ಈ ದಿನ ಸಂಪಾದಕೀಯ | ತಪ್ಪಿದ ಘೋರ ದುರಂತ- ಆಳುವವರ ಅಲಕ್ಷ್ಯ ಅಕ್ಷಮ್ಯ

Date:

Advertisements
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹೀಗೆ ಕೆಡವಬೇಕಿರುವ 20 ಶಿಥಿಲ ಸಾರ್ವಜನಿಕ ಕಟ್ಟಡಗಳು ಇವೆಯಂತೆ. ಈ ಪೈಕಿ ಏಳು ಶಾಲಾ ಕಟ್ಟಡಗಳು, ಮೂರು ಸಮುದಾಯ ಭವನಗಳು ಹಾಗೂ ಮೂರು ಗ್ರಂಥಾಲಯಗಳು ಸೇರಿವೆ !.

 

ಬೆಂಗಳೂರಿನ ಶಿವಾಜಿನಗರದ ಬಿಬಿಎಂಪಿ ನರ್ಸರಿ ಶಾಲೆಯೊಂದು ಸೋಮವಾರ ನಸುಕಿನಲ್ಲಿ ಕುಸಿದಿದೆ. ಸುಮಾರು 90 ಕಂದಮ್ಮಗಳು ಕೆಲವು ತಾಸುಗಳ ಅಂತರದಲ್ಲಿ ಈ ಅಪಘಾತದಿಂದ ಪಾರಾಗಿವೆ. ಮುಂಜಾನೆ ತರಗತಿಗಳು ಆರಂಭ ಆದ ನಂತರ ಈ ಕುಸಿತ ಸಂಭವಿಸಿದ್ದರೆ ರಾಜ್ಯವು ಭಾರೀ ಮಾನವ ದುರಂತವೊಂದನ್ನು ಎದುರಿಸಬೇಕಿತ್ತು.

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಿಂದ ಈ ಸಂಬಂಧದಲ್ಲಿ ನಡೆದಿರುವ ಕರ್ತವ್ಯಲೋಪ ಅಕ್ಷಮ್ಯ. ಈ ಶಾಲೆ ವಾಸಯೋಗ್ಯ ಅಲ್ಲವೆಂದು ಈಗಾಗಲೇ ಸಾರಿತ್ತು. ಆದರೂ ಅಲ್ಲಿ ತರಗತಿಗಳು ನಡೆಯಲು ಬಿಟ್ಟದ್ದು ಗಂಭೀರ ಅಪರಾಧವೇ ಸರಿ. ಕೊಂಚ ಹೆಚ್ಚುಕಡಿಮೆಯಾಗಿದ್ದರೂ ಇಷ್ಟೊಂದು ಮಕ್ಕಳ ದುರಂತ ಸಾವಿನ ನೆತ್ತರು ಪಾಲಿಕೆಯ ಹಸ್ತಗಳಿಗೆ ಮೆತ್ತಿಕೊಳ್ಳುತ್ತಿತ್ತು.

ಬಿಬಿಎಂಪಿಯ ವಿಶೇಷ ಆಯುಕ್ತರಾದ ಪ್ರೀತಿ ಗೆಹಲೋತ್ ಅವರ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿರುವ ಪ್ರತಿಕ್ರಿಯೆ ಅತ್ಯಂತ ಅಸೂಕ್ಷ್ಮ ಮತ್ತು ಸಂವೇದನಾರಹಿತ. ‘ಕುಸಿದು ಬಿದ್ದಿರುವ ಈ ಶಾಲಾ ಕಟ್ಟಡ 70 ವರ್ಷಗಳಷ್ಟು ಹಳೆಯದು. ಕೆಲವು ತಿಂಗಳ ಹಿಂದೆಯೇ ಹೊಸ ಕಟ್ಟಡದ ಪ್ರಸ್ತಾವವನ್ನು ನಾವು ತಯಾರಿಸಿದ್ದೆವು. ಆದರೆ ಹಾಲಿ ಕಟ್ಟಡದ ಸ್ಥಿತಿ ಇಷ್ಟು ಕೆಟ್ಟದಾಗಿತ್ತೆಂದು ನಮಗೆ ಗೊತ್ತಾಗಲಿಲ್ಲ’ ಎಂದಿದ್ದಾರೆ.

Advertisements

ಶಿಥಿಲ ಕಟ್ಟಡವೊಂದು ಸನಿಹದಲ್ಲೇ ಕುಸಿಯಲಿದೆ ಎಂದು ಅಂದಾಜು ಮಾಡದೆ ಇರುವಷ್ಟು ಕೆಟ್ಟು ಹೋಗಿದೆಯೇ ನಮ್ಮ ಎಂಜಿನಿಯರಿಂಗ್ ತಿಳಿವು? ಇಂತಹವರ ಪಾಲಿಗೆ ಕಾಲವು ಆದಿಮ ಯುಗದಲ್ಲೇ ಸ್ಥಗಿತಗೊಂಡಿದೆಯೆಂದು ತೋರುತ್ತದೆ. ದುರಂತ ಘಟಿಸುವ ತನಕ ನಿರ್ಲಕ್ಷ್ಯ ಧೋರಣೆಯನ್ನು ರಬ್ಬರಿನಂತೆ ಹಿಗ್ಗಿಸುವ ಆಡಳಿತಯಂತ್ರಕ್ಕೆ ಶಿಕ್ಷೆಯ ಚುರುಕು ಮುಟ್ಟಲೇಬೇಕಿದೆ. ಜನತೆಯ ತೆರಿಗೆ ಹಣದಿಂದ ವೇತನ ಭತ್ಯ ಪಡೆಯುವವರು ಸೇವೆ ಮತ್ತು ಸಮರ್ಪಣಾ ಭಾವಗಳನ್ನು ಇಟ್ಟುಕೊಳ್ಳಬೇಕೇ ವಿನಾ ಹೊಣೆಗೇಡಿತನವನ್ನಲ್ಲ.

ರಾಜ್ಯದ ಅಧಿಕಾರ ಕೇಂದ್ರವಾದ ವಿಧಾನಸೌಧದಿಂದ ಕೇವಲ ಎರಡೂವರೆ ಕಿ.ಮೀ. ದೂರದ ಶಾಲಾ ಕಟ್ಟಡದ ದುರವಸ್ಥೆ ಕುರಿತು ಇಂತಹ ಘೋರ ನಿರ್ಲಕ್ಷ್ಯ ಇರುವುದಾದರೆ ನೂರಾರು ಕಿ.ಮೀ. ದೂರದ ಹಳ್ಳಿಗಾಡಿನ ಶಾಲೆಗಳ ಗತಿಯೇನು?

ಸದರಿ ಶಾಲೆಯ ಹೊಸ ಕಟ್ಟಡಕ್ಕೆಂದು ಹತ್ತು ಲಕ್ಷ ರುಪಾಯಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಶುರುವಾಗಿರಲಿಲ್ಲ. ಇದೊಂದು ದೊಡ್ಡ ವಿಡಂಬನೆಯೇ ಸರಿ. ಹತ್ತು ಲಕ್ಷ ರುಪಾಯಿಯಲ್ಲಿ, ಅದರಲ್ಲೂ ಇತ್ತೀಚಿನ ತನಕ ‘40 ಪರ್ಸೆಂಟ್ ಕಮಿಷನ್’ ಜಾರಿಯಲ್ಲಿದ್ದ ದಿನಗಳಲ್ಲಿ ಎಂತಹ ಶಾಲಾ ಕಟ್ಟಡ ಕಟ್ಟಲಾದೀತು?

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹೀಗೆ ಕೆಡವಬೇಕಿರುವ 20 ಶಿಥಿಲ ಸಾರ್ವಜನಿಕ ಕಟ್ಟಡಗಳು ಇವೆಯಂತೆ. ಈ ಪೈಕಿ ಏಳು ಶಾಲಾ ಕಟ್ಟಡಗಳು, ಮೂರು ಸಮುದಾಯ ಭವನಗಳು ಹಾಗೂ ಮೂರು ಗ್ರಂಥಾಲಯಗಳು ಸೇರಿವೆ. ಕುಸಿದು ಬಿದ್ದ ನರ್ಸರಿ ಶಾಲಾ ಕಟ್ಟಡವೂ ಈ ಪಟ್ಟಿಯಲ್ಲಿತ್ತು ಎಂದು ಶಾಸಕ ರಿಝ್ವಾನ್ ಅರ್ಷದ್ ಹೇಳಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ಪ್ರಕಾರ ರಾಜ್ಯದಲ್ಲಿ ಶಿಥಿಲವಾಗಿರುವ ಮತ್ತು ಮಳೆಹಾನಿಗೆ ತುತ್ತಾಗಿದ್ದು ನವೀಕರಣ ಆಗಬೇಕಿರುವ 3,833 ಶಾಲಾ ಕಟ್ಟಡಗಳಿವೆ. ನವೀಕರಣಕ್ಕಾಗಿ 100 ಕೋಟಿ ರುಪಾಯಿಯನ್ನು ಮೀಸಲಿಡಲಾಗಿದೆ.

ಹಣವನ್ನು ತೆಗೆದಿರಿಸಿದರೆ ಅಥವಾ ವಾಸಯೋಗ್ಯ ಅಲ್ಲವೆಂದು ಘೋಷಿಸಿದರೆ ಸಾಲದು. ದುರಂತಗಳ ಸರಮಾಲೆ ಘಟಿಸುವ ಮುನ್ನ ರಾಜ್ಯ ಆಡಳಿತಯಂತ್ರ ನಿದ್ದೆಯಿಂದ ಎಚ್ಚರಗೊಳ್ಳಬೇಕು. ಈ ಕೆಲಸವನ್ನು ಆದ್ಯತೆಯಿಂದ ಕೈಗೆತ್ತಿಕೊಂಡು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು.

ಬಸವರಾಜ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ 2,777 ಶಾಲಾ ಕೊಠಡಿಗಳನ್ನು ನವೀಕರಣಕ್ಕಾಗಿ ಗುರುತಿಸಲಾಗಿತ್ತು. ಅವರಿಗೆ ಮುನ್ನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರಿ ಶಾಲೆಗಳಲ್ಲಿನ 6,469 ಕೊಠಡಿಗಳನ್ನು 758 ಕೋಟಿ ರುಪಾಯಿ ವೆಚ್ಚದಲ್ಲಿ ಮರುನಿರ್ಮಿಸುವುದಾಗಿ ಸಾರಿದ್ದರು. ಸರ್ಕಾರಿ ಶಾಲಾ ಕಟ್ಟಡಗಳ ನಿರ್ವಹಣೆಗಾಗಿ ಒಬ್ಬ ಎಸ್ಟೇಟ್ ಮ್ಯಾನೇಜರ್ ಹುದ್ದೆಯನ್ನು ಸೃಷ್ಟಿಸುವುದಾಗಿ ಸಾರಿದ್ದವರು ಯಡಿಯೂರಪ್ಪ ಅವರಿಗಿಂತ ಮುನ್ನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ.

ಆದರೆ ಈ ಯಾವುದೇ ಇರಾದೆಗಳು ಕಾರ್ಯರೂಪಕ್ಕೆ ಇಳಿದಿಲ್ಲ ಎಂಬುದು ಅತ್ಯಂತ ಕಳವಳದ ಸಂಗತಿ. ಭಾವೀ ಪೀಳಿಗೆಯ ಭವಿಷ್ಯವನ್ನು ಆಳುವವರು ಅದೆಷ್ಟು ಹಗುರಾಗಿ ಪರಿಗಣಿಸಿದ್ದಾರೆಂದು ಯೋಚಿಸಿದರೆ ದಿಗಿಲು ಆಕ್ರೋಶ ಏಕಕಾಲಕ್ಕೆ ಹುಟ್ಟುವುದು ಸ್ವಾಭಾವಿಕ.

ಕಾಯಿದೆ ಕಾನೂನುಗಳು ಸಾರ್ವಜನಿಕ ಹಿತ ಕಾಯುವುದಕ್ಕಿಂತ ಹೆಚ್ಚಾಗಿ ಆಳುವವರ ರಕ್ಷಣೆಗೆ ಬಳಕೆಯಾಗತೊಡಗಿವೆ ಎಂಬ ಭಾವನೆ ಜನರಲ್ಲಿ ಬಲಿಯತೊಡಗಿದೆ. ತಡವಾಗುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X