ಈ ದಿನ ಸಂಪಾದಕೀಯ | ಬಿಜೆಪಿ, ಜೆಡಿಎಸ್ ಮತ್ತು ಪ್ರಾದೇಶಿಕ ಅಸ್ಮಿತೆ

Date:

Advertisements
ಪ್ರಾದೇಶಿಕ ಪಕ್ಷಗಳನ್ನು ಆಪೋಶನ ತೆಗೆದುಕೊಳ್ಳುವುದು ಬಿಜೆಪಿಯ ಬಕಾಸುರ ಬುದ್ಧಿ. ಆದರೆ ಪ್ರಾದೇಶಿಕ ಅಸ್ಮಿತೆಯ ರಾಜಕಾರಣಕ್ಕೆ ಈಗಲೂ ಅವಕಾಶವಿದೆ, ಅದನ್ನು ಆಗುಮಾಡಲು ಜೆಡಿಎಸ್‌ಗೂ ಸಾಧ್ಯತೆ ಇದೆ. ಆದರೆ ಅದನ್ನು ಬಿಟ್ಟು ಬಕಾಸುರನಿಗೆ ಬಲಿಯಾಗುವುದೇ ಬದುಕಿನ ದಾರಿ ಎಂದುಕೊಂಡಿರುವುದು ವಿಷಾದದ ಹಾಗೂ ನಗೆಪಾಟಲಿನ ಸಂಗತಿ.

ಜುಲೈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಯಿತು. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಎನ್‌ಸಿಪಿಯ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್, ಒಂದಷ್ಟು ಶಾಸಕರೊಂದಿಗೆ ಪಕ್ಷ ತೊರೆದು ಬಿಜೆಪಿ-ಶಿವಸೇನಾ ಸಮ್ಮಿಶ್ರ ಸರ್ಕಾರ ಸೇರಿದರು. ಉಪಮುಖ್ಯಮಂತ್ರಿಯೂ ಆದರು. ಈ ದಿಢೀರ್ ಬೆಳವಣಿಗೆ ಕಂಡ ಕೆಲವರು, ಶರದ್ ಪವಾರ್‍‌ಗೆ ಇದು ಭಾರೀ ಆಘಾತ ಎಂದರು. ಪವಾರ್ ರಾಜಕಾರಣದ ಆಳ-ಅಗಲ ಅರಿತವರು, ಇದು ದೂರಾಲೋಚನೆಯ ದಾರಿ ಎಂದು ವ್ಯಾಖ್ಯಾನಿಸಿದರು.

ಅಜಿತ್ ಪವಾರ್ ಮಹಾರಾಷ್ಟ್ರ ಸರ್ಕಾರದ ಭಾಗವಾಗುವ ಕೆಲವೇ ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು, ‘ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ 70 ಸಾವಿರ ಕೋಟಿ ರೂಪಾಯಿಗಳ ಹಗರಣದಲ್ಲಿ ಸಿಲುಕಿದೆ, ಭ್ರಷ್ಟರನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂಬ ಆರ್ಭಟಿಸಿದ್ದರು. ಈಗ ಬಿಜೆಪಿಗೆ ಬೆಂಬಲಿಸಿದ ಅಜಿತ್ ಪವಾರ್, ಛಗನ್ ಭುಜಬಲ್, ಹಸನ್ ಮುಶ್ರಿಫ್ ಮೇಲೂ ಇದೇ ರೀತಿಯ ಆಪಾದನೆಗಳಿದ್ದವು. ಜೈಲಿಗೂ ಹೋಗಿ ಬಂದಿದ್ದರು. ಅವರೆಲ್ಲ ಈಗ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದಾರೆ. ಉಪಮುಖ್ಯಮಂತ್ರಿ, ಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ʼಪರಿಶುದ್ಧʼ ರಾಜಕಾರಣಿಗಳಾಗಿ ಪರಿವರ್ತನೆ ಹೊಂದಿದ್ದಾರೆ.

ಇಂಥದ್ದೇ ʼಪರಿಶುದ್ಧʼ ರಾಜಕಾರಣ ಕರ್ನಾಟಕದಲ್ಲೂ ಕಾಣುವ ದಿನಗಳು ಹತ್ತಿರವಾಗುತ್ತಿವೆ. ಇಲ್ಲೂ ಪವಾರ್ – ಪವರ್ ಪಾಲಿಟಿಕ್ಸ್ ಚಾಲ್ತಿಗೆ ಬರುತ್ತಿದೆ. 

Advertisements

ಈ ಬೆಳವಣಿಗೆಗೆ ಪೂರಕವಾಗಿ ಕೇವಲ ಒಂದು ತಿಂಗಳ ಹಿಂದೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು, ʼಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಲ್ಲಾ ರಾಜಕೀಯ ಪಕ್ಷಗಳು ಬಿಜೆಪಿ ಜೊತೆ ಕೈ ಜೋಡಿಸಿವೆ. ಬಿಜೆಪಿ ಜತೆ ಕೈಜೋಡಿಸದೆ ರಾಜಕೀಯ ಮಾಡಿದ ಒಂದು ಪಕ್ಷವನ್ನು ತೋರಿಸಿʼ ಎಂದು ಪ್ರಶ್ನೆ ಕೇಳಿದ ಪತ್ರಕರ್ತರನ್ನೇ ಪ್ರಶ್ನಿಸಿದ್ದರು. 

ಸದ್ಯಕ್ಕೆ ಬಜೆಟ್ ಅಧಿವೇಶನ ನಡೆಯುತ್ತಿದೆ. ಆಡಳಿತ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವನ್ನು ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ, ಅಧಿಕಾರಿಗಳ ವರ್ಗಾವಣೆ ಎನ್ನುವುದು ದಂಧೆ ರೂಪ ಪಡೆದಿದೆ, ಪೆನ್ ಡ್ರೈವ್‌ನಲ್ಲಿ ಎಲ್ಲ ಅಡಗಿದೆ ಎಂದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೆಣಗಾಡುತ್ತಿದ್ದರು. ಇವರ ಸಹೋದರ ಎಚ್.ಡಿ ರೇವಣ್ಣನವರು ಸದನದಲ್ಲಿ ಕೊಬ್ಬರಿ ಪ್ರದರ್ಶಿಸಿ, ಇವು ನಿಂಬೆಹಣ್ಣಲ್ಲ ಎಂದು ಎಲ್ಲರನ್ನು ನಗಿಸಿ ವಾತಾವರಣವನ್ನು ತಿಳಿಗೊಳಿಸುತ್ತಿದ್ದರು. ಇದು ನಿಮಗೆ ಶರದ್ ಮತ್ತು ಅಜಿತ್ ಪವಾರ್ ಅವರನ್ನು ಜ್ಞಾಪಿಸಿದರೆ ಆಶ್ಚರ್ಯವಿಲ್ಲ.

ಅಧಿಕಾರ ಎನ್ನುವುದು ಯಾರನ್ನು ಯಾವಾಗ ಬೇಕಾದರೂ ಬದುಕಿಸಬಲ್ಲದು ಮತ್ತು ಬಲಿ ತೆಗೆದುಕೊಳ್ಳಬಹುದು. ಇದನ್ನು ಇತ್ತೀಚಿನ ದೇಶದ ರಾಜಕಾರಣ ತೆರೆದು ತೋರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಒಬ್ಬ ರಾಜಕಾರಣಿ ಏನೆಲ್ಲ ಪಡೆಯಬಹುದೋ ಅದೆಲ್ಲವನ್ನು ಪಡೆದಿದ್ದ ಎಸ್.ಎಂ ಕೃಷ್ಣರು, ಕೊನೆಗಾಲದಲ್ಲಿ ಬಿಜೆಪಿ ಸೇರಿದರು. ಈ ಕಾಲದಲ್ಲಿ ಕೃಷ್ಣರಿಗೆಂತಹ ಭವಿಷ್ಯವಿದೆ, ಬಿಜೆಪಿ ಸೇರಿದ್ದೇಕೆ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಅಳಿಯ ಸಿದ್ಧಾರ್ಥರ ಆತ್ಮಹತ್ಯೆ ಎಲ್ಲರ ಪ್ರಶ್ನೆ ಮತ್ತು ಕುತೂಹಲವನ್ನು ತಣಿಸಿ ತಣ್ಣಗಾಗಿಸಿತು. ಕೃಷ್ಣರಿಗಿಂತ ಒಂದು ವರ್ಷ ಚಿಕ್ಕವರಾದ ಮಾಜಿ ಪ್ರಧಾನಿ ದೇವೇಗೌಡರೂ ಈಗ ಕೃಷ್ಣರ ಹಾದಿಯಲ್ಲಿದ್ದಾರೆ. ಅವರ ಜಾತ್ಯತೀತ ಜನತಾ ಪಕ್ಷ ಬಿಜೆಪಿ ಜೊತೆ ಮಿಲನ-ವಿಲೀನದ ಮಾತುಕತೆಗೆ ಕೂತಿದೆ.

ಇದನ್ನು ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ಟೊಮ್ಯಾಟೊ ಬೆಲೆ ಏರಿಕೆ; ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಪರಿಹಾರ ಸಾಧ್ಯ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೂರರ ಗಡಿ ದಾಟುವುದಿಲ್ಲ, ಮೂವತ್ತು ಸೀಟು ಸಿಕ್ಕರೆ ನಮ್ಮ ಮನೆಬಾಗಿಲಿಗೆ ಎಲ್ಲರೂ ಬರುತ್ತಾರೆ ಎಂಬುದು ಜೆಡಿಎಸ್ ವರಿಷ್ಠ ದೇವೇಗೌಡರ ಲೆಕ್ಕಾಚಾರವಾಗಿತ್ತು. ಈ ಗಣಿತ ಗುಣಿಸುತ್ತಾ, ತಾವು ಗೆಲ್ಲುವುದನ್ನು ಗಟಾರಕ್ಕೆಸೆದು, ರಾಷ್ಟ್ರೀಯ ಪಕ್ಷಗಳು ನೂರರ ಗಡಿ ದಾಟದಂತೆ ಕಾಲೆಳೆಯುವ ಕೆಲಸಕ್ಕೆ ಕುಮಾರಸ್ವಾಮಿಯವರು ಶ್ರಮ ಸುರಿದರು. ಆದರೆ ಗೌಡರ ಕಾಗುಣಿತ ಕೈ ಕೊಟ್ಟಿತು. ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವಂತಾಯಿತು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದು ದೇವೇಗೌಡ-ಕುಮಾರಸ್ವಾಮಿ ಅವರಲ್ಲಿ ದೂರಾಲೋಚನೆಯ ದಾರಿ ಹುಡುಕುವಂತೆ ಮಾಡಿದೆ. ಅದರಲ್ಲಿ ಪಕ್ಷದ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ. ಇದೇ ಸಂದರ್ಭದಲ್ಲಿ ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಪ್ರಾದೇಶಿಕ ಪಕ್ಷಗಳನ್ನು ಸಂಪರ್ಕಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಜಾತ್ಯತೀತ ಜನತಾದಳವನ್ನೂ ಸಂಪರ್ಕಿಸಿದ್ದಾರೆ. ರಾಜ್ಯ ಬಿಜೆಪಿಯ ಸ್ಥಿತಿ ಚಿಂತಾಜನಕವಾಗಿದೆ. ಜೆಡಿಎಸ್ ಸ್ಥಿತಿ ಅದಕ್ಕಿಂತಲೂ ಅಧ್ವಾನವಾಗಿದೆ. ಇಬ್ಬರಿಗೂ ಸದ್ಯಕ್ಕೆ ಸಮಾನ ಶತ್ರುವಾದ ಕಾಂಗ್ರೆಸ್ ಬಗ್ಗು ಬಡಿಯಲು, 2024ರ ಲೋಕಸಭಾ ಚುನಾವಣೆ ಗೆಲ್ಲಲು ಹೊಂದಾಣಿಕೆಯೋ, ವಿಲೀನವೋ ದಾರಿಯಾಗಿದೆ.

ಪ್ರಾದೇಶಿಕ ಪಕ್ಷಗಳನ್ನು ಆಪೋಶನ ತೆಗೆದುಕೊಳ್ಳುವುದು ಬಿಜೆಪಿಯ ಬಕಾಸುರ ಬುದ್ಧಿ. ಆದರೆ ಪ್ರಾದೇಶಿಕ ಅಸ್ಮಿತೆಯ ರಾಜಕಾರಣಕ್ಕೆ ಈಗಲೂ ಅವಕಾಶವಿದೆ, ಅದನ್ನು ಆಗುಮಾಡಲು ಜೆಡಿಎಸ್‌ಗೆ ಸಾಧ್ಯತೆಯೂ ಇದೆ. ಆದರೆ ಅದನ್ನು ಬಿಟ್ಟು ಬಕಾಸುರನಿಗೆ ಬಲಿಯಾಗುವುದೇ ಬದುಕಿನ ದಾರಿ ಎಂದುಕೊಂಡಿರುವುದು ವಿಷಾದದ ಹಾಗೂ ನಗೆಪಾಟಲಿನ ಸಂಗತಿ. ಪ್ರಾದೇಶಿಕ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅಧಿಕಾರಕ್ಕಾಗಿ ಅಡ ಇಡುವುದು ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಹರಾಜಿಗಿಟ್ಟಂತೆ. ಇದಾಗದಿರಲಿ, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ಉಳಿದು ಬೆಳೆಯಲಿ. ಕೋಮುವಾದಿಗಳೊಡನೆ ಕೈ ಜೋಡಿಸದಿರಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X