'ಸಿಂಧೂರ'ದಲ್ಲೂ ರಾಜಕಾರಣ ಹುಡುಕುವ, ಸೇನಾ ಕಾರ್ಯಾಚರಣೆಯನ್ನೂ ರಾಜಕೀಯಗೊಳಿಸುವ, ಮತಗಳನ್ನಾಗಿ ಪರಿವರ್ತಿಸಲು ತವಕಿಸುವ, ಅಧಿಕಾರದ ಹಪಾಹಪಿ ಎದ್ದು ಕಾಣುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 26 ಮತ್ತು 27ರಂದು ತವರು ರಾಜ್ಯ ಗುಜರಾತ್‌ನ ನಾಲ್ಕು ನಗರಗಳಲ್ಲಿ- ವಡೋದರ, ಭುಜ್, ಅಹಮದಾಬಾದ್ ಮತ್ತು ಗಾಂಧಿನಗರಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಗುಜರಾತ್ ರೋಡ್ ಶೋಗಳನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷ ಹೇಳಿಕೊಂಡಿದೆ.
ಸಾಮಾನ್ಯವಾಗಿ ರೋಡ್ ಶೋಗಳನ್ನು ರಾಜಕೀಯ ಪ್ರಚಾರಕ್ಕಾಗಿ, ಚುನಾವಣೆಯಲ್ಲಿ ಮತ ಗಳಿಕೆಗಾಗಿ, ಸಾರ್ವಜನಿಕ ಕಾರ್ಯಕ್ರಮಗಳ ಭಾಗವಾಗಿ ಆಯೋಜಿಸಲಾಗುತ್ತದೆ. ಈ ರೋಡ್ ಶೋಗಳು ಜನರೊಂದಿಗೆ ಸಂಪರ್ಕ ಸಾಧಿಸಲು, ಸರ್ಕಾರದ ಸಾಧನೆಗಳನ್ನು ತಿಳಿಸಲು ಮತ್ತು ರಾಜಕೀಯ ಬೆಂಬಲವನ್ನು ಗಳಿಸಲು ಒಂದು ವೇದಿಕೆಯಾಗಿ ಕೂಡ ಬಳಕೆಯಾಗುತ್ತಿರುವುದನ್ನು ದೇಶದ ಜನ ಕಂಡಿದ್ದಾರೆ.
ಇದೇನು ಹೊಸ ವಿದ್ಯಮಾನವಲ್ಲ, ಮೋದಿಯವರೇ ಮೊದಲಿಗರೂ ಅಲ್ಲ. ಪ್ರಶ್ನೆ ಅದಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ ಎನ್ನುವುದರ ಕುರಿತು.
ಇದನ್ನು ಓದಿದ್ದೀರಾ?: ಇಸ್ರೇಲಿ ರಾಜದೂತೆಯ ಭೇಟಿಯಾಗಿ ಸಮ್ಮಾನಿಸಿದ ಡಿಕೆಶಿ ವರ್ತನೆ ಅನುಚಿತ ಅಕ್ಷಮ್ಯ
‘ಆಪರೇಷನ್ ಸಿಂಧೂರ’ ಎನ್ನುವುದು ಸೇನಾ ಕಾರ್ಯಾಚರಣೆ. ಭಾರತೀಯ ಸೇನೆ ಅದನ್ನು ನಿರ್ವಹಿಸಿದೆ. ಅಂದರೆ ಅದರ ಯಶಸ್ಸು ಸಲ್ಲಬೇಕಾದ್ದು ಸೇನಾ ಯೋಧರಿಗೆ. ಆದರೆ, ಗುಜರಾತ್‌ನ ರೋಡ್ ಶೋಗಳಲ್ಲಿ ಕಂಡಿದ್ದೂ ಬೇರೆ, ಆಗಿದ್ದೂ ಬೇರೆ.
ಪ್ರಧಾನಮಂತ್ರಿ ಮೋದಿಯವರು ಸಾಗುವ ರಸ್ತೆಯುದ್ದಕ್ಕೂ ನೂರಾರು ಅಡಿ ಎತ್ತರದ ಭಾರೀ ಕಟೌಟ್‌ಗಳು, ಫ್ಲೆಕ್ಸ್‌ಗಳಲ್ಲಿ ಸೇನಾ ಯೋಧರ ಡ್ರೆಸ್‌ನಲ್ಲಿ ಮೋದಿಯವರ ಚಿತ್ರಗಳು ರಾರಾಜಿಸುತ್ತಿದ್ದವು. ಮೋದಿಯವರು ಸಾಗುವ ರಸ್ತೆಯುದ್ದಕ್ಕೂ ಭಾರೀ ಭದ್ರತೆಗಾಗಿ ಸಾವಿರಾರು ಪೊಲೀಸರನ್ನು, ಸೇನಾ ತುಕಡಿಗಳನ್ನು ನಿಯೋಜಿಸಲಾಗಿತ್ತು. ಜನರಿಗೂ ಪ್ರಧಾನಿಗೂ ಅಂತರ ಕಾಪಾಡಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ತೆರೆದ ವಾಹನದ ಮೇಲೆ ನಿಂತ ಮೋದಿಯವರು ಜನಸಮೂಹದತ್ತ ಕೈ ಬೀಸುತ್ತ ಹೋಗುತ್ತಿದ್ದರೆ, ರಸ್ತೆಯ ಅಕ್ಕಪಕ್ಕ ನಿಂತ ಜನ ಅವರ ಮೇಲೆ ಹೂವಿನ ಮಳೆಗರೆಯುತ್ತಿದ್ದರು. ಮೋದಿಯವರೇ ಯುದ್ಧಭೂಮಿಗೆ ಹೋಗಿ ಗೆದ್ದುಬಂದವರೆಂಬಂತೆ ಜೈಕಾರ ಕೂಗುತ್ತಿದ್ದರು.
ಇದು ಸೇನೆಗೆ ಮತ್ತು ಯೋಧರಿಗೆ ಮಾಡುವ ಅವಮಾನವಲ್ಲವೇ?
ಪ್ರಧಾನಮಂತ್ರಿ ಮೋದಿಯವರ ಸೂಚನೆಯ ಮೇರೆಗೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದರೂ, ಅದು ರಕ್ಷಣಾ ಸಚಿವರು, ಸಚಿವಾಲಯ ಮತ್ತು ಸೇನೆಗಳಿಗೆ ಸೇರಿದ ಸಂಗತಿ. ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಘೋಷಿಸಬೇಕಾದವರು, ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು. ಭಾರತ-ಪಾಕಿಸ್ತಾನಗಳ ನಡುವಿನ ಯುದ್ಧ ಎಂದಾಗ, ದಾಳಿ ಮತ್ತು ಪ್ರತಿದಾಳಿ ಕೂಡ ಸಹಜ. ಹಾಗೆಯೇ ನಮ್ಮ ಯೋಧರು ಹುತಾತ್ಮರಾಗುವುದೂ ಉಂಟು.
ಪ್ರಧಾನಿ ಮೋದಿಯವರು ಸೇನೆ ಮತ್ತು ಯೋಧರನ್ನು ಗೌರವದಿಂದ ಕಾಣುತ್ತಾರೆಂದರೆ- ಅವರು ಮೊದಲು ಮಾಡಬೇಕಾದ ಕೆಲಸವೆಂದರೆ- ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಗಳನ್ನು ಕಂಡು ಸಾಂತ್ವನ ಹೇಳುವುದು. ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಕುಟುಂಬಗಳ ಭವಿಷ್ಯದ ಬದುಕಿಗೆ ಭದ್ರತೆಯೊದಗಿಸುವುದು.
ಇದಕ್ಕೆ ವ್ಯತಿರಿಕ್ತವಾಗಿ, ಗುಜರಾತ್‌ನ ವಡೋದರದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಅವರ ಕೈಗೆ ಹೂ ಪಕಳೆಗಳು ತುಂಬಿದ ತಟ್ಟೆಗಳನ್ನು ಕೊಡಲಾಗಿತ್ತು. ಮೋದಿಯವರು ಸಾಗುತ್ತಿದ್ದರೆ, ಅವರ ಮೇಲೆ ಹೂವಿನ ಮಳೆಗರೆಯಲು ಮೊದಲೇ ಹೇಳಲಾಗಿತ್ತು.
ಸೇನಾ ಅಧಿಕಾರಿಯ ಕುಟುಂಬವನ್ನು ಕರೆದು, ‘ಇಲ್ಲಿ ನಿಂತು, ಹೂವು ಸುರಿಸಿ’ ಎಂದು ಹೇಳಿದ್ದು ಯಾರು? ಹಾಗೆ ಮಾಡಿಸಿದ್ದು ಎಷ್ಟು ಸರಿ? ಅಷ್ಟಕ್ಕೂ ಆ ಪತ್ರಿಕಾಗೋಷ್ಠಿಯಲ್ಲಿ ಇದ್ದ ಇನ್ನೆರಡು ಸೇನಾಧಿಕಾರಿಗಳನ್ನು ಬಿಟ್ಟು, ಮುಸ್ಲಿಂ ಕುಟುಂಬವನ್ನೇ ಯಾಕೆ ಇಲ್ಲಿ ನಿಲ್ಲಿಸಲಾಗಿತ್ತು? ಇದರ ಹಿಂದಿನ ಷಡ್ಯಂತ್ರವೇನು? ಇದು ದೇಶದ ಜನತೆಗೆ ಯಾವ ಸಂದೇಶವನ್ನು ರವಾನಿಸುತ್ತದೆ?
‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ವಿಗೊಂಡಿದೆ ಎನ್ನುವ ಮೋದಿಯವರು, ಈಗ ಮಾತನಾಡುವ ಶೈಲಿಯನ್ನೂ ಬದಲಿಸಿಕೊಂಡಿದ್ದಾರೆ. ‘ಶೋಲೆ’ ಸಿನಿಮಾದ ಖಳನಾಯಕ ಗಬ್ಬರ್ ಸಿಂಗ್ ಸಂಭಾಷಣೆಯನ್ನು ಚಾಲ್ತಿಗೆ ತಂದಿದ್ದಾರೆ. ‘ರೋಟಿ ಖಾವೋ, ನಹೀಂ ತೋ ಗೋಲಿ ಖಾವೋ’ ಎಂದಿದ್ದಾರೆ. ಪಾಕಿಸ್ತಾನ ಸೇನಾ ದಾಳಿಗೆ ಪೂಂಚ್‌ನಲ್ಲಿ ನಮ್ಮ 16 ಸೇನಾ ಯೋಧರು ಹುತಾತ್ಮರಾದರಲ್ಲ, ಅವರಿಗೂ ಇದೇ ಭಾಷೆ ಬಳಸುತ್ತಾರ? ಇದು ಪ್ರಧಾನಿ ಹುದ್ದೆಗೆ ಶೋಭೆ ತರುತ್ತದೆಯೇ?
ಒಟ್ಟಿನಲ್ಲಿ, ‘ಸಿಂಧೂರ’ದಲ್ಲೂ ರಾಜಕಾರಣ ಹುಡುಕುವ, ಸೇನಾ ಕಾರ್ಯಾಚರಣೆಯನ್ನೂ ರಾಜಕೀಯಗೊಳಿಸುವ, ಮತಗಳನ್ನಾಗಿ ಪರಿವರ್ತಿಸಲು ತವಕಿಸುವ, ಅಧಿಕಾರದ ಹಪಾಹಪಿ ಎದ್ದು ಕಾಣುತ್ತಿದೆ.
ಇದನ್ನು ಓದಿದ್ದೀರಾ?: ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?
ಆದರೆ, ಕಳೆದ ಎರಡು ವರ್ಷಗಳಿಂದ ಬೆಂಕಿಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಮೋದಿಯವರು ರೋಡ್ ಶೋ ಮಾಡುವುದಿಲ್ಲ. 60 ಸಾವಿರ ಜನ ಅನಾಥರಾದರೂ, 400 ಚರ್ಚುಗಳು ಬೆಂಕಿಗೆ ಆಹುತಿಯಾದರೂ, 300ಕ್ಕೂ ಹೆಚ್ಚು ಜನರ ಹತ್ಯೆಯಾದರೂ ಮೋದಿಯವರು ಮಾತನಾಡುವುದಿಲ್ಲ. ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸುವುದಿಲ್ಲ. ಸಂಸತ್ ಕರೆದು ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಡುವುದೂ ಇಲ್ಲ.
ಇದು ಭಾರತ, ವಿಶ್ವಗುರುವಿನತ್ತ ಸಾಗುತ್ತಿರುವ ವಿಕಸಿತ ಭಾರತ, ಆರ್ಥಿಕತೆಯಲ್ಲಿ ಜಪಾನನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ ಮೋದಿ ಭಾರತ!
