ಈ ದಿನ ಸಂಪಾದಕೀಯ | ಜಾತಿ ಜನಗಣತಿ: ಬಲಾಢ್ಯ ಸಮುದಾಯಗಳಿಗೆ ಶರಣಾಯಿತೇ ಸರ್ಕಾರ?

Date:

Advertisements
ಈ ಬಾರಿಯಾದರೂ ರಾಜ್ಯ ಸರ್ಕಾರ ಹೇಳಿದ ಸಮಯದೊಳಗೆ ಸಮೀಕ್ಷೆ ಮುಗಿಸಿ, ವರದಿಯನ್ನು ಜಾರಿಗೆ ತರುವ ಬದ್ಧತೆ ತೋರಬೇಕಿದೆ.

1972ರಲ್ಲಿ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾದರು. ಅರಸು ಅತಿ ಸಣ್ಣ ಸಮುದಾಯದಿಂದ ಬಂದು ಮುಖ್ಯಮಂತ್ರಿಯಾದವರು. ಇವರು ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆ, ಕರ್ನಾಟಕದ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದವರು; ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರು. ಸಣ್ಣ ಪುಟ್ಟ ಜಾತಿಯ ಜನ ಮುಖ್ಯಮಂತ್ರಿಯಾದ ಉದಾಹರಣೆ ಇರಲಿಲ್ಲ.

ಅಂತಹ ಸಂದಿಗ್ಧ ಸಂದರ್ಭದಲ್ಲಿ ಮುಖ್ಯಮಂತ್ರಿಯಾದ ಅರಸು, ಅಧಿಕಾರಕ್ಕೇರಿದ ಐದೇ ತಿಂಗಳಿಗೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಲು ಹಾವನೂರ್ ಆಯೋಗ ರಚಿಸಿದರು. ಅದಕ್ಕೆ ವಿರೋಧ ವ್ಯಕ್ತವಾಗಿ, ಕುರ್ಚಿಗೆ ಕಂಟಕ ತರುತ್ತದೆ ಎಂಬುದರ ಅರಿವಿತ್ತು. ಅರಿವಿದ್ದೂ ಸಮಿತಿ ರಚಿಸಿದ್ದು, 1975ರಲ್ಲಿ ವರದಿ ಸ್ವೀಕರಿಸಿದ್ದು, ಅನುಷ್ಠಾನಕ್ಕೆ ತಂದದ್ದು ಅರಸರ ರಾಜಕೀಯ ಇಚ್ಛಾಶಕ್ತಿಗೊಂದು ಉತ್ತಮ ಉದಾಹರಣೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭ್ರಷ್ಟಾಚಾರಿಯನ್ನು ಶಿಕ್ಷಿಸುವುದಾದರೆ ಕೋಮುವಾದಿಯನ್ನು ರಕ್ಷಿಸಬಹುದೇ?

Advertisements

ಅರಸು ಆಳ್ವಿಕೆಯ ಮುಂದುವರೆದ ಭಾಗವಾಗಿ, ಅದೇ ಹಿಂದುಳಿದ ವರ್ಗದಿಂದ ಬಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಲು 2015ರಲ್ಲಿ ಕಾಂತರಾಜ ಆಯೋಗದ ನೇತೃತ್ವದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾದರು. ಅದಕ್ಕಾಗಿ 160 ಕೋಟಿ ರೂ.ಗಳನ್ನು ಧಾರಾಳವಾಗಿ ನೀಡಿದರು. ಸಮೀಕ್ಷೆ ನಡೆದು, ವರದಿ ಸಿದ್ದವಾದಾಗ, ‘ವರದಿ ಅಂಗೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು. ಕಳೆದ ಹತ್ತು ವರ್ಷಗಳಲ್ಲಿ ಸ್ವತಃ ಸಿದ್ದರಾಮಯ್ಯನವರೇ ನೂರಾರು ಸಲ ‘ಬದ್ಧತೆ’ ಪದ ಬಳಸಿ, ಹೇಳುತ್ತಲೇ ಬಂದರು.

ಆದರೆ, ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಸಂವಾದ, ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ. ಕೊಡುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರ ಸರ್ಕಾರ, ಆನಂತರ ಬಂದ ಕುಮಾರಸ್ವಾಮಿಯವರ ಮೈತ್ರಿ ಸರ್ಕಾರ, ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಮತ್ತು ಈಗಿನ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡಲಿಲ್ಲ. ಆ ಮೂಲಕ ಎಲ್ಲ ಪಕ್ಷಗಳ ರಾಜಕೀಯ ನಾಯಕರು ನಿಧಾನದ್ರೋಹ ಎಸಗಿದ ಅಪರಾಧಕ್ಕೆ ಒಳಗಾಗದೆ ಇರಲಿಲ್ಲ.

ಹತ್ತು ವರ್ಷಗಳ ಹಿಂದೆ ಸರಕಾರ ರಚಿಸಿದ್ದ ಕಾಂತರಾಜ ಆಯೋಗ ನಡೆಸಿದ ಸಮೀಕ್ಷಾ ವರದಿಯನ್ನು ಕಾಂಗ್ರೆಸ್ ಸರಕಾರ ತಿಂಗಳ ಹಿಂದೆಯಷ್ಟೇ ರಾಜ್ಯ ಸಚಿವ ಸಂಪುಟದ ಸಭೆ ಮುಂದೆ ಮಂಡಿಸಿತ್ತು. ಆ ವರದಿಗೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಹಲವು ಬಾರಿ ಸಂಪುಟ ಸಭೆಯಲ್ಲಿ ಚರ್ಚೆ ನಡೆದರೂ ಒಮ್ಮತ ಏರ್ಪಡದ ಹಿನ್ನೆಲೆಯಲ್ಲಿ ಮುಂದೂಡುತ್ತಲೇ ಬರಲಾಗಿತ್ತು. ಇದೇ ವೇಳೆ ಈ ವರದಿಯ ಕುರಿತಂತೆ ಸಾಮಾಜಿಕ ಕಾರ್ಯಕರ್ತರು, ಮಠಾಧೀಶರು, ವಿವಿಧ ಸಮುದಾಯಗಳ ರಾಜಕೀಯ ನಾಯಕರು, ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಈಗ, ಹತ್ತು ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆಯಿಂದ ಹೊರಗುಳಿದಿರುವ ಕೆಲವು ಸಮುದಾಯಗಳ ಆತಂಕಗಳನ್ನು ಪರಿಹರಿಸಲು ರಾಜ್ಯದಲ್ಲಿ ಜಾತಿ ದತ್ತಾಂಶಗಳ ಮರು ಎಣಿಕೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಉನ್ನತ ನಾಯಕರು ತಿಳಿಸಿದ್ದಾರೆ. ಅಂದರೆ, ಹಳೆಯದಾಗಿದೆ, ಅಂಕಿ-ಅಂಶಗಳು ಬದಲಾಗಿವೆ ಎಂಬ ನೆಪ ಮುಂದಿಟ್ಟು, ಕಾಂತರಾಜ ವರದಿಯನ್ನು ತಿರಸ್ಕರಿಸಿದ್ದಾರೆ. ಪಕ್ಷದ ಹೈಕಮಾಂಡ್ ಆದೇಶಕ್ಕೆ ಮಣಿದು, ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ನಡೆಸುವುದಾಗಿ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಘೋಷಣೆ ಮತ್ತು ಸರ್ಕಾರದ ನಡೆ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕವಾಗಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಾತಿಗಣತಿಯನ್ನು ರಾಜಕೀಯ ಕಾರಣಗಳಿಗಾಗಿ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದಕ್ಕಾಗಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಕಾಂತರಾಜ ಆಯೋಗದ ವರದಿಯನ್ನು ಬಲಾಢ್ಯ ಜಾತಿಗಳಾದ ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರು ಅವೈಜ್ಞಾನಿಕ ಎಂದು ದೂರಿದ್ದರು, ಒಪ್ಪದೆ ವಿರೋಧಿಸಿದ್ದರು. ಈಗ ಮತ್ತೊಮ್ಮೆ ಜಾತಿಗಣತಿ ಎಂದಾಗ, ಆ ಬಲಾಢ್ಯರ ಜಾತಿ ದಬ್ಬಾಳಿಕೆಗೆ ಸರ್ಕಾರ ಶರಣಾಯಿತೇ ಎಂಬ ಅನುಮಾನ ಮೂಡತೊಡಗಿದೆ.

ಏಕೆಂದರೆ, ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರದ ಮೋದಿ ಸರ್ಕಾರ, 2021ರಲ್ಲಿ ಜಾತಿ ಜನಗಣತಿ ಮಾಡಬೇಕಿತ್ತು. ಕೋವಿಡ್ ನೆಪ ಮುಂದಿಟ್ಟು ತಪ್ಪಿಸಿಕೊಂಡಿತ್ತು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಲು ಮೋದಿ ಹಿಂದೇಟು ಹಾಕುತ್ತಿದ್ದಾರೆಂದು ದೂರುತ್ತಿತ್ತು. ಈಗ ಬಿಜೆಪಿ ಮತ್ತು ಮೋದಿ ಆ ಅಪವಾದದಿಂದ ಮುಕ್ತರಾಗಲು ದೇಶದಾದ್ಯಂತ ಜಾತಿ ಜನಗಣತಿ ಮಾಡಲು ತೀರ್ಮಾನಿಸಿದ್ದಾರೆ. ಮುಂದಿನವರ್ಷ ಈ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿ ವೇಳಾಪಟ್ಟಿಯನ್ನೂ ಪ್ರಕಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡ ಜಾತಿ ಜನಗಣತಿಗೆ ಮುಂದಾಗಿದೆ. ಈ ಬಾರಿ ತಂತ್ರಜ್ಞಾನ ಆಧರಿತ ಆನ್‌ಲೈನ್‌ ಸಮೀಕ್ಷೆ ನಡೆಸಲು ಚಿಂತನೆ ನಡೆಸಿರುವ ಸರ್ಕಾರ, 90 ದಿನಗಳ ಒಳಗಾಗಿ ಇಡೀ ಸಮೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಹೇಳಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಪಾಯಕಾರಿ ಪ್ಲಾಸ್ಟಿಕ್: ಮನ್ಸೂರ್ ಮಾತುಗಳನ್ನು ಸರ್ಕಾರ-ಜನ ಆಲಿಸುವರೇ?

ಈ ಬಾರಿಯಾದರೂ ರಾಜ್ಯ ಸರ್ಕಾರ ಹೇಳಿದ ಸಮಯದೊಳಗೆ ಸಮೀಕ್ಷೆ ಮುಗಿಸಿ, ವರದಿಯನ್ನು ಜಾರಿಗೆ ತರುವ ಬದ್ಧತೆ ತೋರಬೇಕಿದೆ. ಹಾಗೆಯೇ ಬಲಾಢ್ಯ ಜಾತಿಗಳಾದ ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರು, ಆಗಲೂ ವರದಿ ಅವೈಜ್ಞಾನಿಕ ಎಂದು ಕ್ಯಾತೆ ತೆಗೆದರೆ, ನಿಮ್ಮ ನಿಲುವೇನು ಎಂಬುದನ್ನು ಈಗಲೇ ಖಾತ್ರಿಪಡಿಸಬೇಕಿದೆ. ಅವರಿಗೆ ಸೊಪ್ಪು ಹಾಕದೆ ಅದನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸುತ್ತೇವೆ, ಬಹುಮತದ ಮೂಲಕ, ಪ್ರಜಾತಾಂತ್ರಿಕವಾಗಿ ಜಾರಿಗೊಳಿಸುತ್ತೇವೆ‌ ಎನ್ನುವ ಇಚ್ಛಾಶಕ್ತಿಯನ್ನು ಸಿದ್ದರಾಮಯ್ಯನವರು ತೋರಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X