ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

Date:

Advertisements
ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಂವಿಧಾನದ ರೀತಿ-ನೀತಿಗಳನ್ನು ಅನುಸರಿಸಿ, ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಆಡಳಿತ ನಡೆಸಬೇಕು. ಇದು ಗೊತ್ತಿದ್ದರೂ ಬಿಜೆಪಿ ಅಧಿಕಾರದ ಆಸೆಗೆ ಬಿದ್ದು ಮುಸ್ಲಿಮರ ತುಷ್ಟೀಕರಣ ಎಂದು ಬೊಬ್ಬೆ ಹೊಡೆಯುತ್ತಿದೆ. ಗೋದಿ ಮೀಡಿಯಾ ಸುಳ್ಳು ಸುದ್ದಿ ಬಿತ್ತರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಈಗಲೂ ಜನ ಎಚ್ಚೆತ್ತುಕೊಳ್ಳದಿದ್ದರೆ, ಕಷ್ಟವಿದೆ.

ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿ, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಯೋಜನೆಗಳಿಗೆ ಬಿಡುಗಡೆಯಾಗಿರುವ ಅನುದಾನದ ಕುರಿತು ಶಿಕಾರಿಪುರದ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಸದನದಲ್ಲಿ ಎದ್ದು ನಿಂತು ಪ್ರಶ್ನೆ ಕೇಳಿದರು. ಕೇಳಿದಾಕ್ಷಣ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಆ ಕೋಲಾಹಲ ಅವರ ಪ್ರಶ್ನೆಗೆ ಕೊಟ್ಟ ಕುಮ್ಮಕ್ಕಿನಂತಿತ್ತು. ಅವರ ಮುಸ್ಲಿಂ ಮಾನಸಿಕತೆಗೆ ಕೀಲೆಣ್ಣೆ ಸಿಕ್ಕಂತಾಯಿತು. ವಿಜಯೋತ್ಸಾಹದಲ್ಲಿ ವಿಜಯೇಂದ್ರ, ‘ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಹಣ ಬಿಡುಗಡೆ ಮಾಡಲು ಈ ಸರ್ಕಾರ ಕ್ರಮ ಕೈಗೊಂಡಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡಲು ಹೊರಟಿದೆ. ಅನುದಾನ ಬಿಡುಗಡೆಯಲ್ಲೂ ತಾರತಮ್ಯ ಮಾಡುತ್ತಿದೆ’ ಎಂದು ಸರ್ಕಾರವನ್ನು ಟೀಕಿಸಿದರು.

ಸರ್ಕಾರ ಎಡವಿದಾಗ, ಹಾದಿ ತಪ್ಪಿದಾಗ ವಿರೋಧ ಪಕ್ಷ ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ. ಅದು ಪ್ರಜಾಪ್ರಭುತ್ವದ ರೀತಿ ಮತ್ತು ನೀತಿ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಪರಿಹಾರ ನೀಡಿಲ್ಲ ಎನ್ನುವ ಪ್ರಶ್ನೆ ಕೂಡ ಸಕಾಲಿಕ. ಆದರೆ, ಅದೇ ಭರಾಟೆಯಲ್ಲಿ ಬಿಜೆಪಿಗರು, ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ನಿರತವಾಗಿದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುತ್ತಿದೆ ಎಂದು ಅಬ್ಬರಿಸಿದರು. ಅದನ್ನೇ ಕಾಯುತ್ತಿದ್ದ ಗೋದಿ ಮೀಡಿಯಾದ ಪತ್ರಕರ್ತರು, ಅಷ್ಟನ್ನು ಮಾತ್ರ ಹೆಕ್ಕಿ, ಇಡೀ ದಿನ ಆ ಸುದ್ದಿಯನ್ನು ಹಂಚಿ ಆನಂದಿಸಿದರು.

ಬಿಜೆಪಿಯ ವಿಜಯೇಂದ್ರರ ಪ್ರಶ್ನೆಗೆ ಉತ್ತರಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ‘ರಾಜ್ಯ ಸರ್ಕಾರದ ಮುಂದಿನ ಆರ್ಥಿಕ ವರ್ಷದ ಬಜೆಟ್ ಗಾತ್ರ 3.71 ಲಕ್ಷ ಕೋಟಿಯಷ್ಟಿದೆ. ಬಜೆಟ್ ಗಾತ್ರದ ಶೇಕಡ 1ರಷ್ಟು ಕೂಡ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ. ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ಮೂರು ವರ್ಷಗಳಲ್ಲಿ ಒಂದು ಸಾವಿರ ಕೋಟಿ ವೆಚ್ಚ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 165 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ’ ಎಂದರು.

Advertisements

ಈ ಸತ್ಯವನ್ನು ಸರ್ಕಾರ ಸಾರ್ವಜನಿಕರ ಮುಂದಿಡುವ ವೇಳೆಗೆ ಮೋದಿ ಪ್ರಣೀತ ಗೋದಿ ಮೀಡಿಯಾಗಳ ಸುಳ್ಳು ಊರು ಸುತ್ತಾಡಿ ಬಂದಿತ್ತು. ತಣ್ಣಗಿದ್ದ ಕೊಳಕ್ಕೆ ಮುಸ್ಲಿಂ ತುಷ್ಟೀಕರಣ ಎಂಬ ಕಲ್ಲು ಎಸೆದ ಕಿಡಿಗೇಡಿಗಳು, ಅದರಿಂದ ಎದ್ದ ತರಂಗಗಳಿಂದ ಉಂಟಾಗುವ ಪ್ರಕ್ಷುಬ್ಧತೆಯನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನದಲ್ಲಿದ್ದರು.

‘ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯ ಅಲ್ಪಸಂಖ್ಯಾತರು ನನ್ನ ಕ್ಷೇತ್ರದಲ್ಲಿದ್ದಾರೆ. ಅಲ್ಲಿಗೆ ನಯಾಪೈಸೆ ಅನುದಾನ ನೀಡಿಲ್ಲ’ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ದೂರಿದರು. ಅದಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಬಿಜೆಪಿಗರೆಲ್ಲ ಬೆಂಬಲಿಸಿದರು. ಸದನ ಮತ್ತೊಮ್ಮೆ ಕೋಲಾಹಲಕ್ಕೆ ಕಾರಣವಾಯಿತು.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತೆರಿಗೆಯ ಪಾಲು ನೀಡುತ್ತಿಲ್ಲ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಪ್ರತಿಭಟಿಸಿದ್ದು ಭಾರೀ ಸುದ್ದಿಯಾಗಿತ್ತು. ಆ ಹಿನ್ನೆಲೆಯಲ್ಲಿ ಬಿಜೆಪಿಯ ಶಾಸಕ ಯತ್ನಾಳರು ಕೇಳಿದ ಈ ಪ್ರಶ್ನೆ, ಕಾಂಗ್ರೆಸ್ ಸರ್ಕಾರ ಕೂಡ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವುದನ್ನು ಮುನ್ನೆಲೆಗೆ ತಂದ ಗೋದಿ ಮೀಡಿಯಾದ ಪತ್ರಕರ್ತರಿಂದಾಗಿ, ಈ ಸುದ್ದಿ ಕೂಡ ರಾಜ್ಯದ ಮನೆ-ಮನ ಹೊಕ್ಕಿ ಕಲುಷಿತಗೊಳಿಸಿತ್ತು.

ಬಿಜೆಪಿ ಶಾಸಕ ಯತ್ನಾಳರ ಪ್ರಶ್ನೆಗೆ ಉತ್ತರಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ‘ಮುಸಲ್ಮಾನರ ಮತ ನನಗೆ ಬೇಡ, ಬುರ್ಖಾ ಹಾಕಿದ ಮಹಿಳೆಯರು, ಗಡ್ಡ ಬಿಟ್ಟ ಗಂಡಸರು ನನ್ನ ಬಳಿ ಬರಬೇಡಿ ಎಂದು ನೀವು ಬಹಿರಂಗವಾಗಿ ಹೇಳಿದ್ದೀರಿ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀವು ಕೆಲಸ ಮಾಡುವುದಿಲ್ಲ. ಅದಕ್ಕೆ ಬೇಕಾದ ಅನುದಾನಕ್ಕಾಗಿ ನೀವು ಪತ್ರ ಬರೆದು ಸರ್ಕಾರವನ್ನೂ ಕೇಳಿಲ್ಲ. ಆದರೆ ಅನುದಾನ ಕೊಟ್ಟಿಲ್ಲ ಎನ್ನುವ ಆರೋಪ ಮಾತ್ರ ಮಾಡ್ತೀರಿ’ ಎಂದರು.

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಂವಿಧಾನದ ರೀತಿ-ನೀತಿಗಳನ್ನು ಅನುಸರಿಸಿ, ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಆಡಳಿತ ನಡೆಸಬೇಕು.

ಕಳೆದ ಬಸವರಾಜ ಬೊಮ್ಮಾಯಿ ಅವರ ಸರ್ಕಾರ, ಉಡುಪಿಯ ಯಾವುದೋ ಒಂದು ಪುಟ್ಟ ಶಾಲೆಯಲ್ಲಿ ನಡೆದ ಹಿಜಾಬ್ ಘಟನೆಯನ್ನು, ಕೊಂಚ ಮಾನವೀಯವಾಗಿ ನೋಡಿದ್ದರೆ, ಅದು ಅಲ್ಲಿಗೇ ನಿಲ್ಲುತ್ತಿತ್ತು. ಶಾಂತಿ ಸಹಬಾಳ್ವೆ ನೆಲೆಸುತ್ತಿತ್ತು. ಆದರೆ, ದುರಾಲೋಚನೆಗೆ ಬಿದ್ದ ಬಿಜೆಪಿ, ತನ್ನ ಹಣ ಮತ್ತು ಅಧಿಕಾರ ಬಳಸಿ, ಗೋದಿ ಮೀಡಿಯಾಗಳ ನೆರವಿನಿಂದ ಇಡೀ ರಾಜ್ಯಕ್ಕೇ ಬೆಂಕಿ ಹಚ್ಚಿತು. ಅದರ ಪರಿಣಾಮ ಏನಾಯಿತು ಎನ್ನುವುದು- ಇಂದು ಸದನದ ಅವರ ಸ್ಥಾನಮಾನಗಳೇ ಸಾಬೀತುಪಡಿಸುತ್ತಿವೆ, ಇರಲಿ.

ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನದ 25-30ರ ವಿಧಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಮೂಲಭೂತ ಹಕ್ಕುಗಳಾಗಿ ಪರಿಗಣಿಸಲಾಗಿದೆ. ರಾಷ್ಟ್ರ ಮತ್ತು ಸಮಾಜದ ಹಿತಗಳಿಗೆ ಧಕ್ಕೆ ಬಾರದಂತೆ, ಅಲ್ಪಸಂಖ್ಯಾತರು ಬಹುಸಂಖ್ಯಾತರ ಬಂಡಾಯಕ್ಕೆ ಒಳಗಾಗದಂತೆ, ಬಹುಸಂಖ್ಯಾತ ರಾಷ್ಟ್ರೀಯರಂತೆ ಅಲ್ಪಸಂಖ್ಯಾತರೂ ತಮ್ಮ ಧರ್ಮ, ಭಾಷೆ ಮತ್ತು ಆಚಾರ – ವ್ಯವಹಾರಗಳನ್ನು ಉಳಿಸಿಕೊಳ್ಳಲು, ಅಭಿವೃದ್ಧಿಪಡಿಸಿಕೊಳ್ಳಲು ಎಲ್ಲ ಅನುಕೂಲತೆಗಳನ್ನೂ ಕಲ್ಪಿಸಿಕೊಡಲಾಗಿದೆ.

ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಇದನ್ನು ಕಡ್ಡಾಯವಾಗಿ ಓದಿ ಪ್ರಮಾಣ ಮಾಡಿರುತ್ತಾರೆ. ಸುದ್ದಿ ಮಾಧ್ಯಮಗಳು ಸತ್ಯ ಸಾರಬೇಕಾದ, ಜನರನ್ನು ಜಾಗೃತರನ್ನಾಗಿ ಮಾಡಬೇಕಾದ ಜವಾಬ್ದಾರಿಯುತ ಕೆಲಸ ನಿರ್ವಹಿಸಬೇಕಿರುತ್ತದೆ. ಆದರೆ, ಶಾಸಕರು ಅಧಿಕಾರದ ಆಸೆ ಬಿದ್ದು ಮಾಡಿದ ಪ್ರಮಾಣವನ್ನು ಮರೆಯುತ್ತಾರೆ. ಗೋದಿ ಬಿಸ್ಕತ್ ತಿಂದ ಪತ್ರಕರ್ತರು ಸುಳ್ಳು ಸುದ್ದಿ ಬಿತ್ತರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾರೆ. ಈಗಲೂ ಜನ ಎಚ್ಚೆತ್ತುಕೊಳ್ಳದಿದ್ದರೆ, ಕಷ್ಟವಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X