ಮೋಹನ್ ಭಾಗವತ್ ಅವರ ಮಾತುಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೋರಿದ ‘ಪ್ರದರ್ಶನ’ದ ವಿಚಾರವಾಗಿ ನಡೆದ ಆತ್ಮಾವಲೋಕನದ ಪ್ರತಿಫಲನವೇ ಹೊರತು ಜನಪರ ನಿಲುವಲ್ಲ. ಹಾಗಾಗಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವೆ ಅಭಿಪ್ರಾಯಭೇದ ಇದೆ ಎಂಬುದೆಲ್ಲ ಸುದ್ದಿ ಮಾಧ್ಯಮಗಳು ಸೃಷ್ಟಿಸುವ ಸುಳ್ಳಿನ ಕಂತೆ ಎಂಬುದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ.
‘ಮನುಷ್ಯ ತನ್ನಷ್ಟಕ್ಕೆ ತಾನು ಸೂಪರ್ ಮ್ಯಾನ್ ನಂತಾಗಲು ಪ್ರಯತ್ನಿಸಬಹುದು. ಆನಂತರ ದೇವರಾಗಲು, ಭಗವಂತನಾಗಲು ಬಯಸಬಹುದು. ತಾನೇ ವಿಶ್ವರೂಪದ ಪ್ರತೀಕ ಎಂಬಂತಾಗಲು ಇನ್ನಿಲ್ಲದ ಕಸರತ್ತುಗಳಿಗೆ ಕೈಹಾಕಬಹುದು. ಆದರೆ, ಮುಂದೇನಾಗುತ್ತದೆ ಎಂದು ಹೇಳಲಾಗದು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಭಾಗವತ್ ಅವರ ಮಾತುಗಳನ್ನು ದೇಶದ ಸುದ್ದಿ ಮಾಧ್ಯಮಗಳು, ಮೇಲಿಂದ ಉದುರಿದ ಆಣಿಮುತ್ತುಗಳೆಂದು ಭ್ರಮಿಸುತ್ತವೆ. ಆದ್ಯತೆ ನೀಡಿ ಪ್ರಕಟಿಸುತ್ತವೆ. ಮತ್ತು ಆ ಮಾಧ್ಯಮಗಳೇ, ಭಾಗವತರ ಮಾತುಗಳನ್ನು ಪ್ರಧಾನಿ ಮೋದಿಯವರ ವರ್ತನೆ ಕುರಿತು ಪರೋಕ್ಷವಾಗಿ ಮಾಡಿರುವ ಟೀಕೆ, ಎಚ್ಚರಿಕೆ ಎಂದು ಗ್ರಹಿಸಬೇಕಾಗುತ್ತದೆ ಎಂದು ಅಪ್ಪಣೆ ಕೊಡಿಸುತ್ತವೆ. ಮುಂದುವರೆದು ಮೋದಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಬಂಧ ಹಿಂದಿನಂತಿಲ್ಲ, ಹಳಸಿಕೊಂಡಿದೆ ಎಂಬ ತೀರ್ಮಾನಕ್ಕೂ ಬರುತ್ತವೆ.
ಆದರೆ, ಪ್ರಧಾನಿ ಮೋದಿಯವರು ಈ ಬಗ್ಗೆ ಬೇಸರ ಮಾಡಿಕೊಳ್ಳುವುದಿಲ್ಲ; ಭಾಗವತರು, ನಾನು ಹೇಳಿದ್ದು ಮೋದಿಗಲ್ಲ ಎಂದು ಸ್ಪಷ್ಟಪಡಿಸುವುದಿಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿ, ಮೋದಿ ಮತ್ತು ಭಾಗವತ್- ನಡುವಿನ ಕೆಲ ‘ಆಣಿಮುತ್ತು’ಗಳು ಇಲ್ಲಿವೆ, ಗಮನಿಸಿ.
ಮೇ 23, 2024ರಂದು ಪ್ರಧಾನಿ ಮೋದಿಯವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ನಾನು ಜೈವಿಕವಾಗಿ ಜನಿಸಿಲ್ಲ, ನನ್ನನ್ನು ಪರಮಾತ್ಮನೇ ಕಳುಹಿಸಿದ್ದು, ದೇವರು ತನ್ನ ಕೆಲಸವನ್ನು ನನ್ನ ಮೂಲಕ ಮಾಡಿಸಲು ನನಗೆ ಶಕ್ತಿ, ಸಾಮರ್ಥ್ಯ, ಉದ್ದೇಶವನ್ನು, ಪ್ರೇರಣೆಯನ್ನು ನೀಡಿದ್ದಾನೆ’ ಎಂದಿದ್ದರು.
ಪ್ರಶ್ನೆ ಏನೆಂದರೆ, ಆ ಸಂದರ್ಭದಲ್ಲಿ ದೇಶ ಇನ್ನೂ ಎರಡು ಹಂತಗಳ- ಮೇ 25 ಮತ್ತು ಜೂನ್ 1ರ ಲೋಕಸಭಾ ಚುನಾವಣೆಯ ಮತದಾನ ಬಾಕಿ ಇತ್ತು. ಹಿರಿಯರು, ಬುದ್ಧಿ ಇರುವ ಭಾಗವತರು ಆ ಸಂದರ್ಭದಲ್ಲಿಯೇ ‘ಹಾಗೆಲ್ಲ ಮಾತಾಡಬಾರದು, ಅಪದ್ಧ’ ಎಂಬ ಎಚ್ಚರಿಕೆಯನ್ನು ಏಕೆ ಕೊಡಲಿಲ್ಲ?
ವಿಪರ್ಯಾಸವೆಂದರೆ, ಜನವರಿ 23, 2024ರಂದು ಇದೇ ಭಾಗವತರು, ಅಯೋಧ್ಯೆಯ ರಾಮ ಪ್ರಾಣ ಪ್ರತಿಷ್ಠಾಪನೆಗೂ ಮುಂಚೆ ಮೋದಿಯವರು ಕೈಗೊಂಡ ಕಠಿಣ ಧಾರ್ಮಿಕ ವ್ರತಾಚರಣೆಗಳನ್ನು ಕುರಿತು ‘ಅವರೊಬ್ಬ ತಪಸ್ವಿ’ ಎಂದು ಹಾಡಿ ಹೊಗಳಿದ್ದರು. ಚುನಾವಣೆಯ ಮುಂಚೆ ತಪಸ್ವಿಯಾಗಿದ್ದವರು, ಚುನಾವಣೆಯ ನಂತರ ತೆಪರೇಸಿಯಾದರೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರೀಲ್ಸ್ ಹುಚ್ಚಿಗೆ ಬಲಿಯಾಗುತ್ತಿದೆ ಯುವಜನಾಂಗ; ಹುಸಿ ಲೈಕ್ಸ್ ಮುಂದೆ ಪ್ರಾಣಗಳೂ ಅಗ್ಗವಾದವೇ?
ಏಪ್ರಿಲ್ 23, 2024ರಂದು ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ಮೋದಿಯವರು, ‘ನಿಮ್ಮ ಮಂಗಳಸೂತ್ರ ಕಿತ್ತು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವವರಿಗೆ ಹಂಚಲಾಗುತ್ತದೆ, ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರು ಮೊದಲ ಹಕ್ಕು ಹೊಂದಿದ್ದಾರೆ’ ಎಂದರು.
ಪ್ರಧಾನಿ ಮೋದಿಯವರ ಈ ಹೇಳಿಕೆ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಗ್ರಹಿಸಿದ ಆರ್‌ಎಸ್‌ಎಸ್‌ನ ಭಾಗವತರು, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ತೆಲಂಗಾಣದಲ್ಲಿ ಮಾತನಾಡುತ್ತಾ, ‘ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂಬುದೆಲ್ಲ ಸುಳ್ಳು. ಆರ್‌ಎಸ್‌ಎಸ್ ಯಾವುದೇ ಷರತ್ತುಗಳಿಲ್ಲದೆ ಮೀಸಲಾತಿಯನ್ನು ಬೆಂಬಲಿಸುತ್ತದೆ. ಸಮಾಜದಲ್ಲಿ ಇಂದಿಗೂ ಕೆಲವು ಗುಂಪುಗಳಲ್ಲಿ ತಾರತಮ್ಯಗಳಿವೆ. ಅವರಿಗೆ ಮೀಸಲಾತಿ ಅಗತ್ಯವಾಗಿದೆ’ ಎಂದಿದ್ದರು.
ಅಂದರೆ, ಆರ್‌ಎಸ್‌ಎಸ್ ಎಂಬ ಹಿಂದೂಪರ ಸಂಘಟನೆ ಬಿಜೆಪಿಯ ಬೆನ್ನಿಗಿದೆ. ಪ್ರಧಾನಿ ಮೋದಿಯವರು ದ್ವೇಷಾಸೂಯೆ ಬಿತ್ತುವ, ಕೋಮು ಸಂಘರ್ಷಕ್ಕೆ ಈಡುಮಾಡುವ ಮಾತುಗಳನ್ನು ಆಡುತ್ತಾರೆ. ಆ ಮಾತುಗಳು ಉಂಟು ಮಾಡುವ ಪರಿಣಾಮಗಳನ್ನು ನೋಡಿಕೊಂಡು ಸಂಘಪರಿವಾರದ ಮುಖ್ಯಸ್ಥರಾದ ಭಾಗವತರು ತೇಪೆ ಹಾಕುತ್ತಾರೆ. ಸಂದರ್ಭ ನೋಡಿ ಸಮರ್ಥಿಸಿಕೊಳ್ಳುತ್ತಾರೆ. ಹೀಗಿರುವಾಗ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಬಂಧ ಹಳಸಿಕೊಂಡಿರುವುದೆಲ್ಲಿ?
ದೇಶದ ಭಾಗವೇ ಆಗಿರುವ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದರೂ, ಚರ್ಚ್‌ಗಳಿಗೆ ಬೆಂಕಿ ಹಚ್ಚಿದರೂ, ಹಿಂಸಾಚಾರ ಭುಗಿಲೆದ್ದರೂ ಹಿರಿಯರಾದ ಭಾಗವತರು ಅಕ್ಟೋಬರ್ 24, 2023ರಂದು, ‘ಮಣಿಪುರದಲ್ಲಿ ಹಿಂಸಾಚಾರ ನಡೆದಿಲ್ಲ. ಅದು ಸಂಭವಿಸುವಂತೆ ಮಾಡಲಾಗುತ್ತಿದೆ. ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಮತ್ತು ಜನಾಂಗೀಯ ಪೂರ್ವಗ್ರಹ ಹೊಂದಿರುವವರು ದೇಶದ ಹೆಸರು ಹಾಳು ಮಾಡಲು ಮಾಡುತ್ತಿರುವ ಕೃತ್ಯ’ ಎಂದಿದ್ದರು.
ಅಂದರೆ, ದೇಶ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿತ್ತು. ಬಿಜೆಪಿ ಮತ್ತೊಮ್ಮೆ ಗೆದ್ದು, ಮೋದಿಯವರು ಪ್ರಧಾನಿಯಾಗಬೇಕಿತ್ತು. ಆ ಕಾರಣಕ್ಕಾಗಿ ಆರ್‌ಎಸ್‌ಎಸ್‌ನ ಭಾಗವತರು ಕೇಂದ್ರ ಸರ್ಕಾರ ಮತ್ತು ಮೋದಿಯವರ ಪರ ವಕಾಲತ್ತು ವಹಿಸಿ ಮಣಿಪುರದಲ್ಲಿ ಹಿಂಸಾಚಾರ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಅದೇ ಭಾಗವತರು, ಜೂ.11, 2024ರಂದು, ‘ಕಳೆದ ಒಂದು ವರ್ಷದಿಂದ ಮಣಿಪುರ ಹಿಂಸಾಚಾರದಲ್ಲಿ ಬೆಂದಿದೆ, ಶಾಂತಿಗಾಗಿ ಕಾಯುತ್ತಿದೆ. ಮಣಿಪುರದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು’ ಎಂದು ಕೇಂದ್ರ ಸರ್ಕಾರದ ಕಿವಿ ಹಿಂಡಿದ್ದರು. ಹೀಗೆ ಹೇಳಿದ ಸಂದರ್ಭದಲ್ಲಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಕುರ್ಚಿಯಲ್ಲಿ ಕೂತಿದ್ದರು. ಭಾಗವತರಲ್ಲಿ ಮಣಿಪುರದ ಬಗ್ಗೆ ಮಾನವೀಯತೆ ಉಕ್ಕಿ ಹರಿಯುತ್ತಿತ್ತು.
ಇದೆಲ್ಲವೂ ಕಳೆದ ಆರು ತಿಂಗಳಲ್ಲಿ, ಚುನಾವಣೆಗೆ ಮುಂಚೆ ಮತ್ತು ಚುನಾವಣೆಯ ನಂತರ ನಡೆದದ್ದು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಾಡಿದ ಮೊದಲ ಕೆಲಸವೆಂದರೆ, ಕೇಂದ್ರ ಗೃಹ ಸಚಿವಾಲಯ, ಸುಮಾರು 60 ಕಮಾಂಡೋಗಳಿರುವ ಝಡ್ ಪ್ಲಸ್ ಭದ್ರತಾ ತಂಡ ಮೋಹನ್ ಭಾಗವತ್‍ರಿಗೆ ಭದ್ರತೆ ಒದಗಿಸಿದ್ದು.
ಆರ್‌ಎಸ್‌ಎಸ್ ತಾನು ರಾಜಕೀಯದಿಂದ ಆಚೆಗಿರುವ ಸಂಘಟನೆ ಎಂದು ಹೇಳಿಕೊಳ್ಳುತ್ತದೆಯಾದರೂ, ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಅಂಗ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅಲ್ಲದೆ, ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸುವುದು ಆರ್‌ಎಸ್‌ಎಸ್. ಮೋಹನ್ ಭಾಗವತ್ ಅವರ ಮಾತುಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೋರಿದ ‘ಪ್ರದರ್ಶನ’ದ ವಿಚಾರವಾಗಿ ನಡೆದ ಆತ್ಮಾವಲೋಕನದ ಪ್ರತಿಫಲನವೇ ಹೊರತು ಜನಪರ ನಿಲುವಲ್ಲ. ಹಾಗಾಗಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವೆ ಅಭಿಪ್ರಾಯಭೇದ ಇದೆ ಎಂಬುದೆಲ್ಲ ಸುದ್ದಿ ಮಾಧ್ಯಮಗಳು ಸೃಷ್ಟಿಸುವ ಸುಳ್ಳಿನ ಕಂತೆ ಎಂಬುದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ.

ಸೀಟುಗಳು ಕಡಿಮೆಯಾಗಿವೆ ಅಂತ ಮಾಲೀಕ ತನ್ನ ಮ್ಯಾನೇಜರ್ ಗೆ ಕಂಬಳಿ ಸುತ್ತಿ ಹೊಡಿತಾ ಇದ್ದಾನೆ ಅಷ್ಟೇ ಹೊರತು ಬೇರೆ ನೈತಿಕತೆ, ನೀತಿ ಪಾಠ ಏನೂ ಇಲ್ಲ…ಅದನ್ನು ಹೇಳುವ ಅರ್ಹತೆಯೂ ಇವರಿಗಿಲ್ಲ.
ಇವರಿಗೆ ( ಸಂಘ ಪರಿವಾರ) ತಮ್ಮ ಹೊಟ್ಟೆಗಾಗಿ ಏನು ಬೇಕಾದರೂ ಮಾಡುವಷ್ಟು ನೀಚರು ..