ಬಿ.ಆರ್ ಪಾಟೀಲ್ ಅವರ ಆರೋಪಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಗಳು ಮಾತನಾಡಬೇಕು.
ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಅವರ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದಡಿ ಬಡವರಿಗೆ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಲಂಚ ನೀಡಿದವರಿಗೆ ಮಾತ್ರವೇ ಮನೆ ಹಂಚಲಾಗುತ್ತಿದೆ ಎಂದು ಪಾಟೀಲ್ ಆರೋಪಿಸಿದ್ದಾರೆ. ವೈರಲ್ ಆಗಿರುವ ಆಡಿಯೋ ತಮ್ಮದೇ ಎಂದೂ, ಮುಖ್ಯಮಂತ್ರಿಗಳು ಕರೆದರೆ ಹೋಗಿ ಮಾತನಾಡುತ್ತೇನೆಂದೂ ಕೂಡ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಇದು, ಕಾಂಗ್ರೆಸ್ ಸರ್ಕಾರದ ನೈತಿಕತೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ರ ಖಾಸಗಿ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರೊಂದಿಗೆ ಬಿ.ಆರ್ ಪಾಟೀಲ್ ಮಾತನಾಡಿರುವ ಆಡಿಯೋ ಜೂನ್ 20ರಂದು ಹೊರಬಂದಿದೆ. ಆಡಿಯೋದಲ್ಲಿನ ಸಂಭಾಷಣೆಯಲ್ಲಿ- ತಮ್ಮ ಕ್ಷೇತ್ರ ಆಳಂದದಲ್ಲಿ ಮನೆಗಳ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಮನೆಗಳ ಹಂಚಿಕೆಗೆ ಶಾಸಕರ ಶಿಫಾರಸು ಪತ್ರಗಳನ್ನು ನಿರ್ಲಕ್ಷಿಸಲಾಗಿದೆ. ಲಂಚ ನೀಡಿದವರಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡಲಾಗಿದೆ. ಆಳಂದ ಕ್ಷೇತ್ರದಲ್ಲಿ ಸುಮಾರು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ. ಈ ಪೈಕಿ, ಮುನ್ನಳ್ಳಿ (200 ಮನೆಗಳು), ಹಿಟ್ಟಾಲ ಶಿರೂರು (100 ಮನೆಗಳು), ದಂಗಾಪುರ (200 ಮನೆಗಳು), ಕವಲಗ (200 ಮನೆಗಳು) ಹಾಗೂ ಮಡಿಯಾಲ್ (200 ಮನೆಗಳು) ಸೇರಿವೆ. ನಾನೇನಾದರೂ ಬಾಯಿ ಬಿಟ್ಟರೆ ಸರ್ಕಾರದ ಬುನಾದಿಯೇ ಅಲುಗಾಡುತ್ತದೆ ಎಂದು ಬಿ.ಆರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾಗಿದ್ದ ಪಾಟೀಲ್ 2025ರ ಜನವರಿಯಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ”ತಮ್ಮ ಕ್ಷೇತ್ರಕ್ಕೆ ಸಾಕಷ್ಟು ಸರಿಯಾಗಿ ಅನುದಾನ ದೊರೆಯುತ್ತಿಲ್ಲ. ಸರ್ಕಾರದ ಕೆಲವು ನೀತಿಗಳ ಸರಿಯಿಲ್ಲ. ಮುಖ್ಯಮಂತ್ರಿಗಳ ಸಲಹೆಗಾರ ಹುದ್ದೆಯಲ್ಲಿದ್ದುಕೊಂಡು ಸಾಕಷ್ಟು ಪ್ರಭಾವ ಬೀರಲು ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿಕೊಂಡಿದ್ದರು. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರವೇ ನಂ.1 ಎಂದೂ ಆರೋಪಿಸಿದ್ದರು.
ಈಗ, ತಮ್ಮ ಹಿಂದಿನ ಆರೋಪಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ಆರೋಪ ಮಾಡಿದ್ದಾರೆ. ಅವರ ಈ ಆರೋಪ ಗಂಭೀರವಾದದ್ದು. ಸಚಿವ ಹುದ್ದೆಗೆ ಸಮನಾದ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿರುವವರೇ ಇಂತಹ ಆರೋಪ ಮಾಡಿದ್ದಾರೆ ಎಂದರೆ, ಇದರ ಸ್ವರೂಪ ತೀವ್ರತರವಾದದ್ದು. ಉನ್ನತ ಸ್ಥಾನದಲ್ಲಿರುವವರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿರುವುದು ಸರ್ಕಾರದ ನೈತಿಕತೆ ವಿಚಾರದ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಇದೇ ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆಗೂ ಮುನ್ನ, ಬಿಜೆಪಿ ಸರ್ಕಾರದ ವಿರುದ್ಧ ‘40% ಕಮಿಷನ್’ ಆರೋಪ ಮತ್ತು ಪೇ-ಸಿಎಂ ಅಭಿಮಾನವನ್ನು ನಡೆಸಿತ್ತು. ಬಿಜೆಪಿ ಸರ್ಕಾರವು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದೆ, ಜನರನ್ನು ಲೂಟಿ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸುತ್ತಿಲ್ಲವೆಂದು ಆರೋಪಿಸಿ, ಅಧಿಕಾರಕ್ಕೆ ಬಂದಿತ್ತು. ಆದರೆ, ಇಗ ತಮ್ಮದೇ ಶಾಸಕರು, ಅದರಲ್ಲೂ ಉನ್ನತ ಹುದ್ದೆಯಲ್ಲಿರುವವರೇ ತಮ್ಮ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದು, ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರದ ಸಂಗತಿ. ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲೆ ಜನರ ವಿಶ್ವಾಸವನ್ನು ಕುಂದಿಸುತ್ತದೆ. ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ.
ಬಿ.ಆರ್ ಪಾಟೀಲ್ ಅವರ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಹಾಗೂ ಮಾಧ್ಯಮಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ದಾಳಿಯಲ್ಲಿ ಹೊಸತೇನು ಇಲ್ಲ. ಅವರು ಕೇಳುತ್ತಿರುವ ಪ್ರಶ್ನೆಗಳು ತಪ್ಪಲ್ಲ. ಆದರೆ, ಸ್ವಪಕ್ಷೀಯರೇ ಆದ ಬಿ.ಆರ್ ಪಾಟೀಲ್ ಮಾಡಿರುವ ಗಂಭೀರ ಆರೋಪ, ಸರ್ಕಾರದ ನೈತಿಕತೆಯನ್ನು ಪ್ರಶ್ನಿಸುವಂಥಾದ್ದು. ಸರ್ಕಾರವು ಪಾಟೀಲರ ಆರೋಪದ ಬಗ್ಗೆ ಅಧಿಕೃತವಾಗಿ ಈವರೆಗೆ ಪ್ರತಿಕ್ರಿಯಿಸಿಲ್ಲ. ಬದಲಾಗಿ, ನಿರುಮ್ಮಳ ಮತ್ತು ನಿರ್ಲಜ್ಜ ಮೌನ ತಾಳಿದೆ.
ಇದನ್ನು ಓದಿದ್ದೀರಾ?: ಮೌಢ್ಯ ಬಿತ್ತುವ ಕಾವೇರಿ ಆರತಿ ಯಾವ ಪುರುಷಾರ್ಥಕ್ಕೆ?
ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ‘ಈ ಆರೋಪದ ಬಗ್ಗೆ ತಮಗೆ ತಿಳಿದಿಲ್ಲ’ ಎಂದಷ್ಟೇ ಹೇಳಿದ್ದಾರೆ. ಗೃಹಸಚಿವ ಜಿ ಪರಮೇಶ್ವರ್, ‘ಯಾರು ಲಂಚ ಕೇಳಿದ್ದಾರೋ ಅವರ ವಿರುದ್ಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ದೂರು ನೀಡಲಿ, ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ‘ಆರೋಪದ ಬಗ್ಗೆ ಸರ್ಕಾರ ತನಿಖೆ ನಡೆಸುತ್ತದೆ’ ಎಂದಷ್ಟೇ ಹೇಳಿದ್ದಾರೆ. ಆದರೆ, ಬಿ.ಆರ್ ಪಾಟೀಲ್ ಅವರ ಆರೋಪವನ್ನು ಸರ್ಕಾರವು ಅಲ್ಲಗಳೆದಿಲ್ಲ ಅಥವಾ ಗಂಭೀರವಾಗಿ ತೆಗೆದುಕೊಂಡಂತೆಯೂ ಕಾಣುತ್ತಿಲ್ಲ. ತನಿಖೆ ನಡೆಸುವುದಾಗಿ ಸರ್ಕಾರದಿಂದ ಅಧಿಕೃತ ಹೇಳಿಕೆಯೂ ಬಂದಿಲ್ಲ.
ಈಗ, ಪಾಟೀಲ್ ಲಂಚದ ಆರೋಪ ಮಾಡಿದ್ದಾರೆ. ಅವರ ಆರೋಪವು ಸರ್ಕಾರದ ವಿಶ್ವಾಸಾರ್ಹತೆ ಮತ್ತು ನೈತಿಕತೆಯ ಕುರಿತು ಚರ್ಚೆ ಹುಟ್ಟುಹಾಕಿವೆ. ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವವರೇ ಇಂತಹ ಆರೋಪ ಮಾಡಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಆರೋಪವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸದಿದ್ದರೆ, ಜನರ ವಿಶ್ವಾಸ ಕಳೆದುಕೊಳ್ಳುತ್ತದೆ.
ಆದ್ದರಿಂದ, ಬಿ.ಆರ್ ಪಾಟೀಲ್ ಅವರ ಆರೋಪಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ತನಿಖೆಗೆ ಆದೇಶಿಸಬೇಕು. ಇಲ್ಲವೇ, ಆರೋಪಗಳಿಗೆ ನೈತಿಕ ಹೊಣೆಹೊತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜೀನಾಮೆ ನೀಡಬೇಕು. ಸರ್ಕಾರ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಬಿ.ಆರ್ ಪಾಟೀಲ್ ಅವರು ತಮ್ಮ ಆರೋಪಕ್ಕೆ ಬದ್ಧರಾಗಿ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗೆ ತಾವೇ ರಾಜೀನಾಮೆ ನೀಡಿ, ಸರ್ಕಾರದಿಂದ ಹೊರಬರಬೇಕು.
ಒಂದು ವೇಳೆ, ಸರ್ಕಾರ ತನಿಖೆ ನಡೆಸದೆ, ನಿರ್ಲಕ್ಷ್ಯ ಧೋರಣೆ ತಳೆದರೆ, ಸರ್ಕಾರದ ನಿರ್ಲಕ್ಷ್ಯದ ಕಾರಣಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ ನೀಡಿದರೆ, ಅದು ಸರ್ಕಾರಕ್ಕೆ ಭಾರೀ ಹೊಡೆತ ನೀಡಲಿದೆ. ರಾಜಕೀಯವಾಗಿ ಕಾಂಗ್ರೆಸ್ ಸರ್ಕಾರ ನೈತಿಕವಾಗಿ ದಿವಾಳಿಯಾಗಲಿದೆ. ಈ ಎಚ್ಚರಿಕೆ ಸರ್ಕಾರಕ್ಕಿದ್ದರೆ, ಶೀಘ್ರವೇ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಗಳು ಮಾತನಾಡಬೇಕು.
ಈ ಆಸಾಮಿ ಬಿಜೆಪಿ ಗೆ ಲಾಭ ಆಗುವ ಹಾಗೆ ಮಾಡುತ್ತಿದ್ದು, ಈತನನ್ನು ಉಚ್ಚಾಟಿಸುವುದು ಉತ್ತಮ.
ಈವಯ್ಯನ ತಾತ್ವಿಕ ಬದ್ಧತೆ ಸಂಶಯಾಸ್ಪದ ಇದೆ.
ಭ್ರಷ್ಟಾಚಾರದ ಆರೋಪ ಇದೆ ಒಮ್ಮೆ ತನಿಖೆ ಆಗಲಿ ಆದರೆ ಇವಯ್ಯ ಕಾಂಗ್ರೆಸ್ ವ್ಯಕ್ತಿ ಹೌದಾ ಅಂತವೂ ತನಿಖೆ ಆಗಬೇಕು.
ಬೇರೆಯವರ ಮೇಲೆ ಆರೋಪ ಮಾಡುತ್ತಿರುವ ಇವರು ಒಬ್ಬ ಶಾಸಕ ಆಗಿ ತನ್ನ ಕ್ಷೇತ್ರದಲ್ಲಿ ಯಾವ ಪ್ರಾಮಾಣಿತೆಯಿಂದ ಕೆಲಸ ಮಾಡಿದ್ದಾರೆ ಅಂತ ಹೇಳಲಿ ಇವತ್ತಿಗೂ ಒಂದು ಕೆಲಸ ಹೇಳಿಕೊಳ್ಳುವಂತೆ ಇಲ್ಲ.