ಈ ದಿನ ಸಂಪಾದಕೀಯ | ವ್ಯಕ್ತಿ, ಕುಟುಂಬ, ಜಾತಿ ಪ್ರತಿಷ್ಠೆಯ ಕಣ ಚನ್ನಪಟ್ಟಣ

Date:

ಒಂದು ಕಡೆ ಕುಮಾರಸ್ವಾಮಿ, ಮತ್ತೊಂದು ಕಡೆ ಶಿವಕುಮಾರ್- ಇಬ್ಬರೂ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಜನರ ಮತಗಳಿಂದ ಬೆಳೆದು ಬೆಟ್ಟವಾಗಿದ್ದಾರೆ. ಆ ಜಿಲ್ಲೆಗಳನ್ನೇ ಖರೀದಿಸುವಷ್ಟು ಶ್ರೀಮಂತರಾಗಿದ್ದಾರೆ. ಈಗ ಮತ್ತೆ ಅದೇ ಜಾತಿಯನ್ನು ಮುಂದೆ ಮಾಡಿ, ಕುಟುಂಬದ ಕುಡಿಗಳನ್ನು ಕಣಕ್ಕಿಳಿಸಿ, ಗೆಲ್ಲಲು ಹವಣಿಸುತ್ತಿದ್ದಾರೆ. ಇವರ ನಡುವೆ ಯೋಗೇಶ್ವರ್ ಎದ್ದು ನಿಂತಿದ್ದಾರೆ... 

‘ಬಿಜೆಪಿ ಪಕ್ಷದಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಈ ಭಾಗದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂದು ಬಯಸಿದ್ದೇನೆ. ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದಿದ್ದಾರೆ ಚನ್ನಪಟ್ಟಣದ ಉಪಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿರುವ ಸಿ.ಪಿ. ಯೋಗೇಶ್ವರ್.

ಅದಕ್ಕೆ ಪೂರ್ವಭಾವಿಯಾಗಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ‘ನಾನಿನ್ನೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ’ ಎಂದು ಕೂಡ ಹೇಳಿದ್ದಾರೆ. ಅಂದರೆ, ಮಾತು-ಕತೆ ಎಲ್ಲ ಮುಗಿದಿದೆ, ಟಿಕೆಟ್‌ಗಾಗಿ ಇನ್ನು ಕಾಯುವುದಿಲ್ಲ, ಕಾಯುವುದರಲ್ಲಿ ಅರ್ಥವೂ ಇಲ್ಲ ಎನ್ನುವುದನ್ನು ಬಿಜೆಪಿಯ ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹಾಗೆಯೇ ಸ್ವತಂತ್ರ ಅಭ್ಯರ್ಥಿಯಿಂದ ಹಿಡಿದು ಕಾಂಗ್ರೆಸ್, ಸಮಾಜವಾದಿ ಮತ್ತು ಬಿಜೆಪಿಯಿಂದ ಗೆದ್ದು, ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

ರಾಜ್ಯ ಬಿಜೆಪಿ ಈಗ ನಾಯಕರಿಲ್ಲದೆ ನರಳುತ್ತಿದೆ. ಇರುವ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಹೊಂದಾಣಿಕೆ ರಾಜಕಾರಣಕ್ಕೆ ಹೆಸರಾಗಿ, ಹೆಸರು ಕೆಡಿಸಿಕೊಂಡಿದ್ದಾರೆ. ಪಕ್ಷದ ಮೇಲೆ ಹೈಕಮಾಂಡ್ ಹಿಡಿತ ಇಲ್ಲವಾಗಿದೆ. ಇರುವ ಮೂರು ಮತ್ತೊಂದು ನಾಯಕರ ನಡುವೆ, ಹತ್ತಾರು ಗುಂಪುಗಳು, ಸ್ವಾರ್ಥಪರ ಯೋಚನೆಗಳು ಮೆರೆದಾಡುತ್ತಿವೆ. ಜೊತೆಗೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ, ಕಾಂಗ್ರೆಸ್‌fಗೆ ಎದುರಾಗಿ ಎದೆಯುಬ್ಬಿಸಿ ನಿಲ್ಲುವಾಗಲೆಲ್ಲ ಕುಮಾರಸ್ವಾಮಿಯವರನ್ನು ಮುಂದೆ ಬಿಡುತ್ತಿದೆ. ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮೇಲಿನ ವೈಯಕ್ತಿಕ ದ್ವೇಷಾಸೂಯೆಗಳಿಗಾಗಿ, ದೊಡ್ಡ ದನಿಯಲ್ಲಿ ಕೂಗಾಡಿ, ಈಗ ಹಳೆಯ ಕೇಸುಗಳನ್ನು ಕೆದಕಲು ಕಾಂಗ್ರೆಸ್ಸಿಗೆ ಕೆಲಸ ಕೊಟ್ಟಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ರಾಜ್ಯ ಬಿಜೆಪಿಯ ಸ್ಥಿತಿ ಹೀಗಿರುವಾಗ, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವಾಗ, ಚನ್ನಪಟ್ಟಣದಲ್ಲಿ ಜೆಡಿಎಸ್ ಗೆದ್ದಿರುವಾಗ, ಕುಮಾರಸ್ವಾಮಿಯವರು ಹೇಳಿದವರಿಗೇ ಟಿಕೆಟ್- ಎನ್ನುವುದು ಬಿಜೆಪಿ ನಾಯಕರ ಒಮ್ಮತದ ನಿರ್ಧಾರವಾಗಿದೆ.  

ಹಾಗೆ ನೋಡಿದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 16 ಸಾವಿರ ಮತಗಳ ಅಂತರದಿಂದ ಸೋತಿದ್ದ ಯೋಗೇಶ್ವರ್, ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಮೈತ್ರಿ ಅಭ್ಯರ್ಥಿಯಾದ ಕ್ಷಣದಿಂದ, ಸೋತ ಜಾಗದಿಂದಲೇ ಗೆಲುವು ಕಾಣಬೇಕೆಂಬ ತೀರ್ಮಾನಕ್ಕೆ ಬಂದಿದ್ದರು. ಅದಕ್ಕಾಗಿ ಬೇಕಾದ ತಯಾರಿ ನಡೆಸಿದ್ದರು. ಬದ್ಧವೈರಿಗಳಂತಿದ್ದ ದೇವೇಗೌಡ ಮತ್ತು ಕುಮಾರಸ್ವಾಮಿಯವರ ಮನ ಗೆಲ್ಲಬೇಕೆಂದು, ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ. ಮಂಜುನಾಥರನ್ನು ಗೆಲ್ಲಿಸಿಕೊಂಡು ಬರುವ ವಾಗ್ದಾನ ನೀಡಿದ್ದರು. ಬಲಿಷ್ಠ ಡಿಕೆ ಸಹೋದರರನ್ನು ಎದುರು ಹಾಕಿಕೊಂಡಿದ್ದರು. ತಮ್ಮೆಲ್ಲ ಬುದ್ಧಿ-ಶಕ್ತಿ ಸುರಿದು ಗೆಲ್ಲಿಸಿಕೊಂಡು ಬಂದಿದ್ದರು.  

ಇಷ್ಟೆಲ್ಲ ಆದಮೇಲೂ, ಕುಮಾರಸ್ವಾಮಿಯವರು ಚನ್ನಪಟ್ಟಣ ಟಿಕೆಟ್ ವಿಚಾರ ಬಂದಾಗಲೆಲ್ಲ, ಯೋಗೇಶ್ವರ್ ಅವರನ್ನು ಪಟ್ಟಿಗೂ ಪರಿಗಣಿಸದೆ ನಿರ್ಲಕ್ಷಿಸಿದರು. ತಮ್ಮ ಕುಟುಂಬದ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂಬ ಸೌಜನ್ಯಕ್ಕಾದರೂ ಕರೆದು ಮಾತನಾಡಿಸದೆ ಉದಾಸೀನ ತೋರಿದರು. ಕೊನೆಗೆ ಯೋಗೇಶ್ವರ್ ಅವರೇ ಸೋತು, ‘ಜೆಡಿಎಸ್ ಚಿನ್ಹೆಯಿಂದ ಸ್ಪರ್ಧಿಸಲು ಸಿದ್ಧ’ ಎಂದು ಬಹಿರಂಗವಾಗಿ ಹೇಳಿದಾಗಲೂ, ವ್ಯಂಗ್ಯವಾಗಿ ನಕ್ಕು ಲೇವಡಿ ಮಾಡಿದರು.

ಐದು ಬಾರಿ ಶಾಸಕರಾಗಿ ಗೆದ್ದಿದ್ದರೂ, ಬಿಜೆಪಿ ಬಲವರ್ಧನೆಗೆ ಶ್ರಮಿಸಿದರೂ ಪಕ್ಷದ ವತಿಯಿಂದ ತಿರಸ್ಕಾರ; ಗೌಡರ ಕುಟುಂಬದ ಗೆಲುವಿಗಾಗಿ ಶ್ರಮಿಸಿದರೂ ಸಿಗದ ಪುರಸ್ಕಾರ. ಇದರಿಂದ ಬೇಸತ್ತ ಯೋಗೇಶ್ವರ್, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. ಕುಮಾರಸ್ವಾಮಿಯವರ ನಿಲುವು ಕುರಿತು, ‘ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ದಿನದಿಂದಲೂ ಮಗ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿಯೇ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಆ ಭಾವನೆ ಇರುವಾಗ ನಾನು ಟಿಕೆಟ್ ಕಿತ್ತುಕೊಳ್ಳಲು ಆಗುತ್ತದಾ’ ಎಂದು ಕುಮಾರಸ್ವಾಮಿಯವರ ಒಳಾಸೆಯನ್ನು ಹೊರಗಿಟ್ಟರು. ಆ ಮೂಲಕ ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿಯವರಿಗೂ ಸ್ಪಷ್ಟ ಸಂದೇಶ ರವಾನಿಸಿದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಟ್ರಂಪ್-ನೆತನ್ಯಾಹು ಮೇಲೇಕೆ ಭಾರತೀಯರಿಗೆ ಪ್ರೀತಿ?

ಏತನ್ಮಧ್ಯೆ ಯೋಗೇಶ್ವರ್, ಪ್ರಬಲ ಎದುರಾಳಿ ಎಂದುಕೊಂಡಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲಿಲ್ಲ. ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗುತ್ತಾರ ಎಂಬ ಸುಳಿವನ್ನೂ ಬಿಟ್ಟುಕೊಡಲಿಲ್ಲ.

ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ, ಕಳೆದ 30 ವರ್ಷಗಳಿಂದ ಎಚ್.ಡಿ. ದೇವೇಗೌಡರು ರಾಮನಗರಕ್ಕೆ ವಲಸೆ ಬಂದು, ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದರು. ಅಷ್ಟೇ ಅಲ್ಲ, ಪುತ್ರ ಎಚ್.ಡಿ. ಕುಮಾರಸ್ವಾಮಿಯವರು ಎರಡು ಸಲ ಮುಖ್ಯಮಂತ್ರಿಯಾದರು. ಕೇಂದ್ರ ಕೈಗಾರಿಕಾ ಸಚಿವರೂ ಆದರು. ಸಾಲದು ಎಂದು, ಬೀಗರಾದ ತಮ್ಮಣ್ಣ, ಅಳಿಯ ಡಾ. ಮಂಜುನಾಥ್, ಸೊಸೆ ಅನಿತಾ, ಮೊಮ್ಮಗ ನಿಖಿಲ್ ಆದಿಯಾಗಿ ಗೌಡರ ಕುಟುಂಬ ರಾಮನಗರ ಜಿಲ್ಲೆಯನ್ನು ಆಕ್ರಮಿಸಿಕೊಂಡಿತು.   

ಅದೇ ರೀತಿ ಕಳೆದ 40 ವರ್ಷಗಳ ಹಿಂದೆ ಸಾಮಾನ್ಯ ರೈತನ ಮಗನಾಗಿದ್ದ ಡಿ.ಕೆ. ಶಿವಕುಮಾರ್, ಶಾಸಕ, ಸಚಿವರಾದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯೂ ಆದರು. ಸಹೋದರ ಡಿ.ಕೆ.ಸುರೇಶ್‌ರನ್ನು ಸಂಸದರನ್ನಾಗಿ, ಮಾವನ ಮಗ ರವಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಆವರಿಸಿಕೊಂಡರು.

ಒಂದು ಕಡೆ ಕುಮಾರಸ್ವಾಮಿ, ಮತ್ತೊಂದು ಕಡೆ ಶಿವಕುಮಾರ್- ಇಬ್ಬರೂ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಜನರ ಮತಗಳಿಂದ ಬೆಳೆದು ಬೆಟ್ಟವಾಗಿದ್ದಾರೆ. ಆ ಜಿಲ್ಲೆಗಳನ್ನೇ ಖರೀದಿಸುವಷ್ಟು ಶ್ರೀಮಂತರಾಗಿದ್ದಾರೆ. ಈಗ ಮತ್ತೆ ಅದೇ ಜಾತಿಯನ್ನು ಮುಂದೆ ಮಾಡಿ, ಕುಟುಂಬದ ಕುಡಿಗಳನ್ನು ಕಣಕ್ಕಿಳಿಸಿ, ಗೆಲ್ಲಲು ಹವಣಿಸುತ್ತಿದ್ದಾರೆ.

‍ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್- ಇಬ್ಬರೂ ಫ್ಯೂಡಲ್‌ಗಳೇ. ಕುಟುಂಬ, ವಂಶ ಪಾರಂಪರ್ಯ ರಾಜಕಾರಣಕ್ಕೆ ಜೋತುಬಿದ್ದವರೇ. ಈ ಭಾಗದ ಜನರನ್ನು ಪ್ರತಿ ಚುನಾವಣೆಯಲ್ಲೂ ‘ಉದ್ಧಾರ’ ಮಾಡುವ ಉಸಾಬರಿ ಹೊತ್ತುಕೊಂಡವರೇ. ಉದ್ಧಾರ ಆಗಿದೆಯೇ ಎಂಬುದನ್ನು ಜನ ತೀರ್ಮಾನ ಮಾಡಬೇಕಿದೆ.

ಈ ಇಬ್ಬರು ಬಲಾಢ್ಯರು, ಬಲಿಷ್ಠರ ನಡುವೆ ವ್ಯಕ್ತಿ ವರ್ಚಸ್ಸಿನಿಂದ ಯೋಗೇಶ್ವರ್, ಎದ್ದು ನಿಂತಿದ್ದಾರೆ. ಸ್ಥಳೀಯರು, ಸೋತವರು ಎಂಬ ಅನುಕಂಪವೂ ಜೊತೆಗಿದೆ. ಇರುವ ಮೂವರಲ್ಲಿ, ಕಡಿಮೆ ಕಳ್ಳರನ್ನು ಆರಿಸಿಕೊಳ್ಳುವ ಜಾಣ್ಮೆಯನ್ನು ಚನ್ನಪಟ್ಟಣದ ಜನತೆ ತೋರಬೇಕಿದೆ.  

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಎಚ್‌ಡಿಕೆ V/s ಎಡಿಜಿಪಿ ಚಂದ್ರಶೇಖರ್‌- ಇದು ಸಾಮಾನ್ಯ ವಿದ್ಯಮಾನವಲ್ಲ

ಕಾನೂನಿನ ಪ್ರಕಾರ ಹಾಗೂ ನ್ಯಾಯಸಂಹಿತೆಯಂತೆ ಎಡಿಜಿಪಿ ಚಂದ್ರಶೇಖರ್‌ ಸರಿಯಾಗಿಯೇ ಮಾಡುತ್ತಿದ್ದಾರೆ. ಈ...

ಈ ದಿನ ಸಂಪಾದಕೀಯ | ಮುಂಬೈನ ಧಾರಾವಿ ಕೊಳೆಗೇರಿ ಪುನರಭಿವೃದ್ಧಿ ಎಂಬ ದೈತ್ಯ ಹಗರಣ

ಮುಂಬೈನ ಧಾರಾವಿ ಕೊಳೆಗೇರಿಯನ್ನು ಪುನರಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯ...

ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು

187 ಕೋಟಿ ಖರ್ಚು ಮಾಡಿ, ನಾಲ್ಕು ವರ್ಷ ನಾಡಿನ ಶಿಕ್ಷಕರು ರಾಜ್ಯದಾದ್ಯಂತ...

ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!

ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ...