡದ ದಲಿತನನ್ನು, ಕನ್ನಡದ ಶಾನುಭೋಗನ ಜಾಗದಲ್ಲಿ ತೆಲುಗಿನ ಕರಣಂನನ್ನು, ಇಂಗ್ಲಿಷಿನವನ ಜಾಗದಲ್ಲಿ ಡಚ್‌ ಅಥವಾ ಪೋರ್ಚುಗೀಸನನ್ನು ಬದಲಿಸಿಕೊಂಡರೂ, ಶೋಷಣೆಯ ಭಾಷೆ ಬದಲಾಗುವುದಿಲ್ಲ; ಹೋರಾಟದ ಭಾಷೆಯೂ…

ಈ ಪರಿಯ ಶೋಷಣೆಗಿಲ್ಲದ ಭಾಷೆಯ ಗಡಿಗೆರೆಗಳು, ಅದರ ಅಭಿವ್ಯಕ್ತಿಯ ಕಲೆಗೆ ಮಾತ್ರ ಏಕೆ ಇರಬೇಕು? ಹೌದು, ಕೆಲವರು ಸದಾ ಜಾತಿಯ ಕುರಿತೇ ಮಾತನಾಡುತ್ತಾರೆ ಮತ್ತು ಜಾತಿ-ಅಸ್ಪೃಶ್ಯತೆಯನ್ನು ಹೊರತುಪಡಿಸಿ ಉಳಿದವೆಲ್ಲವೂ ಗೌಣವೆಂಬಂತೆ ಚರ್ಚಿಸುವುದರಲ್ಲಿ ಒಂದು ಅಪಾಯವಿದೆ. ಯಾರಿಗೂ ಒಂದೇ ಅನನ್ಯ ಗುರುತು (ಸಿಂಗಲ್‌ ಐಡೆಂಟಿಟಿ) ಇಲ್ಲ ಮತ್ತು ಎಲ್ಲವೂ ಹಿಂದಿನ ರೂಪಗಳಲ್ಲಿ ಇಲ್ಲ. ಹಾಗಾಗಿ ಸಿಕ್ಕಾಪಟ್ಟೆ ಬೈನರಿಗಳನ್ನು (ಕಪ್ಪು-ಬಿಳುಪು ಪಾತ್ರಗಳನ್ನು) ಸೃಷ್ಟಿಸುವುದು ಸಮಸ್ಯೆಯೇ ಸರಿ. ಆದರೆ ಶತಮಾನಗಳ ನೋವನ್ನು ಸ್ಮೃತಿಯಲ್ಲಿಟ್ಟುಕೊಂಡು, ಇಂದೂ ಅದರ ವಿವಿಧ ರೂಪಗಳು ಢಾಳಾಗಿ ಕಂಡಾಗ ಸಿಟ್ಟಿಗೇಳುವ ಹಕ್ಕು ಕೆಲವು ಸಮುದಾಯಗಳಿಗಿದೆ. ಆ ಸಮುದಾಯಗಳಿಗೆ ಸೇರಿದ ಅದ್ಭುತ ಪ್ರತಿಭೆಗಳೇ ʼತಂಗಲಾನ್‌ʼ ಅಥವಾ ʼಕೋಡಿಹಳ್ಳಿಯ ಬಾಬ್‌ ಮಾರ್ಲೆʼಯನ್ನು ಕಡೆದು ನಿಲ್ಲಿಸುತ್ತಿದ್ದಾರೆ. ಆ ರೀತಿ ಕಡೆಯುವಾಗ ಬದುಕಿಗೂ, ಕಲೆಗೂ, ಕಲೆಯೊಳಗಿನ ನೀತಿಗೂ ರಂಗು ತುಂಬುತ್ತಿದ್ದಾರೆ. ಸೀಮಿತ ಚೌಕಟ್ಟುಗಳನ್ನು ದಾಟಿ ಕತೆ ಕಟ್ಟುತ್ತಿದ್ದಾರೆ. ರೂಪಕಗಳ ರಾಶಿ ಹುಯ್ಯುತ್ತಾ ಪೂರ್ವಿಕರ ಕತೆಯನ್ನು ಸಾಂದ್ರವಾಗಿ ಆಧುನಿಕಗೊಳಿಸುತ್ತಿದ್ದಾರೆ. ಫೇಸ್‌ಬುಕ್ಕಿನ ವಾಗ್ವಾದದಲ್ಲಿ ಜಾತಿ ʼಅತಿಯಾಗಿ ಕಂಡರೆʼ ಅಸಹನೆ ತೋರದೆ ತಾಳ್ಮೆಯಿಂದ, ಸಹನೆಯಿಂದ, ಸಂವೇದನೆಯಿಂದ ಈ ಕಲೆಯ ಭಾಷೆಯನ್ನು ಒಳಗೆ ಇಳಿಸಿಕೊಳ್ಳಬೇಕಿದೆ. ಇವನ್ನು ಕನ್ನಡ, ತಮಿಳು ಎಂಬ ಗಡಿಗೆರೆಗಳ ಮೂಲಕ ಪ್ರತ್ಯೇಕಿಸುವುದು ದುರಂತವೇ ಸರಿ.

ಇಂತಹ ಕಥನಗಳನ್ನು ಇರಾನ್‌, ಜಪಾನ್‌, ಇಂಗ್ಲಿಷ್‌ ಅಥವಾ ಕೊರಿಯನ್‌ ಸಿನೆಮಾ ತೋರಿಸುವಾಗ ಅವನ್ನು ಕೆಲವರು ಸಂಭ್ರಮಿಸಿದಾಗ ಸಿಟ್ಟು ಬರುವುದಕ್ಕೆ ಬೇರೆ ಕಾರಣವಿದೆ. ಅಂತಹ ಸಂಭ್ರಮದ ಸಾಧ್ಯತೆ ಕೆಲವರಿಗಷ್ಟೇ ಇರುವುದರಿಂದ ಈ ಅಭಿರುಚಿಯೇ ಸಿಕ್ಕಾಪಟ್ಟೆ ಎಲೀಟ್‌ (ಕೆಲವು ʼಉನ್ನತʼ ವ್ಯಕ್ತಿಗಳಿಗಷ್ಟೇ ಸಾಧ್ಯವಿರುವ ಸಂಗತಿ) ಆಗಿ ಕಾಣತೊಡಗುತ್ತದೆ. ನಮ್ಮ ಹಲವು ಚಲನಚಿತ್ರೋತ್ಸವಗಳು ಕಾರ್ಪೋರೇಟ್‌ ಎಲೀಟ್‌, ಕಲಾತ್ಮಕ ಎಲೀಟ್‌ ಅಥವಾ ಪ್ರಗತಿಪರ ಎಲೀಟ್‌ ಆಗಿ ಮುಗಿದು ಹೋಗುತ್ತಿರುವುದಕ್ಕೆ ಅದೇ ಕಾರಣ. ಅದು ನೆಲಕ್ಕಿಳಿಯಬೇಕಿಲ್ಲ; ಜನರೆದೆ ತಾಕಬೇಕಿಲ್ಲ. ಕೇವಲ ಕಲೆಗಾಗಿ ಕಲೆ.
ಆದರೆ, ಪಾ. ರಂಜಿತ್‌ ಅಥವಾ ಕೆ.ಪಿ.ಲಕ್ಷ್ಮಣ್‌ ಥರದವರ ವಿಶೇಷತೆ ಇರುವುದೇ ಬದುಕಿನ ಕತೆಗಳನ್ನು ಜನಸಾಮಾನ್ಯರ ಹೃದಯಗಳಿಗೆ ಮಾಸ್‌ ಆಗಿ ತಲುಪಿಸುವ ನಾಟಕಗಳಾಗಿಸುತ್ತಿರುವುದರಲ್ಲಿ. ಅವಕ್ಕೆ ಭಾಷೆಯ ಗಡಿಗಳನ್ನೆಳೆಯದಿರೋಣ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ತುಂಬಾ ಅರ್ಥಪೂರ್ಣ ಸಂಪಾದಕೀಯ ಮಾತುಗಳು.
    ಇಂದಿನ ವರ್ತಮಾನದ ಜಾತಿಯ ಕರಾಳ ಮುಖಗಳನ್ನು ತೆರೆದಿಡುವ ಮೂಲಕ ಮನ ತಟ್ಟುವಂತಿದೆ.ಸರ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X