ಈ ದಿನ ಸಂಪಾದಕೀಯ | ಒಕ್ಕಲಿಗರಿಗೆ ಪರ್ಯಾಯ ನಾಯಕತ್ವದ ಅಗತ್ಯವಿದೆಯೇ?

Date:

Advertisements
ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬ ರಾಜಕಾರಣ, ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಕೊಟ್ಟಿದೆ. ಆ ಮೂಲಕ ರಾಜ್ಯದ ಬಹುಸಂಖ್ಯಾತ ಸಮುದಾಯವನ್ನು ದಿಕ್ಕು ತಪ್ಪಿಸಿದೆ. ತಮ್ಮ ಮಕ್ಕಳನ್ನು ಬಿಟ್ಟರೆ, ಮತ್ತೊಬ್ಬ ನಾಯಕ ಮುನ್ನೆಲೆಗೆ ಬರದಂತೆ ನೋಡಿಕೊಂಡಿದೆ. ಈ ಫ್ಯೂಡಲ್ ಮನಸ್ಥಿತಿಯ ನಾಯಕರನ್ನು ಈಗಲಾದರೂ ಹಿನ್ನೆಲೆಗೆ ಸರಿಸಬೇಕಾಗಿದೆ. ಬಡವರು-ಬುದ್ಧಿವಂತರು ಮುಂದೆ ಬರಬೇಕಾಗಿದೆ.

ಚನ್ನಪಟ್ಟಣದ ಫಲಿತಾಂಶ ಜಾತ್ಯತೀತ ಜನತಾದಳದ ನಾಯಕರ ನಡುವೆ ಅದುಮಿಟ್ಟ ಆಂತರಿಕ ಬೇಗುದಿ ಸ್ಫೋಟಿಸಲು ಸೂಕ್ತ ಸಂದರ್ಭವನ್ನು ಕಲ್ಪಿಸಿಕೊಟ್ಟಿದೆ. ಗೆದ್ದಾಗ ಸುಮ್ಮನಾಗುವುದು ಸಹಜವಾದರೆ, ಸೋತ ಸಂದರ್ಭಗಳಲ್ಲಿ ಈ ರೀತಿಯ ಅಸಮಾಧಾನಗಳು, ನಾಯಕತ್ವದ ಬದಲಾವಣೆಗಳು, ಪಕ್ಷದ ರೀತಿ-ನೀತಿಗಳ ಕುರಿತ ಚರ್ಚೆಗಳು ಮುನ್ನೆಲೆಗೆ ಬರುವುದು ಸಾಮಾನ್ಯ.  

ಜೆಡಿಎಸ್‌ನಲ್ಲಿ ಇದ್ದೂ ಇಲ್ಲದಂತಿದ್ದ ಸಿ.ಎಂ. ಇಬ್ರಾಹಿಂ, ‘ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇನ್ನಾದರೂ ಬುದ್ಧಿ ಕಲಿಯಬೇಕು. ಪಕ್ಷವನ್ನು ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು’ ಎಂದಿದ್ದಾರೆ. ಜನ್ಮದಿನದ ನೆಪ ಮಾಡಿಕೊಂಡು ಮೈಸೂರಿನ ಒಕ್ಕಲಿಗ ನಾಯಕ ಜಿ.ಟಿ. ದೇವೇಗೌಡರನ್ನು ಭೇಟಿಯಾಗಿದ್ದಾರೆ. ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯ ವಿಚಾರದಲ್ಲಿ ಬೇಸರಗೊಂಡಿರುವ, ಗೌಡರ ಕುಟುಂಬದ ವಿರುದ್ಧವಿರುವ ಶಾಸಕರನ್ನು ಒಗ್ಗೂಡಿಸುವ ಮಾತನಾಡಿದ್ದಾರೆ. ಪ್ರಾದೇಶಿಕ ಪಕ್ಷ ಕಟ್ಟುವ ಕುರಿತು ಪ್ರಸ್ತಾಪಿಸಿದ್ದಾರೆ.

ಜಿ.ಟಿ. ದೇವೇಗೌಡ, ಪಕ್ಷದಲ್ಲಿ ಇದ್ದರೂ, ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕರೆಯದಿದ್ದರೂ, ವರಿಷ್ಠರೊಂದಿಗೆ ಅಸಮಾಧಾನವಿದ್ದರೂ, ಬಾಯ್ಬಿಟ್ಟಿಲ್ಲ. ಬದಲಿಗೆ ಗೌಡರ ಕುಟುಂಬದಿಂದ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಯಾವಾಗ, ಏನು ಬೇಕಾದರೂ ಆಗಬಹುದೆಂಬ ಸೂಚನೆಯನ್ನೂ ರವಾನಿಸಿದ್ದಾರೆ.

Advertisements

ಈ ರೀತಿಯ ರಾಜಕೀಯ ಬೆಳವಣಿಗೆ ಜೆಡಿಎಸ್ ಪಕ್ಷದಲ್ಲಿ ಮಾತ್ರವಲ್ಲ, ಎಲ್ಲ ಪಕ್ಷಗಳಲ್ಲೂ ನಡೆಯುವಂಥದ್ದೇ. ಪ್ರತಿ ಚುನಾವಣೆಯ ಫಲಿತಾಂಶವೂ ಕೂಡ ರಾಜಕೀಯ ಪಕ್ಷಗಳಲ್ಲಿ ಮತ್ತು ನಾಯಕರಲ್ಲಿ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಸರಿ-ತಪ್ಪುಗಳ ವಿಶ್ಲೇಷಣೆಗೆ, ಹಲವು ಬದಲಾವಣೆಗಳಿಗೆ ಕಾರಣವಾಗುತ್ತದೆ.

ಹಾಗೆ ನೋಡಿದರೆ, ನಿಖಿಲ್ ಕುಮಾರಸ್ವಾಮಿ ಸೋಲು, ಒಬ್ಬ ರಾಜಕಾರಣಿಯಾಗಿ ಸೋಲು-ಗೆಲುವುಗಳನ್ನು ಸಮಚಿತ್ತದಿಂದ ನೋಡುವುದಾದರೆ, ಭಾರೀ ದೊಡ್ಡ ಆಘಾತವಲ್ಲ. ರಾಜಕಾರಣದಲ್ಲಿ ಯಾರೂ ಕಂಡಿರದ ಸೋಲೇನೂ ಅಲ್ಲ. ಸ್ಪರ್ಧಿಸಿದವರೆಲ್ಲ ಗೆಲ್ಲುವುದು ಸಾಧ್ಯವೂ ಇಲ್ಲ. ಸ್ವತಃ ಕುಮಾರಸ್ವಾಮಿಯವರೇ ಮೂರು ಬಾರಿ ಸೋತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸೋಲು-ಗೆಲುವುಗಳ ಏರಿಳಿತಗಳನ್ನು ಕಂಡುಂಡೇ ಜನನಾಯಕರಾಗಿ ಹೊರಹೊಮ್ಮಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಉಪಸಮರದ ಗೆಲುವು– ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಕಾಂಗ್ರೆಸ್‌ ಸರ್ಕಾರ?

ಆದರೂ, ನಿಖಿಲ್ ಕುಮಾರಸ್ವಾಮಿ ಸೋಲು ಹೆಚ್ಚು ಚರ್ಚೆಯಾಗುತ್ತಿದೆ. ಏಕೆಂದರೆ, ಆತ ಮಾಜಿ ಪ್ರಧಾನಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಮಗ ಎಂಬ ಕಾರಣಕ್ಕಾಗಿ. ಗೆಲ್ಲುವುದು ನಮ್ಮ ಜನ್ಮಸಿದ್ಧಹಕ್ಕು ಎಂದು ಗೌಡರ ಕುಟುಂಬ ಭಾವಿಸಿರುವುದಕ್ಕಾಗಿ.

ಅದಕ್ಕೆ ಪೂರಕವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಜೆಡಿಎಸ್, ಲೋಕಸಭಾ ಚುನಾವಣೆಯ ವೇಳೆಗೆ ಗೆಲುವು ಕಂಡಿತ್ತು. ದೇವೇಗೌಡರು ಪ್ರಧಾನಿ ಮೋದಿಯವರಿಗೆ ತೀರಾ ಆಪ್ತರಾಗಿ, ಮಗ, ಮೊಮ್ಮಗ ಮತ್ತು ಅಳಿಯನನ್ನು ಕಣಕ್ಕಿಳಿಸಿದ್ದರು. ಮಗ ಗೆದ್ದು ಕೇಂದ್ರ ಮಂತ್ರಿಯೂ ಆಗಿದ್ದರು. ಇದೆಲ್ಲದಕ್ಕೂ ಬಿಜೆಪಿ ಮತ್ತು ಮೋದಿ ಕಾರಣ ಎಂದು ನಂಬಿದ್ದರು. ದಾಳಿಗಳಿಂದ ತಪ್ಪಿಸಿಕೊಂಡು, ದಡ ಸೇರಿದ ಸಂತೃಪ್ತ ಭಾವದಲ್ಲಿದ್ದರು. ಹಳೆ ಮೈಸೂರು ಭಾಗದಲ್ಲಿ ನಾವೇ ಪೈಲ್ವಾನರು ಎಂದು ಸಾರಿದ್ದರು.

ಅಸಲಿಗೆ ಅದು ಜೆಡಿಎಸ್ ಗೆಲುವಲ್ಲ, ಬಿಜೆಪಿ ಗೆಲುವು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಶೇಕಡವಾರು ಮತ ಶೇ. 42.9. ಬಿಜೆಪಿ ಪಡೆದ ಮತ ಶೇ. 36. ಜೆಡಿಎಸ್ ಪಡೆದ ಮತ ಶೇ. 13. ಬಿಜೆಪಿಗೆ ಶೇ. 36 ಮತಗಳನ್ನು ನೆಚ್ಚಿಕೊಂಡು ಲೋಕಸಭೆಯಲ್ಲಿ 27 ಸ್ಥಾನ(25+1+1)ಗಳನ್ನು ಮರಳಿ ಗೆಲ್ಲುವುದು ಸಾಧ್ಯವೇ ಇಲ್ಲ ಎನ್ನುವುದು ಖಾತ್ರಿಯಾಗಿತ್ತು. ಏಕೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಯಡಿಯೂರಪ್ಪನವರ ವರ್ಚಸ್ಸು ಕಳೆಗುಂದಿತ್ತು. ಲಿಂಗಾಯತ ಸಮುದಾಯ ಬಿಜೆಪಿಯಿಂದ ಕಾಲುಕಿತ್ತಿತ್ತು. ಹಾಗಾಗಿಯೇ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು 36 + 13 ಅಂದರೆ ಶೇ. 49 ಮತದ ಲೆಕ್ಕಾಚಾರವನ್ನು ಪಕ್ಕಾ ಮಾಡಿಕೊಂಡಿತ್ತು. ಅದರ ಫಲವಾಗಿ ಬಿಜೆಪಿ 17 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ಸನ್ನು 9 ಸ್ಥಾನಗಳಿಗೆ ತಳ್ಳಿತ್ತು. ತನ್ನ ವಿಸ್ತರಣಾ ಕಾರ್ಯತಂತ್ರದ ಮೊದಲ ಹಂತವಾಗಿ ಕುಮಾರಸ್ವಾಮಿ, ದೇವೇಗೌಡರನ್ನು ಮುಂದಿಟ್ಟುಕೊಂಡು ಬಿಜೆಪಿಯು ಒಕ್ಕಲಿಗರಿಗೆ ರಾಜಕೀಯವಾಗಿ ಹತ್ತಿರವಾಗಿತ್ತು. ಬಿಜೆಪಿ ಹಳೇ ಮೈಸೂರಿನ ಒಕ್ಕಲಿಗ ಬೆಲ್ಟ್‌ನಲ್ಲೂ ತಳವೂರುವ ಲಕ್ಷಣಗಳನ್ನು ತೋರಿತ್ತು.

ಬಿಜೆಪಿ ತನ್ನ ಎರಡನೇ ಕಾರ್ಯತಂತ್ರದ ಭಾಗವಾಗಿ ಕೆರಗೋಡು ಹನುಮಧ್ವಜ ವಿವಾದವನ್ನು ಮುನ್ನೆಲೆಗೆ ತಂದು, ಧಾರ್ಮಿಕ ಕೋಮುವಾದದ ಮೂಲಕ ತಳಮಟ್ಟದಲ್ಲಿ ಜನರನ್ನು ಸೈದ್ಧಾಂತಿಕವಾಗಿ ತನ್ನ ಕೈವಶ ಮಾಡಿಕೊಳ್ಳಲು ಹವಣಿಸಿತು. ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದಿಂದಲೆ ಅದನ್ನು ಬಿಜೆಪಿ ಶುರು ಮಾಡಿತು. ಹನುಮಧ್ವಜದ ಹೆಸರಲ್ಲಿ ಒಕ್ಕಲಿಗ ಸಮುದಾಯವನ್ನು ಧಾರ್ಮಿಕವಾಗಿ ಪ್ರಭಾವಿಸುವ ಬಿಜೆಪಿಯ ರಣತಂತ್ರವನ್ನು ವಿರೋಧಿಸಬೇಕಾದ ಜೆಡಿಎಸ್, ಮೈತ್ರಿಯ ಕಾರಣಕ್ಕೆ ಮಾತನಾಡಲಿಲ್ಲ. ಕುಮಾರಸ್ವಾಮಿ ಬಾಯಿ ಬಿಡಲಿಲ್ಲ. ಒಂದು ಸಲ ಜನ ಧರ್ಮದ ಅಫೀಮನ್ನು ನೆತ್ತಿಗೇರಿಸಿಕೊಂಡರೆ, ಅವರನ್ನು ಮತ್ತೆ ಸ್ಥಿತಪ್ರಜ್ಞೆಗೆ ಮರಳಿಸುವುದು ಎಷ್ಟು ಕಷ್ಟ ಎನ್ನುವುದು ಜೆಡಿಎಸ್‌ ನಾಯಕರಿಗೆ ಅರ್ಥವಾಗಲಿಲ್ಲ.

ಆಗಲೇ ಮಾಜಿ ಪ್ರಧಾನಿಗಳಿಗೆ, ಮೋದಿಯವರು ಪ್ರಾದೇಶಿಕ ಪಕ್ಷಗಳ ನಾಯಕರ ಹೆಗಲ ಮೇಲೆ ಕೈ ಹಾಕಿ, ನಂತರ ಅದೇ ಕೈ ತಲೆಯ ಮೇಲೆ ತಂದು ನೆಲಮಟ್ಟಕ್ಕೆ ತಳ್ಳುವ ಬಗ್ಗೆ ಎಚ್ಚರ ಇರಬೇಕಿತ್ತು. ಪ್ರಾದೇಶಿಕ ಪಕ್ಷದ ಸ್ಥಿತಿಗತಿ ಅರ್ಥ ಮಾಡಿಸಬೇಕಿತ್ತು. ಆದರೆ ಅದು, ಕೇವಲ ಆರು ತಿಂಗಳ ಅಂತರದಲ್ಲಿ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಲಿನ ಮೂಲಕ ಅರ್ಥ ಮಾಡಿಸಿದೆ.

ಅದಕ್ಕೆ ತಕ್ಕಂತೆ, ಗೆದ್ದ ಯೋಗೇಶ್ವರ್, ‘ಉಪ ಚುನಾವಣೆಯಲ್ಲಿ ಮೊಮ್ಮಗನನ್ನು ಪಣಕ್ಕಿಟ್ಟ ದೇವೇಗೌಡರನ್ನು ಜನ ತಿರಸ್ಕರಿಸಿದ್ದಾರೆ. ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಅವರು, ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ದೇವೇಗೌಡರನ್ನು ಹಳೇ ಮೈಸೂರು ಭಾಗದ ಜನ ಒಪ್ಪುತ್ತಿಲ್ಲ ಎಂಬುದು ಈಗ ಸಾಬೀತಾಗಿದೆ. ಒಕ್ಕಲಿಗ ಸಮುದಾಯ ಈಗಲಾದರೂ ಗೌಡರ ಕುಟುಂಬದ ನಾಯಕತ್ವ ಬಿಟ್ಟು, ಪರ್ಯಾಯ ಒಕ್ಕಲಿಗ ನಾಯಕತ್ವದ ಕುರಿತು ಯೋಚಿಸಬೇಕು’ ಎಂದಿರುವ ಹಿಂದೆ ಡಿ.ಕೆ. ಶಿವಕುಮಾರ್ ಇರಬಹುದು. ಅದನ್ನು ಒಪ್ಪಬೇಕೆಂದೇನೂ ಇಲ್ಲ. ಆದರೆ, ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಒಕ್ಕಲಿಗ ನಾಯಕತ್ವಕ್ಕೆ ಭವಿಷ್ಯವಂತೂ ಕಾಣುತ್ತಿಲ್ಲ.  

ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬ ರಾಜಕಾರಣ, ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಕೊಟ್ಟಿದೆ. ಆ ಮೂಲಕ ರಾಜ್ಯದ ಬಹುಸಂಖ್ಯಾತ ಸಮುದಾಯವನ್ನು ದಿಕ್ಕು ತಪ್ಪಿಸಿದೆ. ತಮ್ಮ ಮಕ್ಕಳನ್ನು ಬಿಟ್ಟರೆ, ಮತ್ತೊಬ್ಬ ನಾಯಕ ಮುನ್ನೆಲೆಗೆ ಬರದಂತೆ ನೋಡಿಕೊಂಡಿದೆ. ಈ ಫ್ಯೂಡಲ್ ಮನಸ್ಥಿತಿಯ ನಾಯಕರನ್ನು ಈಗಲಾದರೂ ಹಿನ್ನೆಲೆಗೆ ಸರಿಸಬೇಕಾಗಿದೆ. ಬಡವರು-ಬುದ್ಧಿವಂತರು ಮುಂದೆ ಬರಬೇಕಾಗಿದೆ. ಅದಕ್ಕೆ ತಕ್ಕಂತೆ ಸಂದರ್ಭವೂ ಸೃಷ್ಟಿಯಾಗಿದೆ, ನೆಲವೂ ಹದವಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ತುಂಬಾ ನೈಜ ಮತ್ತು ಸತ್ಯವಾದ ವಿಚಾರ, ಜನ ಬಿಜೆಪಿಯ ಹಿಂದೂ ಧರ್ಮದ ನಶೆ ಏರಿಸಿಕೊಂಡಿದ್ದಾರೆ ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯದವರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X