ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಹೇಗೂ ಮುಗಿಸಿದೆ. ಮುಂದಿನ ಮೂರು ವರ್ಷಗಳಲ್ಲಾದರೂ ಜನಸ್ನೇಹಿ ಸರ್ಕಾರವಾಗದಿದ್ದರೆ, ಕಾಂಗ್ರೆಸ್ ಸರ್ಕಾರವನ್ನು ಜನರಲ್ಲ, ಕಾಂಗ್ರೆಸ್ಸೇ ಉಳಿಸುವುದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ಎರಡು ವರ್ಷ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ ನಡೆಸಿದೆ. ಎರಡು ವರ್ಷಗಳಲ್ಲಿ ಸರ್ಕಾರ, ತನ್ನ ಕಾರ್ಯಕ್ರಮಗಳು, ಅಭಿವೃದ್ಧಿ ಕೆಲಸಗಳು ಹಾಗೂ ಹೊಸ ಯೋಜನೆಗಳ ಮೂಲಕ ರಾಜ್ಯದ ಜನರ ಜೀವನಮಟ್ಟವನ್ನು ಸುಧಾರಣೆ ಮಾಡಿದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಜನರಲ್ಲಿ ಏಳುವ ಪ್ರಶ್ನೆಗಳಿಗಿಂತ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಮತ್ತು ಸಚಿವರಿಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಬೇಕಿತ್ತು. ಏಕೆಂದರೆ, 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಬಡವರು, ಕಾರ್ಮಿಕರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಬಿಜೆಪಿಯ ಸುಳ್ಳು, ದ್ವೇಷ, ಲೂಟಿಗಳಿಂದ ಬೇಸತ್ತಿದ್ದರು. ನೆಮ್ಮದಿಯ ಬದುಕಿಗೆ ಭಂಗ ತಂದಿದ್ದ ಬಿಜೆಪಿಯ ಜನವಿರೋಧಿ ಸರ್ಕಾರ ಮತ್ತೊಮ್ಮೆ ಬರುವುದು ಬೇಡ ಎಂಬ ದೃಢ ನಿರ್ಧಾರಕ್ಕೆ ಬಂದು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದರು. ಹಿರಿಯ ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಹಾಗೂ ಉತ್ಸಾಹಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಚುಕ್ಕಾಣಿ ಹಿಡಿಯಲು ಅವಕಾಶ ಮಾಡಿಕೊಟ್ಟಿದ್ದರು.
ಬಿಜೆಪಿಯ ಬಕಾಸುರ ಭ್ರಷ್ಟಾಚಾರಿಗಳ ಬಿಗಿಮುಷ್ಟಿಯಿಂದ ಬಿಡಿಸಿಕೊಂಡ ರಾಜ್ಯ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ, ಶಾಂತಿ-ಸಹಬಾಳ್ವೆಯ ನಾಡಾಗಿ ಉಳಿಯಬಹುದೆಂಬ ನಿರೀಕ್ಷೆ ಮತದಾರರದಾಗಿತ್ತು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮೊದಲಿಗೆ ಸಿಕ್ಕ ಬಹಳ ದೊಡ್ಡ ಅವಕಾಶವೆಂದರೆ ಬರ. ಬರ ಸಮಸ್ಯೆಯನ್ನು ಸರ್ಕಾರ ಗ್ಯಾರಂಟಿಗಳೊಂದಿಗೆ ತಕ್ಕಮಟ್ಟಿಗೆ ಸಂಭಾಳಿಸಿತು. ಇನ್ನಷ್ಟು ಸಮರ್ಥವಾಗಿ ನಿರ್ವಹಿಸಿದ್ದರೆ, ಖಂಡಿತ ಜನಮನ್ನಣೆಗೆ ಪಾತ್ರವಾಗುತ್ತಿತ್ತು.
ಆದರೆ, ಕಾಂಗ್ರೆಸ್ಸಿಗರ ಜಾಯಮಾನವೋ ಏನೋ, ಅವರು ಅದೇ ಹಳೆಯ ಜಾಡಿಗೆ ಬಿದ್ದರು. ಬರ ನಾಡಿಗೆ, ನಮಗಲ್ಲ ಎಂದರು. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಅದನ್ನು ಸಾಬೀತು ಮಾಡಿದರು. ಅಧಿಕಾರಿಗಳು ಸಚಿವರ ಸೂಚನೆ-ಸಲಹೆಗಳನ್ನು ಪಕ್ಕಕ್ಕೆ ಸರಿಸಿ, ಕೇಳಿದಷ್ಟು ಕೊಟ್ಟು ಬೇಕಾದ ಹುದ್ದೆಯಲ್ಲಿ ಬಂದು ಕೂತರು. ಆಡಳಿತಯಂತ್ರ ಹಳಿ ತಪ್ಪಿ ಸರ್ಕಾರಕ್ಕೆ ಕೆಟ್ಟ ಹೆಸರು ತಂದರು. ಅದಕ್ಕೆ ಸಾಕ್ಷಿಯಾಗಿ ಯಾದಗಿರಿ ಪಿಎಸ್ಐ ಪರಶುರಾಮ್ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡರು. ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಹಗರಣ ಸಚಿವ ನಾಗೇಂದ್ರ ರಾಜೀನಾಮೆ, ಬಂಧನಕ್ಕೂ ಒಳಗಾದರು. ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕತೆಯನ್ನು ಪ್ರದರ್ಶಿಸದೆ, ಜನತೆಯ ಮುಂದೆ ಸತ್ಯಾಸತ್ಯತೆಯನ್ನು ಬಿಚ್ಚಿಡದೆ, ಖಳನಾಯಕನಂತೆ ಕಾಣತೊಡಗಿತು. ಮುಖ್ಯಮಂತ್ರಿಗಳ ಮುಡಾ ಹಗರಣವಂತೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪಕ್ಷದ ವರಿಷ್ಠರಿಗೆ ಮುಜುಗರ ತಂದಿಟ್ಟಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬೆಂಗಳೂರು-ತುಮಕೂರು ಮೆಟ್ರೊ ಯೋಜನೆ ಯಾರಿಗಾಗಿ?
ಇದಕ್ಕೆ ಪುಷ್ಟಿ ನೀಡುವಂತೆ, ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಜವಾಬ್ದಾರಿ ಮರೆತು, ಅಧಿಕಾರದ ಸ್ಥಾನಗಳಿಗಾಗಿ ಆಂತರಿಕ ಕಚ್ಚಾಟದಲ್ಲಿ ನಿರತರಾದರು. ಅನವಶ್ಯಕ ಹೆಚ್ಚುವರಿ ಡಿಸಿಎಂ ಬೇಡಿಕೆಯನ್ನು ಮುನ್ನೆಲೆಗೆ ತಂದು ಅನಗತ್ಯ ಸುದ್ದಿಗೆ ಬಲಿಯಾದರು. ಮತದಾರರಲ್ಲಿ ಭ್ರಮನಿರಸನ ಉಂಟು ಮಾಡಿದರು.
ಏತನ್ಮಧ್ಯೆ, ಲೋಕಸಭಾ ಚುನಾವಣೆ ಎದುರಾಗಿ, 28 ಸ್ಥಾನಗಳಲ್ಲಿ 9 ಸ್ಥಾನ ಗೆದ್ದಾಗ, ಮತದಾರರ ಒಲವು ಕಳೆದುಕೊಂಡಿದ್ದೇವೆ ಎನಿಸಿ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ, ಉಪಚುನಾವಣೆಯಲ್ಲಿ ಮೂರಕ್ಕೆ ಮೂರೂ ಸ್ಥಾನಗಳನ್ನು ಗೆಲ್ಲುವ ಮೂಲಕ, ತನಗೆ ತಾನೇ ಬೆನ್ನು ತಟ್ಟಿಕೊಂಡಿತು. ಸಾಗುತ್ತಿರುವ ಹಾದಿ ಸರಿಯಾಗಿದೆ ಎಂಬ ಭ್ರಮೆಗೆ ಒಳಗಾಯಿತು.
ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುಸರಿಸುತ್ತಿದ್ದ ನೀತಿಗಳನ್ನೇ ಈ ಸರ್ಕಾರ ಕೂಡ ಮುಂದುವರೆಸಿತು. ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಮತದಾರರಿಗೆ ನೀಡಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಬಲವಂತದ ಭೂ ಸ್ವಾಧೀನಕ್ಕೆ ತಡೆ, ಬಗರ್ ಹುಕಂ, ಅರಣ್ಯ ಸಾಗುವಳಿ ರೈತರಿಗೆ ರಕ್ಷಣೆ, ಬೆಂಬಲ ಬೆಲೆ, ಸಂವಿಧಾನ ಹಕ್ಕುಗಳ ಖಾತರಿ, ಕೋಮುವಾದಿ ಕೃತ್ಯಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದಂತಹ ಆಶ್ವಾಸನೆಗಳನ್ನು ಪ್ರಜ್ಞಾಪೂರ್ವಕವಾಗಿ ಮರೆಯಿತು.
ಕಳೆದ ನಾಲ್ಕು ವರ್ಷಗಳಿಂದ ಬಲವಂತ ಹಾಗೂ ಅನ್ಯಾಯದ ಭೂಸ್ವಾಧೀನ ವಿರೋಧಿಸಿ ಹೋರಾಡುತ್ತಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ರೈತರಿಗೆ ಕೊಟ್ಟ ಭರವಸೆಯನ್ನು ಉಲ್ಲಂಘಿಸಿತು. ದೌರ್ಜನ್ಯದ ಮೂಲಕ ಭೂಮಿ ಕಿತ್ತುಕೊಳ್ಳುವ ಅಂತಿಮ ಅಧಿಸೂಚನೆ ಹೊರಡಿಸಿತು. ವಿದ್ಯುತ್ ಖಾಸಗೀಕರಣ, ಕಾರ್ಮಿಕರ ದುಡಿಮೆ ಅವಧಿಯನ್ನು 8ರಿಂದ 12 ಗಂಟೆಗೆ ಏರಿಸುವ ಮೂಲಕ ಮೋದಿ ಸರ್ಕಾರದ ಜನವಿರೋಧಿ ಕಾರ್ಪೊರೇಟ್ ಪರವಾದ ಕ್ರಮಗಳನ್ನು ವೇಗವಾಗಿ ಜಾರಿಗೊಳಿಸುವತ್ತ ಅತ್ಯುತ್ಸಾಹ ತೋರತೊಡಗಿತು.
ಇವುಗಳ ನಡುವೆಯೇ ದೇಶದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳು, ಅಲ್ಪಸ್ವಲ್ಪ ಲೋಪದೋಷಗಳ ನಡುವೆಯೂ ಅಸಮಾನತೆಯಿಂದ ಬಸವಳಿದ ಜನರಿಗೆ ನೆರವಾಗಿವೆ. ಆರ್ಥಿಕ ಚಲನಶೀಲತೆಗೆ ಕಾರಣವಾಗಿವೆ. ಆದರೆ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕರೇ ಗ್ಯಾರಂಟಿ ಬಗ್ಗೆ ಗೊಣಗುತ್ತಿದ್ದಾರೆ. ವಸ್ತುಸ್ಥಿತಿ ಅರಿಯುವ ಗೋಜಿಗೆ ಹೋಗದೆ ಅಪಪ್ರಚಾರಕ್ಕೆ ಇಳಿದಿದ್ದಾರೆ.
ಹಾಗೆ ನೋಡಿದರೆ, ಕಾಂಗ್ರೆಸ್ಸಿನಲ್ಲಿ ಅನುಭವ, ಯೋಗ್ಯತೆ, ಸಾಮರ್ಥ್ಯ, ವರ್ಚಸ್ಸು ಇರುವ ಹಲವಾರು ನಾಯಕರಿದ್ದಾರೆ. ಹಲವು ಖಾತೆಗಳನ್ನು ನಿಭಾಯಿಸಿದ ಹಿರಿಯರಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವವರಿದ್ದಾರೆ. ಆದರೆ, ಇಷ್ಟೆಲ್ಲಾ ಇರುವ ಸರ್ಕಾರಕ್ಕೆ ಒಂದು ಗೊತ್ತು-ಗುರಿ ಇದೆ ಎನ್ನುವ ಭಾವನೆ ಮೂಡುತ್ತಿಲ್ಲ. ಒಂದು ನಿರ್ದಿಷ್ಟ ಹಾದಿಯಲ್ಲಿ ಈ ಸರ್ಕಾರ ಈ ರಾಜ್ಯವನ್ನು ಮುನ್ನಡೆಸುತ್ತದೆ ಎಂಬ ನಂಬಿಕೆ ಹುಟ್ಟುತ್ತಿಲ್ಲ. ಎಲ್ಲರನ್ನೂ ನಿಯಂತ್ರಣದಲ್ಲಿಟ್ಟುಕೊಂಡು ಜನರ ಒಲವನ್ನು ಗಳಿಸಲು ಎಲ್ಲವನ್ನೂ ಮುನ್ನಡೆಸುವ ಶಕ್ತಿಕೇಂದ್ರವೊಂದು ಪಕ್ಷ ಅಥವಾ ಸರ್ಕಾರದೊಳಗಿದೆ ಅಂತ ಕಾಣುತ್ತಿಲ್ಲ. ಚರಿತ್ರೆಯ ತಪ್ಪುಗಳಿಂದ ಪಾಠವನ್ನೂ ಕಲಿಯುತ್ತಿಲ್ಲ.
ಚುನಾಯಿತ ಸರ್ಕಾರಗಳನ್ನು ಬೀಳಿಸುವ ಬಿಜೆಪಿಯ ʼಆಟʼದೆದುರು ಎರಡು ವರ್ಷ ಪೂರೈಸಿದ್ದು ಮಹಾ ಸಾಧನೆಯಾಗಿ ಕಾಂಗ್ರೆಸ್ಸಿಗರಿಗೆ ಕಾಣುತ್ತಿರಬಹುದು. ಆದರೆ, ಜನರಿಗಲ್ಲ. ಕೆಲವು ಇಲಾಖೆಗಳ ಉತ್ಸಾಹಿ ಸಚಿವರಿಂದಾಗಿ ಸಣ್ಣಪುಟ್ಟ ಬದಲಾವಣೆಗಳಾಗಿರಬಹುದು; ಬೆಳವಣಿಗೆ, ಅಭಿವೃದ್ಧಿ ಕಂಡಿರಬಹುದು. ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರದ ಸಾಧನೆ ತೃಪ್ತಿದಾಯಕವಾಗಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಶಾಂತಿ ಬಯಸುವುದು ದೇಶದ್ರೋಹವಲ್ಲ!
ಇದೇ ಸಂದರ್ಭದಲ್ಲಿ ಬಿದ್ದ ಮುಂಗಾರುಪೂರ್ವ ಮಳೆಯಿಂದಾಗಿ ಬೆಂಗಳೂರು ನಗರಿಗರ ಜೀವನ ಅಸ್ತವ್ಯಸ್ತವಾಗಿದೆ. ಬೆಳೆ ನಾಶವಾಗಿ ರೈತರ ಬದುಕು ಬೀದಿಗೆ ಬಂದಿದೆ. ಇಂತಹ ಸಮಯದಲ್ಲಿ ನಡೆದ ಸಾಧನಾ ಸಮಾವೇಶ, ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರದ ಆರೋಪ ಮುಚ್ಚಿಕೊಳ್ಳಲು ನಡೆದ ನಾಟಕದಂತೆ ಕಂಡರೆ ಆಶ್ಚರ್ಯವಿಲ್ಲ.
ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಹೇಗೂ ಮುಗಿಸಿದೆ. ಮುಂದಿನ ಮೂರು ವರ್ಷಗಳಲ್ಲಾದರೂ ಜನಸ್ನೇಹಿ ಸರ್ಕಾರವಾಗದಿದ್ದರೆ, ಕಾಂಗ್ರೆಸ್ ಸರ್ಕಾರವನ್ನು ಜನರಲ್ಲ, ಕಾಂಗ್ರೆಸ್ಸೇ ಉಳಿಸುವುದಿಲ್ಲ.
