ಈ ದಿನ ಸಂಪಾದಕೀಯ | ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?

Date:

Advertisements
ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿ ಕರೆಯದೆ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದೆ ನುಣುಚಿಕೊಂಡರು. ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳೆಂದು ಕರೆದು, ಜೈಲಿಗೆ ಅಟ್ಟಿದರು. ಸರ್ವಾಧಿಕಾರಿಯಾದರು. ದೇಶದ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿದರು.

2014ರ ಮೇ 26ರಂದು ಮೊಟ್ಟ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ನರೇಂದ್ರ ಮೋದಿಯವರು, 2025ರ ಮೇ 26ಕ್ಕೆ 11 ವರ್ಷಗಳನ್ನು ಪೂರೈಸಿ, ಪಳಗಿದ ಪ್ರಧಾನಿಯಂತೆ ಕಾಣುತ್ತಿದ್ದಾರೆ.

2014ರ ಲೋಕಸಭಾ ಚುನಾವಣೆಗೂ ಮುಂಚೆ ಮೋದಿಯವರು, ಯುಪಿಐ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದು, ವಂಶ ಪಾರಂಪರ್ಯ ಆಡಳಿತಕ್ಕೆ ಇತಿಶ್ರೀ ಹಾಡಿ, ಇನ್ನು ಮುಂದೆ ಭಾರತ ಹೊಸ ಪರ್ವದತ್ತ ಹೊರಳಲಿದೆ, ಅಚ್ಛೇ ದಿನ್ ಬರಲಿದೆ ಎಂದು ದೇಶವಾಸಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದರು.  

ಪ್ರಧಾನಿ ಪಟ್ಟ ಅಲಂಕರಿಸಿದ ಮೊದಲಿಗೆ, 2014ರ ಜೂನ್‌ನಲ್ಲಿ ದೇಶದ ಪ್ರಮುಖ ನದಿಯಾಗಿರುವ ಗಂಗಾ ನದಿಯ ನೈರ್ಮಲ್ಯ ಕಾಪಾಡುವ, ಸ್ವಚ್ಛತೆಗೆ ಸಂಬಂಧಿಸಿದ ‘ನಮಾಮಿ ಗಂಗೆ’ ಯೋಜನೆ ಕೈಗೆತ್ತಿಕೊಂಡರು. 20 ಸಾವಿರ ಕೋಟಿ ರೂಪಾಯಿಗಳ ಅನುದಾನದೊಂದಿಗೆ ಯೋಜನೆ ಆರಂಭಿಸಿದರು. ನದಿಯ ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಮತ್ತು ಪುನರುಜ್ಜೀವನದ ದೃಷ್ಟಿಯಿಂದ ಈ ಯೋಜನೆ ಬಹಳ ಮಹತ್ವದ್ದಾಗಿತ್ತು. ಆದರೆ ದೇಶದ ಜನರನ್ನು ನಂಬಿಕೆ, ಆಚರಣೆಗಳ ಮೌಢ್ಯದತ್ತ ದೂಡಲಾಗಿತ್ತು.

Advertisements

ಇದನ್ನು ಓದಿದ್ದೀರಾ?: ಕೆ.ಆರ್.ಪೇಟೆ ದಲಿತ ಯುವಕ ಜಯಕುಮಾರ್ ಕೇಸ್‌ನಲ್ಲಿ ಪೊಲೀಸರು ಕುರುಡಾಗಿದ್ದು ಅಕ್ಷಮ್ಯ

ಆನಂತರ, 2014ರಲ್ಲಿ ಮೋದಿಯವರು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆಯ ಮೂಲಕ ಆರ್ಥಿಕ ಸಬಲೀಕರಣ ಖಾತ್ರಿಪಡಿಸಲು ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಒದಗಿಸುವ ‘ಜನಧನ್’ ಯೋಜನೆಯನ್ನು ಜಾರಿಗೆ ತಂದರು. ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ ‘ಮೇಕ್ ಇನ್ ಇಂಡಿಯಾ’ ಎಂದರು. ಇದು ಕೈಗಾರಿಕೆಗಳಿಗೆ ಮೂಲಸೌಕರ್ಯ ಒದಗಿಸಿ, ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಿ, ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆಂದು ಹೇಳಿದರು.  

ಜನಧನ್ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳೆರಡೂ, ದೇಶದ ಜನಸಾಮಾನ್ಯರನ್ನು ಒಳಗೊಳ್ಳುವ ಯೋಜನೆಗಳಾಗಿದ್ದವು. ಹಾಗೆಯೇ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ 2015ರಲ್ಲಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ಕೂಡ ಕ್ಷೀಣಿಸುತ್ತಿರುವ ಲಿಂಗಾನುಪಾತವನ್ನು ಸರಿಪಡಿಸುವುದಾಗಿತ್ತು.

ಇಲ್ಲಿಯವರೆಗೆ ಪ್ರಧಾನಿ ಮೋದಿಯವರು ಹೊಸ ಸರ್ಕಾರದ ಹೊಸ ಯೋಜನೆಗಳ ಮೂಲಕ ದೇಶದ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದರು. ಜನತೆ ಕೂಡ ಮಡದಿ, ಮಕ್ಕಳು, ಮನೆ ಇಲ್ಲದ ಮೋದಿಯವರಿಂದ ಭ್ರಷ್ಟಾಚಾರರಹಿತ ದಕ್ಷ ಆಡಳಿತವನ್ನು ನಿರೀಕ್ಷಿಸಿದ್ದರು.

ಆದರೆ 2016ರಲ್ಲಿ, ಅಧಿಕಾರ ಹಿಡಿತಕ್ಕೆ ಸಿಕ್ಕ ನಂತರ, ಕಪ್ಪು ಹಣ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನೆಪದಲ್ಲಿ ನೋಟು ಅಮಾನ್ಯೀಕರಣಕ್ಕೆ ಕೈ ಹಾಕಿದರು. ರೂ. 500, 1000 ನೋಟುಗಳನ್ನು ನಿಷೇಧಿಸಿದರು. ಇದು ದೇಶದ ಬಡವರಿಗೆ, ದುಡಿದು ತಿನ್ನುವ ಕಾರ್ಮಿಕರಿಗೆ, ಮಧ್ಯಮವರ್ಗದವರಿಗೆ ಮೇಲೇಳದಂತಹ ಹೊಡೆತ ಕೊಟ್ಟಿತು.

ಇದರ ಹಿಂದೆಯೇ ಬಂದ ಡಿಜಿಟಲ್ ಇಂಡಿಯಾ, ಏಕರೂಪ ತೆರಿಗೆ ವ್ಯವಸ್ಥೆ(ಜಿಎಸ್‌ಟಿ)ಯಂತೂ ಸಣ್ಣ, ಅತಿ ಸಣ್ಣ ವ್ಯಾಪಾರಸ್ಥರನ್ನು ಬೀದಿಗೆ ತಂದು ನಿಲ್ಲಿಸಿತು. ಸಣ್ಣ ಕೈಗಾರಿಕೆಗಳ ಬೆನ್ನುಮೂಳೆ ಮುರಿಯಿತು. ಡಿಜಿಟಲ್ ಇಂಡಿಯಾ ಯೋಜನೆಯು ಗ್ರಾಮೀಣ ಭಾಗಗಳಿಗೂ ಇಂಟರ್ನೆಟ್ ಸೌಲಭ್ಯವನ್ನು ವಿಸ್ತರಿಸಿತು. ಯುಪಿಐ, ಆಧಾರ್ ಮೂಲಕ ಡಿಜಿಟಲ್ ವಹಿವಾಟುಗಳು ಹೆಚ್ಚಾದವು. ಆದರೆ ಅದರ ಲಾಭ ಖಾಸಗಿಯವರ ಪಾಲಾಯಿತು. ಡಿಜಿಟಲ್ ತಂತ್ರಜ್ಞಾನದ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಕಂಡುಬರಲಿಲ್ಲ. ಜಿಡಿಪಿ ಕುಸಿತವನ್ನು ಕೂಡ ತಡೆಯಲಾಗಲಿಲ್ಲ.

2019ರ ನಂತರ, ಎರಡನೇ ಬಾರಿ ಆಯ್ಕೆಯಾದ ಮೋದಿಯವರು ದೇಶದ ಜನರ ಪ್ರಧಾನಿಯಾಗಲಿಲ್ಲ. ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬದಿಗಿರಿಸಿ, ಆರ್‍ಎಸ್ಎಸ್ ಆಣತಿಯಂತೆ ಕಾರ್ಯಾಚರಿಸಿದರು. ರಾಮಮಂದಿರ ನಿರ್ಮಾಣ, ಹಿಂದುತ್ವ, ರಾಷ್ಟ್ರೀಯತೆಗೆ ಜೋತುಬಿದ್ದರು. ಹಿಂದುಗಳನ್ನು ಓಲೈಸುವತ್ತ ಗಮನ ಹರಿಸಿದರು. ದೇಶವಾಸಿಗಳಾದ ಮುಸ್ಲಿಮರನ್ನು ಅನ್ಯರಂತೆ ಭಾವಿಸಿ, ಅವರ ಮೇಲೆ ಗದಾಪ್ರಹಾರಕ್ಕೆ ನಿಂತರು. ಆ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದರು. ಸಿಎಎ ಮತ್ತು ಎನ್ಆರ್‍‌ಸಿ ಚರ್ಚೆಯನ್ನು ಮುನ್ನಲೆಗೆ ತಂದು ದೇಶವನ್ನು ಕೋಮುಗಲಭೆಗಳ ಕುಲುಮೆಯನ್ನಾಗಿಸಿದರು. ಏಕರೂಪ ನಾಗರಿಕ ಸಂಹಿತೆ, ತ್ರಿಬಲ್ ತಲಾಖ್, ವಕ್ಫ್ ತಿದ್ದುಪಡಿ ಕಾಯ್ದೆಗಳ ಮೂಲಕ ಮುಸ್ಲಿಮರ ಉಸಿರು ಕಟ್ಟಿಸಿದರು. ಅದರಲ್ಲೂ ಗೋ ರಕ್ಷಣೆಯ ನೆಪದಲ್ಲಿ ಮುಸ್ಲಿಮರನ್ನು ಹಿಡಿದು ಬಡಿದವರ ಬೆನ್ನಿಗೆ ನಿಂತರು. ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್ ಬಳಸಿ ಕೆಡವಿ ‘ಮನೆಹಾಳರು’ ಎಂದು ಕುಖ್ಯಾತಿ ಗಳಿಸಿದರು. ಆದರೆ, ಅತಿಹೆಚ್ಚು ಗೋಮಾಂಸ ರಫ್ತು ಮಾಡಿ ದಾಖಲೆ ಸೃಷ್ಟಿಸಿದರು.

ಆಡಳಿತಕ್ಕೆ ಬಂದಾಗ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದಿದ್ದ ಮೋದಿ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳು, ಸಂಸ್ಥೆಗಳನ್ನು ಮುಚ್ಚಿದರು. ಅದಾನಿ ಮತ್ತು ಅಂಬಾನಿಗಳಂತಹ ಶ್ರೀಮಂತ ಕಾರ್ಪೊರೇಟ್ ಕುಳಗಳಿಗೆ ಬಿಡಿಗಾಸಿಗೆ ಮಾರಾಟ ಮಾಡಿದರು. ಇದ್ದ ಉದ್ಯೋಗಗಳನ್ನು ಕಳೆದರು. ಖಾಸಗಿಯವರಿಗೆ ವಹಿಸುವ ಮೂಲಕ ಬಳಕೆಯ ವೆಚ್ಚವನ್ನು ದುಬಾರಿ ಮಾಡಿದರು.

ದೇಶದ ಅರ್ಥವ್ಯವಸ್ಥೆಯನ್ನು ಅಳೆಯುವ ರಾಷ್ಟ್ರೀಯ ಉತ್ಪನ್ನವು-ಜಿಡಿಪಿ ದರವು- ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ, 2014ರಲ್ಲಿ 2.04 ಟ್ರಿಲಿಯನ್ ಡಾಲರ್‍‌ನಷ್ಟಿತ್ತು. ಆದರೆ ಮೋದಿಯವರ 11 ವರ್ಷದ ಆಳ್ವಿಕೆಯಲ್ಲಿ ಅದು 4.19 ಟ್ರಿಲಿಯನ್ ಡಾಲರ್‍‌ಗೆ ಇಳಿಯಿತು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಿತು. ಹಣದುಬ್ಬರ ಏರ್ಪಟ್ಟು ಆರ್ಥಿಕ ಕ್ಷೇತ್ರ ಅದುರತೊಡಗಿತು. ಆದರೆ ಮೋದಿಯವರ ಉನ್ನತಿ, ಪ್ರಗತಿ, ಅಭಿವೃದ್ಧಿಗಳೆಲ್ಲವೂ ಬರಹಗಳಲ್ಲಿ, ಭಾಷಣಗಳಲ್ಲಿ ಏರುಗತಿಯಲ್ಲಿಯೇ ಇದ್ದವು. ಮೋದಿ ಭಜನೆ, ಭಕ್ತರ ಸಂಖ್ಯೆ ಹೆಚ್ಚಿಸಿದವು.

ಇದನ್ನು ಓದಿದ್ದೀರಾ?: ‘ಹದ್ದು ಮೀರಿದ ಇಡಿ ವರ್ತನೆ’ಗೆ ಯಾರು ಕಾರಣ?

ದೇಶದ ಬೆನ್ನೆಲುಬು ರೈತ ಎನ್ನುತ್ತಲೇ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದರು. ರೈತರು ಒಂದು ವರ್ಷ ಪ್ರತಿಭಟಿಸಿ 700ಕ್ಕೂ ಹೆಚ್ಚು ರೈತರು ಅಸುನೀಗಿದರೂ, ಅವರತ್ತ ಗಮನ ಹರಿಸಲಿಲ್ಲ. ಬದಲಿಗೆ, ಅನ್ನಧಾತರಿಗೇ ಭಯೋತ್ಪಾದಕರ ಪಟ್ಟ ಕಟ್ಟಿದರು. ಜನರಲ್ಲಿ ಜಾತಿಪ್ರಜ್ಞೆಯನ್ನು ಬಡಿದೆಬ್ಬಿಸಿದರು. ಕೋಮು ವಿಷ ತುಂಬಿ ಜನರ ಮನಸು ಕೆಡಿಸಿದರು. ಪುಲ್ವಾಮಾದಲ್ಲಿ 40 ಯೋಧರು, ಪಹಲ್ಗಾಮ್‌ನಲ್ಲಿ 26 ಅಮಾಯಕ ಪ್ರವಾಸಿಗರು ಹತ್ಯೆಯಾದರೂ ಬಾಯಿ ಬಿಡದಾದರು. ದಲಿತರ ಮೇಲೆ ದೌರ್ಜನ್ಯಗಳಾದರೂ ಕಿವುಡಾದರು. ಮಣಿಪುರ ಹತ್ತಿ ಉರಿದರೂ ಕುರುಡರಾದರು.

ದೇಶವು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ದಿವಾಳಿ ಎದ್ದರೂ, ಭಟ್ಟಂಗಿ ಪತ್ರಕರ್ತರಿಂದ ಭಾರತ ವಿಶ್ವಗುರುವಿನತ್ತ ಎಂದು ಬರೆಸಿಕೊಂಡು ಬೀಗಿದರು. ನೆರೆ ರಾಷ್ಟ್ರಗಳಾದ ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ, ಚೀನಾಗಳೊಂದಿಗೆ ವೈರತ್ವ ಕಟ್ಟಿಕೊಂಡರು. ಚೀನಾದವರು ನಮ್ಮ ಭೂಪ್ರದೇಶವನ್ನು ಅತಿಕ್ರಿಮಿಸಿದರೂ ಕೇಳದಾದರು. ಒಂದು ಕಾಲದಲ್ಲಿ ಚಾಯ್ ಮಾರುತ್ತಿದ್ದ ಬಡ ಹುಡುಗ, ಪ್ರಧಾನಿಯಾದ ನಂತರ ದೇಶದ ಬಡಜನರನ್ನು ಕಣ್ಣೆತ್ತಿ ನೋಡದಾದರು. ದಿನಕ್ಕೆ ನಾಲ್ಕೈದು ಡ್ರೆಸ್ ಬದಲಿಸುತ್ತ, ದುಬಾರಿ ಬೆಲೆಯ ಅಣಬೆ ತಿನ್ನುತ್ತ, 72 ರಾಷ್ಟ್ರಗಳಿಗೆ 129 ಸಲ ಓಡಾಡುವ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತ ಐಷಾರಾಮಿ ಬದುಕನ್ನು ರೂಢಿಸಿಕೊಂಡರು.

ಎಲ್ಲಕ್ಕಿಂತ ಮುಖ್ಯವಾಗಿ ಜನರಿಂದ ಆಯ್ಕೆಯಾದ ಪ್ರಧಾನಿ ಎಂಬುದನ್ನೇ ಮರೆತರು. ಅಚ್ಛೇ ದಿನ್, ಎಲ್ಲರ ಖಾತೆಗೆ 15 ಲಕ್ಷ, ಕಪ್ಪು ಹಣ ನಿರ್ಮೂಲನೆ, 2 ಕೋಟಿ ಉದ್ಯೋಗ, ಕೋವಿಡ್ ಸಾವು-ನೋವು, ಭ್ರಷ್ಟಾಚಾರ ನಿರ್ಮೂಲನೆ, ವಂಶ ಪಾರಂಪರ್ಯ ಆಳ್ವಿಕೆ, ಶಾಸಕರ ಖರೀದಿ, ಸರ್ಕಾರಗಳ ಬುಡಮೇಲು, ಸರ್ಕಾರಿ ಸಂಸ್ಥೆಗಳ ದುರ್ಬಳಕೆ, ಚುನಾವಣಾ ಬಾಂಡ್ ಹಗರಣ… ಒಂದೇ ಎರಡೇ? ಯಾವುದಕ್ಕೂ ಉತ್ತರಿಸದೆ ಮೌನ ವಹಿಸಿದರು.

ಕಳೆದ ಹನ್ನೊಂದು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಕರೆಯದೆ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದೆ ನುಣುಚಿಕೊಂಡರು. ಆದ ಅವಘಡಗಳಿಗೆಲ್ಲ ನೆಹರೂ ಕಾರಣ ಎಂದರು. ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳೆಂದು ಕರೆದು, ಜೈಲಿಗೆ ಅಟ್ಟಿದರು. ಸರ್ವಾಧಿಕಾರಿಯಾದರು. ದೇಶದ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿದರು.

ಇಂತಹ ಪ್ರಧಾನಿ ಮೋದಿಯಿಂದ ದೇಶ ಉದ್ಧಾರವಾಗುತ್ತದೆಂದು ಭಾವಿಸುವುದು ಮೂರ್ಖತನದ ಪರಮಾವಧಿಯಲ್ಲದೆ, ಮತ್ತೇನೂ ಅಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X