ಈ ದಿನ ಸಂಪಾದಕೀಯ | ಹದಗೆಟ್ಟ ರಸ್ತೆ, ಜಡವಾದ ವ್ಯವಸ್ಥೆ; ತಿರುಗುತ್ತಲೇ ಇದೆ ಸಾವಿನ ಚಕ್ರ

Date:

Advertisements

ಸತ್ತವರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನೇನೋ ಘೋಷಣೆ ಮಾಡಿದೆ. ಆದರೆ, ಕೇವಲ ಪರಿಹಾರ ಕೊಟ್ಟು ಮರೆತು ಬಿಡುವಂಥ ಘಟನೆಗಳಲ್ಲ ಇವು. ಈ ಘಟನೆಗಳ ಹಿಂದೆ ಚಾಲಕರ ಅಜಾಗರೂಕತೆ, ಅತಿ ವೇಗದ ಕಾರಣಗಳು ಇರುವಂತೆಯೇ ಸರ್ಕಾರಿ ಯಂತ್ರದ ನಿರ್ಲಕ್ಷ್ಯ, ಅದಕ್ಷತೆಗಳೂ ಇವೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಮೈಸೂರು ಜಿಲ್ಲೆಯ ಟಿ ನರಸೀಪುರ ಮತ್ತು ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿನ ಪಿಂಜರಾಪೋಲ್ ಎಂಬಲ್ಲಿ ಮೇ 29, 2023ರ ಸೋಮವಾರ ಖಾಸಗಿ ಬಸ್ ಮತ್ತು ಇನ್ನೋವಾ ಕಾರಿನ ನಡುವೆ ನಡೆದಿರುವ ಅಪಘಾತ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಹೋಗಿದ್ದ ಬಳ್ಳಾರಿಯ ಸಂಗನಕಲ್ ಗ್ರಾಮದ ಮೂರು ಕುಟುಂಬಗಳ ಒಟ್ಟು ಹತ್ತು ಜನ ಅಸುನೀಗಿರುವುದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ. ಅಪಘಾತದ ಭೀಕರತೆಯನ್ನು ನೆನೆದರೆ ಮೈ ನಡುಗುತ್ತದೆ.

ಇದಕ್ಕೆ ಒಂದು ದಿನ ಮುಂಚೆ, ಅಂದರೆ, ಮೇ 28ರ ಭಾನುವಾರ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕಲಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರಿನ ನಡುವೆ ನಡೆದಿರುವ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

Advertisements

ಎರಡೇ ದಿನಗಳ ಅಂತರದಲ್ಲಿ ನಡೆದಿರುವ ಎರಡು ಅಪಘಾತಗಳು 16 ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ರಾಜ್ಯದ ಜನರನ್ನು ದಿಗ್ಮೂಢರನ್ನಾಗಿಸಿವೆ. ಮೈಸೂರಿನ ದುರಂತದಲ್ಲಿ ಮೂರು ಕುಟುಂಬಗಳು ಸಂಪೂರ್ಣವಾಗಿ ನಾಶವಾಗಿಹೋಗಿದ್ದರೆ, ಕೊಪ್ಪಳದ ಘಟನೆಯಲ್ಲಿ ಕೂಲಿ ಕಾರ್ಮಿಕರು ಸೇರಿದಂತೆ ಹಲವರ ಮನೆಯ ದೀಪಗಳು ಆರಿಹೋಗಿವೆ.

ಸತ್ತವರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನೇನೋ ಘೋಷಣೆ ಮಾಡಿದೆ. ಆದರೆ, ಕೇವಲ ಪರಿಹಾರ ಕೊಟ್ಟು ಮರೆತು ಬಿಡುವಂಥ ಘಟನೆಗಳಲ್ಲ ಇವು. ಈ ಘಟನೆಗಳ ಹಿಂದೆ ಚಾಲಕರ ಅಜಾಗರೂಕತೆ, ಅತಿ ವೇಗದ ಕಾರಣಗಳು ಇರುವಂತೆಯೇ ಸರ್ಕಾರಿ ಯಂತ್ರದ ನಿರ್ಲಕ್ಷ್ಯ, ಅದಕ್ಷತೆಗಳೂ ಇವೆ ಎನ್ನುವುದನ್ನು ನಾವು ಮರೆಯುವಂತಿಲ್ಲ.
ರಾಜ್ಯದಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿವೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನೇ ನೋಡುವುದಾದರೆ, ಚುನಾವಣೆಯ ಹೊಸ್ತಿಲಲ್ಲಿ ಪ್ರಧಾನಿಯವರೇ ಖುದ್ದು ಆಗಮಿಸಿ ಹೆದ್ದಾರಿಯನ್ನು ಉದ್ಘಾಟಿಸಿದ್ದರು.

ಆದರೆ, ಸರ್ವೀಸ್ ರಸ್ತೆ ಪೂರ್ಣಗೊಳಿಸದೇ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ, ತಿರುವುಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸದೇ ಚುನಾವಣೆಯಲ್ಲಿ ಜನರ ಮತ ಗಳಿಕೆಗೋಸ್ಕರ ಆತುರಾತುರವಾಗಿ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದವು. ಯಾರೂ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅದರ ಪರಿಣಾಮವನ್ನು ರಾಜ್ಯದ ಜನ ದಿನವೂ ಅನುಭವಿಸುತ್ತಿದ್ದಾರೆ. ಆ ಹೆದ್ದಾರಿಯಲ್ಲಿ ಕಳೆದ ಹತ್ತು ದಿನಗಳಲ್ಲಿ ಹತ್ತು ಅಪಘಾತಗಳು ಸಂಭವಿಸಿ, ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿ ಆರಂಭವಾದಾಗಿನಿಂದ 80ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ 40ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೇ ಹೆದ್ದಾರಿಯನ್ನು ಸಂಚಾರ ಮುಕ್ತಗೊಳಿಸಿದ್ದೇ ಇಷ್ಟೆಲ್ಲ ಜೀವಹಾನಿಗೆ ಕಾರಣವಾಗಿದೆ.

ಪ್ರತಿಯೊಂದು ಅಪಘಾತ ನಡೆದಾಗಲೂ ಇಂಥವೇ ಆರೋಪಗಳು, ಒತ್ತಾಯಗಳು, ಮನವಿಗಳು ಕೇಳಿಬರುತ್ತವೆ. ಮೈಸೂರಿನ ಅಪಘಾತಕ್ಕೂ ರಸ್ತೆ ಬದಿಯಲ್ಲಿ ಮರಗಿಡ ಕಡಿದು ಹೆದ್ದಾರಿಯನ್ನು ಸಮರ್ಪಕವಾಗಿ ಇಡದೇ ಇದ್ದುದೂ ಒಂದು ಕಾರಣ ಎನ್ನುವ ಮಾತುಗಳು ಕೇಳಿಬಂದಿವೆ. ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಯ ಪಕ್ಕದಲ್ಲಿ ಜಂಗಲ್ ಕಟಿಂಗ್ ಮಾಡದ ಕಾರಣ ಎದುರು ಬದುರು ವಾಹನಗಳಿಗೆ ರಸ್ತೆ ಕಾಣುವುದಿಲ್ಲ. ಈ ಕಾರಣದಿಂದಲೇ ಇಂತಹ ಭೀಕರ ಅಪಘಾತ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಇದರ ಹೊಣೆ ಹೊರಬೇಕಾಗುತ್ತದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿದ್ದಾರೆ.

ಸರ್ಕಾರಿ ವ್ಯವಸ್ಥೆ ಮೊಂಡು ಬಿದ್ದಿದೆ. ದಪ್ಪ ಚರ್ಮದ ಅಧಿಕಾರಿಗಳಿಗೆ, ಕಣ್ಣು ಕಿವಿ ಕಾಣದ ಗುತ್ತಿಗೆದಾರರಿಗೆ ಜನರ ಪ್ರಾಣದ ಮಹತ್ವ ಗೊತ್ತಿಲ್ಲ. ರಸ್ತೆಗುಂಡಿಗಳಿಂದ, ಎಚ್ಚರಿಕೆಯ ಫಲಕವಿಲ್ಲದ ದಿಢೀರ್ ತಿರುವುಗಳಿಂದ, ಜಂಗಲ್ ಕಟ್ಟಿಂಗ್ ಮಾಡದ ಹಾದಿಗಳಿಂದ, ಅಪೂರ್ಣ ಕಾಮಗಾರಿಗಳಿಂದ.. ಇಂಥವೇ ಹತ್ತಾರು ಅವ್ಯವಸ್ಥೆಗಳಿಂದ ದಿನನಿತ್ಯ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಯಾವ ಊರಿನವರೋ, ಯಾರ ಮಗನೋ, ಅಪ್ಪನೋ, ಅವ್ವನೋ ಮಗಳೋ ಸಾಯುತ್ತಲೇ ಇರುತ್ತಾರೆ. ಸಂತಾಪಗಳು ಪ್ರಕಟವಾಗುತ್ತವೆ, ಪರಿಹಾರಗಳು ಘೋಷಣೆಯಾಗುತ್ತವೆ. ಕೆಲವೇ ದಿನಗಳಲ್ಲಿ ಬಾಧಿತ ಕುಟುಂಬಗಳು ಬಿಟ್ಟು ಉಳಿದೆಲ್ಲರೂ ದುರಂತಗಳನ್ನು ಮರೆತುಬಿಡುತ್ತಾರೆ. ಮತ್ತೆ ಯಥಾಪ್ರಕಾರದ ಬದುಕು.. ಮತ್ತೆ ಅಪಘಾತಗಳು.. ಮತ್ತೆ ಸಾವುಗಳು..

ಜಡವಾಗಿರುವ ಸರ್ಕಾರಿ ವ್ಯವಸ್ಥೆ ಮೈಕೊಡವಿ ಏಳುವವರೆಗೂ ಸಾವಿನ ಚಕ್ರ ತಿರುಗುತ್ತಲೇ ಇರುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X