ಈ ರಾಜ್ಯದಲ್ಲಿ ಎರಡೆರಡು ಬಾರಿ ಮುಖ್ಯಮಂತ್ರಿಯಾಗಿದ್ದವರೊಬ್ಬರು ಪುರಾವೆ ಇದೆ, ಆದರೆ ಈಗ ಬಹಿರಂಗಪಡಿಸಲ್ಲ ಎಂದು ಹೇಳುವುದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆಯಾಗಿದೆ. ಇಂತಹ ಆರೋಪಗಳನ್ನು ಹಿಂದೆಯೂ ಅವರು ಮಾಡಿದ್ದರಿಂದಲೇ ಅವರಿಗೆ ಹಿಟ್ & ರನ್ ಎಚ್ ಡಿ ಕೆ ಎಂಬ ಹಣೆಪಟ್ಟಿ ಹಚ್ಚಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತನ್ನ ಬಳಿ ಸರ್ಕಾರದ ಅಕ್ರಮಗಳ ಕುರಿತು ಪುರಾವೆ ಇದೆ ಎಂದು ಪೆನ್ ಡ್ರೈವ್ ಪ್ರದರ್ಶಿಸಿದ್ದಾರೆ. ಇದೊಂದು ಗಂಭೀರ ವಿದ್ಯಮಾನ. ಹಿಂದೆಯೂ ಆಗಾಗ್ಗೆ ಕುಮಾರಸ್ವಾಮಿಯವರು ಇಂತಹ ಆರೋಪಗಳನ್ನು ಮಾಡಿರುವುದುಂಟು. ಆ ನಂತರ ಆ ಪುರಾವೆಗಳನ್ನು ಮುಂದಿಟ್ಟಿದ್ದಾಗಲೀ, ನ್ಯಾಯಾಲಯ ಅಥವಾ ವಿಧಾನಮಂಡಲದಲ್ಲಿ ಪ್ರಶ್ನಿಸಿ ತಾರ್ಕಿಕ ಅಂತ್ಯಕ್ಕೆ ಒಯ್ದಿದ್ದಾಗಲೀ ಇಲ್ಲ.
ಈ ರೀತಿ ಇನ್ನೂ ಹಲವರು ಮಾಡುತ್ತಾರೆ. ಉದಾಹರಣೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಸರ್ಕಾರೀ ಕಾಮಗಾರಿಗಳಲ್ಲಿ 40% ಕಮಿಷನ್ ಇದೆ ಎಂದು ಹೇಳಿದ್ದು, ನಂತರದಲ್ಲಿ ದೊಡ್ಡ ವಿಚಾರವಾಗಿ ಬೆಳೆಯಿತು. ಪುರಾವೆ ಕೊಡಿ ಎಂದು ಮುಖ್ಯಮಂತ್ರಿಯಾದಿಯಾಗಿ ವಿವಿಧ ಮಂತ್ರಿಗಳು ಹೇಳಿದರೂ, ಜನರು ಕೆಂಪಣ್ಣನವರನ್ನೇ ನಂಬಿದರು. ಆಗಿನ ಸರ್ಕಾರ ನಿಜಕ್ಕೂ ಭಾರೀ ಭ್ರಷ್ಟ ಎಂದು ಜನರಿಗೆ ಅನ್ನಿಸಿದ್ದು ಒಂದು ಕಾರಣವೆಂದರೆ, ಸರ್ಕಾರದ ಬಳಿ ಬಿಲ್ ಬಾಕಿ ಇರುವ ಗುತ್ತಿಗೆದಾರರು ಸರ್ಕಾರದ ವಿರುದ್ಧ ವಿಪರೀತ ಆರೋಪಗಳನ್ನು ಮಾಡಿದರೆ, ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಜೊತೆಗೆ ಆರೋಪ ಮಾಡುವವರೆಲ್ಲರೂ ಪುರಾವೆ ಕೊಡಲೇಬೇಕು ಎಂದೂ ಹೇಳಲಾಗದು. ಹಲವಾರು ರಾಜಕೀಯ ಆರೋಪಗಳು ಅದೇ ಧಾಟಿಯಲ್ಲಿರುತ್ತವೆ. ಅಂದರೆ ಒಂದು ಪಕ್ಷದ ವಿರುದ್ಧ ಇನ್ನೊಬ್ಬರು ಆರೋಪಿಸುವಾಗ ಕೆಲವೊಮ್ಮೆ ಅದು, ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ತಮಗೆ ಹೀಗನ್ನಿಸುತ್ತದೆ ಎನ್ನುವ ರೀತಿಯ ಆರೋಪ. ಆದರೆ, ಕುಮಾರಸ್ವಾಮಿಯವರ ರೀತಿ ಸ್ವಲ್ಪ ಭಿನ್ನ. ಅವರು ʼನನ್ನ ಬಳಿ ದಾಖಲೆ ಇದೆʼ ಎನ್ನುತ್ತಾರೆ. ಈಗಂತೂ ಜೇಬಿನಿಂದ ಪೆನ್ ಡ್ರೈವ್ ತೆಗೆದು ತೋರಿಸಿದ್ದಾರೆ. ಆ ಪೆನ್ ಡ್ರೈವ್ ನಲ್ಲಿ ಇರುವ ಸಂಗತಿಯನ್ನು ಬಹಿರಂಗಗೊಳಿಸಲು ಅವರಿಗಿರುವ ಸಂಕಷ್ಟವೇನು? ಖಚಿತ ಪುರಾವೆಯಿದ್ದೂ ಅದನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ (ಲೋಕಾಯುಕ್ತ ಅಥವಾ ನ್ಯಾಯಾಲಯ ಅಥವಾ ಪೊಲೀಸ್) ಸಲ್ಲಿಸದೇ ಇರುವುದು ಅನೈತಿಕ.
ಇದರ ಅರ್ಥ ಈಗಿನ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ ಎಂತಲೋ, ವರ್ಗಾವಣೆ ನಡೆಯುವಾಗ ಕುಮಾರಸ್ವಾಮಿಯವರು ಆರೋಪಿಸಿರುವಂತೆ ಹಣಕಾಸಿನ ವ್ಯವಹಾರ ನಡೆದಿರಲಿಕ್ಕಿಲ್ಲ ಅಂತಲೋ ಅಲ್ಲ. ನಿಜಕ್ಕೂ ಈ ವರ್ಗಾವಣೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಅಗತ್ಯ ಖಂಡಿತಾ ಇದೆ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ, ಈ ರಾಜ್ಯದಲ್ಲಿ ಎರಡೆರಡು ಬಾರಿ ಮುಖ್ಯಮಂತ್ರಿಯಾಗಿದ್ದವರೊಬ್ಬರು ಪುರಾವೆ ಇದೆ, ಆದರೆ ಈಗ ಬಹಿರಂಗಪಡಿಸಲ್ಲ ಎಂದು ಹೇಳುವುದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆಯಾಗಿದೆ. ಇಂತಹ ಆರೋಪಗಳನ್ನು ಹಿಂದೆಯೂ ಅವರು ಮಾಡಿದ್ದರಿಂದಲೇ ಅವರಿಗೆ ಹಿಟ್ & ರನ್ ಎಚ್ಡಿಕೆ ಎಂಬ ಹಣೆಪಟ್ಟಿ ಹಚ್ಚಲಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬುಡಕಟ್ಟು ಯುವಕನಿಗೆ ಅವಮಾನ; ಬೇಕಿದೆ ವಿಕೃತ ಮನಸ್ಸುಗಳ ಶುದ್ಧೀಕರಣ
ಭ್ರಷ್ಟಾಚಾರದಲ್ಲಿ ತೊಡಗುವುದು ಒಂದು ಕ್ರಿಮಿನಲ್ ಅಪರಾಧ. ಅಂತಹ ಕ್ರಿಮಿನಲ್ ಪ್ರಕರಣದ ಕುರಿತು ಮಾಹಿತಿ, ಪುರಾವೆ ಇದ್ದೂ ಸುಮ್ಮನಿರುವುದು ಅಪರಾಧವೇ. ಸಾರ್ವಜನಿಕ ಬದುಕಿನಲ್ಲಿ ಉನ್ನತ ಸ್ಥಾನದಲ್ಲಿರುವವರಂತೂ ಅಂಥದ್ದನ್ನು ಮಾಡಲೇಬಾರದು. ಇದು ಅನೈತಿಕ ಮತ್ತು ಅಸಾಂವಿಧಾನಿಕ. ಕೆಲವೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು, ʼಅವರೇನು ಮಾಡಿದರು ಎಂಬುದು ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲಾ ಹೇಳುತ್ತೇನೆʼ ಎನ್ನುತ್ತಾರೆ. ಹಾಗಿದ್ದ ಮೇಲೆ ಜನರು ಕೊಟ್ಟಿರುವ ಅಧಿಕಾರವಿದ್ದೂ, ಅಂತಹ ಭ್ರಷ್ಟ ಘಟನೆ ನಡೆದಾಗ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಹುಟ್ಟಿಯೇ ಹುಟ್ಟುತ್ತದೆ. ಉದಾಹರಣೆಗೆ, ಇದೇ ಆರೋಪ ಮಾಡುವಾಗ ಕುಮಾರಸ್ವಾಮಿಯವರು ತನಗೆ ಇಂತಿಂತಹ ಹುದ್ದೆಗಳಿಗೆ ವರ್ಗಾವಣೆ ಮಾಡಲು ಇಷ್ಟಿಷ್ಟು ʼಆಫರ್ʼ ಬಂದಿತ್ತು ಎಂದಿದ್ದಾರೆ. ಹಾಗಿದ್ದ ಮೇಲೆ ಅವರು ಆಗಲೇ ಅವರ ಮೇಲೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದು ರಾಜ್ಯಪಾಲರಿಂದ ತೆಗೆದುಕೊಂಡ ಪ್ರಮಾಣವಚನದ ಉಲ್ಲಂಘನೆ. ಸಾಂವಿಧಾನಿಕ ನೈತಿಕತೆಯ ಕೊರತೆ ಇದ್ದಾಗ ಇಂಥಹವು ಸಂಭವಿಸುತ್ತವೆ.
ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ, ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ ಒಂದು ಭೀಕರ, ಕ್ರಿಮಿನಲ್ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಹವಳದಿಂದ ಉಂಟಾಗಿರುವ ರಚನೆಗಳನ್ನು ರಾಮಸೇತು ಎಂದು ಕರೆದು, ಅದನ್ನು ಒಡೆಯಬಾರದು ಎಂದು ಬಿಜೆಪಿ-ಆರೆಸ್ಸೆಸ್ ಗಳು ಪ್ರತಿಭಟನೆ ನಡೆಸುತ್ತಿದ್ದವು. ಅದರ ಭಾಗವಾಗಿ ಬೆಂಗಳೂರಿನಲ್ಲಿ ತಮಿಳುನಾಡಿಗೆ ಹೋಗುತ್ತಿದ್ದ ಬಸ್ಸೊಂದಕ್ಕೆ ಬೆಂಕಿ ಹಚ್ಚಿದರು. ಬಸ್ಸಿನ ಕೊನೆಯ ಸೀಟುಗಳಲ್ಲಿ ಕೂತಿದ್ದ ವ್ಯಕ್ತಿಗಳು ಸುಟ್ಟು ಹೋದರು. ಇದು ಸರ್ಕಾರವೊಂದು ಅತ್ಯಂತ ತೀವ್ರವಾಗಿ ತೆಗೆದುಕೊಳ್ಳಬೇಕಿದ್ದ ಘಟನೆ. ಸಂವಿಧಾನ, ನೆಲದ ಕಾನೂನು ಜಾರಿಯಲ್ಲಿರುವ ಯಾವುದೇ ನಾಡಿನಲ್ಲಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. ಈ ಪ್ರಕರಣದ ಕುರಿತು ಅಷ್ಟೇ ತೀವ್ರವಾಗಿ ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಲಿಲ್ಲ; ಆದರೆ ನಂತರ, ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೇ ಹೋದ ಸಂದರ್ಭದಲ್ಲಿ, ಅವರದನ್ನು ಉಲ್ಲೇಖಿಸುತ್ತಾರೆ. ಕ್ರಿಮಿನಲ್ ಪ್ರಕರಣ ನಡೆದಾಗ ನೆಲದ ಕಾನೂನು ಕೆಲಸ ಮಾಡದೇ ಇದ್ದರೆ, ಅಲ್ಲಿ ಸರ್ಕಾರ ಅಸ್ತಿತ್ವದಲ್ಲಿಲ್ಲ ಎಂದರ್ಥ. ಅದರ ಹೊಣೆ ಹೊರಬೇಕಿರುವವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದವರು. ಅವರೇ ಕೈ ಚೆಲ್ಲಿದರೆಂದರೆ, ಅವರು ಒಂದು ನಿಮಿಷವೂ ಅಧಿಕಾರದ ಸ್ಥಾನದಲ್ಲಿ ಇರಬಾರದು.
ಮುಖ್ಯಮಂತ್ರಿಯ ಜವಾಬ್ದಾರಿಯಂತೆಯೇ ಪ್ರತಿಯೊಬ್ಬ ನಾಗರಿಕರಿಗೂ ಜವಾಬ್ದಾರಿಯಿರುತ್ತದೆ. ತನ್ನಲ್ಲಿ ಕ್ರಿಮಿನಲ್ ಪ್ರಕರಣವೊಂದಕ್ಕೆ ಪುರಾವೆ ಇದೆ, ಆದರೆ ಅದನ್ನು ತಾನು ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇನೆ ಎನ್ನಬಾರದು. ದಾಳಿಗೊಳಗಾಗುವ ಭಯವಿರುವವರು ಆ ರೀತಿ ಮಾಡಿದರೆ ಅದನ್ನು ಅರ್ಥ ಮಾಡಿಕೊಳ್ಳಬಹುದಾದರೂ ಸಾರ್ವಜನಿಕವಾಗಿ ಸಮರ್ಥಿಸುವುದು ತಪ್ಪು. ಸಾರ್ವಜನಿಕ ಲಜ್ಜೆ ಎಂಬುದೊಂದು ಮೌಲ್ಯವನ್ನು ಅಧಿಕಾರದ ಸ್ಥಾನಗಳಲ್ಲಿರುವವರು ಮರೆತರೆ ಅದು ಅರಾಜಕತೆಗೇ ದಾರಿ ಮಾಡಿಕೊಡುತ್ತದೆ. ಕುಮಾರಸ್ವಾಮಿಯವರು ಈಗಿಂದೀಗಲೇ ಪುರಾವೆಯನ್ನು ಸಾರ್ವಜನಿಕಗೊಳಿಸಬೇಕು; ಸಂಬಂಧಪಟ್ಟ ಪ್ರಾಧಿಕಾರಕ್ಕೆ ದೂರು ಕೊಡಬೇಕು; ಕಾನೂನಿನ ಪ್ರಕ್ರಿಯೆ ಆರಂಭವಾಗಬೇಕು.
ಈ ಮೌಲ್ಯ ಕೇವಲ ಕುಮಾರಸ್ವಾಮಿಯವರಿಗೆ ಅನ್ವಯವಾಗುವಂಥದ್ದಲ್ಲ; ಎಲ್ಲರಿಗೂ ಅನ್ವಯಿಸುತ್ತದೆ. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು (ಆರೋಪ ಮಾಡುವಾಗ ಪುರಾವೆಯಿರದಿದ್ದರೂ ಪರವಾಗಿಲ್ಲ), ಬಿಜೆಪಿಯ ವಿರುದ್ಧ ತಾನು ಮಾಡಿದ್ದ ಆರೋಪಗಳಿಗೆ ಪುರಾವೆ ಹುಡುಕಿ, ಕಾನೂನಿನನ್ವಯ ಭ್ರಷ್ಟರನ್ನು ಶಿಕ್ಷಿಸುವ ಹೊಣೆಗಾರಿಕೆ ಹೊಂದಿದೆ. ಇಲ್ಲವಾದರೆ 40% ಆರೋಪ ಮಾಡಿದ್ದೇ ಸುಳ್ಳು ಎಂದಾಗುತ್ತದೆ.
ಕುಮಾರಸ್ವಾಮಿಯವರು ಈ ಸಾರಿಯಾದರೂ ಪೆನ್ ಡ್ರೈವ್ ನಲ್ಲಿ ಇರುವ ಪುರಾವೆಯನ್ನು ಸಂಬಂಧಪಟ್ಟವರಿಗೆ ತಲುಪಿಸಿ ದೂರು ನೀಡಲಿ.
