ಈ ದಿನ ಸಂಪಾದಕೀಯ | ಬೆಂಗಳೂರು ನಗರವೋ-ನರಕವೋ, ಕೇಳುವವರಾರು?

Date:

Advertisements
ನಗರ ಅಭಿವೃದ್ಧಿ ಸಚಿವರನ್ನು- ಜನರು, ಸಂಘಟನೆಗಳು, ಮಾಧ್ಯಮಗಳು, ವಿರೋಧಪಕ್ಷಗಳು ಮತ್ತು ಮುಖ್ಯಮಂತ್ರಿಗಳೂ ಪ್ರಶ್ನಿಸದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಬಡವರು ಕೂಡ ಬದುಕಬಹುದಾದ ನಗರವನ್ನಾಗಿಸಿ ಎಂದರೆ, ಕೇಳುವವರಾರು?

ಹೊರಗಿನವರಿಗೆ ಬೆಂಗಳೂರು ಎಂದರೆ ಸಿಲಿಕಾನ್ ವ್ಯಾಲಿ, ಸ್ಟಾರ್ಟ್ ಅಪ್ ಸಿಟಿ, ಎಲೆಕ್ಟ್ರಾನಿಕ್ ಸಿಟಿ, ಕಾಸ್ಮೋ ಸಿಟಿ, ಕೋರಮಂಗಲ, ಡಾಲರ್‍ಸ್ ಕಾಲನಿ, ವಿಧಾನಸೌಧ, ಕಬ್ಬನ್ ಪಾರ್ಕ್ ನೆನಪಾಗಬಹುದು. ಉತ್ತಮ ಹವಾಮಾನ, ಅತ್ಯಾಧುನಿಕ ನಗರ, ಸಹಿಷ್ಣು ಜನರಿಂದ ಅದ್ಭುತವೆನಿಸಬಹುದು. ಆದರೆ ಬೆಂಗಳೂರಿನಲ್ಲಿ ವಾಸಿಸುವ ಜನಕ್ಕೆ ಇದು ನಗರವೋ-ನರಕವೋ ಹೇಳಲಾಗುತ್ತಿಲ್ಲ. ಅದರಲ್ಲೂ, ಕಳೆದ ಒಂದು ವರ್ಷದಿಂದ ಬೆಂಗಳೂರು, ಬೆಂಗಳೂರಾಗಿ ಉಳಿದಿಲ್ಲ. ಯುದ್ಧಪೀಡಿತ ಪ್ರದೇಶದಂತೆ ಕಾಣುತ್ತಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಒಂದು ಅಂದಾಜಿನಂತೆ, ಬೆಂಗಳೂರು ನಗರಕ್ಕೆ ಪ್ರತಿದಿನ ಎರಡು ಸಾವಿರ ವಾಹನಗಳು ರಸ್ತೆಗಿಳಿಯುತ್ತಿವೆ. ಅವುಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆಯೂ ಸಂದಾಯವಾಗುತ್ತಿದೆ. ಆದರೆ ಅವು ಓಡಾಡಲಿಕ್ಕಿರುವ ರಸ್ತೆಗಳು, ಕಳೆದ ಐದು ವರ್ಷಗಳ ಹಿಂದೆ ಎಷ್ಟಿದ್ದವೋ, ಇಂದು ಕೂಡ ಅಷ್ಟೇ ಇವೆ. ಹಲವಾರು ಕಡೆ ಬಳಸಲು ಯೋಗ್ಯವಾಗಿದ್ದ ಟಾರ್ ರಸ್ತೆಗಳನ್ನು ವೈಟ್ ಟಾಪಿಂಗ್ ನೆಪದಲ್ಲಿ ಕಿತ್ತುಹಾಕಲಾಗಿದೆ. ಅಳಿದುಳಿದ ರಸ್ತೆಗಳು ಟಾರ್ ಕೂಡ ಕಾಣದೆ ಗುಂಡಿ ಬಿದ್ದಿವೆ. ಜನನಿಬಿಡ ರಸ್ತೆಗಳ ಪಕ್ಕದಲ್ಲಿ ಕೇಬಲ್ ಅಳವಡಿಸಲು ಆಳುದ್ದ ಗುಂಡಿ ತೋಡಿ, ಮುಚ್ಚದೆ ಬಿಟ್ಟು ಅದೆಷ್ಟೋ ತಿಂಗಳಾಗಿದೆ.

ಇದೇ ಸಂದರ್ಭದಲ್ಲಿ ನಗರದಲ್ಲಿ ಮಳೆ ಸುರಿದಿದೆ. ಗುಂಡಿಗಳಿಗೆ ಮಳೆ ನೀರು ತುಂಬಿ, ಜನ ಬಿದ್ದು ಸತ್ತರೂ ಗೊತ್ತಾಗುವುದಿಲ್ಲ. ರಸ್ತೆ ಬದಿಯ ಗಿಡ-ಮರಗಳ ಕೊರಳಿಗೆ ಕೇಬಲ್ ತಂತಿಗಳದೇ ಅಲಂಕಾರ. ಧಾವಂತದ ಬದುಕಿನ ನಗರವಾಸಿಗಳಿಗೆ ಅದೇ ಉರುಳಾದರೂ, ಕೇಳುವವರಿಲ್ಲ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪೊಲೀಸರ ಬಂದೂಕಿನ ನ್ಯಾಯ ಸಮಾಜಕ್ಕೆ ಮಾರಕ

ಹೀಗಿದ್ದರೂ, ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದು ಪ್ರಶ್ನಿಸುವ, ಬೀದಿಗಿಳಿದು ಪ್ರತಿಭಟಿಸುವ ಕೆಚ್ಚನ್ನು ತೋರುತ್ತಿಲ್ಲ. ಅದಕ್ಕೆ ಬಡ-ಮಧ್ಯಮವರ್ಗದವರ ಜಂಜಾಟದ ಬದುಕು ಕಾರಣವಿರಬಹುದು. ಅದರೊಂದಿಗೆ ಕಂಫರ್ಟ್ ಜೋನ್‌ನಲ್ಲಿರುವವರ ಅಸೀಮ ನಿರ್ಲಕ್ಷ್ಯವೂ ಜೊತೆಯಾಗಿರಬಹುದು. ಒಟ್ಟಿನಲ್ಲಿ ಜನರ ಈ ಅಸಹಾಯಕತೆ ಮತ್ತು ಸಹಿಷ್ಣು ಗುಣ- ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲವಾಗಿದೆ.

ಇದಕ್ಕೆ ಅಪವಾದವೆಂಬಂತೆ, ಮೊನ್ನೆ ಬೆಂಗಳೂರು ನಗರದ ಹದಗೆಟ್ಟ ರಸ್ತೆಗಳ ವಿರುದ್ಧ ಐಟಿ ವೃತ್ತಿಪರರು ಪ್ರತಿಭಟಿಸಿದರು. ಪಣತ್ತೂರು ಪ್ರದೇಶದ ಹೊರವರ್ತುಲ ರಸ್ತೆಯಲ್ಲಿ ‘ಐ ಪೇಯ್ಡ್ ಟ್ಯಾಕ್ಸಸ್ ಫಾರ್ ರೋಡ್ಸ್, ನಾಟ್ ಫಾರ್ ಎ ರೋಲರ್ ಕೋಸ್ಟರ್’ ಎಂಬ ಬರಹವುಳ್ಳ ಟಿ ಶರ್ಟ್ ಧರಿಸಿ, ಹಾಡು ಹಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದರು. ಪ್ರತಿಭಟನೆಯ ವಿಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದರು.

ಐಟಿ ವೃತ್ತಿಪರರ ಪ್ರತಿಭಟನೆಗೆ ಕೆಲವರು ಬೆಂಬಲ ಸೂಚಿಸಿದರು, ಪ್ರತಿಕ್ರಿಯಿಸಿದರು. ಇನ್ನು ಕೆಲವರು ಕೆಟ್ಟ-ಭ್ರಷ್ಟ ರಾಜಕಾರಣಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಇದು ತೀರಾ ಸಣ್ಣ ಮಟ್ಟದ ಪ್ರತಿಭಟನೆಯಾದರೂ, ಅದು ಪ್ರಜಾಪ್ರಭುತ್ವದ ಭಾಗವಾಗಿರುವುದರಿಂದ, ಪ್ರೋತ್ಸಾಹಿಸುವ ಅಗತ್ಯವಿದೆ. ಆದರೆ, ಈ ಪ್ರಶ್ನೆ, ಪ್ರತಿಭಟನೆ, ಟೀಕೆ, ಆಕ್ರೋಶಗಳೆಲ್ಲ ಸೋಷಿಯಲ್ ಮೀಡಿಯಾಗಳಿಗಷ್ಟೇ ಸೀಮಿತವಾಗಬಾರದು. ಕಾಲದ ಹೊಡೆತಕ್ಕೆ ಸಿಕ್ಕಿ ಸಾಯಬಾರದು.

ಏಕೆಂದರೆ ಆಳುವ ಸರ್ಕಾರದ ಹಲ್ಲಂಡೆಗಳನ್ನು ಹೆಕ್ಕಿ ತೆಗೆದು ಜನರ ಮುಂದಿಡಬೇಕಾದ ಮಹತ್ವದ ಜವಾಬ್ದಾರಿ ಹೊತ್ತ ಮಾಧ್ಯಮಗಳು, ಜಾಹೀರಾತಿನ ಮರ್ಜಿಗೊಳಗಾಗಿ ಪ್ರಶ್ನಿಸುವುದನ್ನು ಮರೆತು ಕೂತಿವೆ. ಪ್ರಭುತ್ವದೊಂದಿಗೆ ಶಾಮೀಲಾಗಿ ಜನರ ನಿರೀಕ್ಷೆಗಳನ್ನು ಮಣ್ಣುಪಾಲು ಮಾಡಿವೆ. ಸಂಘಟನೆಗಳ ನಾಯಕರು- ಕೆಲವರು ಜನಪರ, ಹಲವರು ಹಣಪರವಾಗಿದ್ದಾರೆ. ಆಳುವವರ ಅನುಕೂಲಕ್ಕೆ ತಕ್ಕಂತೆ ‘ಹೋರಾಟ’ ಕಟ್ಟುವ ಸೀಸನ್ ನಾಯಕರಾಗಿದ್ದಾರೆ.

ಇನ್ನು ಆಳುವ ಸರ್ಕಾರವನ್ನು ಹತ್ತಿರದಿಂದ ಬಲ್ಲ, ಅವರು ಕೂಡ ಅಧಿಕಾರದಲ್ಲಿದ್ದು ಈಗ ವಿರೋಧ ಪಕ್ಷದಲ್ಲಿರುವವರು, ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ವಿರೋಧ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸುವುದು, ಇಕ್ಕಟ್ಟಿಗೆ ಸಿಲುಕಿಸುವುದು, ಸತ್ಯ ಹೊರಹಾಕುವುದನ್ನು ಮರೆತು ಎಷ್ಟೋ ಕಾಲವಾಗಿದೆ. ಆಳುವ ಪಕ್ಷವನ್ನು ದೊಡ್ಡ ಗಂಟಲಿನಲ್ಲಿ ಟೀಕಿಸುತ್ತಾರೆ- ಅದು ಫೋಟೋಗಳಿಗಾಗಿ, ಮಾಧ್ಯಮಗಳ ಸುದ್ದಿಗಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಲಿಕ್ಕಾಗಿ, ಪಕ್ಷದ ವರಿಷ್ಠರ ಗಮನ ಸೆಳೆಯಲಿಕ್ಕಾಗಿ.

ಇನ್ನು ಈ ನಗರದ ಬಗ್ಗೆ ಮಾತನಾಡುವವರು ಯಾರು?

ಇವುಗಳ ನಡುವೆಯೇ ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬದಲಿಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಕಳೆದ ಫೆಬ್ರವರಿಯಲ್ಲಿ ಲೋಕಾಯುಕ್ತ, ಸಿಬಿಐ, ಇ.ಡಿ.ಗೆ ದೂರು ನೀಡಿದ್ದರು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ರಾಜಕಾಲುವೆ ಕಾಮಗಾರಿ ವಿಚಾರದಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಅಕ್ರಮವಾಗಿದೆ ಎಂದು ಆರೋಪಿಸಿ, ಕೆಲ ದಾಖಲೆಗಳ ಮೂಲಕ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆಂದು ತಿಳಿದುಬಂದಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ ಒಪ್ಪುತ್ತಿಲ್ಲ – ಮೋದಿಗೆ ಮತ್ತೊಬ್ಬ ‘ರಬ್ಬರ್‌ ಸ್ಟ್ಯಾಂಪ್‌’ ಸಿಗುತ್ತಿಲ್ಲ!

ಇದು ನಿಜಕ್ಕೂ ಗಂಭೀರ ವಿಷಯ. ಆದರೆ, ದೂರು ಕೊಟ್ಟಿರುವ ವ್ಯಕ್ತಿ ಕೂಡ ಕುಖ್ಯಾತಿ ಗಳಿಸಿರುವವರು. ಅಂಥದ್ದೇ ಅಕ್ರಮ-ಅಧ್ವಾನಗಳನ್ನು ಮಾಡಿ ಜೈಲಿನಲ್ಲಿದ್ದು ಬಂದವರು. ಡಿ.ಕೆ. ಶಿವಕುಮಾರ್ ಕೂಡ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜೈಲುವಾಸ ಅನುಭವಿಸಿದವರು. ಈಗ ಎದುರಾಬದುರಾ ನಿಂತಿದ್ದಾರೆ. ಬೇರೆ ಬೇರೆ ಪಕ್ಷಗಳಲ್ಲಿದ್ದಾರೆ. ಅದು ಸುದ್ದಿಮಾಧ್ಯಮಗಳಿಗೆ ಒಂದಷ್ಟು ಸರಕಾಗಬಹುದೇ ಹೊರತು, ಜನರಿಗೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ.

ಏನತ್ಮಧ್ಯೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೂಡ, ಡಿಸಿಎಂ ಡಿ.ಕೆ. ಶಿವಕುಮಾರ್ ಖಾತೆ ಬಗ್ಗೆ ಕೇಳದೆ, ಕೈ ಹಾಕದೆ ಕಣ್ಮುಚ್ಚಿ ಕೂತಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಹೊಸತರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಟಿ ರೌಂಡ್ಸ್ ಹಮ್ಮಿಕೊಂಡಿದ್ದರು. ನಗರವಾಸಿಗಳ ಕಷ್ಟ-ಕೋಟಲೆಗಳನ್ನು ಕಣ್ಣಾರೆ ಕಂಡಿದ್ದರು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಭರವಸೆ ಈಡೇರಿತೋ-ಇಲ್ಲವೋ, ಅದು ಬೇರೆ. ಅಧಿಕಾರಿಗಳ ಮಟ್ಟದಲ್ಲಾದರೂ ಸ್ವಲ್ಪ ಹೆದರಿಕೆ ಹುಟ್ಟಿಸುತ್ತಿತ್ತು. ಈಗ ಅಂತಹ ನೆಪಮಾತ್ರದ ಸಿಟಿ ರೌಂಡ್ಸ್ ಕೂಡ ಇಲ್ಲವಾಗಿದೆ.

ಅಂದರೆ, ನಗರ ಅಭಿವೃದ್ಧಿ ಸಚಿವರನ್ನು- ಜನರು, ಸಂಘಟನೆಗಳು, ಮಾಧ್ಯಮಗಳು, ವಿರೋಧಪಕ್ಷಗಳು ಮತ್ತು ಮುಖ್ಯಮಂತ್ರಿಗಳೂ ಪ್ರಶ್ನಿಸದ ವಾತಾವರಣ ಸೃಷ್ಟಿಯಾಗಿದೆ. ಅವರ ಜಾತಿಬಲ, ಹಣ-ಅಧಿಕಾರದ ಬಲದೆದುರು ಎಲ್ಲರ ಸದ್ದಡಗಿದೆ. ಅಭಿವೃದ್ಧಿ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ‘ಕಾಮಗಾರಿ’ ಕೊಚ್ಚಿಹೋಗುತ್ತಿದೆ.

ಇಂತಹ ಸಂದರ್ಭದಲ್ಲಿ ಬಡವರು, ಗುಳೆ ಬಂದವರು, ಕೂಲಿ ಕಾರ್ಮಿಕರು ಮತ್ತು ಮಧ್ಯಮವರ್ಗದವರು ಕೂಡ ಬದುಕಬಹುದಾದ ನಗರವನ್ನಾಗಿಸಿ ಎಂದರೆ, ಕೇಳುವವರಾರು?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X