ಅಂದು ತುರ್ತುಪರಿಸ್ಥಿತಿ ವಿರುದ್ಧ ಎರಡನೆಯ ಸ್ವಾತಂತ್ರ್ಯ ಹೋರಾಟ ಮಾಡಿದ್ದವರು ಇಂದು ಅಧಿಕಾರದಲ್ಲಿರುವ ಕಾರಣ ದೇಶದಲ್ಲಿ ಜನತಂತ್ರ ಉಳಿದಿದೆ ಎಂಬುದಾಗಿ ಗೃಹಮಂತ್ರಿ ಅಮಿತ್ ಶಾ ಎದೆ ತಟ್ಟಿಕೊಂಡಿದ್ದಾರೆ. ಆದರೆ ಶಾ ಅವರು ಎದೆತಟ್ಟಿಕೊಂಡಿರುವುದರಲ್ಲಿ, ಮಹಾರಥಿಗಳ ಹೇಳಿಕೆಗಳಲ್ಲಿ ಹುರುಳಿಲ್ಲ.
1975ರ ಜೂನ್ 26 ದೇಶದ ಜನತಂತ್ರದ ಇತಿಹಾಸದಲ್ಲಿ ಕರಾಳ ದಿನ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧೀಯವರು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದ ದಿನ. ಜನತಂತ್ರದ ತೋಳುಗಳನ್ನು ತಿರುಚಿ ಸಂಕೋಲೆಗಳನ್ನು ತೊಡಿಸಿದ ತೇದಿ.
ತುರ್ತುಪರಿಸ್ಥಿತಿ ಮರುಕಳಿಸದಂತೆ ಜನಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 26ರಂದು ಈ ಕರಾಳ ದಿನವನ್ನು ನೆನೆಯಬೇಕಿದೆ. ಇಂತಹ ಕಪ್ಪು ನೆನಪು ನೆನ್ನೆ ಸರಿದು ಹೋಯಿತು.
ಆದರೆ ಅಂದಿನ ಘೋಷಿತ ತುರ್ತುಪರಿಸ್ಥಿತಿ 18 ತಿಂಗಳುಗಳಲ್ಲಿ ಅಂತ್ಯಗೊಂಡಿತ್ತು. ಇಂದಿನ ಅಘೋಷಿತ ತುರ್ತುಪರಿಸ್ಥಿತಿಗೆ ಮುಂದಿನ ಮೇ ಹೊತ್ತಿಗೆ ಹತ್ತು ವರ್ಷಗಳೇ ತುಂಬಲಿವೆ ಎಂಬುದನ್ನು ಮರೆಯುವುದಾದರೂ ಹೇಗೆ?
ಅಂದು ತುರ್ತುಪರಿಸ್ಥಿತಿ ವಿರುದ್ಧ ಎರಡನೆಯ ಸ್ವಾತಂತ್ರ್ಯ ಹೋರಾಟ ಮಾಡಿದ್ದವರು ಇಂದು ಅಧಿಕಾರದಲ್ಲಿರುವ ಕಾರಣ ದೇಶದಲ್ಲಿ ಜನತಂತ್ರ ಉಳಿದಿದೆ ಎಂಬುದಾಗಿ ಗೃಹಮಂತ್ರಿ ಅಮಿತ್ ಶಾ ಎದೆ ತಟ್ಟಿಕೊಂಡಿದ್ದಾರೆ. ಹಾಗೆಯೇ ಮೋದಿಯವರಿಂದ ಮೊದಲುಗೊಂಡು ಆಳುವ ಪಕ್ಷದ ಅತಿರಥ ಮಹಾರಥರು ತುರ್ತುಪರಿಸ್ಥಿತಿಯನ್ನು ಖಂಡಿಸಿ ವೀರಾವೇಶದ ಹೇಳಿಕೆಗಳನ್ನು ನೀಡಿದ್ದಾರೆ.
ಆದರೆ ಶಾ ಅವರು ಎದೆತಟ್ಟಿಕೊಂಡಿರುವುದರಲ್ಲಿ, ಮಹಾರಥಿಗಳ ಹೇಳಿಕೆಗಳಲ್ಲಿ ಹುರುಳಿಲ್ಲ.
ಆರೆಸ್ಸೆಸ್ ಏಕಶಿಲಾ ವ್ಯಕ್ತಿತ್ವವಾಗಿ ನಿಂತು ತುರ್ತುಪರಿಸ್ಥಿತಿಯನ್ನು ವಿರೋಧಿಸಲೇ ಇಲ್ಲ. ಆರೆಸ್ಸೆಸ್ ನ ತಲೆಯಾಳು ನಾನಾಜಿ ದೇಶಮುಖ್ ಅವರನ್ನು ಲೋಕಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿನ ನೇಮಕ ಮಾಡಿದ್ದರು ಜಯಪ್ರಕಾಶ್ ನಾರಾಯಣ್. ಆದರೆ ಆರೆಸ್ಸೆಸ್ ನ ಅಂದಿನ ಮುಖ್ಯಸ್ಥ ಬಾಳಾಸಾಹೇಬ ದೇವರಸ್ ಮುಂತಾದ ನಾಯಕರು ಜೆ.ಪಿ.ಆಂದೋಲನದಿಂದ ದೂರ ಉಳಿದರು.
ಹಾಲಿ ಬಿಜೆಪಿ ಸಂಸದ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವರು ‘ದಿ ಹಿಂದೂ ಪತ್ರಿಕೆ’ಗೆ ಬರೆದ ಲೇಖನವೊಂದು 2000ದ ಜೂನ್ 13ರಂದು ಅಚ್ಚಾಗಿದೆ.
“ಬಿಜೆಪಿ ಮತ್ತು ಆರೆಸ್ಸೆಸ್ ನ ಬಹುತೇಕ ನಾಯಕರು ತುರ್ತುಪರಿಸ್ಥಿತಿ ವಿರುದ್ಧದ ಹೋರಾಟಕ್ಕೆ ದ್ರೋಹ ಬಗೆದರು. ದೇವರಸರು ಇಂದಿರಾ ಅವರಿಗೆ ಯರವಾಡಾ ಜೈಲಿನಿಂದ ಹಲವು ಕ್ಷಮಾಪಣಾ ಪತ್ರಗಳನ್ನು ಬರೆದು ಜೇಪಿ ಆಂದೋಲನಕ್ಕೂ ಆರೆಸ್ಸೆಸ್ ಗೂ ಸಂಬಂಧ ಇಲ್ಲವೆಂದು ಸಾರಿದರು. 20 ಅಂಶಗಳ ಕಾರ್ಯಕ್ರಮಕ್ಕಾಗಿ ದುಡಿಯುವುದಾಗಿ ಘೋಷಿಸಿದರು…” ಎಂಬ ಮುಂತಾದ ಅಂಶಗಳು ಈ ಲೇಖನದಲ್ಲಿವೆ.
ಬಾಳಾಸಾಹೇಬ ದೇವರಸ ಅವರು ತುರ್ತುಪರಿಸ್ಥಿತಿ ಜಾರಿಯಾದ ಕೆಲ ದಿನಗಳ ನಂತರ ಜೈಲಿನಿಂದಲೇ ಪ್ರಧಾನಿ ಇಂದಿರಾಗಾಂಧೀ ಮತ್ತು ಸರ್ವೋದಯ ಚಿಂತಕ ವಿನೋಬಾ ಭಾವೆ ಅವರಿಗೆ ಹಲವು ಪತ್ರಗಳನ್ನು ಬರೆಯುತ್ತಾರೆ.
“1975ರ ಆಗಸ್ಟ್ 15ರಂದು ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ತಾವು ಮಾಡಿದ ಭಾಷಣವನ್ನು ನಾನು ಈ (ಯರವಾಡಾ) ಜೈಲಿನಿಂದ ಆಲಿಸಿದ್ದೆ. ಸಮತೂಕದಿಂದ ಕೂಡಿತ್ತು ಮತ್ತು ಕಾಲಕ್ಕೆ ತಕ್ಕಂತೆಯೂ ಇತ್ತು. ಹೀಗಾಗಿ ಈ ಪತ್ರ ಬರೆಯುವ ನಿರ್ಧಾರ ಮಾಡಿದೆ….” ಎಂದು ಆರಂಭ ಆಗುವ ಪತ್ರಕ್ಕೆ ಇಂದಿರಾ ಗಾಂಧೀ ಉತ್ತರ ಬರೆಯಲಿಲ್ಲ.
1975ರ ನವೆಂಬರ್ 10ರಂದು ದೇವರಸರು ಇಂದಿರಾ ಅವರಿಗೆ ಮತ್ತೊಂದು ಪತ್ರ ಬರೆಯುತ್ತಾರೆ. ಇಂದಿರಾ ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅವರು ಈ ಪತ್ರ ಆರಂಭಿಸುತ್ತಾರೆ.
1971ರ ಲೋಕಸಭಾ ಚುನಾವಣೆಗಳಲ್ಲಿ ಇಂದಿರಾಗಾಂಧೀ ಅವರು ಲಂಚ ನೀಡಿಕೆ, ಸರ್ಕಾರಿ ಯಂತ್ರ ದುರ್ಬಳಕೆಯ ಅಕ್ರಮಗಳನ್ನು ಎಸಗಿ ಆಯ್ಕೆಯಾಗಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟು 1975ರಲ್ಲಿ ತೀರ್ಪು ನೀಡುತ್ತದೆ. ಅವರ ಆಯ್ಕೆಯನ್ನು ಅಸಿಂಧು ಎಂದು ಸಾರಿ ಆರು ವರ್ಷಗಳ ಕಾಲ ಪ್ರಧಾನಿ ಪದವಿಗೆ ಯೋಗ್ಯರಲ್ಲವೆಂದು ಘೋಷಿಸುತ್ತದೆ. ಈ ತೀರ್ಪನ್ನು ಸುಪ್ರೀಮ್ ಕೋರ್ಟು ತಳ್ಳಿ ಹಾಕುತ್ತದೆ. ಈ ಬೆಳವಣಿಗೆಯನ್ನು ಕುರಿತು ದೇವರಸರು ಇಂದಿರಾ ಅವರನ್ನು ಅಭಿನಂದಿಸುತ್ತಾರೆ. ಇಂದಿರಾ ಪ್ರಧಾನಿ ಪದಕ್ಕೆ ಯೋಗ್ಯರಲ್ಲ ಎಂಬುದು ಅಲಹಾಬಾದ್ ಹೈಕೋರ್ಟು ನೀಡಿದ್ದ ತೀರ್ಪು. ‘ಚುನಾವಣೆಯಲ್ಲಿ ನೀವು ಗೆದ್ದು ಬಂದಿರುವುದನ್ನು ಸಕ್ರಮ ಎಂದು ಸುಪ್ರೀಮ್ ಕೋರ್ಟಿನ ಐವರು ನ್ಯಾಯಮೂರ್ತಿಗಳ ಪೀಠ ಘೋಷಿಸಿದ್ದು, ಈ ಸಂಬಂಧದಲ್ಲಿ ನಿಮಗೆ ಹಾರ್ದಿಕ ಅಭಿನಂದನೆ.’ ಎಂಬುದು ದೇವರಸರ ಒಕ್ಕಣೆ.
ಆದರೆ ಸುಪ್ರೀಮ್ ಕೋರ್ಟು ಈ ತೀರ್ಪನ್ನು ಇಂದಿರಾ ಸರ್ಕಾರದ ಒತ್ತಡಕ್ಕೆ ಈಡಾಗಿ ನೀಡಿದೆಯೆಂಬುದು ಎಲ್ಲ ತಟಸ್ಥ ಕಾನೂನುತಜ್ಞರ ಅಭಿಪ್ರಾಯವಾಗಿತ್ತು.
“ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಸರ್ಕಾರ ವಿನಾಕಾರಣ ಗುಜರಾತಿನ ವಿದ್ಯಾರ್ಥಿ ಚಳವಳಿ ಮತ್ತು ಜಯಪ್ರಕಾಶ ನಾರಾಯಣ ಅವರ ಬಿಹಾರ ಆಂದೋಲನದೊಂದಿಗೆ ಜೋಡಿಸಿಬಿಟ್ಟಿದೆ. ಆದರೆ ಈ ಆಂದೋಲನಗಳಿಗೂ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ…” ಎಂದೂ ಈ ಪತ್ರದಲ್ಲಿ ಸ್ಪಷ್ಟಪಡಿಸುತ್ತಾರೆ ದೇವರಸ್.
ಈ ಪತ್ರಕ್ಕೂ ಇಂದಿರಾ ಅವರು ಉತ್ತರ ಬರೆಯಲಿಲ್ಲವಾದ ಕಾರಣ ದೇವರಸರು ವಿನೋಬಾ ಭಾವೆಯವರನ್ನು ಸಂಪರ್ಕಿಸುತ್ತಾರೆ. ವಿನೋಬಾ ಅವರು ಆ ವೇಳೆಗಾಗಲೆ, ತುರ್ತುಪರಿಸ್ಥಿತಿಯನ್ನು ಅನುಶಾಸನ ಪರ್ವ ಎಂದು ಬಣ್ಣಿಸಿ ಸಮರ್ಥಿಸಿರುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಹೇರಿದ್ದ ನಿಷೇಧವನ್ನು ತೆರವು ಮಾಡುವಂತೆ ಇಂದಿರಾ ಅವರಿಗೆ ಸಲಹೆ ನೀಡುವಂತೆ ದೇವರಸರು 1976ರ ಜನವರಿ 12ರಂದು ವಿನೋಬಾ ಭಾವೆಯವರಿಗೆ ಬರೆದ ಪತ್ರದಲ್ಲಿ “ಯಾಚಿಸಿದ್ದಾರೆ”.
ವಿನೋಬಾ ಕೂಡ ದೇವರಸರಿಗೆ ಮಾರೋಲೆ ಬರೆಯಲಿಲ್ಲ. ಹತಾಶರಾದ ದೇವರಸರು ವಿನೋಬಾ ಅವರಿಗೆ ಮತ್ತೊಂದು ಪತ್ರ ಬರೆದರು.
“ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಪ್ರಧಾನಿ (ಇಂದಿರಾ ಗಾಂಧೀ) ಅವರು ನಿಮ್ಮನ್ನು ಭೇಟಿ ಮಾಡಲು ಜನವರಿ 24ಕ್ಕೆ ಪವನಾರ್ ನ ವರ್ಧಾ ಆಶ್ರಮಕ್ಕೆ ಬರಲಿದ್ದಾರೆ. ಅಂದು ದೇಶದ ಹಾಲಿ ಪರಿಸ್ಥಿತಿ ಕುರಿತು ಅವರು ನಿಮ್ಮೊಂದಿಗೆ ಚರ್ಚಿಸಲಿದ್ದಾರೆ. ಆರ್ ಎಸ್ ಎಸ್ ಕುರಿತಾಗಿ ಪ್ರಧಾನಮಂತ್ರಿಯವರಿಗೆ ಉಂಟಾಗಿರುವ ತಪ್ಪು ಅಭಿಪ್ರಾಯವನ್ನು ನಿವಾರಿಸಿ ರಾಷ್ಟ್ರೀಯ ಸ್ವಂಯಸೇವಕ ಸಂಘದ ಮೇಲೆ ಹೇರಿರುವ ನಿಷೇಧವನ್ನು ತೆಗೆದು ಹಾಕುವಂತೆಯೂ, ಜೈಲುಗಳಲ್ಲಿ ಬಂದಿಗಳಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನರನ್ನು ಬಿಡುಗಡೆ ಮಾಡುವಂತೆಯೂ ಅವರ ಮನ ಒಲಿಸುವ ಪ್ರಯತ್ನ ಮಾಡಬೇಕೆಂದು ಯಾಚಿಸುತ್ತೇನೆ. ಹೀಗೆ ಬಿಡುಗಡೆಯಾಗುವ ಆರೆಸ್ಸೆಸ್ ಜನರು ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ದೇಶದ ಪ್ರಗತಿಗಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ನೀಡಲಿದ್ದಾರೆ” ಎಂಬುದಾಗಿ ದೇವರಸರು ಕೋರಿರುತ್ತಾರೆ. ಈ ಪತ್ರಕ್ಕೂ ವಿನೋಬಾ ಉತ್ತರ ಬರೆಯುವುದಿಲ್ಲ. ಎರಡೂ ಪತ್ರಗಳು ವಿನೋಬಾ ಅವರನ್ನು ತಲುಪಿಲ್ಲದಿರುವ ಸಾಧ್ಯತೆಯೂ ಇದೆ. ಅದೇನೇ ಇರಲಿ, ಇಂದಿರಾ ಮತ್ತು ವಿನೋಬಾ ಅವರಿಗೆ ದೇವರಸರು ಬರೆದ ಈ ಪತ್ರಗಳು ಅವರದೇ ಪುಸ್ತಕ ‘ಹಿಂದೂ ಸಂಘಟನೆ ಮತ್ತು ಸತ್ತಾವಾದಿ ರಾಜನೀತಿ’ಯಲ್ಲಿವೆ. ದೆಹಲಿಯ ಹೊರವಲಯದ ನೋಯ್ಡಾದ ಜಾಗೃತಿ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಈ ಪತ್ರಗಳು ಏನನ್ನು ಹೇಳುತ್ತವೆ? ಆರೆಸ್ಸೆಸ್ ಅಧಿಕೃತವಾಗಿ ತುರ್ತುಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ತೊಡಗಿಕೊಂಡಿತ್ತು ಎಂದು ಸಾಬೀತು ಮಾಡುತ್ತವೆಯೇ?
ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಶಂಕರರಾವ್ ಚವಾಣ್ ಅವರಿಗೂ ಇಂತಹುದೇ ಪತ್ರಗಳನ್ನು ದೇವರಸರು 1975ರ ಜುಲೈ ತಿಂಗಳಲ್ಲಿ ಬರೆದಿದ್ದರು. ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಈ ಪತ್ರಗಳನ್ನು ಮಂಡಿಸಲಾಗಿತ್ತು. ಚವಾಣ್ ಕೂಡ ಉತ್ತರ ಬರೆಯಲಿಲ್ಲ. ಆದರೆ ಸಾಮೂಹಿಕ ಕ್ಷಮಾದಾನ ಸಾಧ್ಯವಿಲ್ಲ, ಸ್ಥಳೀಯ ಮಟ್ಟದಲ್ಲಿ ಖಾಸಗಿಯಾಗಿ ಪ್ರತಿಯೊಬ್ಬರೂ ಪ್ರತ್ಯೇಕ ಕ್ಷಮಾಪಣೆ ಕೋರುವ ಪತ್ರಗಳನ್ನು ಬರೆದರೆ ಪರಿಶೀಲಿಸಲಾಗುವುದು ಎಂಬ ಸಂದೇಶವನ್ನು ದೇವರಸ್ ಅವರಿಗೆ ಅನೌಪಚಾರಿಕವಾಗಿ ಚವಾಣ್ ರವಾನಿಸಿದ್ದರು.
ಸಂಘಟನೆಯ ಮಟ್ಟದಲ್ಲಿ ತುರ್ತುಪರಿಸ್ಥಿತಿಯನ್ನು ಸಮರ್ಥಿಸುವ ಮತ್ತು ಸರ್ಕಾರದೊಂದಿಗೆ ಸಹಕರಿಸುವ ದೇವರಸರ ಔಪಚಾರಿಕ ಪ್ರಸ್ತಾವ ಫಲ ನೀಡಲಿಲ್ಲ. ಪರಿಣಾಮವಾಗಿ ಬಂಧನದಲ್ಲಿದ್ದ ಆರೆಸ್ಸೆಸ್ ಕಾರ್ಯಕರ್ತರು ವ್ಯಕ್ತಿಗತ ಹಂತದಲ್ಲಿ ಕ್ಷಮಾಪಣೆ ಬರೆದುಕೊಟ್ಟು ಬಿಡುಗಡೆಯಾದರು.
ಅಟಲ್ ಬಿಹಾರಿ ವಾಜಪೇಯಿ ಅವರು ಜೈಲು ಸೇರಿದ್ದ ಕೆಲವೇ ವಾರಗಳಲ್ಲಿ ಅನಾರೋಗ್ಯದ ಆಧಾರದ ಮೇಲೆ ಚಿಕಿತ್ಸೆ ಪಡೆಯಲೆಂದು ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ಜೈಲಿಂದ ಹೊರಬಿದ್ದ ನಂತರ ಆಸ್ಪತ್ರೆಯಲ್ಲಿದ್ದರು. ಆನಂತರ ತುರ್ತುಪರಿಸ್ಥಿತಿಯ ಉದ್ದಕ್ಕೂ ಫಿರೋಜ್ ಶಾ ರಸ್ತೆಯ ತಮ್ಮ ಸರ್ಕಾರಿ ನಿವಾಸದಲ್ಲೇ ವಾಸವಿದ್ದರು.
1976ರಲ್ಲಿ ಐದನೆಯ ಲೋಕಸಭೆಯ ಅವಧಿ ಮುಗಿದಿತ್ತು. ಇಂದಿರಾ ಅವರು ಈ ಅವಧಿಯನ್ನು ಒಂದು ವರ್ಷ ಹೆಚ್ಚಿಸಿ ಆರು ವರ್ಷಗಳಿಗೆ ವಿಸ್ತರಿಸುತ್ತಾರೆ. ಈ ಅನೈತಿಕ, ಜನತಂತ್ರವಿರೋಧಿ, ಸಂವಿಧಾನಬಾಹಿರ ಕ್ರಮವನ್ನು ವಿರೋಧಿಸಿ ಪ್ರತಿಪಕ್ಷಗಳ ಎಲ್ಲ ಸಂಸದರೂ ರಾಜೀನಾಮೆ ನೀಡುವಂತೆ ಜಯಪ್ರಕಾಶ್ ನಾರಾಯಣ್ ಕರೆ ನೀಡುತ್ತಾರೆ. ಈ ಕರೆಗೆ ಸ್ಪಂದಿಸಿ ಜೈಲಿನಿಂದಲೇ ತಮ್ಮ ರಾಜೀನಾಮೆ ಪತ್ರ ಕಳಿಸಿದವರು ಇಬ್ಬರೇ ಸಂಸದರು. ಒಬ್ಬರು ಮಧು ಲಿಮಯೆ, ಮತ್ತೊಬ್ಬರು ಶರದ್ ಯಾದವ್.
ವಾಜಪೇಯಿ ಸಹಿತ ಜನಸಂಘಕ್ಕೆ ಸೇರಿದ 23 ಸದಸ್ಯರು ಆ ಲೋಕಸಭೆಯಲ್ಲಿದ್ದರು. ಅವರ್ಯಾರೂ ರಾಜೀನಾಮೆ ನೀಡಲಿಲ್ಲ. ಜೈಲಿನಲ್ಲಿ ಅಥವಾ ಜೈಲಿನಿಂದ ಹೊರಗಿದ್ದು ಸಂಸದರಿಗೆ ದೊರೆಯುವ ವೇತನ ಮತ್ತು ಭತ್ಯೆಗಳನ್ನು ಪಡೆದುಕೊಂಡರು.
ಇತಿಹಾಸವನ್ನು ತಿರುಚುವ ತಮ್ಮ ಅನುಕೂಲಕ್ಕೆ ಬಗ್ಗಿಸಿಕೊಳ್ಳುವ ಚಾಳಿಯನ್ನು ಮೋಶಾ ಸಂಗಾತಿಗಳು ಕೈ ಬಿಡಬೇಕಿದೆ.

By mistake I exited from the group kindly add me again thinking yours