ಈ ದಿನ ಸಂಪಾದಕೀಯ | ಹೊಂದಾಣಿಕೆ ರಾಜಕಾರಣ ಮತ್ತು ಪಾದಯಾತ್ರೆ ಪಾಲಿಟಿಕ್ಸ್

Date:

Advertisements
ರಾಜಕೀಯ ನಾಯಕರು ವೈಯಕ್ತಿಕ ಪ್ರತಿಷ್ಠೆಗಾಗಿ, ರಾಜಕೀಯ ಲಾಭಕ್ಕಾಗಿ, ಅಧಿಕಾರದಾಸೆಗಾಗಿ ಧರಣಿ, ಪ್ರತಿಭಟನೆ, ಹೋರಾಟ, ಸತ್ಯಾಗ್ರಹ, ರ್‍ಯಾಲಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹೊಂದಾಣಿಕೆಯಿಂದ ಪಾದಯಾತ್ರೆಯಲ್ಲೂ ಪಾಲಿಟಿಕ್ಸ್ ಇಣುಕುತ್ತಿದೆ. ಇಂತಹ ರಾಜಕಾರಣಿಗಳಿಂದ ನಾವು ಜನಪರ ಆಡಳಿತವನ್ನು, ನಾಡ ಪರ ನಿಲುವನ್ನು ನಿರೀಕ್ಷಿಸುವುದು ಎಷ್ಟು ಸರಿ?

ಬೆಳಗಾವಿಯಲ್ಲಿ ಸುದ್ದಿ ಮಾಧ್ಯಮಗಳ ಮುಂದೆ ಮಾತನಾಡಿದ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿಯವರು, ‘ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮುಡಾ ಹೋರಾಟ ಮಾಡ್ಲಿಕ್ಕತ್ತದ. ಪಾದಯಾತ್ರೆ ಹೊಂಟಾರ. ಅದು ಡಿ.ಕೆ. ಶಿವಕುಮಾರ್ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ ಮಾಡ್ತಿದಾನ. ಅದು ಮುಖ್ಯಮಂತ್ರಿ ಕುರ್ಚಿಯಿಂದ ಸಿದ್ದರಾಮಯ್ಯರನ್ನು ಇಳಿಸಲಿಕ್ಕ. ಇದೆಲ್ಲ ಹೊಂದಾಣಿಕೆ ರಾಜಕಾರಣ. ಅದರಲ್ಲಿ ನಾವು ಭಾಗವಹಿಸ್ತಿಲ್ಲ. ನಾನು, ರಮೇಶ್ ಕೂಡಿ ಕೂಡಲಸಂಗಮದಿಂದ ಬಳ್ಳಾರಿವರಗ ಪಾದಯಾತ್ರೆ ಮಾಡೋರಿದೀವಿ, ಅದ್ಕ ಹೈಕಮಾಂಡ್ ಅನುಮತಿ ಕೇಳಿದೀವಿ. ಇಷ್ಟರಲ್ಲೇ ದಿನಾಂಕ ಕೂಡ ತಿಳಿಸ್ತೀವಿ’ ಎಂದರು.

ಇದು ಸ್ಪಷ್ಟವಾಗಿ ಬಿಜೆಪಿಯೊಳಗಿನ ಬೇಗುದಿ ಬಿಚ್ಚಿಡುವ, ಹೊಂದಾಣಿಕೆ ರಾಜಕಾರಣವನ್ನು ಬಯಲುಗೊಳಿಸುವ ವಿದ್ಯಮಾನ. ರಾಜಕೀಯ ಹೋರಾಟಗಳ ಅಸಲಿಯತ್ತನ್ನು ಬೆತ್ತಲೆಗೊಳಿಸುವ ಬೆಳವಣಿಗೆ.  

ಅಂದರೆ, ಬಿಜೆಪಿಯ ಪಾದಯಾತ್ರೆ ರಾಜಕೀಯಪ್ರೇರಿತ ಎನ್ನುವುದನ್ನು ಬಿಜೆಪಿ ನಾಯಕರೇ ಬಹಿರಂಗಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಕುರ್ಚಿ ಕಿತ್ತಾಟದ ಫಲವಾಗಿ, ಕಾಂಗ್ರೆಸ್ ನಾಯಕರ ಅನುಕೂಲಕ್ಕೆ ತಕ್ಕಂತೆ ಬಿಜೆಪಿ ನಾಯಕರು ಪ್ರತಿಭಟನೆ, ಹೋರಾಟ, ಪಾದಯಾತ್ರೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುವುದಿಲ್ಲವೇ?

Advertisements

ವಿಪರ್ಯಾಸವೆಂದರೆ, ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಪಾದಯಾತ್ರೆಯನ್ನು ನಾಡಿನ ಪರವಾಗಿ ಮಾಡುತ್ತಿರುವ ಹೋರಾಟ ಎನ್ನುತ್ತಿದೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣಗಳನ್ನು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಯಲುಗೊಳಿಸಲು ಮಾಡುತ್ತಿರುವ ಜನಜಾಗೃತಯಾತ್ರೆ ಎಂದು ಸಾರುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ರಾಜ್ಯದ ಜನತೆಯ ಮುಂದಿಡಲು ಎನ್ನುತ್ತಿದೆ. ಅದಕ್ಕೆ ಬೇಕಾದ ಮಾತಿನ ಸಮರಕ್ಕೂ ಸಿದ್ಧವಾಗಿದೆ. ಸುದ್ದಿ ಮಾಧ್ಯಮಗಳಿಂದ ಸಾಕಷ್ಟು ಪ್ರಚಾರವನ್ನೂ ಪಡೆಯುತ್ತಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಆಗ ಬರ, ಈಗ ನೆರೆ- ಸಂತ್ರಸ್ತರತ್ತ ಧಾವಿಸಲಿ ಸರ್ಕಾರ

ಒಂದು ವಿರೋಧಪಕ್ಷವಾಗಿ ಬಿಜೆಪಿ ಮಾಡುತ್ತಿರುವುದು ಸರಿ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಅದನ್ನು ಖಂಡಿಸಿ, ದಾಖಲೆಗಳ ಮೂಲಕ ಹೊರಗೆಳೆದು, ಜನರ ಮುಂದಿಡುವುದು ಅದರ ಕರ್ತವ್ಯ. ಏಕೆಂದರೆ, ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಕೂಗೆಬ್ಬಿಸಿಯೇ ತಾನೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಅದೇ ಹಾದಿಯಲ್ಲಿದೆ ಎಂದರೆ, ಅದು ರಾಜ್ಯದ ಮತದಾರರಿಗೆ ಮಾಡಿದ ಮೋಸ ಎಂದೇ ಭಾವಿಸಬೇಕಾಗಿದೆ.

ಆದರೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಜನರ ಮುಂದಿಡಬೇಕಾದ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರಲ್ಲಿಯೇ ಒಗ್ಗಟ್ಟಿಲ್ಲದಿರುವುದು ಎದ್ದು ಕಾಣುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಹಣಿಯುವುದು ಬಿಜೆಪಿಯ ದಿಲ್ಲಿ ನಾಯಕರ ಬಯಕೆಯಾಗಿದ್ದರೂ, ಅದಕ್ಕೆ ಭೇಷರತ್ ಬೆಂಬಲ ವ್ಯಕ್ತವಾಗುವುದು ಜೆಡಿಎಸ್ ಕಡೆಯಿಂದ ಮಾತ್ರ. ಅದು ವೈಯಕ್ತಿಕ ನೆಲೆಯದ್ದಾಗಿರಬಹುದು, ಕೊಡು-ಕೊಳ್ಳುವ ವ್ಯವಹಾರವಾಗಿರಬಹುದು. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿರುವುದು, ಅವರ ಹಲವು ರಾಜಕೀಯ ನಡೆಗಳಿಂದ ವ್ಯಕ್ತವಾಗುತ್ತದೆ.

ಅದೇ ಮಾತುಗಳನ್ನು ಬಿಜೆಪಿ ನಾಯಕರ ಬಗ್ಗೆ ಹೇಳಲಾಗುವುದಿಲ್ಲ. ಏಕೆಂದರೆ, ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಇತ್ತೀಚೆಗೆ ಪೋಕ್ಸೋ ಕಾಯ್ದೆಯಡಿ ಬಂಧನದಿಂದ ಬಚಾವಾಗಿದ್ದಾರೆ. ಅದಕ್ಕೆ ಕಾರಣ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗಿರುವ ಸ್ನೇಹ ಮತ್ತು ಹೊಂದಾಣಿಕೆ ಎನ್ನುವುದನ್ನು ಬಿಜೆಪಿ ನಾಯಕರೇ ಬಹಿರಂಗಪಡಿಸುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಇತ್ತೀಚೆಗೆ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ‘ನಮ್ಮ ಬಿಜೆಪಿ ನಾಯಕರು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಾಳು ಮಾಡಿದರು. ಚುನಾವಣೆ ಸೋಲಿಗೆ ಬೊಮ್ಮಾಯಿ ಆಗಲೀ, ಮೋದಿಯಾಗಲೀ ಕಾರಣ ಅಲ್ಲ, ಅಡ್ಜಸ್ಟ್‌ಮೆಂಟ್‌ ಗಿರಾಕಿಗಳು ಕಾರಣ’ ಎಂದಿರುವುದು ರಾಜಕೀಯ ಒಳಸುಳಿಗಳನ್ನು ಬಿಚ್ಚಿಟ್ಟಿದೆ.

ಬಿಜೆಪಿಯಲ್ಲಿದ್ದೂ ಬಿಜೆಪಿಯ ಮೈಸೂರು-ಬೆಂಗಳೂರು ಪಾದಯಾತ್ರೆಗೆ ಪರ್ಯಾಯ ಪಾದಯಾತ್ರೆ ಬಗ್ಗೆ ಮಾತನಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳರಿಗೆ, ಬಿಜೆಪಿಯ ಅಪ್ಪ-ಮಗನ ರಾಜಕಾರಣದ ಬಗ್ಗೆ ಅಸಮಾಧಾನವಿದೆ. ಅವರ ಭ್ರಷ್ಟಾಚಾರವನ್ನು ವಿರೋಧಿಸಿದ್ದರಿಂದ ಆದ ರಾಜಕೀಯ ಹಿನ್ನಡೆಯ ಬಗ್ಗೆ ಬೇಸರವಿದೆ. ಹಾಗೆಯೇ, ಮತ್ತೊಬ್ಬ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಯವರಿಗೆ ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಬಗ್ಗೆ ಸಿಟ್ಟಿದೆ. ಹೋದಲ್ಲಿ ಬಂದಲ್ಲಿ ಅವರನ್ನು ‘ಸಿಡಿ ಶಿವ’ ಎಂದು ಸಂಬೋಧಿಸುವುದು ಸಾಮಾನ್ಯವಾಗಿದೆ. ಈಗ ಈ ಸಿಟ್ಟು, ಬೇಸರ ಮತ್ತು ಅಸಮಾಧಾನ ಒಂದಾಗಿ, ಮತ್ತೊಂದು ಪಾದಯಾತ್ರೆಯ ಮೂಲಕ ಬಹಿರಂಗವಾಗಿದೆ. ಆ ಮೂಲಕ ಬಿಜೆಪಿಯ ಬಣ್ಣವೂ ಬಯಲಾಗಿದೆ.

ಹೀಗಾಗಿ ರಾಜಕೀಯ ನಾಯಕರ ವೈಯಕ್ತಿಕ ಪ್ರತಿಷ್ಠೆಗಾಗಿ, ರಾಜಕೀಯ ಲಾಭಕ್ಕಾಗಿ, ಅಧಿಕಾರದಾಸೆಗಾಗಿ ಧರಣಿ, ಪ್ರತಿಭಟನೆ, ಹೋರಾಟ, ಸತ್ಯಾಗ್ರಹ, ರ್‍ಯಾಲಿಗಳು ಎನ್ನುವುದು ವೇದ್ಯವಾಗುತ್ತದೆ. ಹೊಂದಾಣಿಕೆಯಿಂದ ಪಾದಯಾತ್ರೆಯಲ್ಲೂ ಪಾಲಿಟಿಕ್ಸ್ ಇಣುಕುತ್ತಿದೆ. ಇಂತಹ ರಾಜಕಾರಣಿಗಳಿಂದ ನಾವು ಜನಪರ ಆಡಳಿತವನ್ನು, ನಾಡ ಪರ ನಿಲುವನ್ನು ನಿರೀಕ್ಷಿಸುವುದು ಎಷ್ಟು ಸರಿ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X