ಮೇಲ್ನೋಟಕ್ಕೇನೇ ಅತ್ಯಂತ ಅಕ್ರಮವಾದ ಅನುಮತಿಯನ್ನು ರಾಜ್ಯಪಾಲರು ನೀಡಿರುವಾಗ, ಕರ್ನಾಟಕದ ಜನರು ತಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿಯಿಂದ ರಾಜೀನಾಮೆ ಬಯಸುವ ಪ್ರಶ್ನೆ ಉದ್ಭವಿಸುತ್ತಿಲ್ಲ; ಬದಲಿಗೆ ಬಿಜೆಪಿಯ ವಿರುದ್ಧ ದನಿಯೆತ್ತುವ ಅಗತ್ಯವೇ ಹೆಚ್ಚಾಗಿದೆ.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಕ್ರಿಮಿನಲ್ ಪ್ರಕರಣ(ಪ್ರಾಸಿಕ್ಯೂಷನ್) ದಾಖಲಿಸಲು ನೀಡಿರುವ ಅನುಮತಿಯು, ಸಂವಿಧಾನಾತ್ಮಕವಲ್ಲದ್ದು; ಪ್ರಜಾಪ್ರಭುತ್ವ ವಿರೋಧಿಯಾದುದು. ರಾಜ್ಯಪಾಲರ ಈ ಕ್ರಮ ನೈತಿಕ ಎಲ್ಲೆಗಳನ್ನು ದಾಟಿದೆ ಮತ್ತು ಇದು ಕರ್ನಾಟಕಕ್ಕೆ ಮಾಡಿರುವ ಅವಮಾನವಾಗಿದೆ.
ಮೇಲ್ನೋಟಕ್ಕೇ ಎದ್ದು ಕಾಣುವಂತಹ ಹಲವು ದೊಡ್ಡ ತಪ್ಪುಗಳನ್ನು ರಾಜ್ಯಪಾಲರು ಎಸಗಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ತಮ್ಮ ಸ್ವಂತ ಕಚೇರಿಯಂತೆಯೋ, ದೆಹಲಿಯಲ್ಲಿ ಕೂತಿರುವ ಪಕ್ಷದ ಶಾಖಾ ಕಚೇರಿಯಂತೆಯೋ ನಡೆಸಿಕೊಳ್ಳುವುದು ಅಕ್ಷಮ್ಯ ಮಾತ್ರವಲ್ಲ ಅಕ್ರಮ ಎಂಬುದನ್ನು ರಾಜ್ಯಪಾಲರು ಅರಿಯುವ ಅಗತ್ಯವಿದೆ. ಇಲ್ಲವಾದರೆ, ಈಗ ಎದ್ದಿರುವ ರೀತಿಯಲ್ಲಿ, ರಾಜ್ಯಪಾಲರನ್ನು ವಜಾ ಮಾಡಬೇಕೆಂಬ ಕೂಗು ಏಳುತ್ತದೆ. ಅದರಿಂದ ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಜಾ ಮಾಡದಿರಬಹುದು; ಆದರೆ ಸಾಂಸ್ಥಿಕ ವಿಶ್ವಾಸಾರ್ಹತೆ ಕುಗ್ಗುತ್ತದೆ.
ಇಂದು ಕೇಂದ್ರ ಮಂತ್ರಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಾವು ಅಧಿಕಾರದಲ್ಲಿದ್ದಾಗ ಮಾಡಿದ ಆದೇಶವು ಅಕ್ರಮವಾಗಿತ್ತೆಂದು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ದೃಢಪಡಿಸಿಕೊಂಡು ಚಾರ್ಜ್‌ಶೀಟ್ ಹಾಕಲು ಇದೇ ರಾಜ್ಯಪಾಲರನ್ನು 11 ತಿಂಗಳ ಹಿಂದೆ ಕೇಳಿದ್ದರು. ಆ ಕುರಿತು ಏನೂ ಕ್ರಮ ಕೈಗೊಳ್ಳದ ರಾಜ್ಯಪಾಲರು ಇಲ್ಲಿ ಒಬ್ಬ ವ್ಯಕ್ತಿ, ತಾನು ಅಧಿಕಾರದಲ್ಲಿಲ್ಲದಾಗ ತನ್ನ ಕುಟುಂಬದ ಪರವಾಗಿ ಅನುಕೂಲ ಪಡೆದುಕೊಂಡರೆಂದು ಕೇವಲ ದೂರು ಸಲ್ಲಿಸಿದ್ದಕ್ಕೇ ತರಾತುರಿಯಲ್ಲಿ ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡಿದ್ದಾರೆ. ಇದಲ್ಲದೇ ಬಿಜೆಪಿಯ ಇನ್ನಿಬ್ಬರು ಸಚಿವರು ಅಧಿಕಾರದಲ್ಲಿದ್ದಾಗ ತೆಗೆದುಕೊಂಡಿದ್ದ ತೀರ್ಮಾನಗಳ ಕುರಿತು ಚಾರ್ಜ್ ಶೀಟ್ ಹಾಕಲು ಅನುಮತಿ ಕೇಳಲಾದ ಅರ್ಜಿಗಳೂ ಸಹ ವರ್ಷಗಟ್ಟಲೆ ಕೊಳೆಯುತ್ತಿವೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತಗಳು ನಮ್ಮ ರಾಜಕೀಯ ಹಾಗೂ ಆಡಳಿತಕ್ಕೆ ಅಂಟಿರುವ ಪಿಡುಗುಗಳು. ಇದಕ್ಕೆ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯನವರು ಸಂಪೂರ್ಣ ಹೊರತಾಗಿದ್ದಾರೆಂದು ಯಾರೂ ದೃಢವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಆಡಳಿತಾತ್ಮಕ, ತಾಂತ್ರಿಕ, ಸಾಂವಿಧಾನಿಕ ಹಾಗೂ ನೈತಿಕ ನೆಲೆಗಟ್ಟಿನಲ್ಲಿ ಮೇಲ್ನೋಟಕ್ಕೇ ಅವಕಾಶವಿಲ್ಲದ ಒಂದು ಕೇಸಿನಲ್ಲಿ ರಾಜ್ಯಪಾಲರು ನೀಡಿರುವ ಇಂತಹ ಅನುಮತಿಯೇ ಅಕ್ರಮವಾದುದು.
ಬಹಳ ಹಿಂದೆ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ, ಇಂತಹ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ, ಆ ನಂತರ ಭಾರತದ ಪ್ರಜಾತಂತ್ರದಲ್ಲಿ ಕೇಂದ್ರ ಸರ್ಕಾರವು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಬಿದ್ದಿತ್ತು. ಬಹುತೇಕ ಯಾವಾಗ ಸಂದೇಹಕ್ಕೆಡೆಯಿಲ್ಲದ ಪ್ರಮಾಣದಲ್ಲಿ ಸಾಕ್ಷಿ ಇರುತ್ತಿತ್ತೋ ಅಂತಹ ಸಂದರ್ಭದಲ್ಲಿ ಮಾತ್ರ ರಾಜ್ಯಪಾಲರುಗಳು ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ, 2014ರ ನಂತರ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಇಂತಹ ನೈತಿಕ ಎಲ್ಲೆಗಳನ್ನು ಪದೇ ಪದೆ ಮೀರುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಿಪಕ್ಷಕ್ಕೆ ಕನಿಷ್ಠ ಗೌರವವನ್ನೂ ನಿರಾಕರಿಸಿದ ಈ ನಡೆಗೆ ಕ್ಷಮೆಯೇ ಇಲ್ಲ
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ದೆಹಲಿಗಳಲ್ಲಿ, ಅದರಲ್ಲೂ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಲ್ಲಿ ಇಂತಹ ಘಟನೆಗಳು ಸಂಭವಿಸಿವೆ. ಇದೀಗ ಕರ್ನಾಟಕದ ಸರದಿ. ಇಲ್ಲಿಯೂ ಬಿಜೆಪಿ ರಾಜಭವನದಿಂದ ನಡೆಸಿರುವ ಪಿತೂರಿ ಇದೆಂದು ಭಾವಿಸಲು ಸ್ಪಷ್ಟವಾದ ಕಾರಣಗಳಿವೆ. ನಮ್ಮ ಕರ್ನಾಟಕವು ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಆಯ್ಕೆ ಮಾಡಿಕೊಂಡಾಗಲೂ, ‘ಕರ್ನಾಟಕದ ಆಡಳಿತ ದೆಹಲಿಯಿಂದಲ್ಲ, ಕರ್ನಾಟಕದಿಂದ’ ಎಂಬ ಕೂಗು ಎದ್ದಿತ್ತು. ನಂತರ ರಾಜ್ಯಪಾಲರ ಪಾತ್ರದ ಕುರಿತು ಸುಪ್ರೀಂಕೋರ್ಟಿನ ಚಾರಿತ್ರಿಕವಾದ ತೀರ್ಮಾನವೊಂದು ಬಂದಿದ್ದೂ ಕರ್ನಾಟಕದ ಎಸ್.ಆರ್.ಬೊಮ್ಮಾಯಿ ವರ್ಸಸ್ ರಾಜ್ಯಪಾಲರ ಕೇಸಿನಲ್ಲೇ ಎಂಬುದನ್ನೂ ಮರೆಯಲಾಗದು. ಇದೀಗ ಕರ್ನಾಟಕದ ಈ ಹೊತ್ತಿನ ದೊಡ್ಡ ನಾಯಕರಲ್ಲೊಬ್ಬರಾದ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರ ಕಚೇರಿ ಅಕ್ರಮವೆಸಗಿದೆ.
ಇದು ಕರ್ನಾಟಕದ ವಿರುದ್ಧ ನಡೆದಿರುವ ಪಿತೂರಿಯಾಗಿದೆ. ಇದನ್ನು ಕರ್ನಾಟಕವು ಸಹಿಸುವುದಿಲ್ಲ ಎಂಬುದನ್ನು ಇಲ್ಲಿ ದಾಖಲಿಸಬೇಕಿದೆ.
ಇನ್ನು ಮುಂದಿನ ಕಾನೂನಿನ ಪ್ರಕ್ರಿಯೆ ಹಾಗೂ ನೈತಿಕತೆಯ ಪ್ರಶ್ನೆಗಳು ಇವೆ. ಲೋಕಾಯುಕ್ತ ಪೊಲೀಸರ ಮುಂದೆ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಎಂಬುವವರು ಸಲ್ಲಿಸಿರುವ ದೂರಿನ ಪ್ರತಿ ಹಿಡಿದುಕೊಂಡು ರಾಜ್ಯಪಾಲರು, ತನಿಖೆಗೆ ಅನುಮತಿ ನೀಡಿದ್ದಾರೆ. ಲೋಕಾಯುಕ್ತ ಪೊಲೀಸರು ದೂರನ್ನು ಯಾವ ರೀತಿಯಲ್ಲಿ ಪರಿಗಣಿಸುತ್ತಾರೆ ಮತ್ತು ಆ ನಂತರ ವಿವಿಧ ನ್ಯಾಯಾಲಯಗಳಿಗೆ ಹೋಗುತ್ತೇವೆಂದು ಘೋಷಿಸಿರುವ ಕಾಂಗ್ರೆಸ್ ನಾಯಕರು ಅಲ್ಲಿ ಏನು ಪರಿಹಾರ ಪಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಕಾನೂನಿನ ಪ್ರಕ್ರಿಯೆ ನಿಂತಿದೆ. ಆದರೆ, ನೈತಿಕ ಪ್ರಶ್ನೆ ಎಂಬುದೊಂದು ಇರುತ್ತದಾ, ಇಲ್ಲವಾ? ತಮ್ಮ ವಿರುದ್ಧ ರಾಜ್ಯಪಾಲರು ತನಿಖೆ ನಡೆಸಲು ಅನುಮತಿ ನೀಡಿರುವಾಗ ರಾಜ್ಯದ ಮುಖ್ಯಮಂತ್ರಿಯೊಬ್ಬರು ನೈತಿಕ ಕಾರಣಕ್ಕಾಗಿ ರಾಜೀನಾಮೆ ನೀಡಬೇಕಾ, ಇಲ್ಲವಾ?
ಸಾಮಾನ್ಯ ಸಂದರ್ಭಗಳಲ್ಲಿ ಅಂತಹ ರಾಜೀನಾಮೆ ನೀಡಿ, ತನಿಖೆ ಎದುರಿಸುವುದು ಮತ್ತು ಅದರಲ್ಲಿ ಪೂರ್ಣ ನಿರ್ದೋಷಿ ಎಂದು ಸಾಬೀತಾದ ನಂತರ ಮರಳಿ ಸ್ಥಾನವನ್ನು ಪಡೆಯುವುದೇ ಸರಿಯಾದದ್ದು. ಆದರೆ, ಅಂತಹ ನೈತಿಕ ಪ್ರಶ್ನೆಗಳನ್ನೇ ಅಸಂಗತ ಮಾಡಿರುವ ರಾಜಕಾರಣದ ವರಸೆಯು 2014ರಿಂದ ಈ ದೇಶವನ್ನಾಳುತ್ತಿದೆ.
ಬೆಳಗ್ಗೆ ವಿರೋಧ ಪಕ್ಷದ ನಾಯಕನೊಬ್ಬನ ಮೇಲೆ ಬಿಜೆಪಿಯು ಪರಮ ಭ್ರಷ್ಟಾಚಾರದ ಆರೋಪ ಮಾಡುತ್ತದೆ. ಮಧ್ಯಾಹ್ನ ಆ ವಿರೋಧ ಪಕ್ಷದ ನಾಯಕನ ಮನೆ ಮೇಲೆ ಇಡಿ ರೇಡು ನಡೆಯುತ್ತದೆ. ಸಂಜೆ ಆ ನಾಯಕ ಬಿಜೆಪಿ ಸೇರಿದರೆ, ರಾತ್ರಿ ಇಡಿ ತನ್ನ ಕೇಸಿನಿಂದ ಆತನನ್ನು ಕೈಬಿಡುತ್ತದೆ. ಈ ಮಟ್ಟಿಗೆ ರಾಜಕಾರಣವನ್ನು ಹದಗೆಡಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲುತ್ತದೆ. ಹಾಗಾಗಿಯೇ ಬಿಜೆಪಿ ವಾಷಿಂಗ್ ಮಷೀನ್ ಎಂಬ ಮಾತು ಚಾಲ್ತಿಗೆ ಬಂದಿದೆ.
ಹೀಗಾಗಿ ನೈತಿಕ ಪ್ರಶ್ನೆಗಳೇ ಅಸಂಗತವಾಗಿರುವ ದುರಂತ ಈ ದೇಶದಲ್ಲಿದೆ. ಬಹುಶಃ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲವೆಂದು ಈಗಾಗಲೇ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಜೈಲಿನಿಂದಲೇ ಆಳ್ವಿಕೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ಹೇಳುವುದು ಕಷ್ಟವಾಗುವ ಮಟ್ಟಿಗೆ ನೈತಿಕ ಪ್ರಶ್ನೆಗಳು ಅಧೋಗತಿಗಿಳಿದಿವೆ. ಹೀಗಿರುವಾಗ ಮೇಲ್ನೋಟಕ್ಕೇನೇ ಅತ್ಯಂತ ಅಕ್ರಮವಾದ ಅನುಮತಿಯನ್ನು ರಾಜ್ಯಪಾಲರು ನೀಡಿರುವಾಗ, ಕರ್ನಾಟಕದ ಜನರು ತಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿಯಿಂದ ರಾಜೀನಾಮೆ ಬಯಸುವ ಪ್ರಶ್ನೆ ಉದ್ಭವಿಸುತ್ತಿಲ್ಲ; ಬದಲಿಗೆ ಬಿಜೆಪಿಯ ವಿರುದ್ಧ ದನಿಯೆತ್ತುವ ಅಗತ್ಯವೇ ಹೆಚ್ಚಾಗಿದೆ.
