ಈ ದೇಶದ ಜನರ ಪ್ರಧಾನ ಸೇವಕ ತಾನು ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ವಾಸ್ತವದಲ್ಲಿ ಅದಾನಿ ಮತ್ತು ಅಂಬಾನಿಯಂಥ ಉದ್ಯಮಿಗಳ ಸೇವಕರಾಗಿದ್ದಾರೆ ಎನ್ನುವ ಗಂಭೀರ ಆರೋಪ ಪದೇ ಪದೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇದೆ. ಭಾರತದ ಹಿತ ಕಾಯುವುದೆಂದರೆ, ಅದಾನಿ ಹಿತ ಕಾಯುವುದು ಎಂದು ಪ್ರಧಾನಿ ಮೋದಿ ಭಾವಿಸಿರುವಂತಿದೆ.
‘ನಾನು ಪ್ರಧಾನ ಮಂತ್ರಿ ಅಲ್ಲ, ಈ ದೇಶದ 130 ಕೋಟಿ ಜನರ ಪ್ರಧಾನ ಸೇವಕ. ದೇಶದ ಜನರೇ ನನ್ನ ಸರ್ವಸ್ವ. ನನ್ನ ಜೀವನ ನಿಮಗಾಗಿ..’
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂಬತ್ತು ವರ್ಷಗಳಿಂದ ಪದೇ ಪದೆ ಹೇಳುತ್ತಿರುವ ಮಾತಿದು. ದೇಶದ ಜನರ ಹಿತ ಕಾಯುವುದು ಬಿಟ್ಟರೆ ತಮ್ಮ ಜೀವನದ ಪರಮ ಗುರಿ ಎಂದು ಅವರು ಪುನರುಚ್ಚರಿಸುತ್ತಲೇ ಇದ್ದಾರೆ. ಆದರೆ, ಅವರು ಮಾಡುತ್ತಿರುವ ಕೆಲಸಗಳು ಈ ದೇಶದ ಜನರ ಪರವಾಗಿವೆಯೇ? ಅವರ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವುಗಳು, ಜಾರಿಗೊಳಿಸುತ್ತಿರುವ ಯೋಜನೆಗಳು, ಕಾನೂನಿಗೆ ತರುತ್ತಿರುವ ಬದಲಾವಣೆಗಳ ಅಂತಿಮ ಗುರಿ ಯಾರ ಅಭಿವೃದ್ಧಿ ಎನ್ನುವ ಪ್ರಶ್ನೆಗಳು ಪದೇ ಪದೆ ಕೇಳಿಬರುತ್ತಲೇ ಇವೆ. ಮೋದಿ ಸರ್ಕಾರ ಆಗಿಂದಾಗ್ಗೆ ತನ್ನ ಕ್ರಿಯೆಗಳ ಮೂಲಕ ತನ್ನ ನಿಲುವು ಯಾರ ಪರ ಎನ್ನುವುದನ್ನು ಪ್ರಕಟಿಸುತ್ತಲೇ ಇದೆ. ಈಗಲೂ ಅಂಥದ್ದೊಂದು ಬೆಳವಣಿಗೆ ಆಗಿದ್ದು, ಮೋದಿ ಮತ್ತು ಗೌತಮ್ ಅದಾನಿಯವರ ಸ್ನೇಹಕ್ಕೆ, ಅದಾನಿ ಪರವಾದ ಕೇಂದ್ರದ ನಿಲುವುಗಳಿಗೆ ಮತ್ತೊಂದು ಸಾಕ್ಷ್ಯ ಲಭಿಸಿದೆ.
ಕೇಂದ್ರ ಪರಿಸರ ಸಚಿವಾಲಯದ ಅಧೀನದಲ್ಲಿರುವ ತಜ್ಞರ ಮೌಲ್ಯಮಾಪನ ಸಮಿತಿ (ಇಎಸಿ) ಸದಸ್ಯರಾಗಿ ಜನಾರ್ದನ ಚೌಧರಿ ಅವರನ್ನು ನೇಮಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಚೌಧರಿ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸಲಹೆಗಾರರು. ಅದಾನಿ ಕಂಪನಿಯ ಉದ್ಯೋಗಿ. ತಜ್ಞರ ಮೌಲ್ಯಮಾಪನ ಸಮಿತಿಯು ಅದಾನಿ ಸಮೂಹದ ಆರು ಜಲವಿದ್ಯುತ್ ಯೋಜನೆಯ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಬೇಕಿದೆ. ಹೀಗಿರುವಾಗ ಅದಾನಿ ಕಂಪನಿಯ ಉದ್ಯೋಗಿಯನ್ನು ಇಎಸಿ ಸದಸ್ಯರಾಗಿ ನೇಮಿಸಿರುವುದು ನಿಯಮಗಳ ಉಲ್ಲಂಘನೆ ಅಷ್ಟೇ ಅಲ್ಲ, ಅಪ್ರಜಾತಾಂತ್ರಿಕ ಹಾಗೂ ಅನೈತಿಕ ಎನ್ನುವ ಆರೋಪಗಳು ಕೇಳಿಬಂದಿವೆ.
ಜನರೇ ತನಗೆ ಸರ್ವಸ್ವ ಎನ್ನುವ ಪ್ರಧಾನಿ ಮೋದಿಯವರು, ತಮ್ಮ ಗೆಳೆಯ ಅದಾನಿಗಾಗಿ ಹಲವು ಬಾರಿ ದೇಶದ ಕಾನೂನು ಮೀರಿ ಅವರಿಗೆ ನೆರವಾಗಿದ್ದಾರೆ ಎನ್ನುವ ಆರೋಪಕ್ಕೆ ಗುರಿಯಾಗಿದ್ದಾರೆ. ಮೋದಿ ಪ್ರಧಾನಿಯಾಗಿದ್ದು 2014ರಲ್ಲಿ. 2015ರಲ್ಲಿ ಮೋದಿ ಮೊದಲ ಬಾರಿಗೆ ಬಾಂಗ್ಲಾ ದೇಶಕ್ಕೆ ಭೇಟಿ ಕೊಟ್ಟಿದ್ದರು. ನಂತರ ಬಾಂಗ್ಲಾದ ವಿದ್ಯುತ್ ಪ್ರಾಧಿಕಾರ ಅದಾನಿಯೊಂದಿಗೆ 1600 ಮೆಗಾವ್ಯಾಟ್ ಕಲ್ಲಿದ್ದಲು ವಿದ್ಯುತ್ ಸ್ಥಾವರ ನಿರ್ಮಿಸಲು 14,064 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ದೇಶದ ಎರಡನೇ ಅತಿ ಬಡ ರಾಜ್ಯವಾದ ಜಾರ್ಖಂಡ್‌ನಲ್ಲಿ ಅದಾನಿಯ ಗೊಡ್ಡಾ ವಿದ್ಯುತ್ ಸ್ಥಾವರ ಆರಂಭವಾಗಿತ್ತು. ಅಲ್ಲಿ ಉತ್ಪಾದನೆಯಾದ ವಿದ್ಯುತ್‌ನಲ್ಲಿ ಶೇ.25ರಷ್ಟು ರಾಜ್ಯಕ್ಕೆ ನೀಡಬೇಕೆನ್ನುವ ನಿಯಮ ಬದಿಗೊತ್ತಿ ಎಲ್ಲ ವಿದ್ಯುತ್ ಅನ್ನೂ ಬಾಂಗ್ಲಾಗೆ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಪ್ರಾಜೆಕ್ಟ್‌ಗೆ ಕಾನೂನು ಮೀರಿ ಶರವೇಗದಲ್ಲಿ ಪರಿಸರ ಅನುಮತಿ ನೀಡಲಾಗಿತ್ತು. ಅದನ್ನು ಎಸ್‌ಇಜೆಡ್ ಎಂದು ಘೋಷಿಸಿ ತೆರಿಗೆ ವಿನಾಯಿತಿ ಕೂಡ ನೀಡಲಾಯಿತು.
2021ರಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹಿಂದಾ ರಾಜಪಕ್ಸೆ ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಅದರ ನಂತರ ಶ್ರೀಲಂಕಾ ಸಂಸತ್ತಿನಲ್ಲಿ ಮಂಡಿಸಲಾದ ಕ್ಯಾಬಿನೆಟ್ ಜ್ಞಾಪಕ ಪತ್ರವು ಕೊಲಂಬೊ ಬಂದರಿನಲ್ಲಿ ಈಸ್ಟರ್ನ್ ಕಂಟೈನರ್ ಟರ್ಮಿನಲ್ (ECT) ಅನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಅನ್ನು ಭಾರತೀಯ ಕಂಪನಿಯಾಗಿ ಭಾರತ ಸರ್ಕಾರವು ‘ಆಯ್ಕೆ ಮಾಡಿದೆ’ ಎಂದು ಘೋಷಿಸಲಾಯಿತು. ಅದಕ್ಕೆ ಶ್ರೀಲಂಕಾದಲ್ಲಿ ತೀವ್ರ ವಿರೋಧವೂ ವ್ಯಕ್ತವಾಗಿತ್ತು.
ಮೋದಿಯವರು ಪ್ರಧಾನಿಯಾದ ನಂತರ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಯಾವ ಅನುಭವವೂ ಇಲ್ಲದ ಅದಾನಿ ಕಂಪನಿಗೆ ಏಳು ಏರ್‌ಪೋರ್ಟ್‌ಗಳ ನಿರ್ವಹಣೆಯ ಗುತ್ತಿಗೆ ನೀಡಲಾಯಿತು. ಅದಾನಿಯವರ ನಿರ್ವಹಣೆಯಲ್ಲಿರುವ ಗುಜರಾತ್ ಕಛ್ ಜಿಲ್ಲೆಯಲ್ಲಿರುವ ಮುಂದ್ರಾ ಬಂದರಿನಲ್ಲಿ ಕಾನೂನು ಮತ್ತು ಪಾರಿಸರಿಕ ನಿಯಮಗಳ ಉಲ್ಲಂಘನೆಗಾಗಿ ಯುಪಿಎ ಸರ್ಕಾರ 200 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಮೋದಿ ಪ್ರಧಾನಿಯಾದ ನಂತರ ಆ ದಂಡವನ್ನು ರದ್ದು ಮಾಡಲಾಯಿತು. ಮುಂದ್ರಾದಲ್ಲಿ ಡ್ರಗ್ಸ್ ಮತ್ತಿತರ ಕಳ್ಳಸಾಗಾಣಿಕೆ ವ್ಯಾಪಕವಾಗಿ ನಡೆಯುತ್ತಿದೆ ಎನ್ನುವ ಆರೋಪಗಳೂ ಇವೆ. ಮತ್ತೊಂದು ಗಂಭೀರ ವಿಚಾರ, ಅದಾನಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅತಿ ದೊಡ್ಡ ಸಾಲಗಾರರಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್‌ಗಳಿಂದ ಸುಮಾರು 40,000 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ವಿವಿಧ ಜಾಗತಿಕ ಬ್ಯಾಂಕ್‌ಗಳೂ ಸೇರಿ ಅವರು ಒಟ್ಟು 2.27 ಲಕ್ಷ ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. ಜೊತೆಗೆ ಅದಾನಿ ಸರ್ಕಾರಿ ಸ್ವಾಮ್ಯದ ಎಲ್‌ಐಸಿಯ ಅತಿ ದೊಡ್ಡ ಹೂಡಿಕೆದಾರರಾಗಿದ್ದಾರೆ. ಇಂಥವು ಬಹಳಷ್ಟು ನಡೆದಿವೆ; ನಡೆಯುತ್ತಲೂ ಇವೆ.
ಮೋದಿ ಪ್ರಧಾನಿಯಾದ ನಂತರ ಬಂದರುಗಳು, ವಿದ್ಯುತ್ ಸ್ಥಾವರಗಳು, ವಿದ್ಯುತ್, ಕಲ್ಲಿದ್ದಲು ಗಣಿಗಳು, ಹೆದ್ದಾರಿಗಳು, ಇಂಧನ ಉದ್ಯಾನಗಳು ಮತ್ತು ವಿಮಾನ ನಿಲ್ದಾಣಗಳ ನಿರ್ವಹಣೆಯಂಥ ಲಾಭದಾಯಕ ಗುತ್ತಿಗೆಗಳು ಅದಾನಿ ಪಾಲಾಗಿ ಅವರು ಜಗತ್ತಿನ ಶ್ರೀಮಂತರ ಪೈಕಿ ಅಗ್ರಸ್ಥಾನಕ್ಕೇರಿದ್ದರು. 2014ರಲ್ಲಿ ಅದಾನಿ ಸಂಪತ್ತಿನ ಮೊತ್ತ 2.8 ಬಿಲಿಯನ್ ಡಾಲರ್. ಮೋದಿ ಪ್ರಧಾನಿಯಾದ ನಂತರ ಅದಾನಿ ಸಂಪತ್ತು 126.4 ಬಿಲಿಯನ್ ಡಾಲರ್‌ಗೇರಿತು. ಷೇರು ಮಾರುಕಟ್ಟೆಯಲ್ಲಿ ಅದಾನಿ ಮಾಡುತ್ತಿದ್ದ ವಂಚನೆಯ ಸ್ವರೂಪವನ್ನು ಹಿಂಡೆನ್‌ಬರ್ಗ್ ವರದಿ ಬಹಿರಂಗಪಡಿಸಿದ ನಂತರ ಅದಾನಿ ಬೆಳವಣಿಗೆ ವೇಗ ಕೊಂಚ ಕಡಿಮೆಯಾಯಿತು.
ಈ ದೇಶದ ಜನರ ಸೇವಕ ತಾನು ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ವಾಸ್ತವದಲ್ಲಿ ಅದಾನಿ ಮತ್ತು ಅಂಬಾನಿಯಂಥ ಉದ್ಯಮಿಗಳ ಸೇವಕರಾಗಿದ್ದಾರೆ ಎನ್ನುವ ಗಂಭೀರ ಆರೋಪ ಪದೇ ಪದೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇದೆ. ಸುಪ್ರೀಂ ಕೋರ್ಟ್‌ನಿಂದ ಆರಂಭಿಸಿ, ನೀತಿ ಆಯೋಗ, ಹಣಕಾಸು ತಜ್ಞರು, ಪರಿಸರ ತಜ್ಞರು ಎಲ್ಲರೂ ಎಚ್ಚರಿಸಿದರೂ ಕೇಂದ್ರ ಸರ್ಕಾರ ಒಂದಿಲ್ಲೊಂದು ರೀತಿ ಅದಾನಿ ಬೆಂಬಲಕ್ಕೆ ನಿಲ್ಲುವುದನ್ನು ಮುಂದುವರೆಸಿದೆ. ಪ್ರಧಾನಿಯಾಗಿ ಆಯ್ಕೆಯಾದ ನಂತರ ಗುಜರಾತ್‌ನಿಂದ ದಿಲ್ಲಿಗೆ ಅದಾನಿಯ ಚಾರ್ಟರ್ಡ್ ಫ್ಲೈಟ್‌ನಲ್ಲಿ ಬಂದಿದ್ದವರು ಮೋದಿ, ಆ ಮೂಲಕ ಅವರು ತಮ್ಮ ಆಡಳಿತದ ದಿಕ್ಸೂಚಿ ನೀಡಿದ್ದರು ಎಂದೇ ಬಹುತೇಕರು ಭಾವಿಸಿದ್ದರು. ಅದು ನಿಜವಾಗಿದೆ. ಭಾರತದ ಹಿತ ಕಾಯುವುದೆಂದರೆ, ಅದಾನಿ ಹಿತ ಕಾಯುವುದು ಎಂದು ಪ್ರಧಾನಿ ಮೋದಿ ಭಾವಿಸಿರುವಂತಿದೆ.
