ಈ ದಿನ ಸಂಪಾದಕೀಯ | ಹುಟ್ಟುವ ಮುನ್ನವೇ ಹೆಣ್ಣು ಜೀವಗಳನ್ನು ಬಲಿ ಪಡೆಯುತ್ತಿರುವ ಅನಾಗರಿಕ ವ್ಯವಸ್ಥೆ

Date:

Advertisements

2023ರ ಅಕ್ಟೋಬರ್ 15ರಂದು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರೊಂದರ ಬೆನ್ನು ಹತ್ತಿದಾಗ ಇಡೀ ಕರ್ನಾಟಕ ಬೆಚ್ಚಿ ಬೀಳುವಂಥ ಹಗರಣವೊಂದು ಬಯಲಾಗುತ್ತದೆಂದು ಭಾವಿಸಿದ್ದಿರಲಾರರು. ಅಂದು ಹಾಗೆ ಬೆಳಕಿಗೆ ಬಂದದ್ದು ಅಕ್ರಮ ಭ್ರೂಣ ಪತ್ತೆ ಮತ್ತು ಭ್ರೂಣ ಹತ್ಯೆ ಜಾಲ.

ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ಭ್ರೂಣ ಹತ್ಯೆ ಜಾಲವು, ಹಲವು ವರ್ಷಗಳಿಂದ ಕಾರ್ಯಾಚರಣೆ ಮಾಡುತ್ತಿತ್ತು. ಆ ಜಾಲದ ಹನ್ನೊಂದು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಅವರು ಎರಡು ವರ್ಷಗಳಲ್ಲಿ ಸುಮಾರು 900 ಭ್ರೂಣ ಹತ್ಯೆ ಮಾಡಿದ್ದಾರೆಂಬ ಆಘಾತಕಾರಿ ವಿಷಯ ತಿಳಿದುಬಂತು.

ಮೈಸೂರಿನ ಮಾತಾ ನರ್ಸಿಂಗ್‌ನ ಮಾಲೀಕ ಡಾ.ಚಂದನ್ ಬಲ್ಲಾಳ್ ಈ ಜಾಲದ ಪ್ರಮುಖ ಆರೋಪಿ. ಉಳಿದಂತೆ ಆತನ ಪತ್ನಿ, ಅವರ ಆಸ್ಪತ್ರೆಯ ತಂತ್ರಜ್ಞ, ಹಲವು ನರ್ಸ್‌ಗಳು, ಏಜೆಂಟ್‌ಗಳನ್ನು ಬಂಧಿಸಲಾಯಿತು. ಬಂಧಿತರಿಂದ ಹೊರಬಂದ ಮಾಹಿತಿ ಭಯಾನಕವಾಗಿತ್ತು. ಮಂಡ್ಯದ ಆಲೆಮನೆಯೊಂದರಲ್ಲಿ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ತಂತ್ರಜ್ಞರ ಬದಲಿಗೆ ಪಿಯುಸಿ ಓದಿದವರು ಸ್ಕ್ಯಾನಿಂಗ್ ಮಾಡುತ್ತಿದ್ದರು. ಕೆಲವೊಮ್ಮೆ ನರ್ಸ್‌ಗಳೇ ಗರ್ಭಪಾತ ನೆರವೇರಿಸುವ ಮೂಲಕ ಭ್ರೂಣ ಹತ್ಯೆ ಮಾಡುತ್ತಿದ್ದರು. ನರ್ಸ್‌ಗಳು ಹಾಗೂ ಆಶಾ ಕಾರ್ಯಕರ್ತೆಯರು ಗರ್ಭಿಣಿಯರನ್ನು ಹುಡುಕಿ ಕರೆತರುವ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದರು. ನೈರ್ಮಲ್ಯರಹಿತವಾದ ಸ್ಥಳಗಳಲ್ಲಿ, ಯಾವ ಮುಂಜಾಗರೂಕತೆ ವಹಿಸದೆಯೇ ಅಬಾರ್ಷನ್ ಮಾಡಲಾಗುತ್ತಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಗರ್ಭಿಣಿಯರ ಪ್ರಾಣಕ್ಕೆ ಕಂಟಕ ಬರುವುದು ನಿಶ್ಚಿತ. ಇಂಥ ಒಂದು ಶಸ್ತ್ರಚಿಕಿತ್ಸೆಗೆ 30 ಸಾವಿರ ರೂಪಾಯಿಯನ್ನು ಚಾರ್ಜ್ ಮಾಡಲಾಗುತ್ತಿತ್ತು. ವರ್ಷಕ್ಕೆ ಒಬ್ಬ ಏಜೆಂಟ್‌ಗೆ 1000 ಗರ್ಭಿಣಿಯರನ್ನು ಹುಡುಕಿ ತರುವ ಟಾರ್ಗೆಟ್ ನೀಡಲಾಗಿತ್ತು. ಮೈಸೂರು ಜಿಲ್ಲೆಯ ನೂರಾರು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಭ್ರೂಣ ಪತ್ತೆ ನಡೆಯುತ್ತಿದ್ದು, ಹಲವು ಆಸ್ಪತ್ರೆಗಳಲ್ಲಿ ಭ್ರೂಣ ಲಿಂಗ ಪತ್ತೆ ನಡೆಸಲಾಗುತ್ತಿದೆ ಎನ್ನುವ ಮಾತುಗಳಿವೆ. ನಾಗರಿಕ ಸಮಾಜವೊಂದು ತಲೆತಗ್ಗಿಸಬೇಕಾದ ಕೃತ್ಯವೊಂದು ಹೇಗೆ ಸಲೀಸಾಗಿ ನಡೆದುಹೋಗುತ್ತಿದೆ ಎನ್ನುವುದನ್ನು ಗಮನಿಸಿದರೆ, ನಮ್ಮ ಸಮಾಜ, ವೈದ್ಯಕೀಯ ಸಿಬ್ಬಂದಿ ಹಾಗೂ ಸರ್ಕಾರಿ ಯಂತ್ರ ಎಷ್ಟು ಅಧಃಪತನ ಕಂಡಿವೆ ಎನ್ನುವುದರ ಅರಿವಾಗುತ್ತದೆ. ಕರ್ನಾಟಕದ ಮಂಡ್ಯ, ಮೈಸೂರು, ಬೆಳಗಾವಿಯಂಥ ನೀರಾವರಿ ಸಮೃದ್ಧಿಯ ಜಿಲ್ಲೆಗಳಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ವ್ಯಾಪಕವಾಗಿರುವುದು ಗಮನಾರ್ಹ ವಿಚಾರವಾಗಿದೆ. ಶಿಕ್ಷಣ ಮತ್ತು ಇತರ ಸಾಮಾಜಿಕ ಸೂಚ್ಯಂಕಗಳಲ್ಲಿ ಪ್ರಗತಿಯ ಹೊರತಾಗಿಯೂ ಸಮಾಜದ ಮೇಲುಸ್ತರಗಳು ಗಂಡು ಮಗುವನ್ನು ಹೊಂದುವ ಗೀಳನ್ನು ಹೊಂದಿರುವುದು ಒಂದು ವಿಪರ್ಯಾಸವಾಗಿದೆ.

Advertisements

ಹೆಣ್ಣು ಶಕ್ತಿ, ದೇವತೆ ಎಂದೆಲ್ಲ ಆರಾಧಿಸುವ ನಾಡಿನಲ್ಲಿ ಭ್ರೂಣ ಹತ್ಯೆಗಳು ಸಹಜ ಎನ್ನುವಂತೆ ನಡೆಯುತ್ತಿವೆ. ಜೀವ ಉಳಿಸಬೇಕಾದ ವೈದ್ಯರು ತಾಯಿಯ ಹೊಟ್ಟೆಯಲ್ಲಿರುವಾಗಲೇ ಹೆಣ್ಣು ಜೀವಗಳನ್ನು ಬಲಿ ಪಡೆಯುತ್ತಿದ್ದಾರೆ. ಭಾರತದಲ್ಲಿ ಸದ್ಯ ವಾರ್ಷಿಕ ಐದು ಲಕ್ಷ ಭ್ರೂಣ ಹತ್ಯೆಗಳು ನಡೆಯುತ್ತಿವೆ ಎಂದು ಅಂದಾಜಿಸಲಾಗಿದೆ. ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢಗಳಲ್ಲಿ ಈ ದಂಧೆ ಹೆಚ್ಚು ವ್ಯಾಪಕವಾಗಿದೆ. ಕರ್ನಾಟಕವೂ ಕೂಡ ಭ್ರೂಣ ಹತ್ಯೆ ಹೆಚ್ಚಾಗಿ ನಡೆಯುವ ರಾಜ್ಯಗಳಲ್ಲಿ ಒಂದಾಗಿದೆ.

ಭ್ರೂಣ ಹತ್ಯೆಗೆ ಕಾರಣಗಳು ಹಲವು; ಪುತ್ರ ಸಂತಾನದ ಬಗ್ಗೆ ಧರ್ಮಶಾಸ್ತ್ರಗಳಲ್ಲಿರುವ ಉಲ್ಲೇಖಗಳು, ನಮ್ಮ ಸಂಸ್ಕೃತಿಯಲ್ಲಿರುವ ಹೆಣ್ಣನ್ನು ಕುರಿತ ಸಾಂಪ್ರದಾಯಿಕ ಧೋರಣೆ, ಅಜ್ಞಾನ, ವರದಕ್ಷಿಣೆ, ಲೈಂಗಿಕ ದೌರ್ಜನ್ಯಗಳಂಥ ಪಿಡುಗುಗಳು ಭ್ರೂಣ ಹತ್ಯೆಗೆ ಕಾರಣವಾಗುತ್ತಿವೆ. ಭ್ರೂಣ ಹತ್ಯೆಯಿಂದ ಲಿಂಗ ಅಸಮಾನತೆ ಹೆಚ್ಚಾಗುತ್ತಿದೆ.

ಭಾರತದ ಲಿಂಗ ಅನುಪಾತವು (ಪ್ರತಿ 1,000 ಪುರುಷರಿಗೆ ಹೆಣ್ಣು) 2022-23 ರಲ್ಲಿ 933 ರಷ್ಟಿತ್ತು, ಇದು 2015-17 ರಲ್ಲಿ ಸಾರ್ವಕಾಲಿಕ ಕನಿಷ್ಠ 896 ರಿಂದ ಈ ಮಟ್ಟಕ್ಕೆ ಏರಿಕೆಯಾಗಿದೆ. 2023ರ ಅಖಿಲ-ಭಾರತದ ಅನುಪಾತವು 943ಕ್ಕೆ ಹೆಚ್ಚಿದೆ. ಆದರೆ, ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಈ ಅನುಪಾತ ಕಡಿಮೆ ಇದೆ. ದಕ್ಷಿಣದ ಕೇರಳದಲ್ಲಿ ಲಿಂಗ ಅನುಪಾತವು 1084, ತಮಿಳುನಾಡು 995 ಮತ್ತು ಆಂಧ್ರಪ್ರದೇಶದಲ್ಲಿ 992 ಇದ್ದರೆ; ಗುಜರಾತ್‌ನಲ್ಲಿ 918, ಉತ್ತರ ಪ್ರದೇಶ 908 ಮತ್ತು ಹರಿಯಾಣದಲ್ಲಿ 877 ಇದೆ. ಕರ್ನಾಟಕದ ಅನುಪಾತವು 968 ರಷ್ಟಿದೆ. ಆದರೂ ಇದು ಹೆಮ್ಮೆಪಡಬೇಕಾದ ಸಂಗತಿಯೇನಲ್ಲ; ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಮಂಡ್ಯ ಮತ್ತು ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಇನ್ನೂ ವ್ಯಾಪಕವಾಗಿವೆ. ಮಂಡ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂದು ರೈತ ಯುವಕರು ಕೆಲವು ತಿಂಗಳ ಹಿಂದೆ ಕಾಲ್ನಡಿಗೆ ಜಾಥಾ ಮಾಡಿದ್ದರು. ಅದೇ ನಾಡಿನಲ್ಲಿ ಸಾವಿರಾರು ಹೆಣ್ಣು ಜೀವಗಳನ್ನು ಹುಟ್ಟುವ ಮೊದಲೇ ಸಾಯಿಸಲಾಗಿದೆ ಎನ್ನುವುದು ಎಂಥ ವೈರುಧ್ಯ!

ಹೆಣ್ಣು ಭ್ರೂಣಹತ್ಯೆ ಮತ್ತು ಶಿಶುಹತ್ಯೆ ಹೆಣ್ಣು ಮಗುವಿನ ವಿರುದ್ಧದ ತಾರತಮ್ಯದ ಎರಡು ಆರಂಭಿಕ ರೂಪಗಳಾಗಿವೆ. ಶಿಕ್ಷಣ, ಆರೋಗ್ಯ, ಕೆಲಸದ ಅವಕಾಶಗಳು, ವೇತನ ಮತ್ತು ಆಸ್ತಿ ಹಕ್ಕುಗಳಲ್ಲಿ ಇದು ಅವಳ ಜೀವನದುದ್ದಕ್ಕೂ ಮುಂದುವರಿಯುತ್ತದೆ. ಹರ್ಯಾಣ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಇನ್ನೂ ಪ್ರಸವಪೂರ್ವ ಲಿಂಗ ನಿರ್ಣಯ ಕ್ಲಿನಿಕ್‌ಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ.

ದೇಶದಲ್ಲಿ ಗರ್ಭಧಾರಣ ಮತ್ತು ಪ್ರಸವ ಪೂರ್ವ ರೋಗ ನಿಧಾನ ತಂತ್ರಗಳ (ಲಿಂಗ ಆಯ್ಕೆ ನಿಷೇಧ) ಅಧಿನಿಯಮ 1994 ಜಾರಿಯಲ್ಲಿದೆ. ಆದರೂ ಅವ್ಯಾಹತವಾಗಿ ಹೆಣ್ಣು ಭ್ರೂಣಗಳನ್ನು ದಮನ ಮಾಡಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ 2030 ರ ವೇಳೆಗೆ ‘ಲಿಂಗ ಸಮಾನತೆ ಮತ್ತು ಎಲ್ಲ ಮಹಿಳೆಯರ ಸಬಲೀಕರಣ’ವನ್ನು ಸಾಧಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ದೂರದ ಮಾತೇ ಸರಿ. ಬೇಟಿ ಬಚಾವ್ ಬೇಟಿ ಪಢಾವ್‌ ಎಂದು ಘೋಷಣೆ ಮೊಳಗಿಸುವಷ್ಟಕ್ಕೇ ಸೀಮಿತವಾಗಿರುವ ಸರ್ಕಾರಗಳು, ಆದಿಮ ಕಾಲಕ್ಕೆ ಕರೆದೊಯ್ಯುವ ಗಂಡಾಳ್ವಿಕೆ ನಡವಳಿಕೆಗಳು ಹೆಣ್ಣು ಜೀವಕ್ಕೆ ಕಂಟಕಪ್ರಾಯವಾಗಿವೆ. ಈ ವಿಚಾರದಲ್ಲಿ ಕಠಿಣ ಕಾನೂನು ಪಾಲನೆ ಆಗುವುದರ ಜೊತೆಗೆ ಜನರ ಮನಸ್ಥಿತಿಯಲ್ಲೂ ಬದಲಾವಣೆ ತರದ ಹೊರತು ಸುಧಾರಣೆ ಸಾಧ್ಯವೇ ಇಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X