ಯುದ್ಧ ಎಂಬುದು ಕೇವಲ ಎರಡು ದೇಶಗಳ ನಡುವಿನ ಕಾದಾಟವಲ್ಲ; ಹಿಂಸೆ, ಸಾವು, ಸಂಕಟಗಳ ಸಾಗರ. ಅದು ಸಮಾಜ ಮತ್ತು ದೇಶದ ಸರ್ವನಾಶ. ಮನುಕುಲದ ವಿನಾಶ...
‘ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ. ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಹಲ್ಗಾಮ್ ಉಗ್ರ ದಾಳಿ ಕುರಿತು ಹೇಳಿದ್ದರು.
ಇದು ಜವಾಬ್ದಾರಿಯುತ ನಾಯಕ ಆಡುವ ಮಾತುಗಳು. ಎಲ್ಲರ ಒಳಿತನ್ನು ಬಯಸುವ ಮನುಕುಲದ ಮಾತುಗಳು.
ಆದರೆ ಸಂಘೀ ಮನಸ್ಥಿತಿಯ ಪತ್ರಕರ್ತರು ಸಿದ್ದರಾಮಯ್ಯನವರ ಪತ್ರಿಕಾ ಹೇಳಿಕೆಯನ್ನು ಅವರ ಮನಸ್ಥಿತಿಗೆ ಒಗ್ಗುವಂತಹ- ಅವರಿಗೆ ಬೇಕಾದಂತಹ- ಭಾಗವಾದ ‘ಯುದ್ಧ ಬೇಕಿಲ್ಲ’ ಎಂಬುದನ್ನು ಮಾತ್ರ ಹೆಕ್ಕಿ ತೆಗೆದು ಸುದ್ದಿ ಮಾಡಿದರು. ಅದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಅಭಿಪ್ರಾಯ ಸಂಗ್ರಹಿಸಿ, ಸೃಷ್ಟಿಸಿದ ಸುದ್ದಿಗೆ ಶಕ್ತಿ ತುಂಬಿದರು. ಸುಳ್ಳಿನ ಗೋಪುರವನ್ನೇ ಕಟ್ಟಿದರು, ಸತ್ಯವೆಂದು ಸಾರಿದರು.
ಮುಖ್ಯಮಂತ್ರಿಗಳ ಹೇಳಿಕೆ ಪತ್ರಿಕೆಗಳಲ್ಲಿ/ಟಿವಿಗಳಲ್ಲಿ ಪ್ರಕಟವಾದ ನಂತರ, ಅದನ್ನು ಮುಂದಿಟ್ಟುಕೊಂಡ ಬಿಜೆಪಿ ಮತ್ತು ಸಂಘಪರಿವಾರ, ”ಉಗ್ರರ ಗುಂಡಿಗೆ ಬಲಿಯಾದ ಹಿಂದೂಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರುಕವಿಲ್ಲ. ದೇಶದ್ರೋಹಿಗಳಾದ ಮುಸ್ಲಿಮರ ಪರವಾಗಿದ್ದಾರೆ, ಉಗ್ರ ಪಾಕಿಸ್ತಾನಿಗಳನ್ನು ಬೆಂಬಲಿಸುತ್ತಿದ್ದಾರೆ, ‘ಯುದ್ಧ ಬೇಕಿಲ್ಲ’ ಎಂದು ಹೇಳುತ್ತಿದ್ದಾರೆ” ಎಂದು ನರೇಟಿವ್ ಕಟ್ಟಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಒಳಮೀಸಲಾತಿ ಗಣತಿ ಚಾರಿತ್ರಿಕ ದಾಖಲೆ, ತಪ್ಪದೇ ಭಾಗಿಯಾಗಿರಿ
ಅದಕ್ಕಾಗಿಯೇ ಕಾಯುತ್ತಿದ್ದ ಸಂಘೀ ಪತ್ರಕರ್ತರು, ಅದಕ್ಕೆ ಮಸಾಲೆ ಬೆರೆಸಿ ಬೆಂಕಿ ಹಚ್ಚಿದರು. ಅದನ್ನು ಬಿಜೆಪಿ ಐಟಿ ಸೆಲ್‌ನ ಸೈನಿಕರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದರು. ದಿನ ಬೆಳಗಾಗುವುದರೊಳಗೆ ಸಿದ್ದರಾಮಯ್ಯನವರು ಉಗ್ರರ ಪರ ನಿಂತ ನಾಯಕನಾಗಿ ಚಿತ್ರಿಸಲ್ಪಟ್ಟರು. ಅಷ್ಟೇ ಅಲ್ಲ, ಅದನ್ನು ವಾಘಾ ಗಡಿ ದಾಟಿಸಿ ಪಾಕಿಸ್ತಾನಕ್ಕೆ ಮುಟ್ಟಿಸಿದರು. ಆನಂತರ, ದಿಲ್ಲಿಯ ಬಿಜೆಪಿಯ ನಾಯಕರು ಅದನ್ನು ರಾಷ್ಟ್ರೀಯ ಅಭಿಯಾನವನ್ನಾಗಿ ಮಾರ್ಪಡಿಸಿದರು. ಸಿದ್ದರಾಮಯ್ಯನವರಿಗೆ ‘ನಿಶಾನಾ ಪಾಕಿಸ್ತಾನ್’ ಪ್ರಶಸ್ತಿ ಕೊಡಿಸಿ, ಲೇವಡಿ ಮಾಡಿದರು.
ಬಿಜೆಪಿ ಮತ್ತು ಸಂಘಪರಿವಾರದವರು ಮಾಡಬೇಕಾದ ಕೆಲಸಗಳನ್ನು ಮರೆಮಾಚಿ, ಮೆದುಳು ಕದಿಯುವುದರಲ್ಲಿ ನಿಪುಣರು. ತಮ್ಮ ವಿರೋಧಿಗಳ ಚಾರಿತ್ರ್ಯಹರಣ ಮಾಡುವುದರಲ್ಲಿ ನಿಸ್ಸೀಮರು. ಕಳೆದ ಹನ್ನೊಂದು ವರ್ಷಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿಷಯದಲ್ಲಿ, ‘ಪಪ್ಪು’ ಎಂದು ಬ್ರ್ಯಾಂಡ್ ಮಾಡುವುದರಲ್ಲಿ ಯಶಸ್ಸು ಕಂಡವರು. ಅದರ ಬಲದಿಂದ ಅಧಿಕಾರ ಪಡೆದವರು. ಈಗ ಸಿದ್ದರಾಮಯ್ಯನವರ ವಿಷಯದಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ. ಅವರ ಪ್ರತಿ ನಡೆಯಲ್ಲೂ ಮುಸ್ಲಿಂ ಹುಡುಕುತ್ತಿದ್ದಾರೆ. ಸಿದ್ರಾಮುಲ್ಲಾ ಖಾನ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಏತನ್ಮಧ್ಯೆ ‘ನಮ್ಮ ಮೋದಿ’ ಎಂಬ ಫೇಸ್‌ಬುಕ್ ಪುಟದಲ್ಲಿ ಎಐ ತಂತ್ರಜ್ಞಾನ ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ ವಿಡಿಯೋ ಸೃಷ್ಟಿಸಿ ಪೋಸ್ಟ್ ಮಾಡಿದ್ದಾರೆ. 2 ಲಕ್ಷ ಚಂದಾದಾರರು ಇರುವ ಈ ‘ನಮ್ಮ ಮೋದಿ’ ಪುಟದಲ್ಲಿ ಪ್ರಕಟವಾದ ವಿಡಿಯೋವನ್ನು ಅಂಧಭಕ್ತರು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸಾವಿರಾರು ಜನ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ.
ಇದರಿಂದೆಲ್ಲ ವಿಚಲಿತರಾದ ಸಿದ್ದರಾಮಯ್ಯನವರು, ‘ಭಾರತ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಅವರ ನಾಡು. ಇಲ್ಲಿ ಭಯೋತ್ಪಾದನೆಗೆ, ಅಶಾಂತಿಗೆ ಅವಕಾಶ ಇಲ್ಲ. ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ದ ಎನ್ನುವ ಮಾತನ್ನು ನೆನ್ನೆ ನಾನು ಹೇಳಿದ್ದೆ. ಆದರೆ ಭಯೋತ್ಪಾದಕರ ವಿರುದ್ಧ, ಪಾಕಿಸ್ತಾನದ ವಿರುದ್ಧ ಯುದ್ಧವೇ ಬೇಡ ಎಂದು ಹೇಳಿದ್ದೇನೆ ಎಂದು ಸುಳ್ಳು ಸುಳ್ಳೇ ಬಿಜೆಪಿ ಪ್ರಚಾರ ಮಾಡುತ್ತಿದೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಆಗಲೂ, ಸಂಘೀ ಮನಸ್ಥಿತಿಯ ಪತ್ರಕರ್ತರು, ‘ಪಾಕಿಸ್ತಾನದೊಂದಿಗೆ ಯುದ್ಧದ ಅವಶ್ಯಕತೆ ಇಲ್ಲ ಎಂಬ ತಮ್ಮ ಹೇಳಿಕೆಗೆ ತೀವ್ರ ವಿರೋಧ ಹಾಗೂ ಪಾಕಿಸ್ತಾನ ಮಾಧ್ಯಮಗಳಿಂದ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವು ಬದಲಿಸಿದ್ದಾರೆ’ ಎಂದು ಬರೆದರೇ ಹೊರತು, ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡತನ ತೋರಲಿಲ್ಲ. ಈ ಪತ್ರಕರ್ತರನ್ನು ಸಂಭಾಳಿಸುತ್ತಿರುವ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಿಗೆ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ‘ಇದು ಮುಖ್ಯಮಂತ್ರಿಗಳಿಗೆ ಮಾಡುತ್ತಿರುವ ಅವಮಾನ’ ಎನಿಸಲಿಲ್ಲ.
ಸೋಜಿಗದ ಸಂಗತಿ ಎಂದರೆ, ಪಹಲ್ಗಾಮ್ ದಾಳಿ ಕುರಿತು ಆರ್‍ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ‘ನಾವು ಎಂದಿಗೂ ನಮ್ಮ ನೆರೆಹೊರೆಯವರಿಗೆ ಅವಮಾನ ಮತ್ತು ಹಾನಿ ಮಾಡುವುದಿಲ್ಲ’ ಎಂದಿದ್ದಾರೆ. ಇದು ಪಾಕಿಸ್ತಾನ ಪರವಾದ ಹೇಳಿಕೆಯಾಗುವುದಿಲ್ಲವೇ? ಹಾಗೆಯೇ ಮುಂದುವರೆದು, ‘ಅಹಿಂಸೆ ನಮ್ಮ ಗುಣ, ನಮ್ಮ ಧರ್ಮ’ ಎಂದೂ ಹೇಳಿದ್ದಾರೆ. ಇದು ಯುದ್ಧ ಬೇಡ ಎಂಬುದನ್ನು ಧ್ವನಿಸುವುದಿಲ್ಲವೇ? ಮೋಹನ್ ಭಾಗವತ್ ಕೂಡ ಅಹಿಂಸೆಯ ಮಾತಾಡಿದ್ದಾರೆ… ಹಾಗಾದರೆ ‘ಯುದ್ಧ ಅಂತಿಮ ಆಯ್ಕೆ’ ಎಂಬ ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ತಪ್ಪೇನಿದೆ?
ಅಸಲಿಗೆ, ಪಹಲ್ಗಾಮ್ ಪ್ರತೀಕಾರಕ್ಕೆ ಪಾಕಿಸ್ತಾನದ ಮೇಲೆ ಯುದ್ಧ ಸಾರಲು ಪ್ರೇರೇಪಿಸುತ್ತಿರುವವರು- ಬಿಜೆಪಿ, ಸಂಘಪರಿವಾರ ಮತ್ತು ಸಂಘೀ ಪತ್ರಕರ್ತರೆಂಬ ಯುದ್ಧದಾಹಿಗಳು. ಆದರೆ, ಇವರು ಗಲ್ವಾನ್ ಕಣಿವೆ ಆಕ್ರಮಿಸಿಕೊಂಡಿರುವ ಚೀನಾವನ್ನು ಪ್ರಶ್ನಿಸಲಾರದ ಪುಕ್ಕಲರು. ಹಾಗೆಯೇ ನೇಪಾಳ, ಶ್ರೀಲಂಕಾ, ಬಾಂಗ್ಲಾ, ಭೂತಾನ್, ಮಯನ್ಮಾರ್‍ಗಳು ಚೀನಾದ ತೆಕ್ಕೆಯಲ್ಲಿವೆ ಎನ್ನುವುದನ್ನು ಅರಿಯದ ಅವಿವೇಕಿಗಳು. ಭಾರತ ಅಮೆರಿಕಾಕ್ಕೆ ಹತ್ತಿರವಾದಂತೆ, ಪಾಕಿಸ್ತಾನ ಚೀನಾಕ್ಕೆ ಹತ್ತಿರವಾಗಿದೆ ಎನ್ನುವ ಅಂದಾಜಿಲ್ಲದ ಅಂಧರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
ಅಷ್ಟಕ್ಕೂ ಸಿದ್ದರಾಮಯ್ಯನವರು ಆಡಿರುವ ‘ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ, ಯುದ್ಧ ಅಂತಿಮ ಆಯ್ಕೆಯಾಗಿರಬೇಕು’ ಎಂಬುದು ಮನುಕುಲದ ಮಾತು. ಮಾನವೀಯ ಮಿಡಿತ. ಯುದ್ಧ ಎಂಬುದು ಕೇವಲ ಎರಡು ದೇಶಗಳ ನಡುವಿನ ಕಾದಾಟವಲ್ಲ; ಹಿಂಸೆ, ಸಾವು, ಸಂಕಟಗಳ ಸಾಗರ. ಅದು ಸಮಾಜ ಮತ್ತು ದೇಶದ ಸರ್ವನಾಶ. ಅದನ್ನು ನಾವು ನಮ್ಮ ಕಾಲದಲ್ಲಿಯೇ ಇರಾಕ್, ಅಫಘಾನಿಸ್ತಾನ, ಗಾಜಾ, ಉಕ್ರೇನ್‌ನಲ್ಲಿ ಕಾಣುತ್ತಿದ್ದೇವೆ.
ಹಾಗಾಗಿ ಸಿದ್ದರಾಮಯ್ಯನವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ವಿನಾಶ ಬಯಸುವ ಯುದ್ಧೋನ್ಮಾದದ ‘ವೀರ’ಕೇಸರಿಗಳ ಬೆದರಿಕೆಗಳಿಗೆ ಬಗ್ಗದೆ ಮುನ್ನಡೆಯುವುದೊಳಿತು.