ಈ ದಿನ ಸಂಪಾದಕೀಯ | ಉಪಸಮರದ ಗೆಲುವು– ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಕಾಂಗ್ರೆಸ್‌ ಸರ್ಕಾರ?

Date:

Advertisements
ಈ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಜನತೆ ಇನ್ನೊಂದು ಅವಕಾಶವನ್ನು ಮತ್ತು ಯಥೇಚ್ಛ ಪಾಠಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ನೀಡಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಅಥವಾ ಬಿಡುವುದು ಅವರ ಕೈಯ್ಯಲ್ಲೇ ಇದೆ.

ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಗೆಲುವು ಸಾಧಿಸಿದೆ. ಇದು ಆ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಸಂಭ್ರಮಕ್ಕಿಂತ ಹೆಚ್ಚು ಕೆಲವು ಸ್ಪಷ್ಟ ಸೂಚನೆಗಳನ್ನು/ಪಾಠಗಳನ್ನು ನೀಡಿದೆ. ಅದನ್ನು ಕಾಂಗ್ರೆಸ್‌ ಪಕ್ಷದ ನೇತಾರರು ಎಷ್ಟರಮಟ್ಟಿಗೆ ಅರಿಯುತ್ತಾರೋ ಅಷ್ಟರಮಟ್ಟಿಗೆ ಅವರಿಗೂ, ರಾಜ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ. ಈ ಮೂರರಲ್ಲಿ ಒಂದು ಕ್ಷೇತ್ರ ಮಾತ್ರ ಕಾಂಗ್ರೆಸ್‌ ಹಿಡಿತದಲ್ಲಿತ್ತು. ಉಳಿದೆರಡರಲ್ಲಿ ವಿರೋಧ ಪಕ್ಷಗಳಾದ ಜೆಡಿಎಸ್‌ ಮತ್ತು ಬಿಜೆಪಿ ಶಾಸಕರು ಗೆದ್ದಿದ್ದರು. ಇಬ್ಬರೂ ಮಾಜಿ ಮುಖ್ಯಮಂತ್ರಿಗಳು. ಸ್ವತಃ ಅವರ ಪುತ್ರರನ್ನೇ ಕಣಕ್ಕಿಳಿಸಿದ್ದರು. ಅಲ್ಲೂ ಗೆದ್ದ ಮೇಲೆ, ಇದು ಕಾಂಗ್ರೆಸ್‌ ಸಂಭ್ರಮಿಸುವ ಹಾಗೂ ನಿರಾಳವಾಗಿರುವ ಹೊತ್ತು ಎಂದೇ ಎಲ್ಲರೂ ಭಾವಿಸಬಹುದು. ಅದು ಅಷ್ಟು ವಾಸ್ತವವಲ್ಲ– ಇದಕ್ಕೆ ಆರು ಕಾರಣಗಳಿವೆ.

ಒಂದು, ವಕ್ಫ್‌ ವಿಚಾರದ ಸುತ್ತ ಕಳೆದ ಒಂದೂವರೆ ತಿಂಗಳಿಂದ ಕರ್ನಾಟಕದಲ್ಲಿ ಬಿಜೆಪಿ ಮತ್ತು ಅದರ ಮಡಿಲ ಮೀಡಿಯಾಗಳು ಭಾರೀ ಗದ್ದಲವನ್ನೇ ಎಬ್ಬಿಸಿವೆ. ಸದರಿ ವಿಚಾರವು ಕರ್ನಾಟಕದಲ್ಲಿ ಮಾತ್ರವಲ್ಲದೇ ಪಕ್ಕದ ಮಹಾರಾಷ್ಟ್ರ ಹಾಗೂ ದೂರದ ಜಾರ್ಖಂಡ್‌ ರಾಜ್ಯಗಳ ಚುನಾವಣೆಯಲ್ಲೂ ಸದ್ದು ಮಾಡಿತ್ತು. ಕಾಂಗ್ರೆಸ್ಸಿನಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಿದ್ದ ಶಿಗ್ಗಾಂವ್‌ ಕ್ಷೇತ್ರ ವ್ಯಾಪ್ತಿಯ ಸವಣೂರು ತಾಲೂಕಿನ ಕಡಕೋಳದಲ್ಲಿ ಚುನಾವಣಾ ಸಂದರ್ಭದಲ್ಲಿ ಇದೇ ವಿಚಾರ ಇಟ್ಟುಕೊಂಡು ಕೋಮುಗಲಭೆ ಎಬ್ಬಿಸಲೂ ಪ್ರಯತ್ನ ನಡೆದಿತ್ತು. ಇಷ್ಟಾದರೂ ಕರ್ನಾಟಕದ ಎಲ್ಲಾ ಸಮುದಾಯಗಳ ಜನರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಶಿಗ್ಗಾಂವಿಯಲ್ಲೂ, ಇತರ ಎರಡು ಕ್ಷೇತ್ರಗಳಲ್ಲೂ ಬೆಂಬಲಿಸಿದ್ದಾರೆ. ವಕ್ಫ್‌ ವಿಚಾರದಲ್ಲಿ ಕಾನೂನು, ನೈತಿಕತೆ ಹಾಗೂ ನ್ಯಾಯದ ದೃಷ್ಟಿಯಿಂದ ಗಟ್ಟಿಯಾಗಿ ನಿಲ್ಲಬೇಕಿದ್ದ ಕಾಂಗ್ರೆಸ್ ಹಿಂಜರಿಕೆಗೆ ಬಿದ್ದಿದೆ. ನಮಗಿಂತ ಹೆಚ್ಚು ಬಿಜೆಪಿಯೇ ನೋಟಿಸ್ ಕೊಟ್ಟಿತ್ತು ಎಂಬುದು ಅದರ ವಾದವಾಗಿದೆ. ವಕ್ಫ್‌ ವಿಚಾರದಲ್ಲಿ ಮುಸ್ಲಿಮರದ್ದೇನೋ ತಪ್ಪಿತ್ತು ಎಂಬ ರೀತಿಯಲ್ಲಿ ಬಿಂಬಿಸುವ ವಾದವನ್ನು ಶಿಗ್ಗಾಂವಿಯ ಜನರೇ ಒಪ್ಪಿಲ್ಲ ಎಂದ ಮೇಲೆ, ಬಿಜೆಪಿ-ಆರೆಸ್ಸೆಸ್ಸಿನ ಆಕ್ರಮಣಕಾರಿ ಪ್ರಚಾರಕ್ಕೇ ಕಾಂಗ್ರೆಸ್‌ ಹೆದರುವುದು ಸರ್ವಥಾ ಸರಿಯಲ್ಲ.

ಎರಡು, ಈ ಚುನಾವಣೆಯು ಇನ್ನೊಮ್ಮೆ ಖಾತರಿಪಡಿಸಿರುವುದು ಏನೆಂದರೆ– ಕಾಂಗ್ರೆಸ್ಸಿನ ಸಹಜ ನೆಲೆಯಾದ ಶೋಷಿತ ಅಹಿಂದ ಸಮುದಾಯಗಳನ್ನು ಅದು ಒಗ್ಗೂಡಿಸಿಕೊಂಡರೆ ಸಾಕು ಗೆಲುವು ಖಾತ್ರಿ ಎಂದು. ಶಿಗ್ಗಾಂವಿಯಂತಹ ಅಹಿಂದ ಕ್ಷೇತ್ರದಲ್ಲಿ ಸತತವಾಗಿ ಕಾಂಗ್ರೆಸ್‌ ಸೋಲುತ್ತಾ ಬರುತ್ತಿತ್ತು. ಅದಕ್ಕೆ ಕಾರಣ ಬಲಾಢ್ಯ ಜಾತಿಗಳು ಅದರ ಪರವಾಗಿ ಇರದೇ ಇದ್ದುದಲ್ಲ; ಬದಲಿಗೆ ಅಹಿಂದ ಸಮುದಾಯಗಳನ್ನೇ ಒಗ್ಗೂಡಿಸುವ ಕೆಲಸ ಸಮರ್ಪಕವಾಗಿ ನಡೆದಿರಲಿಲ್ಲ. ಶಿಗ್ಗಾಂವಿ ಮತ್ತು ಚನ್ನಪಟ್ಟಣಗಳ ಗೆಲುವಿನ ಅಂತರದಲ್ಲಿ ಅಹಿಂದ ಸಮುದಾಯಗಳ ಜೊತೆಗೆ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳ ಮತಗಳೂ ಇವೆ. ಇದೇ ಕಾಂಗ್ರೆಸ್ಸಿನ ಗೆಲುವಿನ ಸೂತ್ರ. ಅಹಿಂದ + ಅದರ ಜೊತೆಗೆ ನಿಲ್ಲಬಲ್ಲ ಜಾತ್ಯತೀತ ಬಲಾಢ್ಯ ಜಾತಿಗಳ ಒಂದಷ್ಟು ಪ್ರಮಾಣ. ಇದನ್ನು ಅರ್ಥ ಮಾಡಿಕೊಳ್ಳದೇ, ಒಕ್ಕಲಿಗ-ಲಿಂಗಾಯತರಿಗೇ ಮಣೆ ಹಾಕುವುದನ್ನು ಕಾಂಗ್ರೆಸ್‌ ಮಾಡುತ್ತಾ ಬರುತ್ತಿದೆ. ಇದೇ ಶಿಗ್ಗಾಂವಿಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಯ ಬದಲಿಗೆ ಲಿಂಗಾಯತರಿಗೇ ಟಿಕೆಟ್‌ ನೀಡಬೇಕೆಂಬ ಪ್ರಸ್ತಾಪವೂ ಅವರಲ್ಲಿತ್ತು.

Advertisements

ಮೂರು, 2023ರ ವಿಧಾನಸಭಾ ಚುನಾವಣಾ ಫಲಿತಾಂಶವು ಮಾಧ್ಯಮಗಳ ಕಾರಣದಿಂದ ಬಂದಿದ್ದಲ್ಲ. ಮಾಧ್ಯಮಗಳು ಬಿಜೆಪಿ ಪರವಾಗಿ, ಕೋಮು ಧ್ರುವೀಕರಣದ ಪರವಾಗಿ ಎಷ್ಟೇ ಕೆಲಸ ಮಾಡಿದರೂ ಫಲಿತಾಂಶ ಅದರ ವಿರುದ್ಧ ಬಂದಿತು. ಈಗಲೂ ಅಷ್ಟೇ ಕಳೆದ ಒಂದೂವರೆ ವರ್ಷಗಳಿಂದ ಕರ್ನಾಟಕದ ಮಾಧ್ಯಮಗಳು ಸತತವಾಗಿ ಗ್ಯಾರಂಟಿ ಯೋಜನೆಗಳ ವಿರುದ್ಧ, ಮುಖ್ಯಮಂತ್ರಿಯ ವಿರುದ್ಧ ಮತ್ತು ಬಿಜೆಪಿಯ ಪರವಾಗಿ ತುತ್ತೂರಿಯೂದಿದರೂ ಜನರು ಅದಕ್ಕೆ ಸೊಪ್ಪು ಹಾಕಿಲ್ಲ. ಇದು ಕಾಂಗ್ರೆಸ್ಸಿಗರಿಗೇ ಮೊದಲು ಮನವರಿಕೆಯಾಗಬೇಕಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?

ನಾಲ್ಕು, ಈ ಚುನಾವಣಾ ಫಲಿತಾಂಶವು ಒಂದು ರೀತಿಯಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಜನರು ನೀಡಿದ ಮತ ಸಹಾ ಆಗಿದೆ. ಅದು ಕೇವಲ ನಿಖಿಲ್‌ ಕುಮಾರಸ್ವಾಮಿ ಮತ್ತು ಭರತ್‌ ಬೊಮ್ಮಾಯಿಯ ಭೀಕರ ಸೋಲಿನಲ್ಲಿ ಮಾತ್ರ ಕಾಣುವುದಿಲ್ಲ; ಸಂಡೂರಿನಲ್ಲಿ ಸಂಸದ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರ ಗೆಲುವಿನ ಅಂತರ ಅಷ್ಟು ಕಡಿಮೆಯಿರುವುದರಲ್ಲೂ ಎದ್ದು ಕಾಣುತ್ತದೆ. ಗೆಲ್ಲಬೇಕೆಂದರೆ, ಕುಟುಂಬಸ್ಥರಿಗೇ ಕೊಡಬೇಕು ಎಂಬುದು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನುಸರಿಸಿದ ಒಂದು ಸೂತ್ರ. ಅದಕ್ಕೆ ಇನ್ನೊಂದು ಕಾರಣವೆಂದರೆ, ಹಣ ಖರ್ಚು ಮಾಡುವುದು ರೊಕ್ಕಸ್ಥ ಅಧಿಕಾರಸ್ಥರಿಗೆ ಸಾಧ್ಯ ಎಂಬುದೂ ಆಗಿದೆ. ಹಣ, ಜಾತಿ, ಕುಟುಂಬವಷ್ಟೇ ಗೆಲುವನ್ನು ತಂದುಕೊಡುವುದಿಲ್ಲ ಎಂಬುದನ್ನು ಜೆಡಿಎಸ್‌ ಮತ್ತು ಬಿಜೆಪಿಗಳು ಮಾತ್ರವಲ್ಲಾ, ಕಾಂಗ್ರೆಸ್‌ ಸಹಾ ಅರಿಯಬೇಕು.

ಐದು, ಈ ಚುನಾವಣೆಯು ಒಗ್ಗಟ್ಟಿನ ರಾಜಕಾರಣ ಮಾಡುವವರಿಗೆ ಬಲ ಕೊಟ್ಟಿದೆ. ಕಾಂಗ್ರೆಸ್ಸಿನಲ್ಲಿ ಆ ಒಗ್ಗಟ್ಟು ಇತ್ತು. ಶಿಗ್ಗಾಂವಿಯಲ್ಲಿ ಸಾಮಾನ್ಯವಾಗಿ ಕೊರತೆಯಾಗುತ್ತಿದ್ದುದು ಅದೇ ಆಗಿತ್ತು. ಈ ಸಾರಿ ಅದನ್ನು ಕಾಂಗ್ರೆಸ್‌ ಸಾಧಿಸಿತು. ಆದರೆ, ಎನ್‌ಡಿಎ ಮೈತ್ರಿಯಲ್ಲಿ ಇರಲಿಲ್ಲ. ಇದ್ದುದರಲ್ಲಿ ಸಂಡೂರಿನ ಬಿಜೆಪಿಯಲ್ಲಿ ಒಗ್ಗಟ್ಟಿತ್ತಾದ್ದರಿಂದ, ಅಲ್ಲಿ ಗೆಲುವಿನ ಅಂತರ ಕಡಿಮೆಯಾಯಿತು. ಅದೇ ಸಂದರ್ಭದಲ್ಲಿ ಬಿಜೆಪಿಯಲ್ಲಿ ಅಂತಹಾ ಒಗ್ಗಟ್ಟಿರಲಿಲ್ಲ. ಚನ್ನಪಟ್ಟಣದಲ್ಲಿ ಎನ್‌ಡಿಎ ಬಿರುಕೇ ಕಾಂಗ್ರೆಸ್ಸಿಗೆ ವರದಾನವೂ ಆಯಿತು. ಕಳೆದ 40 ವರ್ಷಗಳ ಕರ್ನಾಟಕದ ರಾಜಕಾರಣದಲ್ಲಿ ಒಗ್ಗಟ್ಟಾಗಿ ಚುನಾವಣೆಗೆ ಹೋಗದ ಯಾವುದೇ ಪಕ್ಷಕ್ಕೆ ರಾಜ್ಯಮಟ್ಟದಲ್ಲಿ ಬಹುಮತ ಬಂದಿಲ್ಲ ಎಂಬುದನ್ನು ಗಮನಿಸಿದರೆ ಇದರ ಮಹತ್ವ ಅರಿವಾದೀತು.

ಆರು, ಮುಡಾ ವಿಚಾರದಲ್ಲಿ ಕಾಂಗ್ರೆಸ್ಸಿಗೆ, ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗಿದ್ದ ಹಿನ್ನಡೆಗೆ ಈ ಚುನಾವಣಾ ಫಲಿತಾಂಶ ವರದಾನವಾಗಿದೆ ಎಂದು ಎಲ್ಲರೂ ಭಾವಿಸಿದಂತಿದೆ. ಅದು ಸಂಪೂರ್ಣ ವಾಸ್ತವವಲ್ಲ. ಈ ಚುನಾವಣೆಯ ಸಂದರ್ಭದಲ್ಲಿ ಮುಡಾದಿಂದ ಒಳ್ಳೆಯದೂ, ಕೆಟ್ಟದೂ ಎರಡೂ ಆಗಿರಬಹುದು. ಆದರೆ, ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದ ವಿರುದ್ಧವೇ ಕಾಂಗ್ರೆಸ್ಸಿಗೆ 136 ಸೀಟುಗಳಷ್ಟು ಬಹುಮತವನ್ನು ರಾಜ್ಯದ ಜನತೆಯು ನೀಡಿದ್ದು ಎಂಬುದು ಕಾಂಗ್ರೆಸ್ಸಿಗೆ ಇದುವರೆಗೂ ಅರಿವಾದಂತಿಲ್ಲ. ರಾಜ್ಯದ ಅಭಿವೃದ್ಧಿ, ಒಳ್ಳೆಯ ಆಡಳಿತ ಮತ್ತು ಭ್ರಷ್ಟಾಚಾರದ ನಿಗ್ರಹ ಮಾಡಿ, ಮುನ್ನೋಟವುಳ್ಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನಡೆಗಳನ್ನು ಇರಿಸುವುದು ಇದುವರೆಗೂ ಕಾಂಗ್ರೆಸ್‌ ಸರ್ಕಾರದಿಂದ ಆಗಿಲ್ಲ. ಬಿಜೆಪಿಯನ್ನು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಎದುರಿಸಲು ಬೇಕಾದ ಯಾವ ಯೋಜನೆಯೂ ಅವರಲ್ಲಿ ಇದ್ದಂತೆ ಕಾಣುವುದಿಲ್ಲ.

ಈ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಜನತೆ ಇನ್ನೊಂದು ಅವಕಾಶವನ್ನು ಮತ್ತು ಯಥೇಚ್ಛ ಪಾಠಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ನೀಡಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಅಥವಾ ಬಿಡುವುದು ಅವರ ಕೈಯ್ಯಲ್ಲೇ ಇದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X