ಸರ್ಕಾರಿ ಶಾಲೆಗಳ ಕುರಿತು ಮಲ್ಲಿಕಾರ್ಜುನ ಖರ್ಗೆಯವರು ಪ್ರಶ್ನೆ ಮಾಡಿದ್ದು ಸರಿಯಾಗಿದೆ. ಆದರೆ, ತಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದ ಶೈಕ್ಷಣಿಕ ಸ್ಥಿತಿಗತಿಯತ್ತ ಗಮನ ಹರಿಸಿ, ಪ್ರಶ್ನಿಸುವ ಅಗತ್ಯ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
ʼದೇಶದಲ್ಲಿ ಸರ್ಕಾರಿ ಶಾಲೆಗಳು ಬಂದ್ ಆಗುತ್ತಿವೆ. ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಹೊರಗುಳಿಯುತ್ತಿದ್ದಾರೆ. ನವೋದಯ ವಿದ್ಯಾಲಯಗಳಲ್ಲಿ 40 ಸಾವಿರ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 5,400 ಹುದ್ದೆಗಳು ಖಾಲಿ ಇವೆ. ಅಲ್ಲದೆ ದೇಶದಾದ್ಯಂತ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಹೀಗೆ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಿದರೆ, ಬಡವರ ಮಕ್ಕಳು ಎಲ್ಲಿ ಕಲಿಯಬೇಕು?ʼ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಎತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರು ಬಡ ಕುಟುಂಬದಿಂದ ಬಂದವರು. ಹಸಿವು, ಅವಮಾನ, ಶೋಷಣೆಗಳೊಂದಿಗೇ ಬದುಕಿದವರು. ಸರ್ಕಾರಿ ಶಾಲೆಯ ಸ್ಥಿತಿ-ಗತಿಗಳನ್ನು, ಕಲಿಕೆಯ ಕಷ್ಟ-ಸುಖಗಳನ್ನು ಅರಿವತರು. ಕಷ್ಟಪಟ್ಟು ಓದಿ ಹಂತ ಹಂತವಾಗಿ ಮೇಲೆ ಬಂದವರು. ರಾಷ್ಟ್ರೀಯ ಪಕ್ಷವೊಂದರ ಉನ್ನತ ಸ್ಥಾನವನ್ನು ಅಲಂಕರಿಸಿದವರು. ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾದರೂ, ನಡೆದುಬಂದ ದಾರಿಯನ್ನು ಮರೆಯದವರು. ಬಡವರ ಮಕ್ಕಳ ಕಲಿಕೆಯ ಬಗೆಗಿನ ಕಳಕಳಿ ಮತ್ತು ಕಾಳಜಿ ವ್ಯಕ್ತಪಡಿಸುವ ಮೂಲಕ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ.
ಹಾಗೆಯೇ ಕೇಂದ್ರದ ಒಕ್ಕೂಟ ಸರ್ಕಾರದ ಕಾರ್ಯವೈಖರಿಯನ್ನು, ಪ್ರಧಾನಿ ಮೋದಿಯವರ ಶೈಕ್ಷಣಿಕ ʼಅರ್ಹತೆʼಯನ್ನು ಅರಿತ ಖರ್ಗೆಯವರು, ಆರ್‌ಎಸ್‌ಎಸ್ ಆಣತಿಯಂತೆ ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣಗೊಳಿಸಿರುವುದನ್ನು ಹಾಗೂ ಕಾರ್ಪೊರೇಟ್ ಕುಳಗಳ ಕೈಗೆ ಕೊಟ್ಟಿರುವುದನ್ನು ಕಳೆದ ಹನ್ನೊಂದು ವರ್ಷಗಳಿಂದ ಬಹಳ ಹತ್ತಿರದಿಂದ ಕಂಡವರು. ಹಾಗಾಗಿ ಖರ್ಗೆಯವರು ಕೊಂಚ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ; ಬಿಜೆಪಿ ವಿರೋಧವೇ ಅಸಾಂವಿಧಾನಿಕ
ಇದೇ ಸಂದರ್ಭದಲ್ಲಿ ಸೋಮವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸ್ಥಾಯಿ ಸಮಿತಿಯು ಸಂಸತ್ತಿನಲ್ಲಿ ಸರ್ಕಾರ ನೀಡುವ ವಾರ್ಷಿಕ ವಿದ್ಯಾರ್ಥಿ ವೇತನವು ಇಂದಿನ ಕಾಲದಲ್ಲಿ ಶಿಕ್ಷಣದ ವೆಚ್ಚವನ್ನು ಪೂರೈಸಲು ಸಾಕಾಗುವುದಿಲ್ಲ. ಹಣದುಬ್ಬರವನ್ನು ನಿಯಂತ್ರಿಸಬೇಕಾದರೆ ವಿದ್ಯಾರ್ಥಿ ವೇತನದ ಮೊತ್ತವನ್ನು ಪರಿಶೀಲಿಸಬೇಕು ಎಂದು ಶಿಫಾರಸು ಮಾಡಿದೆ.
ಹಾಗೆಯೇ 2022-23ರಲ್ಲಿ 6,410.09 ಕೋಟಿ ರೂ. ಮತ್ತು 2023-24 ರಲ್ಲಿ 7,830.26 ಕೋಟಿ ರೂ.ಗಳನ್ನು ವಿವಿಧ ಶೈಕ್ಷಣಿಕ ಯೋಜನೆಗಳಿಗಾಗಿ ಇಲಾಖೆಯ ವೆಚ್ಚ ಮಾಡಿದೆ ಎಂದು ಸಮಿತಿ ಉಲ್ಲೇಖಿಸಿದೆ. ಆದರೆ ವಿವಿಧ ಯೋಜನೆಗಳಿಗೆ ಎತ್ತಿಟ್ಟ ನಿಧಿ ಬಳಸಿದ್ದರಿಂದ, ವಿದ್ಯಾರ್ಥಿ ವೇತನ ಕಡಿತಗೊಳ್ಳುತ್ತಿದೆ. 2025ರ ಫೆಬ್ರವರಿವರೆಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಇಲಾಖೆಯು ಕೇವಲ 3,403.51 ಕೋಟಿ ರೂ.ಗಳನ್ನು ಮಾತ್ರ ಖರ್ಚಾಗಿದೆ ಎಂದೂ ಹೇಳಿದೆ.
ಮಲ್ಲಿಕಾರ್ಜುನ ಖರ್ಗೆಯವರ ಪ್ರಶ್ನೆ ಮತ್ತು ಸಂಸದೀಯ ಸಮಿತಿಯ ಶಿಫಾರಸು- ಎರಡೂ ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ಶೈಕ್ಷಣಿಕ ಕ್ಷೇತ್ರದ ಸದ್ಯದ ಸ್ಥಿತಿಯನ್ನು ಎತ್ತಿ ತೋರುತ್ತಿವೆ.
ದೇಶದ ಕಡು ಬಡವರನ್ನೂ ಒಳಗೊಂಡಂತೆ ನಾಗರಿಕರಿಂದ ತೆರಿಗೆ ರೂಪದಲ್ಲಿ ಸರಕಾರಕ್ಕೆ ಸಂದಾಯವಾಗುವ ಹಣವು ಪ್ರಜೆಗಳಿಗಾಗಿ ವಿನಿಯೋಗಿಸುವ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಲುವಾಗಿಯೇ ಇರುವುದು. ಆ ಹಣವನ್ನು ವಿನಿಯೋಗಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ. ಅದನ್ನು ಈ ಹಿಂದಿನ ಎಲ್ಲ ಸರ್ಕಾರಗಳು ಪಾಲಿಸಿಕೊಂಡು ಬಂದಿವೆ. ತುರ್ತುಪರಿಸ್ಥಿತಿಯ ತನಕ ಶಿಕ್ಷಣವು ಕೇಂದ್ರಪಟ್ಟಿಯಲ್ಲಿತ್ತು. 1975ರ ಬಳಿಕ ಅದನ್ನು ಸಮಾನಪಟ್ಟಿಗೆ ಸೇರಿಸಲಾಯಿತು.
ಅದರಲ್ಲೂ, 90ರ ದಶಕದ ನಂತರ, ದೇಶ ಉದಾರೀಕರಣದತ್ತ ಹೆಜ್ಜೆ ಹಾಕಿದಾಗ, ಸರಕಾರಗಳೇ ಮುಂದೆ ನಿಂತು ಶಿಕ್ಷಣ ಕ್ಷೇತ್ರವನ್ನು ನಿಧಾನವಾಗಿ ಖಾಸಗಿ ಬಂಡವಾಳಶಾಹಿಗಳ ಸುಪರ್ದಿಗೊಪ್ಪಿಸಿವೆ. ಅಲ್ಲಿಂದ ಕಲಿಕಾ ಕೇಂದ್ರಗಳು ಕಾಂಚಾಣ ಸೃಷ್ಟಿಸುವ ಕೇಂದ್ರಗಳಾಗಿ, ಉತ್ಪನ್ನಗಳನ್ನು ಉತ್ಪಾದಿಸುವ ಉದ್ಯಮಗಳಾಗಿ ಮಾರ್ಪಟ್ಟಿವೆ. ಅವುಗಳ ವಾರ್ಷಿಕ ವಹಿವಾಟು ಸಾವಿರಾರು ಕೋಟಿಗಳನ್ನು ದಾಟಿದೆ. ಸರ್ಕಾರಗಳನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿವೆ. ಖಾಸಗಿ ಬಂಡವಾಳಶಾಹಿಗಳಿಗೆ ವ್ಯಾಪಾರವೇ ಮುಖ್ಯವಾಗಿ, ಸಮಾಜದ ಅಗತ್ಯಗಳು ಅಂಚಿಗೆ ಸರಿಸಲ್ಪಟ್ಟಿವೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಹಿನ್ನಡೆ ಮತ್ತು ಸರ್ವಾಧಿಕಾರಿ ವ್ಯವಸ್ಥೆಯ ಮುನ್ನಡೆಯಾಗಿ ಕಾಣತೊಡಗಿದೆ. ಈ ವ್ಯವಸ್ಥೆಯಲ್ಲಿ ಬಡವರ ಮಕ್ಕಳು ಅಕ್ಷರ ಕಲಿಯುವುದು ಕಷ್ಟವಾಗಿದೆ.
ಇದನ್ನು ಮಲ್ಲಿಕಾರ್ಜುನ ಖರ್ಗೆಯವರು ಪ್ರಶ್ನೆ ಮಾಡಿದ್ದು ಸರಿಯಾಗಿದೆ. ಆದರೆ, ತಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದ ಶೈಕ್ಷಣಿಕ ಸ್ಥಿತಿಗತಿಯತ್ತ ಗಮನ ಹರಿಸಿ, ಪ್ರಶ್ನಿಸುವ ಅಗತ್ಯ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
ರಾಜ್ಯ ಸರ್ಕಾರದ ಪ್ರಾಥಮಿಕ, ಉನ್ನತ ಮತ್ತು ವೈದ್ಯಕೀಯ ಖಾತೆಗಳಿಗೆ- ಮೂವರು ಅರ್ಹ, ಯೋಗ್ಯರನ್ನು ಆಯ್ಕೆ ಮಾಡಿ ಮಂತ್ರಿಗಳನ್ನಾಗಿ ಮಾಡಲಾಗಿದೆ. ಇವರ ಎರಡು ವರ್ಷಗಳ ಅಧಿಕಾರದಲ್ಲಿ 49,338 ಪ್ರಾಥಮಿಕ ಹಾಗೂ 11,796 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಾಗೆಯೇ 7 ಸಾವಿರಕ್ಕೂ ಅಧಿಕ ಏಕೋಪಾಧ್ಯಾಯ ಶಾಲೆಗಳಿವೆ. ಈ ಅಂಕಿ-ಅಂಶಗಳು ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಕ್ಷೀಣಿಸುತ್ತಿರುವುದು ಮತ್ತು ಶಿಕ್ಷಕರ ಕೊರತೆ ಎರಡನ್ನೂ ಸ್ಪಷ್ಟಪಡಿಸುತ್ತಿವೆ.
ರಾಜ್ಯದಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳೆರಡೂ ಸೇರಿ 46,755ರಷ್ಟಿವೆ. ಶಾಲೆಗಳಲ್ಲಿನ ಪ್ರವೇಶ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೂ ಸರಕಾರ ಇದಕ್ಕೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂಬ ಕೂಗು ವ್ಯಾಪಕವಾಗಿದೆ.
ಇನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 35 ಸಾವಿರ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಗುತ್ತಿಗೆ ಶಿಕ್ಷಕರ ಹಾಗೂ ಉಪನ್ಯಾಸಕರ ಗೋಳು ಕೇಳುವವರಿಲ್ಲದಾಗಿದೆ. ಇವುಗಳ ನಡುವೆಯೇ ಅನುದಾನದ ಕೊರತೆ ಎದುರಿಸುತ್ತಿರುವ ರಾಜ್ಯದ 9 ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ವದಂತಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!
ಇದಕ್ಕೆ ವ್ಯತಿರಿಕ್ತವಾಗಿ ಕಳೆದ 5 ವರ್ಷಗಳಲ್ಲಿ 3 ಸಾವಿರ ಖಾಸಗಿ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ. ಒಂದು ಕಡೆ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು, ಮತ್ತೊಂದು ಕಡೆ ಖಾಸಗಿಯವರಿಗೆ ಅನುಮತಿ ನೀಡುತ್ತಿರುವುದು. ಹಾಗೆಯೇ ಕೇಂದ್ರ ಸರ್ಕಾರ ಎನ್‌ಇಪಿ-ಪಿಎಂಶ್ರೀ-ಯುಜಿಸಿ-ತ್ರಿಭಾಷಾ ಸೂತ್ರ ಒಪ್ಪಿಕೊಳ್ಳದ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡದೆ ಸತಾಯಿಸುವುದು. ಅನುದಾನ ಬಿಡುಗಡೆ ಮಾಡಿದ ರಾಜ್ಯಗಳಲ್ಲಿ ಪಠ್ಯವನ್ನು ಕೇಸರಿಕರಣಗೊಳಿಸುವುದು.
ಇಂತಹ ವ್ಯವಸ್ಥೆಯಲ್ಲಿ ಅನ್ನ, ಅರಿವೆಗೇ ಪರದಾಡುವ ಸ್ಥಿತಿಯಲ್ಲಿರುವ ಬಡವರ ಮಕ್ಕಳು ಅಕ್ಷರ ಕಲಿಯುವುದು ಸಾಧ್ಯವೇ?

[…] ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಕೈಯಲ್ಲಿ ಶ… […]