ಈ ದಿನ ಸಂಪಾದಕೀಯ | ಮೋದಿ ಪ್ರಧಾನಿಯಾಗಿ ನೂರು ದಿನ: ಹಿನ್ನಡೆಯೋ, ಮುನ್ನಡೆಯೋ?

Date:

Advertisements
ಮೂರನೇ ಅವಧಿಗೆ ಪ್ರಧಾನಿಯಾದ ಮೋದಿಯವರಲ್ಲಿ ಕೊಂಚ ಮಾಗಿದ ನಡೆ ಕಾಣತೊಡಗಿತ್ತು. ದೇಶದ ಪ್ರಜ್ಞಾವಂತ ಮತದಾರರು ಪ್ರಜಾಪ್ರಭುತ್ವದ ಪಾಠ ಕಲಿಸಿದ್ದು ಅವರ ನಡೆ ಮತ್ತು ನುಡಿಯಲ್ಲಿ ಕಾಣುತ್ತಿತ್ತು. ಆಡಳಿತದಲ್ಲಿ ಬದಲಾವಣೆ ಬರಬಹುದೆಂಬ ನಿರೀಕ್ಷೆ ಹುಟ್ಟಿಸಿತ್ತು. ಈ ಮೂರನೇ ಅವಧಿಯಲ್ಲಾದರೂ ದೇಶ ಬದಲಾಗಬಹುದೆಂಬ ಆಸೆ ಇತ್ತು. ಆದರೆ ಅವರ ನೂರು ದಿನಗಳ ಆಡಳಿತ...

ಸೆ. 17, ನರೇಂದ್ರ ಮೋದಿಯವರ ಜನ್ಮದಿನ. 74ನೇ ವಸಂತಕ್ಕೆ ಕಾಲಿಡುತ್ತಿರುವ ಮೋದಿಯವರಿಗೆ ದೇಶದ ರಾಜಕೀಯ ನಾಯಕರು, ಗಣ್ಯರು, ಸೆಲೆಬ್ರಿಟಿಗಳು ಜನ್ಮದಿನದ ಶುಭಾಶಯ ಕೋರಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ‘ಐತಿಹಾಸಿಕ’ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ, ತನ್ನ ಮೊದಲ 100 ದಿನಗಳನ್ನು ಪೂರೈಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂಲಸೌಕರ್ಯ, ರೈತರು, ಮಧ್ಯಮ ವರ್ಗ, ಮಹಿಳೆಯರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು 15 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಿದೆ.

15 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಿದ ಪ್ರಧಾನಿ ಮೋದಿಯವರು, ದೇಶವನ್ನು ಮುನ್ನಡೆಸುವ ಮಾತುಗಳನ್ನು ಆಡುವ ಬದಲು; ಮೂರನೆಯ ಅವಧಿಯ ಮೊದಲ 100 ದಿನಗಳಲ್ಲಿ ವಿರೋಧ ಪಕ್ಷಗಳು ತಮ್ಮನ್ನು ಅವಮಾನಿಸಿದವು, ಗೇಲಿ ಮಾಡಿದವು ಹಾಗೂ ಅಣಕಿಸಿದವು ಎಂದು ದೂರಿದ್ದಾರೆ.

Advertisements

ಮುಂದುವರೆದು, ವಿರೋಧ ಪಕ್ಷಗಳು ಮುಸ್ಲಿಮರ ತುಷ್ಟೀಕರಣಕ್ಕಾಗಿ ಯಾವ ಮಿತಿಯನ್ನು ಬೇಕಿದ್ದರೂ ಮೀರಬಲ್ಲರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಾರಾತ್ಮಕತೆ ತುಂಬಿದ ಕೆಲವರು ಭಾರತದ ಏಕತೆಯನ್ನು ಗುರಿಯಾಗಿಸಿಕೊಂಡಿದ್ದಾರೆ, ದೇಶವನ್ನು ಒಡೆಯುವ ಉದ್ದೇಶ ಹೊಂದಿದ್ದಾರೆ. ದ್ವೇಷ ತುಂಬಿಕೊಂಡಿರುವ ವ್ಯಕ್ತಿಗಳು ಭಾರತಕ್ಕೆ ಕೆಟ್ಟ ಹೆಸರು ತರುವ ಯಾವ ಅವಕಾಶವನ್ನೂ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯವರ ಮಾತುಗಳನ್ನು ಕೇಳುತ್ತಿದ್ದರೆ, ದೇಶವನ್ನು ಒಡೆಯುವ, ದೇಶಕ್ಕೆ ಕೆಟ್ಟ ಹೆಸರು ತರುವ ವ್ಯಕ್ತಿಗಳ ಬಗ್ಗೆ ಸಿಟ್ಟು, ಆಕ್ರೋಶ ವ್ಯಕ್ತವಾಗುವುದು ಸಹಜ. ಅವರ ಉದ್ದೇಶವೂ ಅದೇ. ಮೋದಿಯವರ ಮನಸ್ಸಿನಲ್ಲಿರುವುದು, ಗುರಿಯಾಗಿರಿಸಿಕೊಂಡಿರುವುದು ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು.

ದೂರದ ಅಮೆರಿಕದಲ್ಲಿ ಮೀಸಲಾತಿ ಕುರಿತು ಮಾತನಾಡಿದ ರಾಹುಲ್ ಗಾಂಧಿಯ ವಿಡಿಯೋ ತುಣುಕನ್ನು, ತಮಗೆ ಬೇಕಾದಂತೆ ತಿರುಚಿ, ಖಳನಾಯಕನನ್ನಾಗಿ ಚಿತ್ರಿಸಿ, ಬಿಜೆಪಿ ಐಟಿ ಸೆಲ್ ಭಕ್ತರು ಇಡೀ ಪ್ರಪಂಚಕ್ಕೆ ಕ್ಷಣಮಾತ್ರದಲ್ಲಿ ಹಂಚಿದ್ದರು. ಭಕ್ತರ ಕಿಡಿಗೇಡಿ ಕೃತ್ಯವನ್ನು ಖಂಡಿಸಿ ತಿರಸ್ಕರಿಸಬೇಕಾದ ಪ್ರಧಾನಿ, ಪದವಿಯ ಘನತೆಯನ್ನು ಮರೆತು ಆ ಸುಳ್ಳಿನ ವಿಡಿಯೋ ತುಣುಕನ್ನೇ ಗುರಾಣಿಯನ್ನಾಗಿ ಮಾಡಿಕೊಂಡರು. ದೇಶ ಒಡೆಯುವ ದುಷ್ಟರ ಪಟ್ಟಿಗೆ ರಾಹುಲ್ ಸೇರಿಸಿ ಜನರಲ್ಲಿ ದ್ವೇಷ ಬಿತ್ತಿದರು.

ಇದು ಪ್ರಧಾನಿ ಮೋದಿಯವರ 100 ದಿನಗಳ ಮಹತ್ ಸಾಧನೆ.

ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ನಿರಂತರವಾಗಿ ಚಾಲ್ತಿಯಲ್ಲಿಟ್ಟಿದ್ದು ಈ ಫೇಕ್ ಫ್ಯಾಕ್ಟರಿಯನ್ನೇ. ಈ ಮೂರನೇ ಅವಧಿಯ 100 ದಿನಗಳಲ್ಲಿ ಈ ಫ್ಯಾಕ್ಟರಿಗೆ ಬೀಗ ಬಿದ್ದಿತ್ತು. ನೂರನೇ ದಿನವಾಗುತ್ತಿದ್ದಂತೆ ಮತ್ತೆ ಚಾಲ್ತಿಗೆ ಬಂದಿದೆ.

ಮೂರನೇ ಅವಧಿಗೆ ಪ್ರಧಾನಿಯಾದ ಮೋದಿಯವರಲ್ಲಿ ಕೊಂಚ ಮಾಗಿದ ನಡೆ ಕಾಣತೊಡಗಿತ್ತು. ದೇಶದ ಪ್ರಜ್ಞಾವಂತ ಮತದಾರರು ಪ್ರಜಾಪ್ರಭುತ್ವದ ಪಾಠ ಕಲಿಸಿದ್ದು ಅವರ ನಡೆ ಮತ್ತು ನುಡಿಯಲ್ಲಿ ಕಾಣುತ್ತಿತ್ತು. ಮೋದಿಯವರ ಅಕ್ಕ-ಪಕ್ಕ ಮಿತ್ರ ಪಕ್ಷಗಳ ಇಕ್ಕಳ ಇರುವಂತೆ ನೋಡಿಕೊಂಡಿದ್ದು, ಆಡಳಿತದಲ್ಲಿ ಬದಲಾವಣೆ ಬರಬಹುದೆಂಬ ನಿರೀಕ್ಷೆ ಹುಟ್ಟಿಸಿತ್ತು. ದೇಶದ ಜನಕ್ಕೆ ಈ ಮೂರನೇ ಅವಧಿಯಲ್ಲಾದರೂ ದೇಶ ಬದಲಾಗಬಹುದೆಂಬ ಆಸೆ ಇತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಮತಾ ರಾಜೀನಾಮೆ – ಭಾವನಾತ್ಮಕ ರಾಜಕೀಯವೇಕೆ?

ಆದರೆ, ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ ಎನ್ನುವಂತೆ, ಮೂರನೇ ಅವಧಿಯಲ್ಲೂ ಮೋದಿಯವರು ಮತ್ತದೇ ವರಸೆಗಳ ಮೊರೆ ಹೋಗಿದ್ದಾರೆ. ಬಹುಮತವಿದೆ ಎಂಬ ಭಂಡ ಧೈರ್ಯದಲ್ಲಿ ಹಲವಾರು ಕಾಯ್ದೆ ಕಾನೂನುಗಳನ್ನು ಜಾರಿಗೆ ತರಲು ತವಕಿಸಿದರು. ಆದರೆ ಮಿತ್ರಪಕ್ಷಗಳೇ ಅಪಸ್ವರ ಎತ್ತಿದಾಗ ಹಿಂತೆಗೆದುಕೊಂಡು ಅವಮಾನಕ್ಕೊಳಗಾದರು.

ಅದಷ್ಟೇ ಅಲ್ಲ, ದತ್ತಾಂಶ ಸಂರಕ್ಷಣಾ ಮಸೂದೆ, ಬ್ರಾಡ್‌ಕಾಸ್ಟಿಂಗ್‌(ನಿಯಂತ್ರಣ) ಮಸೂದೆ, ಲ್ಯಾಟರಲ್ ಎಂಟ್ರಿ, ವಕ್ಫ್(ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ, ವಿರೋಧ ಪಕ್ಷಗಳ ತೀವ್ರ ದಾಳಿಗೆ ಬೆಚ್ಚಿ ಹಿಂತೆಗೆದುಕೊಳ್ಳುವಂತಹ ಹಿನ್ನಡೆಯನ್ನೂ ಅನುಭವಿಸಿದರು.

ಇನ್ನು ನೂರು ದಿನಗಳಲ್ಲಿ 38 ರೈಲುಗಳ ಅಪಘಾತವಾಗಿ 21 ಪ್ರಯಾಣಿಕರ ಪ್ರಾಣಪಕ್ಷಿ ಹಾರಿಹೋಗಿದೆ. ಭಯೋತ್ಪಾದನೆಗೆ 29 ಸೈನಿಕರು ಅಸುನೀಗಿದ್ದಾರೆ. ನೀಟ್‌-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ಯುವಜನತೆಯ ಭವಿಷ್ಯ ಬರಿದಾಗಿದೆ. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿ ಹೆಚ್ಚಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಅತ್ಯಾಚಾರಗಳು ಅತಿಯಾಗಿವೆ. ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆ ನಿಯಂತ್ರಣಕ್ಕೆ ಸಿಗದಂತಾಗಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಟೋಲ್ ಹೆಚ್ಚಳಕ್ಕೆ ತಡೆಯೇ ಇಲ್ಲದಂತಾಗಿದೆ.

ಇದರ ನಡುವೆ ವಿಮಾನ ನಿಲ್ದಾಣಗಳ ಛಾವಣಿಗಳು ಕುಸಿದು ಬಿದ್ದವು. ಹದಿನೈದು ಸೇತುವೆಗಳು ತುಂಡಾದವು. ಪ್ರತಿಷ್ಠಿತರ ಪ್ರತಿಮೆಗಳು ಉರುಳಿದವು. ರಸ್ತೆಗಳು ಬಿರುಕುಬಿಟ್ಟವು. ಸುರಂಗ ಮಾರ್ಗ ಕುಸಿಯಿತು. ಇದಲ್ಲದೆ ಮಣಿಪುರ ಮತ್ತೆ ಹತ್ತಿ ಉರಿಯಿತು. ಪ್ರಧಾನಿ ಮೋದಿಯಿಂದ ಉತ್ತರವೂ ಇಲ್ಲ, ಪರಿಹಾರವೂ ಇಲ್ಲ.   

ಆದರೆ ವೈಫಲ್ಯವನ್ನು ಮುಚ್ಚಿಕೊಳ್ಳಲು, ವಿರೋಧ ಪಕ್ಷಗಳು ತಮ್ಮನ್ನು ಅವಮಾನಿಸಿದವು, ಗೇಲಿ ಮಾಡಿದವು ಹಾಗೂ ಅಣಕಿಸಿದವು ಎಂದು ದೂರುವುದನ್ನೂ ಬಿಡಲಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X