ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷ ಇಂದೋರ್ ಲೋಕಸಭಾ ಚುನಾವಣೆ ಕಣದಿಂದ ಹೊರಗುಳಿದಿರುವುದು ಇದೇ ಮೊದಲು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಕೋಟೆ ಭದ್ರವಿತ್ತು.
ಚಂಡೀಗಢದ ಮೇಯರ್ ಚುನಾವಣೆಯ ಮೋಸ, ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ ಘೋಷಣೆಯ ನಂತರ ಇದೀಗ ಇಂದೋರಿನ ಕಾಂಗ್ರೆಸ್ ಅಭ್ಯರ್ಥಿ ಕೂಡ ಸೂರತ್ ಚಿತ್ರನಾಟಕದ ಪ್ರಕಾರವೇ ನಾಮಪತ್ರ ವಾಪಸು ಪಡೆದು ಬಿಜೆಪಿ ಸೇರಿದ್ದಾನೆ.
ಲೋಕಸಭೆಯ ಚುನಾವಣೆಯ ಜೊತೆ ಜೊತೆಗೆ ಕೆಲವು ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯುತ್ತಿದೆ. ಅರುಣಾಚಲ ಪ್ರದೇಶವೂ ಇಂತಹ ರಾಜ್ಯಗಳಲ್ಲೊಂದು. ಅರುಣಾಚಲದ ವಿಧಾನಸಭಾ ಸದಸ್ಯ ಬಲ 60. ಈ ಪೈಕಿ ಹತ್ತು ಸೀಟುಗಳಲ್ಲಿ ಬಿಜೆಪಿ ಉಮೇದುವಾರರು ಅವಿರೋಧವಾಗಿ ಆಯ್ಕೆ ಹೊಂದಿದ್ದಾರೆ. ಹತ್ತು ಸೀಟುಗಳ ಪೈಕಿ ಆರರಲ್ಲಿ ಬಿಜೆಪಿಯ ಅಭ್ಯರ್ಥಿಗಳ ನಾಮಪತ್ರಗಳು ಮಾತ್ರವೇ ಸಲ್ಲಿಕೆಯಾಗಿದ್ದವು. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ವಾಪಸು ಪಡೆದಿದ್ದಾರೆ. ಪ್ರತಿಪಕ್ಷಗಳ ಉಮೇದುವಾರರೇ ಇಲ್ಲದೆ, ಆಳುವ ಪಕ್ಷದ ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಘೋಷಿಸಿರುವ ಈ ಚುನಾವಣೆಗಳು ಜನತಂತ್ರ ವ್ಯವಸ್ಥೆಯ ಬಹುದೊಡ್ಡ ಅಣಕ.
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷ ಇಂದೋರ್ ಲೋಕಸಭಾ ಚುನಾವಣೆ ಕಣದಿಂದ ಹೊರಗುಳಿದಿರುವುದು ಇದೇ ಮೊದಲ ಬಾರಿ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಈ ಕ್ಷೇತ್ರದ ಕಾಂಗ್ರೆಸ್ಸಿನ ಕೋಟೆ ಭದ್ರವಿತ್ತು. ಆನಂತರ ಕಮ್ಯೂನಿಸ್ಟರ ಪ್ರಭಾವ ಕಂಡಿತ್ತು. 1977ರಲ್ಲಿ ಜನತಾ ಪಾರ್ಟಿ ಮೊದಲ ಸಲ ಈ ಕ್ಷೇತ್ರವನ್ನು ಗೆದ್ದುಕೊಂಡಿತು. ನಂತರ ಕಾಂಗ್ರೆಸ್ ಎರಡು ಬಾರಿ ಈ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಸತತವಾಗಿ ಜನಬೆಂಬಲವನ್ನು ಕಳೆದುಕೊಳ್ಳುತ್ತಲೇ ಹೋಯಿತು. 1989ರಿಂದ 2014ರ ತನಕ ಬಿಜೆಪಿಯ ಸುಮಿತ್ರಾ ಮಹಾಜನ್ ಏಳು ಸಲ ಸತತವಾಗಿ ಈ ಕ್ಷೇತ್ರದಿಂದ ಗೆಲ್ಲುತ್ತ ಬಂದರು. 2019ರಲ್ಲೂ ಬಿಜೆಪಿ ಅಭ್ಯರ್ಥಿಯೇ ಗೆದ್ದರು. ಈ ಸಲ ಕಾಂಗ್ರೆಸ್ ಪಕ್ಷಕ್ಕೆ ಉಮೇದುವಾರನನ್ನು ಹುಡುಕುವುದೂ ದುಸ್ತರವಾಗಿ ಹೋಯಿತು. ಅಕ್ಷಯ ಬಮ್ ಎಂಬ ಹುರಿಯಾಳನ್ನು ಕಷ್ಟಪಟ್ಟು ಹುಡುಕಿ ಕಣಕ್ಕೆ ಇಳಿಸಲಾಯಿತು. ಈತನೂ ನಾಮಪತ್ರ ವಾಪಸು ಪಡೆದು ಗೆಲುವಿನ ಹಾದಿಯನ್ನು ಬಿಜೆಪಿಗೆ ಹಾಸಿಕೊಟ್ಟಿದ್ದಾನೆ.
ಬಮ್ ವಿರುದ್ಧ ನ್ಯಾಯಾಲಯದಲ್ಲಿ ಭೂಕಬಳಿಕೆ ಆರೋಪ ಕುರಿತ ಕೇಸು ನಡೆಯುತ್ತಿತ್ತು. 2007ರ ಈ ಕೇಸಿಗೆ ಕೊಲೆ ಯತ್ನದ ಆರೋಪವನ್ನೂ ಇದೇ ಏಪ್ರಿಲ್ 24ರಂದು ಸೇರಿಸಲಾಯಿತು. ಐದು ದಿನಗಳ ನಂತರ ಬಮ್ ತಾನು ಕಾಂಗ್ರೆಸ್ಸಿನಿಂದ ಸಲ್ಲಿಸಿದ್ದ ನಾಮಪತ್ರವನ್ನು ವಾಪಸು ಪಡೆದು ಬಿಜೆಪಿ ಸೇರುತ್ತಾನೆ. ಕೊಲೆ ಯತ್ನದ ಆರೋಪವನ್ನೂ ಬಮ್ ವಿರುದ್ಧದ ಚಾರ್ಜ್ ಶೀಟ್ ಗೆ ಸೇರಿಸುವಂತೆ ನ್ಯಾಯಾಲಯವನ್ನು ಕೋರಿ ಇದೇ ಏಪ್ರಿಲ್ ಐದರಂದು ನ್ಯಾಯಾಲಯವನ್ನು ಕೋರಲಾಗುತ್ತದೆ. ಕೋರಿದಾತ ಭೂಕಬಳಿಕೆ ಕೇಸು ಹೂಡಿದ್ದ ಅರ್ಜಿದಾರ ಯೂನುಸ್ ಪಟೇಲ್. 2007ರಲ್ಲಿ ಹೂಡಿದ್ದ ಈ ಕೇಸ್ ಪ್ರಕಾರ ಅಕ್ಷಯಕಾಂತಿ ಬಮ್ ಮತ್ತಿತರರು ಯೂನುಸ್ ಪಟೇಲ್ ಮೇಲೆ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಮತ್ತು ಅಶ್ಲೀಲ ಪದಗಳನ್ನು ಬಳಸಿರುತ್ತಾರೆ. ಅಕ್ಷಯಕಾಂತಿಯ ಕುಮ್ಮಕ್ಕಿನಿಂದ ಸತ್ವೀರ್ ಸಿಂಗ್ ಎಂಬುವನು ಬಂದೂಕಿನಿಂದ ತನ್ನತ್ತ ಗುಂಡು ಹಾರಿಸಿದನೆಂದು ಯೂನುಸ್ ಪಟೇಲ್ ಇದೇ ಏಪ್ರಿಲ್ ಐದರಂದು ಮತ್ತೊಂದು ಅರ್ಜಿ ಸಲ್ಲಿಸಿದ್ದ. ಸತ್ವೀರ್ ಸಿಂಗ್ ಈಗಾಗಲೆ ನಿಧನವಾಗಿದ್ದಾನೆ.
ಸೂರತ್ ಅವಿರೋಧ ಆಯ್ಕೆಯ ಚಿತ್ರನಾಟಕವವನ್ನು ಬಿಜೆಪಿ ರಚಿಸಿತ್ತು. ಈ ಚಿತ್ರನಾಟಕದಂತೆಯೇ ನಡೆದಿರುವ ನಾಟಕವಿದು. ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರು ಸೂರತ್ ನ ಪಂಚತಾರಾ ಹೊಟೆಲೊಂದರಲ್ಲಿ ಕುಳಿತು ಈ ಪ್ರಹಸನವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರನಾಟಕದ ಪ್ರತಿಯನ್ನು ಸೂರತ್ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ನೀಲೇಶ್ ಕುಂಭಾಣಿಗೆ ಮುಂದಾಗಿಯೇ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷದ ಹೈಕಮಾಂಡನ್ನು ಕುಂಭಾಣಿ ಕತ್ತಲಲ್ಲಿಟ್ಟು ಬಿಜೆಪಿ ತಾಳಕ್ಕೆ ಕುಣಿದಿದ್ದಾನೆ ಈತ.
ಅತ್ತ ಮಧ್ಯಪ್ರದೇಶದ ಖಜುರಾಹೋ ಕೂಡ ಸೂರತ್ ದಾರಿ ಹಿಡಿದಿದೆ. ಸಮಾಜವಾದಿ ಪಾರ್ಟಿಯ ಮೀರಾ ಯಾದವ್ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರವನ್ನು ಅತ್ಯಂತ ಕ್ಷುಲ್ಲಕ ಕಾರಣ ಒಡ್ಡಿ ತಿರಸ್ಕರಿಸಲಾಗಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಹೀಗಾಗಿ ಬಿಜೆಪಿಯ ವಿ.ಡಿ.ಶರ್ಮ ಪಾಲಿಗೆ ಕಣ ಖಾಲಿಯಾದಂತೆಯೇ ಲೆಕ್ಕ. ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ನ ಅಭ್ಯರ್ಥಿಯನ್ನು ಕಾಂಗ್ರೆಸ್ ಬೆಂಬಲಿಸಿದೆ. ಆದರೂ ಈ ಪಕ್ಷದ ಹುರಿಯಾಳು ಆರ್.ಬಿ.ಪ್ರಜಾಪತಿ ಸ್ಪರ್ಧೆ ಒಡ್ಡುವ ಸ್ಥಿತಿಯಲ್ಲಿ ಇಲ್ಲ. ಈ ಕ್ಷೇತ್ರದ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳೂ ಬಿಜೆಪಿಯ ಬುಟ್ಟಿಯಲ್ಲಿವೆ.
“ಆಪರೇಷನ್ ಕಮಲ”ದ ಮತ್ತೊಂದು ಅವತಾರವಿದು. ಮೂಲ ಅವತಾರದ ‘ಕೀರ್ತಿ’ ಕರ್ನಾಟಕದ್ದೇ. ಕೃತಿಸ್ವಾಮ್ಯ ಬಿ.ಎಸ್.ಯಡಿಯೂರಪ್ಪ ಮತ್ತು ರೆಡ್ಡಿ ಸೋದರರದು. 2008ರಲ್ಲಿ ಬಿಜೆಪಿ 110 ಸೀಟುಗಳನ್ನು ಗೆದ್ದಿತ್ತು. ಸರಳ ಬಹುಮತಕ್ಕೆ ಮೂರು ಸೀಟುಗಳ ಕೊರತೆ ಬಿದ್ದಿತ್ತು. ‘ಆಪರೇಷನ್ ಕಮಲ’ ನಡೆಸಿ ಕಾಂಗ್ರೆಸ್ ಮತ್ತು ಜೆ.ಡಿ.(ಎಸ್) ಪಕ್ಷಗಳಿಂದ 20 ಶಾಸಕರನ್ನು ಸೆಳೆದು ಅವರಿಂದ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿಸಲಾಯಿತು. ಸರ್ಕಾರ ರಚಿಸಲು ಬೇಕಿದ್ದ ಬಹುಮತದ ಸಂಖ್ಯೆ ತೀವ್ರವಾಗಿ ತಗ್ಗಿತು! ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆಪರೇಷನ್ ಕಮಲದ ಆಧಾರ ಕೇವಲ ಆಮಿಷಕ್ಕೆ ಸೀಮಿತವಾಗಿತ್ತು. ಹಣ ಮತ್ತು ಪದವಿಗಳು- ಹುದ್ದೆಗಳ ಸೆಳೆತವೇ ಪ್ರಮುಖವಾಗಿತ್ತು. ಆದರೆ ಮೋದಿ-ಶಾ ಜೋಡಿ ಆಪರೇಷನ್ ಕಮಲವನ್ನು ಹೊಸ ಅಪಾಯಗಳ ಎತ್ತರಕ್ಕೆ ಕೊಂಡು ಒಯ್ದಿದೆ. ಇನ್ನೂ ಎತ್ತರಕ್ಕೆ ಒಯ್ಯುವ ಎಲ್ಲ ಸೂಚನೆಗಳೂ ಇವೆ.
ಇ.ಡಿ. ಮತ್ತು ಪಿ.ಎಂ.ಎಲ್.ಎ. ಕಾಯಿದೆಗಳನ್ನು ರದ್ದು ಮಾಡಿದ ದಿನ ರಾಜಕಾರಣಿಗಳು ಹೊಸದಾಗಿ ಬಿಜೆಪಿ ಸೇರುವುದಿರಲಿ, ಭಾರೀ ಸಂಖ್ಯೆಯಲ್ಲಿ ಆ ಪಕ್ಷವನ್ನು ತೊರೆಯುತ್ತಾರೆ ಖಚಿತವಾಗಿ ಎಂಬ ಆಮ್ ಆದ್ಮೀ ಪಾರ್ಟಿಯ ನೇತಾರ ಅರವಿಂದ್ ಕೇಜ್ರೀವಾಲ್ ಹೇಳಿಕೆ ಸತ್ಯದೂರವೇನೂ ಅಲ್ಲ. ಬಿಜೆಪಿ ಇಲ್ಲಿಯವರೆಗೆ ಹತ್ತಾರು ರಾಜ್ಯಗಳಲ್ಲಿ 227 ಶಾಸಕರ ಖರೀದಿಗೆ ಸುಮಾರು 5,500 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿದೆ. ಸರ್ಕಾರಗಳನ್ನು ಕೆಡವಿ ತನ್ನ ಸರ್ಕಾರಗಳನ್ನು ರಚಿಸಿದೆ ಎಂದೂ ಅವರು ಆರೋಪಿಸಿದ್ದಾರೆ. ಇ.ಡಿ., ಆದಾಯತೆರಿಗೆ ಹಾಗೂ ಪಿ.ಎಂ.ಎಲ್.ಎ. ಜಾರಿ ವ್ಯವಸ್ಥೆಯನ್ನು ಕೇವಲ ಒಂದು ದಿನದ ಮಟ್ಟಿಗೆ ತಮ್ಮ ಕೈಗೆ ಒಪ್ಪಿಸಿದರೆ ಬಿಜೆಪಿಯ ಅರ್ಧದಷ್ಟು ಮಂದಿ ಜೈಲಲ್ಲಿ ಇರದಿದ್ದರೆ ಕೇಳಿ ಎಂಬ ಸವಾಲನ್ನೂ ಕೇಜ್ರೀವಾಲ್ ಎಸೆದಿದ್ದರು.
‘ಆಪರೇಷನ್ ಕಮಲ-1’ ಮತ್ತು ಮೋದಿಯುಗದ ‘ಸುಧಾರಿತ ಆಪರೇಷನ್ ಕಮಲ-2’ ದಂತಹ ಆಘಾತಕರ ಮತ್ತು ಜನತಂತ್ರ ವಿರೋಧೀ ಸಂಶೋಧನೆ ನಮ್ಮ ದೇಶದ ಪಕ್ಷ ವ್ಯವಸ್ಥೆಯಲ್ಲಿ ಮಾತ್ರವೇ ಸಾಧ್ಯವಿದ್ದೀತು.
ಆದಾಯತೆರಿಗೆ (ಐಟಿ) ದಾಳಿ, ಜಾರಿ ನಿರ್ದೇಶನಾಲಯ (ಇ.ಡಿ.)ದಾಳಿ, ಸಿ.ಬಿ.ಐ. ದಾಳಿ ಹಾಗೂ ಪಿ,ಎಂ.ಎಲ್.ಎ.ಯಂತಹ ಕರಾಳ ಹತಾರುಗಳು ಪ್ರತಿಪಕ್ಷಗಳ ಮುಖಂಡರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ. ಎಲ್ಲಿಯವರೆಗೆ ತಪ್ಪಿತಸ್ಥನೆಂದು ರುಜುವಾತಾಗುವುದೋ ಅಲ್ಲಿಯವರೆಗೆ ತಪ್ಪಿತಸ್ಥನೆಂದೇ ಬಂಧನದಲ್ಲಿ ಇರಿಸುವ ಕರಾಳ ಕಾಯಿದೆ ಅಕ್ರಮ ಹಣವರ್ಗಾವಣೆ ನಿಷೇಧ ಕಾಯಿದೆ (ಪಿ.ಎಂ.ಎಲ್.ಎ).
ಚುನಾವಣಾ ಪರ್ವ ಗರ್ವದ ಪರ್ವ, ಜನತಂತ್ರದ ಉತ್ಸವ ಎಂದೆಲ್ಲ ಈ ಚುನಾವಣೆಯನ್ನು ಕರೆಯಲಾಗಿದೆ.
ಭಾರತವನ್ನು ವಿಶ್ವಜನತಂತ್ರದ ಜನನಿ ಎಂದು ಪ್ರಧಾನಿ ಮೋದಿಯವರು ಎದೆಯುಬ್ಬಿಸಿ ಭಾಷಣ ಮಾಡುತ್ತ ಬಂದಿದ್ದಾರೆ. ಆದರೆ ಮೋದಿ ಮತ್ತು ಶಾ ಅವರ ಪಕ್ಷ ಸಾಮ, ದಾನ ದಂಡ, ಭೇದ ನೀತಿಯನ್ನು ಪ್ರಯೋಗಿಸಿ ಪ್ರತಿಪಕ್ಷಗಳನ್ನು ಸದೆಬಡಿಯತೊಡಗಿದೆ. ತಂತ್ರ ಮಾತ್ರವಲ್ಲ ಕುತಂತ್ರಗಳನ್ನು ದಾರಿ ಹಿಡಿದರೂ ಸರಿ, ಒಟ್ಟಾರೆ ಸಾಕಷ್ಟು ಸೀಟುಗಳನ್ನು ಗೆಲ್ಲಬೇಕು ಎಂಬುದಷ್ಟೇ ಬಿಜೆಪಿಯ ಏಕಮೇವ (ಅ)ನೀತಿಯಾಗಿ ಹೋಗಿದೆ.ಸೂರತ್ ಮತ್ತು ಇಂದೂರಿನ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸು ಪಡೆದು ಬಿಜೆಪಿ ಸೇರಿರುವ ಈ ಪ್ರಕರಣಗಳನ್ನು ಕೇಂದ್ರ ಚುನಾವಣಾ ಆಯೋಗ ತೀವ್ರ ತನಿಖೆಗೆ ಗುರಿಪಡಿಸಬೇಕು. ಚುನಾವಣಾ ಪಾವಿತ್ರ್ಯಕ್ಕೆ ಚ್ಯುತಿ ಉಂಟಾಗಿದ್ದ ಪಕ್ಷದಲ್ಲಿ ಅದನ್ನು ಶೀಘ್ರವೇ ಸರಿಪಡಿಸಬೇಕು.
