ಈ ದಿನ ಸಂಪಾದಕೀಯ | ಬಜೆಟ್ ಅಧಿವೇಶನ: ಸರ್ಕಾರದ ಬೆವರಿಳಿಸಲಿವೆಯೇ ವಿರೋಧ ಪಕ್ಷಗಳು?

Date:

Advertisements
ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳು ವೈರಿಗಳಲ್ಲ. ಹಾಗಂತ ಹೊಂದಾಣಿಕೆ ರಾಜಕಾರಣ ಸಲ್ಲ.

ಪ್ರಸಕ್ತ ವರ್ಷದ ವಿಧಾನಮಂಡಲದ ಮೊದಲ ಅಧಿವೇಶನ ಮಾ.2ರಿಂದ ಆರಂಭವಾಗಿದೆ. ಮಾ.21ರವರೆಗೆ ನಡೆಯಲಿದೆ. ಇಂದಿನಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲಿನ‌ ಚರ್ಚೆ ನಡೆಯಲಿದ್ದು, ಈ ವೇಳೆ ಆಡಳಿತ ಪಕ್ಷ ವಿಪಕ್ಷಗಳ ನಡುವಿನ ಚರ್ಚೆಗೆ ಸದನ ಉತ್ತಮ ವೇದಿಕೆಯಾಗಲಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು, ಸರ್ಕಾರದ ನೀತಿಗಳನ್ನು ವಿರೋಧಿಸಲು, ವೈಫಲ್ಯಗಳನ್ನು ಎತ್ತಿ ತೋರಿಸಲು, ಎಚ್ಚರಿಸಲು ವಿರೋಧ ಪಕ್ಷಗಳಿಗೆ ಇದಕ್ಕಿಂತ ಉತ್ತಮ ವೇದಿಕೆ ಇನ್ನೊಂದಿಲ್ಲ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಮನಸ್ಸು ಮಾಡಿದ್ದೇ ಆದರೆ, ಹತ್ತಾರು ಅವಘಡಗಳಿಗೆ ಬರವಿಲ್ಲ.

ಬಡ ಬಾಣಂತಿಯರ ಸಾವಿನಿಂದ ಶುರುವಾಗಿ, ಬಡವರ ಪ್ರಾಣ ಹಿಂಡಿದ ಮೈಕ್ರೋ ಫೈನಾನ್ಸ್, ಹದಗೆಟ್ಟ ಕಾನೂನು ಸುವ್ಯವಸ್ಥೆ, ಕೋಟ್ಯಂತರ ರೂಪಾಯಿಗಳ ವಾಲ್ಮೀಕಿ ಮತ್ತು ಮುಡಾ ಹಗರಣಗಳು, ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಂಘರ್ಷ, ಬಡ-ಮಧ್ಯಮವರ್ಗ ಪ್ರಯಾಣಿಸುವ ಸಾರಿಗೆ, ಮೆಟ್ರೋ ಪ್ರಯಾಣದರ ಏರಿಕೆ, ಹಾಲು-ನೀರು-ವಿದ್ಯುತ್ ದರ ಏರಿಕೆ, ನಿರುದ್ಯೋಗಿಗಳನ್ನು ಕಾಡುತ್ತಿರುವ ಕೆಪಿಎಸ್‌ಸಿ, ಸರ್ಕಾರಿ ಶಾಲೆಗಳ ದುರವಸ್ಥೆ, ಶಿಕ್ಷಕರು-ಉಪನ್ಯಾಸಕರ ಕೊರತೆ, ಒಂಭತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವುದು, ದಲಿತರ ಮೇಲಿನ ದೌರ್ಜನ್ಯ, ಹಸುಳೆಗಳ ಅತ್ಯಾಚಾರ ಪ್ರಕರಣಗಳು, ಗ್ಯಾರಂಟಿ ಯೋಜನೆಗಳು ಮೂರು ತಿಂಗಳಗಳ ಕಾಲ ಸ್ಥಗಿತಗೊಂಡಿರುವುದು, ಶಾಸಕರಿಗೆ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕುಂಠಿತಗೊಂಡಿರುವುದು, ಬಹಳ ಮುಖ್ಯವಾದ ಜಾತಿಗಣತಿ ಮತ್ತು ಒಳಮೀಸಲಾತಿಯನ್ನು ಜಾರಿ ಮಾಡದಿರುವುದು, ಮೇಳ-ಮೆರವಣಿಗೆಗಳತ್ತ ಮುಖ ಮಾಡಿ ಅಭಿವೃದ್ಧಿ ಹಳ್ಳ ಹಿಡಿದಿರುವುದು, ಸ್ಥಳೀಯ ಚುನಾವಣೆಗಳನ್ನು ಮಾಡದೆ ಹಿಂದುಳಿದ ವರ್ಗಕ್ಕೆ ಅನ್ಯಾಯವೆಸಗುತ್ತಿರುವುದು… ಒಂದೇ ಎರಡೇ, ನೂರಾರಿವೆ. ಪ್ರಶ್ನಿಸುವ, ತಾರ್ಕಿಕ ಅಂತ್ಯ ಕಾಣಿಸುವ, ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವ ದಮ್ಮು-ತಾಖತ್ತು ವಿರೋಧ ಪಕ್ಷಗಳ ನಾಯಕರಿಗೆ ಇರಬೇಕಷ್ಟೇ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜ್ಯಪಾಲರ ಹೆಸರಲ್ಲಿ ಬಿಜೆಪಿ ಅಧಿಕ ಪ್ರಸಂಗ

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೂಡ ವಿರೋಧ ಪಕ್ಷಗಳ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡಲು ಸಿದ್ಧವಾಗಿದೆ. ಪ್ರತಿಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕಾಂಗಿ ಹೋರಾಟಗಾರ ಎನಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವರೊಂದಿಗೆ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಕೂಡ ಸೇರಿಕೊಳ್ಳುವ ಸೂಚನೆ ಸಿಗುತ್ತಿದೆ. ಅದರಲ್ಲೂ ಬಂಡವಾಳ ಹೂಡಿಕೆ ಸಮಾವೇಶದ ಯಶಸ್ಸು ಕುರಿತು ಮಾತನಾಡಲು ಎಂ.ಬಿ. ಪಾಟೀಲ್ ಸಿದ್ಧರಾದಂತಿದೆ.

ವಿಧಾನಮಂಡಲದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಮತ್ತು ಬಜೆಟ್‌ ಮೇಲಿನ ಚರ್ಚೆಯೂ ಸೇರಿದಂತೆ ವಿರೋಧ ಪಕ್ಷಗಳು ಪ್ರಸ್ತಾಪಿಸಬಹುದಾದ ವಿಷಯಗಳು, ಎತ್ತಬಹುದಾದ ಪ್ರಶ್ನೆಗಳು, ಇಕ್ಕಟ್ಟಿಗೆ ಸಿಲುಕಿಸಬಹುದಾದ ಪ್ರಕರಣಗಳ ಕುರಿತು ತಕ್ಕ ಉತ್ತರ ನೀಡಲು ಸರ್ಕಾರ ಕೂಡ ತಯಾರಾಗಿದೆ.

ಅದರಲ್ಲೂ ಮುಖ್ಯವಾಗಿ, ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ದೊರಕದೇ ಇರುವುದು, ತೆರಿಗೆ ಪಾಲು ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು, ಮೇಕೆದಾಟು-ಮಹದಾಯಿ ಯೋಜನೆಗಳಿಗೆ ತಡೆಯೊಡ್ಡಿರುವುದು, ಕೃಷ್ಣ ಮೇಲ್ದಂಡೆ ಮತ್ತು ಭದ್ರ ಯೋಜನೆಗೆ ಸ್ಪಂದಿಸದಿರುವುದು, ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆ ಮಾಡಲು ಹವಣಿಸುತ್ತಿರುವುದು, ಯುಜಿಸಿ ತಾರತಮ್ಯ, ವಿವಿಧ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಜತೆಗಿನ ಸಂಘರ್ಷ… ಸೇರಿದಂತೆ ಹಲವು ವಿಷಯಗಳನ್ನು ಪ್ರತಿಪಕ್ಷಗಳ ವಿರುದ್ಧದ ಅಸ್ತ್ರವಾಗಿ ಸರ್ಕಾರ ಬಳಸಿಕೊಳ್ಳುವ ಸಂಭವವಿದೆ.

ಇದಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರದ ಕೋವಿಡ್ ಹಗರಣ, ಅದಕ್ಕೆ ಸಂಬಂಧಿಸಿದ ಕುನ್ಹ ಸಮಿತಿ ವರದಿ, ಎಚ್.ಡಿ ಕುಮಾರಸ್ವಾಮಿಯವರ ವಿರುದ್ಧದ ಪ್ರಕರಣಗಳು, ಯಡಿಯೂರಪ್ಪನವರ ಪೋಕ್ಸೋ ಪ್ರಕರಣಗಳ ಪ್ರಸ್ತಾಪವಾದರೂ ಆಶ್ಚರ್ಯವಿಲ್ಲ.

ಒಟ್ಟಿನಲ್ಲಿ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆ ಸಿದ್ಧವಾಗಿದೆ. ಮಾತಿನ ಬಾಣಗಳು ಬೆಂಕಿ ಉಗುಳಲಿವೆ. ಅವರ ಬಾಯಿ ಇವರು, ಇವರ ಬಾಯಿ ಅವರು ಮುಚ್ಚಿಸುವ ಮೂಲಕ ವಿಧಾನಮಂಡಲದಲ್ಲಿ ಇಬ್ಬರೂ ‘ಜಯ’ ಸಾಧಿಸಬಹುದಾಗಿದೆ. ಏಕೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿ- ಎರಡೂ ಪಕ್ಷಗಳು ಆಂತರಿಕ ಬೇಗುದಿಯಲ್ಲಿ ಬೇಯುತ್ತಿವೆ. ನಾಯಕರ ನಡುವಿನ ನರಳಾಟ ನಿತ್ಯ ನಿರಂತರವಾಗಿದೆ. ಹೆಚ್ಚೆಂದರೆ, ಇದೆಲ್ಲ ಸುದ್ದಿ ಮಾಧ್ಯಮಗಳಿಗೆ ಸರಕಾಗಲಿದೆ.

ಅಸಲಿಗೆ, ಆಡಳಿತ ಮತ್ತು ವಿಪಕ್ಷ- ಯಾರೇ ಆದರೂ, ಪ್ರಜಾಸತ್ತಾತ್ಮಕವಾದ ಉನ್ನತ ಮಟ್ಟದ ವಾಗ್ವಾದಕ್ಕೆ, ಹೇಳಿಕೆಗಳನ್ನು ದಾಖಲಿಸುವುದಕ್ಕೆ, ನಿಲುವುಗಳನ್ನು ವ್ಯಕ್ತಪಡಿಸುವುದಕ್ಕೆ, ನೀತಿಗಳ ಪರಿಶೀಲನೆಗೆ, ನಿರ್ದಿಷ್ಟ ವಿಚಾರಗಳ ಟೀಕೆ-ಟಿಪ್ಪಣಿಗೆ ಇರುವ ವೇದಿಕೆ ಸದನ ಎಂಬುದನ್ನು ಮೊದಲು ಮನಗಾಣಬೇಕಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!

ಯಾವುದೇ ವಿಷಯದ ಬಗ್ಗೆ, ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆ ನಡೆಸಿದರೆ ಪರಿಹಾರದ ದಾರಿ ಸಿಕ್ಕೇ ಸಿಗುತ್ತದೆ. ಶಾಸಕರ ಅನುಭವ, ವಿಷಯ ಜ್ಞಾನ, ಜನಾನುರಾಗಿತ್ವಗಳು ಸದನದ ಕಲಾಪವನ್ನು ಸರಿ ದಿಕ್ಕಿನೆಡೆಗೆ ಕೊಂಡೊಯ್ಯಲು ಬಳಕೆಯಾಗಬೇಕು. ಆಡಳಿತ ಪಕ್ಷ ಹಠಮಾರಿ ಧೋರಣೆ ತಳೆಯದೆ, ತಂತ್ರಗಳ ಮೊರೆ ಹೋಗದೆ, ಪ್ರತಿಪಕ್ಷಗಳ ಮಾತನ್ನು ಸಂಯಮದಿಂದ ಆಲಿಸಬೇಕು. ಟೀಕೆ, ನ್ಯೂನತೆಗಳನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ, ಸುಧಾರಣೆಗಳನ್ನು ಕಂಡುಕೊಳ್ಳಬೇಕು.

ಅಲ್ಲದೆ, ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳು ವೈರಿಗಳಲ್ಲ. ಹಾಗಂತ ಹೊಂದಾಣಿಕೆ ರಾಜಕಾರಣ ಸಲ್ಲ. ಸರ್ಕಾರ ಎಡವಿದಾಗ, ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾದಾಗ ಎಚ್ಚರಿಸುವ ಕೆಲಸ ಮಾಡಬೇಕೇ ಹೊರತು ಘೋಷಣೆ, ಗದ್ದಲ, ಸಭಾತ್ಯಾಗವಲ್ಲ. ಆ ನಡವಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X