ಈ ದಿನ ಸಂಪಾದಕೀಯ | ಬುಡಕಟ್ಟು ಯುವಕನಿಗೆ ಅವಮಾನ; ಬೇಕಿದೆ ವಿಕೃತ ಮನಸ್ಸುಗಳ ಶುದ್ಧೀಕರಣ

Date:

Advertisements
ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಪ್ರಕರಣ; ಬುಡಕಟ್ಟು ಪಂಗಡಗಳು, ದಲಿತರು, ಮಹಿಳೆಯರು ಮುಂತಾದ ಜನವರ್ಗಗಳನ್ನು ಕೀಳಾಗಿ ಕಾಣುವುದರ ಹಿಂದೆ ಇರುವುದು ಈ ದೇಶದ ಜಾತಿ ಪದ್ಧತಿ. ಅದರ ಬೇರುಗಳು ಮನುಸ್ಮೃತಿಯಲ್ಲಿವೆ. ಕಾಲು ತೊಳೆಯುವುದರ ಹಿಂದೆ ಪಶ್ಚಾತ್ತಾಪವಿಲ್ಲ, ನಾಟಕವಿದೆ...

ಮಧ್ಯಪ್ರದೇಶದಲ್ಲಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಪ್ರಕರಣ; ಜನರ ಅಂತಸ್ಸಾಕ್ಷಿಯನ್ನು ತೀವ್ರವಾಗಿ ಕಲಕುವಂಥ, ಅನಾಗರಿಕವಾದ, ಹೇಯವಾದ ಘಟನೆ. ಅದರ ನಂತರ ನಡೆಯುತ್ತಿರುವ ಘಟನಾವಳಿಗಳು ಅದಕ್ಕಿಂತಲೂ ನೀಚತನದಿಂದ ಕೂಡಿದ್ದು, ನಮ್ಮ ಸಮಾಜದ ವಿಕೃತಿಗೆ ಕನ್ನಡಿ ಹಿಡಿಯುತ್ತಿವೆ.

ಪ್ರವೇಶ್ ಶುಕ್ಲಾ ಎಂಬಾತ ಒಂದು ಕೈಯಲ್ಲಿ ಸಿಗರೇಟು ಸೇದುತ್ತಾ, ಮುಂದೆ ಕೂತ ಬುಡಕಟ್ಟು ಯುವಕನ ಮುಖದ ಮೇಲೆ ನಿರ್ಲಜ್ಜವಾಗಿ ಮೂತ್ರ ವಿಸರ್ಜಿಸುವ ವಿಡಿಯೋ ಭಾರತದ ಜಾತಿಗ್ರಸ್ಥ ಮನಸ್ಸುಗಳ ಕೊಳಕುತನವನ್ನು ಬಯಲು ಮಾಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರವೇಶ್ ಶುಕ್ಲಾ, ಸಂತ್ರಸ್ತನನ್ನು ಬೆದರಿಸಿ, ಅದೊಂದು ಫೇಕ್ ವಿಡಿಯೋ ಎಂದು ಆತನಿಂದ ಅಫಿಡವಿಟ್ ಬರೆಸಿಕೊಂಡಿದ್ದ. ಪ್ರಕರಣವನ್ನು ಮುಚ್ಚಿಹಾಕಲು ಹುನ್ನಾರ ಮಾಡಿದ್ದ.    

ವಿಡಿಯೋ ವೈರಲ್ ಆದ ನಂತರ ವ್ಯಕ್ತವಾದ ಜನಾಭಿಪ್ರಾಯ ಕಂಡ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಎಚ್ಚೆತ್ತ ಪರಿಣಾಮ ಆರೋಪಿ ಶುಕ್ಲಾನನ್ನು ಪೊಲೀಸರು ಬಂಧಿಸಿದರು. ಅವನ ಮನೆಯನ್ನು ಧ್ವಂಸಗೊಳಿಸಲಾಯಿತು. ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ನಿರ್ದೇಶನದಂತೆ, ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು.

Advertisements

ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆರೋಪಿ ಪ್ರವೇಶ್ ಶುಕ್ಲಾ ಬಿಜೆಪಿ ಕಾರ್ಯಕರ್ತ ಎನ್ನುವ ಮಾಹಿತಿ ಹೊರಬಿತ್ತು. ಆತ ಸಿಧಿ ಕ್ಷೇತ್ರದ ಶಾಸಕ ಕೇದಾರನಾಥ್ ಶುಕ್ಲಾ ಆಪ್ತ ಎನ್ನುವುದನ್ನು ಸೂಚಿಸುವ ಫೋಟೋಗಳು ಬಹಿರಂಗಗೊಂಡವು. ಆರೋಪಿಯ ಅಪ್ಪ, ತನ್ನ ಮಗ ಬಿಜೆಪಿ ಕಾರ್ಯಕರ್ತನಾಗಿರುವುದರಿಂದ ವಿರೋಧ ಪಕ್ಷಗಳು ವೃಥಾ ಆರೋಪಿಸುತ್ತಿವೆ ಎಂದಿದ್ದು ಕೂಡ ವರದಿಯಾಯಿತು. ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ವಿರೋಧ ಪಕ್ಷಗಳು ಒತ್ತಾಯಿಸಿದವು. ಅದರ ನಂತರ ನಡೆದದ್ದು ಶಿವರಾಜ್‌ಸಿಂಗ್ ಚೌಹಾಣ್ ಅವರು ಸಂತ್ರಸ್ತನ ಕಾಲು ತೊಳೆಯುವ ನಾಟಕ.

ಸಂತ್ರಸ್ತನನ್ನು ತನ್ನ ಮನೆಗೆ ಕರೆದುಕೊಂಡು ಹೋದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ಆತನ ಕಾಲು ತೊಳೆಯುತ್ತಾರೆ. ನಂತರ ಆತನಿಗೆ ಶಾಲು ಹೊದಿಸಿ, ಉಡುಗೊರೆ ಕೊಡುತ್ತಾರೆ. ಅದರ ದೃಶ್ಯಗಳನ್ನು ಬಿಡುಗಡೆ ಮಾಡಿರುವ ಶಿವರಾಜ್‌ ಸಿಂಗ್, ಘಟನೆ ಬಗ್ಗೆ ಕ್ಷಮೆಯನ್ನೂ ಕೋರಿದ್ದಾರೆ.

ಮುಖ್ಯಮಂತ್ರಿಗಳು ಕಾಲು ತೊಳೆಯಲು ಹೋದಾಗ ಬುಡಕಟ್ಟು ಯುವಕ ಭಯ, ಹಿಂಜರಿಕೆ ಅನುಭವಿಸುತ್ತಾನೆ. ಇದೆಲ್ಲ ಬೇಡ ಎನ್ನುವಂತೆ ಮನವಿ ಮಾಡಿಕೊಳ್ಳುತ್ತಾನೆ. ನಂತರ ಮುಖ್ಯಮಂತ್ರಿಗಳು ಬಲವಂತವಾಗಿ ಆತನ ಕಾಲು ತೊಳೆಯುತ್ತಾರೆ. ಆ ಸಂತ್ರಸ್ತನ ನೋವು, ಆತಂಕ, ದೊಡ್ಡ ಮನುಷ್ಯರೊಬ್ಬರು ತನ್ನ ಕಾಲು ಮಟ್ಟಲು ಬಂದಾಗ ಆತ ಅನುಭವಿಸುವ ತಳಮಳ ನೋಡುಗರ ಹೃದಯವನ್ನು ತಾಕುತ್ತವೆ.

ಶಿವರಾಜ್‌ ಸಿಂಗ್ ಚೌಹಾಣ್ ಅವರದ್ದು ನಾಟಕ ಎನ್ನುವ ಬಗ್ಗೆ ಯಾರಿಗೂ ಅನುಮಾನವಿಲ್ಲ. ಮಧ್ಯಪ್ರದೇಶದಲ್ಲಿ ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವಂತೆ ತೋರಿಸಿಕೊಳ್ಳುತ್ತಿದೆ.

ಬುಡಕಟ್ಟು ಪಂಗಡಗಳು, ದಲಿತರು, ಮಹಿಳೆಯರು ಮುಂತಾದ ಜನವರ್ಗಗಳನ್ನು ಕೀಳಾಗಿ ಕಾಣುವುದರ ಹಿಂದೆ ಇರುವುದು ಈ ದೇಶದ ಜಾತಿ ಪದ್ಧತಿ. ಅದರ ಬೇರುಗಳು ಮನುಸ್ಮೃತಿಯಲ್ಲಿವೆ. ತನ್ನ ಹತ್ತಾರು ನೀತಿ ನಿರೂಪಣೆಗಳ ಮೂಲಕ, ಕಾನೂನುಗಳ ಮೂಲಕ ಮನುಸ್ಮೃತಿಯನ್ನು ಜಾರಿಗೆ ತರಲು ಹೊರಟ ಬಿಜೆಪಿ ಸರ್ಕಾರ, ಸಂವಿಧಾನವು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಮೂಲಭೂತ ಹಕ್ಕುಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದಮನ ಮಾಡಲು ಹೊರಟಿದೆ.                  

ನಮ್ಮ ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಅದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆ ಸಂತ್ರಸ್ತನ ಘನತೆಯಿಂದ ಬದುಕುವ ಹಕ್ಕಿನ ಮೇಲೆ ನಡೆದ ದಾಳಿ. ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಗಿಂತ ಯಾವ ರೀತಿಯಲ್ಲೂ ಕಡಿಮೆಯಿರದ ಹೇಯ ಕೃತ್ಯ.

ಮಧ್ಯಪ್ರದೇಶದ ಘಟನೆ ಆಕಸ್ಮಿಕವೂ ಅಲ್ಲ, ಅಪವಾದವೂ ಅಲ್ಲ. ಅಥವಾ ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾದ ಘಟನೆಯೂ ಅಲ್ಲ. ದೇಶದ ಮೂಲೆಮೂಲೆಯಲ್ಲೂ ದಲಿತರು, ಆದಿವಾಸಿಗಳು, ಮಹಿಳೆಯರು ಮುಂತಾದ ನೊಂದ ಸಮುದಾಯಗಳ ಮೇಲೆ ಇಂಥವೇ ಕೊಳಕು ಹಾಗೂ ವಿಕೃತ ಕೃತ್ಯಗಳು ನಡೆಯುತ್ತಲೇ ಇವೆ. ಶೋಷಿತ ಸಮುದಾಯಗಳು ಪುಟಿದೇಳುವ ಸೂಚನೆ ಕಂಡಾಗ ಇಲ್ಲವೇ ಪ್ರಬಲ ಜಾತಿಗಳ ಶ್ರೇಷ್ಠತೆಯ ಅಮಲು ನೆತ್ತಿಗೇರಿದಾಗ ಇಂಥ ಘಟನೆಗಳು ನಡೆದಿರುವುದನ್ನು ಕಾಣಬಹುದಾಗಿದೆ.

ಕರ್ನಾಟಕದಲ್ಲಿಯೂ ಈ ಹಿಂದೆ ಇಂಥ ಹಲವು ಘಟನೆಗಳು ನಡೆದಿವೆ. ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದ ಪ್ರಕರಣ ನಡೆದಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತತ್ತೂರಿನಲ್ಲಿಯೂ ದಲಿತರಿಗೆ ಮಲ ತಿನ್ನಿಸಿದ ಪ್ರಕರಣ ನಡೆದಿತ್ತು. ನಮ್ಮ ಚರಿತ್ರೆಯ ತುಂಬ ಇಂಥ ಹಲವು ಘಟನೆಗಳು; ಜಾತಿಗ್ರಸ್ಥ ಮನಸ್ಸುಗಳ ಕೃತ್ಯಗಳು ವ್ರಣಗಳಾಗಿ ಕೀವು ಸೋರಿ ದುರ್ವಾಸನೆ ಹರಡಿ ನಾಗರಿಕ ಜಗತ್ತನ್ನು ಅಣಕಿಸುತ್ತಿವೆ.

ಇಂಥ ವಿಕೃತ ಘಟನೆಗಳಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿ ಮಾಡಬೇಕು, ನಿಜ. ಕೇವಲ ಅದರಿಂದಷ್ಟೇ ಇಂತಹ ಹೀನ ಕೃತ್ಯಗಳು ನಿಲ್ಲುವುದಿಲ್ಲ. ಮೇಲುಕೀಳಿನ ಮಲ ತುಂಬಿರುವ ನಮ್ಮ ಮನಸ್ಸುಗಳನ್ನು ಶುದ್ಧೀಕರಿಸಿಕೊಳ್ಳದೇ ತೋರಿಕೆಗೆ ಸಂತ್ರಸ್ತನ ಕಾಲು ತೊಳೆದರೆ ಯಾವ ಪ್ರಯೋಜನವೂ ಆಗದು.               

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X