ಈ ದಿನ ಸಂಪಾದಕೀಯ | 2 ಗಂಟೆ 10 ನಿಮಿಷಗಳ ಕ್ರೌರ್ಯ, 3 ನಿಮಿಷಗಳ ತೋರಿಕೆಯ ಕಾರ್ಯ

Date:

Advertisements
ಮಣಿಪುರದ ಸಂಕ್ಷೋಭೆಗೆ ಬಿಜೆಪಿ ಅನುಸರಿಸಿದ ನೀತಿಗಳು ಕಾರಣವಷ್ಟೇ ಅಲ್ಲ, ಬಿಜೆಪಿ ಏನನ್ನು ಬಯಸಿದೆಯೋ ಅದೇ ಆಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ನರೇಂದ್ರ ಮೋದಿಯವರ ನಡವಳಿಕೆ ಇತ್ತು. ಕಡೆಯ 3 ನಿಮಿಷದಲ್ಲಿ ಅವರು ಮಣಿಪುರದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ; ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಹೇಳಿದ್ದರಲ್ಲಿ ವಿಶ್ವಾಸ ಹುಟ್ಟಿಸುವಂಥದ್ದು ಏನೂ ಇರಲಿಲ್ಲ.

ಮೊನ್ನೆ (ಆಗಸ್ಟ್‌ 10) ಭಾರತದ ಸಂಸತ್ತಿನಲ್ಲೊಂದು ಕ್ರೌರ್ಯ ಜರುಗಿತು. ಖುದ್ದು ಲೋಕಸಭೆಯಲ್ಲಿ ಬಹುಮತ ಪಡೆದ ಪಕ್ಷದ ನಾಯಕನಿಂದ ಆದ ಕ್ರೌರ್ಯವದು. ಆ ಕ್ರೌರ್ಯ ಜರುಗಲಿದೆ ಎಂಬುದೂ ಹಿಂದಿನ ದಿನವೇ ಗೊತ್ತಾಗಿತ್ತು. ಈಶಾನ್ಯ ರಾಜ್ಯವೊಂದು ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಈ ಕ್ರೌರ್ಯ ಎದ್ದು ಕಂಡಿತು.

ಮಣಿಪುರದಲ್ಲಿ ಘೋರ ಸಂಗತಿಗಳು ನಡೆಯಲಾರಂಭಿಸಿದ್ದು ಮೇ ತಿಂಗಳಲ್ಲಿ ಎಂದು ದೇಶದ ಉಳಿದ ಭಾಗಕ್ಕೆ ಗೊತ್ತಾಗಿದ್ದು ತೀರಾ ಇತ್ತೀಚೆಗೆ. ಏಕೆಂದರೆ ಮೇ ತಿಂಗಳಲ್ಲಿ ʼದೇಶದ ಗಮನʼ ಕರ್ನಾಟಕದ ವಿಧಾನಸಭಾ ಚುನಾವಣೆಯ ಮೇಲಿತ್ತು. ದೇಶದ ಪ್ರಧಾನಿಗಳ ಗಮನವೂ ಕರ್ನಾಟಕದ ಮೇಲೆಯೇ ಇತ್ತು; ವಿರೋಧ ಪಕ್ಷಗಳೂ ಸಹ ಕರ್ನಾಟಕದಲ್ಲಿ ಏನಾಗುತ್ತದೋ ಅದು 2024ರ ಲೋಕಸಭಾ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆಂದು ಇತ್ತ ಕಡೆಯೇ ಕಣ್ಣು ನೆಟ್ಟಿದ್ದವು.

ಆ ನಂತರದಲ್ಲಿ ಮಣಿಪುರಕ್ಕೆ ಹೋಗಿ ದೇಶಕ್ಕೆ ಸತ್ಯ ತಿಳಿಸಬೇಕೆಂದು ಪ್ರಯತ್ನಿಸಿದ ಸಿಪಿಐ ಪಕ್ಷದ ಅನಿ ರಾಜಾ, ನಿಶಾ ಸಿಧು ಹಾಗೂ ದೀಕ್ಷಾ ದ್ವಿವೇದಿ ಎಂಬ ಮೂವರು ಧೀಮಂತ ಮಹಿಳೆಯರ ಮೇಲೆ ಬಿರೇನ್‌ ಸಿಂಗ್‌ ಸರ್ಕಾರ ಮೊಕದ್ದಮೆ ಹೂಡಿತು. ಆ ಮೊಕದ್ದಮೆಯ ಎಫ್‌ಐಆರ್‌ ನಲ್ಲಿ ಈ ಮಹಿಳೆಯರು ʼಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರವನ್ನು ಬುಡಮೇಲು ಮಾಡಲು ಸರ್ಕಾರದ ವಿರುದ್ಧ ಯುದ್ಧ ಹೂಡಲು ಜನರನ್ನು ಪ್ರಚೋದಿಸಿದʼ ಆರೋಪ ಹೊರಿಸಲಾಗಿತ್ತು. ವಾಸ್ತವವೇನೆಂದರೆ ಸರ್ಕಾರವೇ ಜನರ ವಿರುದ್ಧ ಯುದ್ಧ ಹೂಡಿತ್ತು. ಎಚ್ಚೆತ್ತುಕೊಂಡ ಹಲವರು ಮಣಿಪುರದ ಕುರಿತು ಮಾತನಾಡತೊಡಗಿದರು. ಅಂತಿಮವಾಗಿ ಹೊರಬಿದ್ದ ವಿಡಿಯೋ ಒಂದು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲಕಿತು. ಎಲ್ಲರೂ ದಿಗ್ಭ್ರಾಂತಿಗೊಳಗಾದರು. ದೇಶದ ಸರ್ಕಾರವನ್ನು ಹೊರತುಪಡಿಸಿ, ಪ್ರಧಾನಿಯಂತೂ ಇದಕ್ಕೆ ಸಂಬಂಧವೇ ಇಲ್ಲದಂತೆ ಇದ್ದರು.

Advertisements

ಪ್ರಧಾನಿ ಈ ಕುರಿತು ಮಾತನಾಡಲಿ, ಅವರದ್ದೇ ಪಕ್ಷದ ಸರ್ಕಾರ ಅಲ್ಲಿ ಆಳ್ವಿಕೆ ನಡೆಸುತ್ತಿದೆ ಅವರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಲಿ ಎಂಬ ಕೂಗು ನಿರ್ದಯಿ ಕಲ್ಲುಬಂಡೆಗಳಿಗೆ ತಾಕಿತು; ಪ್ರತಿಧ್ವನಿಯೂ ಹೊರಡಲಿಲ್ಲ. ಸಂಸತ್‌ ಅಧಿವೇಶನ ನಡೆಯುತ್ತಿರುವುದರಿಂದ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಎಷ್ಟು ಆಗ್ರಹಿಸಿದರೂ ಪ್ರಧಾನಿ ಬಾಯಿ ಬಿಡುವುದಿರಲಿ, ಸಂಸತ್ತಿಗೇ ಬರಲಿಲ್ಲ. ಸಂಸದೀಯ ನಿಯಮಗಳಲ್ಲಿ ಇದಕ್ಕೆ ಇದ್ದ ಏಕೈಕ ಉಪಾಯವೆಂದರೆ ಅವಿಶ್ವಾಸ ನಿರ್ಣಯ ಮಂಡಿಸುವುದು; ಆ ಮೂಲಕ ಯಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೋ ಅವರು ಬಂದು ಮಾತನಾಡಲೇಬೇಕಾಗುತ್ತದೆ. ಹೀಗಾಗಿ ಪ್ರಧಾನಿಯ ವಿರುದ್ಧ ವಿರೋಧ ಪಕ್ಷಗಳೆಲ್ಲವೂ ಸೇರಿ ಅವಿಶ್ವಾಸ ನಿರ್ಣಯ ಮಂಡಿಸಿದವು. ಆ ಅವಿಶ್ವಾಸ ಮಣಿಪುರ ಹೊತ್ತಿ ಉರಿಯುತ್ತಿರುವುದರ ಕುರಿತು, ಮಣಿಪುರದಲ್ಲಿ ತೀವ್ರವಾಗಿ ಹೆಚ್ಚಿರುವ ಅವಿಶ್ವಾಸದ ಕುರಿತಾಗಿಯೇ ಇತ್ತು. ರಾಹುಲ್‌ ಗಾಂಧಿಯವರು ಹೇಳಿದಂತೆ, ಮಣಿಪುರವೆಂಬ ರಾಜ್ಯವೇ ಇಲ್ಲವಾಗಿರುವುದರ ಕುರಿತು ಮತ್ತು ಅಲ್ಲಿ ಭಾರತ ಮಾತೆಯ ಹತ್ಯೆಯಾಗಿರುವುದರ ಕುರಿತಾಗಿತ್ತು.

ಇದನ್ನು ಓದಿದ್ದೀರಾ?: ದೇಶದ್ರೋಹ ಕಾನೂನು ಹೋಯ್ತು; ಸರ್ಕಾರ ದ್ರೋಹ ಕಾನೂನು ಬಂತು

ಆದರೆ, ಈ ಮೂಲಕ ಸಂಸತ್ತೂ ಹತ್ಯೆಗೊಳಗಾಯಿತು. ಏಕೆಂದರೆ, ಯಾರು ಈ ಕುರಿತು ಮಾತನಾಡಬೇಕೆಂದು ವಿರೋಧ ಪಕ್ಷಗಳು, ಮಣಿಪುರದ ಅಸಹಾಯಕ ಜನತೆ ಮತ್ತು ದೇಶದ ಸಂವೇದನೆಯುಳ್ಳ ಜನರು ಬಯಸಿದ್ದರೋ, ಅವರು ಸಂಸತ್ತಿಗೆ ಬಂದರು; ಎಲ್ಲರನ್ನೂ ಅಪಹಾಸ್ಯ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು 2 ಗಂಟೆ 13 ನಿಮಿಷ ಮಾತನಾಡಿದರು. ಅದರಲ್ಲಿ 2 ಗಂಟೆ 10 ನಿಮಿಷಗಳ ಕಾಲ ಅಪಹಾಸ್ಯ, ತಮಾಷೆಗಳಿಗೆ ಮೀಸಲಿಟ್ಟರು. ತಾನು ಮತ್ತು ತನ್ನ ಪಕ್ಷವೇ ಸೇರಿ ಆಳ್ವಿಕೆ ನಡೆಸುತ್ತಿರುವ ರಾಜ್ಯವೊಂದರಲ್ಲಿ ಭೀಕರ ಪರಿಸ್ಥಿತಿ ತಲೆದೋರಿದ್ದು, ಅದರ ಕುರಿತು ಗಮನ ಸೆಳೆಯಲು ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದರೆ, ಅದನ್ನು ಕಾಲಕಸವಾಗಿಸಿದರು. ಇದು ಕ್ರೌರ್ಯವಲ್ಲದೇ ಬೇರೇನೂ ಅಲ್ಲ. ಅವರ ಭಾಷಣವೆಲ್ಲವೂ ಚುನಾವಣೆಯ ಕುರಿತಾಗಿ, 2024ರಲ್ಲಿ ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೆಂಬುದರ ಕುರಿತಾಗಿ, ವಿರೋಧ ಪಕ್ಷಗಳ ಕುರಿತಾಗಿಯೇ ಇತ್ತು.

ಮಣಿಪುರದ ಸಂಕ್ಷೋಭೆಗೆ ಬಿಜೆಪಿ ಅನುಸರಿಸಿದ ನೀತಿಗಳು ಕಾರಣವಷ್ಟೇ ಅಲ್ಲ, ಬಿಜೆಪಿ ಏನನ್ನು ಬಯಸಿದೆಯೋ ಅದೇ ಆಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ನರೇಂದ್ರ ಮೋದಿಯವರ ನಡವಳಿಕೆ ಇತ್ತು. ಕಡೆಯ 3 ನಿಮಿಷದಲ್ಲಿ ಅವರು ಮಣಿಪುರದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ; ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಹೇಳಿದ್ದರಲ್ಲಿ ವಿಶ್ವಾಸ ಹುಟ್ಟಿಸುವಂಥದ್ದು ಏನೂ ಇರಲಿಲ್ಲ. ಸರ್ಕಾರ, ಪ್ರಜಾತಂತ್ರ ಇದಕ್ಕಿಂತ ತಳಮಟ್ಟ ಮುಟ್ಟಲು ಸಾಧ್ಯವಿದೆಯೇ? ದೇಶದ ಜನರು ಎಚ್ಚೆತ್ತುಕೊಳ್ಳಬೇಕಾದ ಸಂದರ್ಭವಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X